Traffic Rules Violation: ಟ್ರಾಫಿಕ್‌ ಪೊಲೀಸ್‌ ಟೋಯಿಂಗ್‌ ವಾಹನದಿಂದಲೇ ಸಿಗ್ನಲ್‌ ಜಂಪ್‌: ಬಿತ್ತು ಭರ್ಜರಿ ದಂಡ

By Kannadaprabha News  |  First Published Dec 14, 2021, 6:12 AM IST
  •  ಸಿಗ್ನಲ್‌ ಜಂಪ್‌ ಮಾಡಿ ಸಂಚಾರ ನಿಯಮ ಉಲ್ಲಂಘಿಸಿದ ತಮ್ಮದೇ ಠಾಣೆಯ ಟೋಯಿಂಗ್‌ ವಾಹನ
  • ತಮ್ಮದೇ ಠಾಣೆಯ ಟೋಯಿಂಗ್‌ ವಾಹನಕ್ಕೆ ಹೈಗ್ರೌಂಡ್ಸ್‌ ಠಾಣೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ

 ಬೆಂಗಳೂರು (ಡಿ.14):  ಸಿಗ್ನಲ್‌ ಜಂಪ್‌ ಮಾಡಿ ಸಂಚಾರ ನಿಯಮ ಉಲ್ಲಂಘಿಸಿದ (Traffic Rules Violation)  ತಮ್ಮದೇ ಠಾಣೆಯ ಟೋಯಿಂಗ್‌ ವಾಹನಕ್ಕೆ (towing Vehicle) ಹೈಗ್ರೌಂಡ್ಸ್‌ ಠಾಣೆ ಸಂಚಾರ ಪೊಲೀಸರು (Police) 500ರು. ದಂಡ ವಿಧಿಸಿದ್ದಾರೆ. ನಗರದ ಚಾಲುಕ್ಯ ಸರ್ಕಲ್‌ನಲ್ಲಿ ಟೋಯಿಂಗ್‌ ವಾಹನ ಸಂಚಾರ ನಿಯಮ ಉಲ್ಲಂಘಿಸಿದ್ದು, ಟ್ವಿಟರ್‌ನಲ್ಲಿ (twitter) ಸಾರ್ವಜನಿಕರು ನೀಡಿದ ದೂರು ಆಧರಿಸಿ ಟೋಯಿಂಗ್‌ ವಾಹನಕ್ಕೆ ಪೊಲೀಸರು ದಂಡ ವಿಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜಭವನ ರಸ್ತೆಯಿಂದ ಭಾನುವಾರ ಬಂದ ಟೋಯಿಂಗ್‌ ವಾಹನ ಚಾಲುಕ್ಯ ವೃತ್ತದಲ್ಲಿ ಸಿಗ್ನಲ್‌ ಜಂಪ್‌ (Signal Jumnp) ಮಾಡಿ ಸಾಗಿತ್ತು. ಆಗ ಟೋಯಿಂಗ್‌ ವಾಹನ ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಮೊಬೈಲ್‌ ಸೆರೆ ಹಿಡಿದಿದ್ದ ವ್ಯಕ್ತಿಯೊಬ್ಬರು, ‘ಏಜೆಂಟ್‌ ಪೀಣ್ಯ’ ಹೆಸರಿನಲ್ಲಿ ಟ್ವಿಟ್‌ ಮಾಡಿ ಬೆಂಗಳೂರು ಸಂಚಾರ ಪೊಲೀಸರಿಗೆ (Bengaluru Traffic Police) ಟ್ಯಾಗ್‌ ಮಾಡಿದ್ದರು. ನಿಮ್ಮ ವಾಹನವೇ ಸಿಗ್ನಲ್‌ ಜಂಪ್‌ ಮಾಡಿದೆ. ನೀವು ದಂಡ ವಿಧಿಸಿ ಚಲನ್‌ ಅನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿ ಎಂದು ಒತ್ತಾಯಿಸಿದ್ದರು.

