ಬೆಂಗಳೂರು: ಬಿಡಿಎ ಸೈಟ್‌ ಖರೀದಿಸಿ ಮನೆ ಕಟ್ಟಿರದಿದ್ದರೆ ಭಾರೀ ದಂಡ!

By Kannadaprabha News  |  First Published Dec 3, 2024, 6:00 AM IST

ಸ್ವಂತ ಸೂರು ಕಟ್ಟಿಕೊಳ್ಳಲಿ ಎಂಬ ಕಾರಣಕ್ಕೆ ಬಿಡಿಎ ನಿರ್ಮಾಣದ ವಿವಿಧ ಬಡಾವಣೆಗಳಲ್ಲಿ ಕಡಿಮೆ ದರಕ್ಕೆ ನಿವೇಶನಗಳನ್ನು ಹಂಚಿಕೆ ಮಾಡಿದೆ. ಆದರೆ, ಶ್ರೀಮಂತರು, ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ದಲ್ಲಾಳಿಗಳು ಇವುಗಳನ್ನು ಖರೀದಿಸಿ, ನಂತರ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. 
 


ಸಂಪತ್ ತರೀಕರೆ 

ಬೆಂಗಳೂರು(ಡಿ.03): ನಿವೇಶನ ಖರೀದಿಸಿ ನಿಗದಿತ ಸಮಯದಲ್ಲಿ ಮನೆ ನಿರ್ಮಿಸದೆ ಒಪ್ಪಂದದ ಷರತ್ತು ಉಲ್ಲಂಘಿಸಿರುವ ಎಲ್ಲ ಅಳತೆಯ ನಿವೇಶನಗಳಿಗೆ ಪ್ರಸಕ್ತ ಮಾರ್ಗಸೂಚಿ ದರದ ಮೇರೆಗೆ ಶೇ.10ರಷ್ಟು ದಂಡವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿಗದಿಪಡಿಸಿದೆ. 

Latest Videos

undefined

ಮುಂದಿನ ಕೆಲವೇ ತಿಂಗಳಲ್ಲಿ ದಂಡದ ಪ್ರಮಾಣ ಶೇ.25ಕ್ಕೆ ಏರಿಸಲು ಚಿಂತನೆ ನಡೆಸಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆ ಮತ್ತು ಅರ್ಕಾವತಿ ಬಡಾವಣೆ ಹೊರತುಪಡಿಸಿ ಬಿಡಿಎ ನಿರ್ಮಾಣದ ಬನಶಂಕರಿ 3ನೇ ಹಂತ, ಅಂಜನಾಪುರ, ಜಯನಗರ, ಕುಮಾರಸ್ವಾಮಿ ಲೇಔಟ್ 2ನೇ ಹಂತ, ನಾಗರಬಾವಿ, ನಂದಿನಿ ಲೇಔಟ್, ಜ್ಞಾನಭಾರತಿ, ವಿಜಯನಗರ, ಆರ್‌ಎಂವಿ 2ನೇ ಹಂತ, ಎಚ್‌ಎಸ್ ಆರ್ ಲೇಔಟ್, ಜೆಪಿ ನಗರ ಸೇರಿ ಮತ್ತಿತರ ಬಡಾವಣೆಗಳ ಒಟ್ಟು 4000 ಕ್ಕೂ ಹೆಚ್ಚು ನಿವೇ ಶನಗಳಿಗೆ ಪರಿಷ್ಕೃತ ಶೇ. 10 ದಂಡದ ದರವು ಅನ್ವಯವಾಗಲಿದೆ ಎಂದು ಬಿಡಿಎ ಮೂಲಗಳು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿವೆ.

ಕೆಂಪೇಗೌಡ ಬಡಾವಣೆ ಸೈಟ್ ಖರೀದಿದಾರರ ಬವಣೆ ತೀರಿಸದ ಬಿಡಿಎ; ಮನೆ ಕಟ್ಟೋಕೂ ಆಗ್ತಿಲ್ಲ, ಕಟ್ಟಿದರೆ ಇರೋದಕ್ಕೂ ಆಗೊಲ್ಲ!

ಸ್ವಂತ ಸೂರು ಕಟ್ಟಿಕೊಳ್ಳಲಿ ಎಂಬ ಕಾರಣಕ್ಕೆ ಬಿಡಿಎ ನಿರ್ಮಾಣದ ವಿವಿಧ ಬಡಾವಣೆಗಳಲ್ಲಿ ಕಡಿಮೆ ದರಕ್ಕೆ ನಿವೇಶನಗಳನ್ನು ಹಂಚಿಕೆ ಮಾಡಿದೆ. ಆದರೆ, ಶ್ರೀಮಂತರು, ಬಿಲ್ಡರ್‌ಗಳು, ರಿಯಲ್ ಎಸ್ಟೇಟ್ ದಲ್ಲಾಳಿಗಳು ಇವುಗಳನ್ನು ಖರೀದಿಸಿ, ನಂತರ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. 