Tap to resize

Latest Videos

undefined

 ರೂಲ್ಸ್ ಬ್ರೇಕ್ ಮಾಡಿದರೆ ಎಸ್‌ಎಂಎಸ್‌ ಬರುತ್ತೆ: ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಕ್ಷಣಾರ್ಧದಲ್ಲಿ ಆ ವಾಹನಗಳ ಮಾಲೀಕರ ಮೊಬೈಲ್‌ಗೆ ಸಂಚಾರ ಉಲ್ಲಂಘನೆ ಸ್ವರೂಪ ಹಾಗೂ ದಂಡದ ವಿವರಗಳನ್ನು ಎಸ್‌ಎಂಎಸ್‌(SMS) ಮೂಲಕ ಮಾಹಿತಿ ನೀಡುವ ಹೊಸ ವ್ಯವಸ್ಥೆಯನ್ನು ನಗರ ಸಂಚಾರ ವಿಭಾಗದ ಪೊಲೀಸರು(Traffic Police) ಆರಂಭಿಸಿದ್ದಾರೆ. ಈ ವ್ಯವಸ್ಥೆಯಿಂದ ಕಾನೂನು ಮೀರಿದವರನ್ನು ಹುಡುಕಿಕೊಂಡು ಮನೆಗಳಿಗೆ ಹೋಗುವ ಪೊಲೀಸರ(Police) ಶ್ರಮ ಮತ್ತು ಸಮಯ ಹಾಗೂ ಅಂಚೆ ವೆಚ್ಚ ಉಳಿಯಲಿದೆ. ಅಲ್ಲದೆ ತ್ವರಿತವಾಗಿ ನಿಯಮ ಉಲ್ಲಂಘನೆ ಮಾಹಿತಿಯನ್ನು ವಾಹನ(Vehicle) ಮಾಲೀಕರಿಗೆ ತಿಳಿಸಲು ನೆರವಾಗಲಿದೆ.

ಮೊದಲು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಜಂಕ್ಷನ್‌ಗಳಲ್ಲಿ ಮುದ್ರಿತ ಫೀಲ್ಡ್‌ ಟ್ರಾಫಿಕ್‌ ವೈಲೇಷನ್‌ ಪುಸ್ತಕವನ್ನು ಸಂಚಾರ ವಿಭಾಗದ ಕಾನ್‌ಸ್ಟೇಬಲ್‌ಗಳು ಮತ್ತು ಹೆಡ್‌ ಕಾನ್‌ಸ್ಟೇಬಲ್‌ಗಳು ಬಳಸುತ್ತಿದ್ದರು. ಆಗ ಜಂಕ್ಷನ್‌ಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ನೋಂದಣಿ ಸಂಖ್ಯೆ, ಸಮಯ, ಸ್ಥಳ ಹಾಗೂ ಇತರೆ ವಿವರಗಳನ್ನು ಎಫ್‌ಟಿವಿಆರ್‌ಗಳಲ್ಲಿ ಭರ್ತಿ ಮಾಡಿ ಅಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು.

Bengaluru Traffic Police| ಮಾನಸಿಕ ಅಸ್ವಸ್ಥನಿಗೆ ಬುದುಕು ಕೊಟ್ಟ ಸಂಚಾರ ಪೊಲೀಸರು

ಪ್ರತಿ ನೋಟಿಸ್‌ಗೆ 4.5 ಅಂಚೆ ವೆಚ್ಚ:

ತರುವಾಯ ಸಂಚಾರ ನಿಯಮ ಪಾಲನೆಯನ್ನು ಪರಿಣಾಮಕಾರಿ ಜಾರಿಗೊಳಿಸುವ ಸಲುವಾಗಿ ಸಿಬ್ಬಂದಿಗೆ ಸಾಕ್ಷಿ ಆಧಾರಿತವಾಗಿ ಪ್ರಕರಣ ದಾಖಲಿಸಲು ಡಿಜಿಟಲ್‌ ಎಫ್‌ಟಿವಿಆರ್‌ ಉಪಕರಣಗಳನ್ನು ವಿತರಿಸಲಾಯಿತು. ಆಗ ಉಲ್ಲಂಘನೆಯ ಫೋಟೋಗಳನ್ನು ತೆಗೆದು ವಾಹನ ಮಾಲೀಕರಿಗೆ ಐಎಂವಿ ಕಲಂ 133ರ ಅಡಿಯಲ್ಲಿ ಸಂಚಾರ ನಿಯಮ ಉಲ್ಲಂಘನಾ ನೋಟಿಸ್‌ಗಳನ್ನು ಮುದ್ರಿಸಿ ಬಳಿಕ ಅವುಗಳನ್ನು ಅಂಚೆ ಮೂಲಕ ಕಳುಹಿಸಿಕೊಡಲಾಯಿತು.

ಪ್ರತಿ ದಿನ ಕನಿಷ್ಠ 20 ಸಾವಿರ ನೋಟಿಸ್‌ಗಳನ್ನು(Notice) ಜಾರಿಗೊಳಿಸಲಾಗುತ್ತಿದೆ. ಈ ರೀತಿಯ ಮುದ್ರಿತ ನೋಟಿಸ್‌ಗಳನ್ನು ಅಂಚೆ ಮೂಲಕ ಕಳುಹಿಸಲು ಅಂಚೆ ವೆಚ್ಚ, ಮುದ್ರಣ ಹಾಗೂ ಕಾಗದ ಸೇರಿ ಒಟ್ಟು ತಲಾ ಒಂದು ನೋಟಿಸ್‌ಗೆ 4.50 ಖರ್ಚಾಗುತ್ತದೆ. ಅಲ್ಲದೆ ನೋಟಿಸ್‌ ತಯಾರಿಸಲು, ತಯಾರಿಸಲಾದ ನೋಟಿಸ್‌ಗಳನ್ನು ವಾರಸುದಾರರ ವಿಳಾಸಕ್ಕೆ ತಲುಪಿಸಲು ಪೊಲೀಸರು ಮತ್ತು ಅಂಚೆ ಇಲಾಖೆಯ ಸಿಬ್ಬಂದಿ ಶ್ರಮ ವ್ಯಯವಾಗುತ್ತಿತ್ತು. ಅಲ್ಲದೆ ಬಹುತೇಕ ವಾಹನ ಮಾಲೀಕರು ವಿಳಾಸ ಬದಲಾಯಿಸಿದ್ದರೆ ನೋಟಿಸ್‌ಗಳು ವಾಪಸ್‌ ಬಂದು ಇದಕ್ಕೆ ಖರ್ಚು ಮಾಡಿದ ಹಣ ಹಾಗೂ ಸಿಬ್ಬಂದಿ ಶ್ರಮ ವ್ಯಯವಾಗುತ್ತಿತ್ತು ಎನ್ನಲಾಗಿದೆ.

ಎಸ್ಸೆಂಎಸ್‌ ಜೊತೆ ದಂಡ ಪಾವತಿ ವಿಧಾನದ ಲಿಂಕ್‌

ವಾಹನಗಳ ನೋಂದಣಿ ವೇಳೆ ಮಾಲೀಕರ ಮೊಬೈಲ್‌ ಸಂಖ್ಯೆಗಳನ್ನು ನೀಡುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ. ಹೀಗಾಗಿ ವಾಹನಗಳ ನೋಂದಣಿ(Vehicle Registration) ಸಂಖ್ಯೆ ಹಾಗೂ ಸಂಬಂಧಿತ ವಾಹನಗಳ ಮಾಲಿಕರ ಮೊಬೈಲ್‌ ಸಂಖ್ಯೆಗಳನ್ನು ಸಾರಿಗೆ ಇಲಾಖೆಯು ಬೆಂಗಳೂರು ಸಂಚಾರ ಪೊಲೀಸರ(Bengaluru Traffic Police) ಜೊತೆ ಹಂಚಿಕೊಳ್ಳುತ್ತಿದೆ. ವಾಹನಗಳು ಯಾವುದೇ ಸಂಚಾರ ನಿಯಮ ಉಲ್ಲಂಘನೆ ಎಸಗಿದಲ್ಲಿ ಉಲ್ಲಂಘನೆ ವಿವರಗಳು ಹಾಗೂ ದಂಡ ಮೊತ್ತವನ್ನು ಒಳಗೊಂಡ ಮಾಹಿತಿ ಹಾಗೂ ದಂಡವನ್ನು ಪಾವತಿಸುವ ವಿಧಾನದ ಲಿಂಕನ್ನು ಎಸ್‌ಎಂಎಸ್‌ ಮುಖಾಂತರ ಕೆಲವೇ ಕ್ಷಣಗಳಲ್ಲಿ ವಾಹನಗಳ ಮಾಲೀಕರ ಮೊಬೈಲ್‌ಗಳಿಗೆ ಮಾಹಿತಿ ಬರಲಿದೆ ಎಂದು ಜಂಟಿ ಆಯುಕ್ತ (ಸಂಚಾರ) ಡಾ. ಬಿ.ಆರ್‌.ರವಿಂಕಾತೇಗೌಡ ತಿಳಿಸಿದ್ದಾರೆ.

ಟ್ರಾಫಿಕ್ ಪೊಲೀಸರು ಈ ನಿಯಮಗಳ ಪ್ರಕಾರ ವಾಹನಗಳನ್ನ ಟೋಯಿಂಗ್ ಮಾಡ್ಬೇಕು!

ಈ ಯೋಜನೆಯಲ್ಲಿ ಉಲ್ಲಂಘನೆಗೆ ಹೊರಡಿಸುವ ನೋಟಿಸ್‌ ವೆಚ್ಚ ಕೇವಲ 20 ಪೈಸೆ ಮಾತ್ರ. ಈ ಕ್ರಮದಿಂದ ಸಿಬ್ಬಂದಿ ಶ್ರಮ, ಸರ್ಕಾರಕ್ಕೆ ತಗುಲುತ್ತಿದ್ದ ಆರ್ಥಿಕ ವೆಚ್ಚ ಹಾಗೂ ಅನಾವಶ್ಯಕವಾಗಿ ಹೆಚ್ಚಿನ ಕಾಗದ ಬಳಕೆಯು ತಪ್ಪಲಿದೆ. ಅಲ್ಲದೆ ಶೀಘ್ರವಾಗಿ ಉಲ್ಲಂಘನೆ ವಿವರಗಳು ವಾಹನದ ಮಾಲೀಕರ ಮೊಬೈಲ್‌ಗೆ ತಲುಪುವುದರಿಂದ ಸಂಚಾರ ನಿಯಮ ಪಾಲನೆಗೆ ಸಾರ್ವಜನಿಕರು ಒತ್ತು ನೀಡಲಿದ್ದಾರೆ. ಎಸ್‌ಎಂಎಸ್‌ನಲ್ಲಿ ಒದಗಿಸಿರುವ ಲಿಂಕ್‌ ಮೂಲಕ ದಾಖಲಾಗಿರುವ ಲಭ್ಯ ಸಾಕ್ಷ್ಯಗಳನ್ನು ಸಹ ಉಲ್ಲಂಘನೆದಾರರು ಪರಿಶೀಲಿಸಬಹುದು ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.

ಎಸ್‌ಎಂಎಸ್‌ ವ್ಯವಸ್ಥೆ ನಾಗರಿಕರಿಗೆ ಅನುಕೂಲವಾಗಲಿದೆ. ಸಂಚಾರ ನಿಯಮ(Traffic Rules) ಉಲ್ಲಂಘನೆ ಕೃತ್ಯಗಳು ನಿಯಂತ್ರಣಕ್ಕೆ ಬಂದು ಅಪಘಾತಗಳು(Accidents) ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅವಕಾಶವಾಗಬಹುದು. ಈ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬಂದಿದ್ದು, ಇದರ ಯಶಸ್ವಿನ ಅಧ್ಯಯನ ಬಳಿಕ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಾಗುತ್ತದೆ ಅಂತ ಬೆಂಗಳೂರು ಜಂಟಿ ಆಯುಕ್ತ (ಸಂಚಾರ) ಡಾ. ಬಿ.ಆರ್‌.ರವಿಕಾಂತೇಗೌಡ ತಿಳಿಸಿದ್ದಾರೆ. 

click me!