ಈ ಹಿನ್ನೆಲೆಯಲ್ಲಿ ಬಿಡಿಎ ನಿವೇಶನ ಹಂಚಿಕೆ ಸಂದರ್ಭದಲ್ಲಿ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಉದ್ದೇಶದಿಂದ ದಂಡ ಪ್ರಮಾಣ ಹೆಚ್ಚಿಸಲಾಗಿದೆ. ಈ ಹಿಂದೆ 2020 ಆಗಸ್ಟ್ 28ರಲ್ಲಿ ಹೊರಡಿಸಿದ ಆದೇಶದಲ್ಲಿ ಗುತ್ತಿಗೆ ಹಾಗೂ ಮಾರಾಟ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿರುವ ನಿವೇಶನಗಳಿಗೆ 20X30 ಅಳತೆಯ ನಿವೇಶನಕ್ಕೆ 5 ಸಾವಿರ, 20x30ಕ್ಕಿಂತ ಹೆಚ್ಚು 30X40 ಅಳತೆಗಿಂತ ಕಡಿಮೆಯ ನಿವೇಶನಕ್ಕೆ ₹15 ಸಾವಿರ, 30x40 ಅಳತೆಯ ನಿವೇಶನಕ್ಕೆ ₹60 ಸಾವಿರ 40x60 ಅಳತೆಯ ನಿವೇಶನಕ್ಕಿಂತ ಕಡಿಮೆ ಅಳತೆಗೆ 1.20 ಲಕ್ಷ, 40x60 ಕ್ಕಿಂತ ಹೆಚ್ಚು 50X80ಕ್ಕಿಂತ ಕಡಿಮೆ ಅಳತೆಯ ನಿವೇಶನಕ್ಕೆ ₹3.75 ಲಕ್ಷ ಹಾಗೂ 50X80ಕ್ಕಿಂತ ಹೆಚ್ಚಿರುವ ನಿವೇಶನಕ್ಕೆ 26 ಲಕ್ಷ ದಂಡದ ಮೊತ್ತವನ್ನು ನಿಗದಿಪಡಿಸಲಾಗಿತ್ತು. 

ಪರಿಷ್ಕೃತ ದಂಡ ಶೇ.10: 

ಇದೀಗ 2024 ಸೆಪ್ಟೆಂಬರ್ 23ರಿಂದ ಅನ್ವಯವಾಗುವಂತೆ ಇಂದಿನ ಮಾರುಕಟ್ಟೆ ದರ(ಮಾರ್ಗಸೂಚಿ ದರ) ಶೇ.10 ದಂಡ ನಿಗಧಿಪಡಿಸಲಾಗಿದೆ. ಉದಾಹರಣೆಗೆ 2005ರಲ್ಲಿ ಬಿಡಿಎಯಿಂದ 20X30 ಅಳತೆಯ ನಿವೇಶನವನ್ನು 5 ಲಕ್ಷಕ್ಕೆ ಖರೀದಿಸಿ ಈವರೆಗೂ ನಿವೇಶನದಲ್ಲಿ ಮನೆ ನಿರ್ಮಿಸಿದೇ ಇದ್ದರೆ ಅದು ಬಿಡಿಎ ನಿಯಮ ಉಲ್ಲಂಘಿಸಿದಂತೆ. ಪ್ರಸ್ತುತ ಈ ನಿವೇಶನದ ಇಂದಿನ ಮಾರ್ಗಸೂಚಿ ದರ 30 ಲಕ್ಷ ರು. ಇದ್ದರೆ, ನಿವೇಶನದ ಮಾಲೀಕ ಶೇ.10 ಅಂದರೆ 3 ಲಕ್ಷ ದಂಡವಾಗಿ ಪಾವತಿಸಬೇಕಾಗುತ್ತದೆ. ಭವಿಷ್ಯದಲ್ಲಿ ಮಾರ್ಗಸೂಚಿ ದರದ ಶೇ.25ಕ್ಕೆ ಏರಿಸಲು ಚಿಂತನೆ ನಡೆಸಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

ಬೆಂಗಳೂರಿನ ಅನೈರ್ಮಲ್ಯ ಖಾಲಿ ಸೈಟ್‌ಗಳಿಗೆ ದಂಡ ಫಿಕ್ಸ್; ಶೀಘ್ರವೇ ಬರಲಿದೆ ಬಿಬಿಎಂಪಿ ನೋಟೀಸ್!

ನಿವೇಶನ ಕೊಳ್ಳುವ ಅಸಕ್ತರಿಗೆ ಸಂಕಷ್ಟ 

ಬಿಡಿಎ ಬಡಾವಣೆಗಳನ್ನು ನಿರ್ಮಿಸಿದ ನಂತರ 10 ವರ್ಷ ತನ್ನ ಸುಪರ್ದಿಯಲ್ಲೇ ಇಟ್ಟುಕೊಂಡಿರುತ್ತದೆ (ನಿವೇಶನ ಖರೀದಿಸಿದವರಿಗೆ ಕ್ರಯದ ಆಧಾರದಲ್ಲಿ ಹಂಚಿಕೆ ಮಾಡಿದೆ.) ಕೆಲವರು ಈ ವೇಳೆ ಮನೆ ನಿರ್ಮಿಸಿಕೊಂಡಿರುತ್ತಾರೆ. ಇನ್ನೂ ಕೆಲವರು ಖಾಲಿ ಜಾಗವನ್ನು ಹಾಗೆಯೇ ಇಟ್ಟುಕೊಂಡು ನಂತರ ಸೇಲ್ ಡೀಡ್‌ ಗಾಗಿ ಬಿಡಿಎ ಬಳಿ ಬರುತ್ತಾರೆ. ಮತ್ತೆ ಕೆಲವರು 20 ವರ್ಷಗಳಾ ದರೂ ಖಾಲಿಯಿಟ್ಟುಕೊಂಡು ನಂತರ ಮಾರಲು ಮುಂದಾಗುತ್ತಾರೆ. ಅಂತಹವರಿಗೆ ದಂಡ ವಿಧಿಸುವ ನಿಯಮವನ್ನು ಜಾರಿಗೆ ತರಲಾಗಿದೆ. ಆದರೆ, ನಿಜವಾಗಿಯೂ ಹಣಕಾಸಿನ ತೊಂದರೆಯಿಂದ ನಿಗ ದಿತ ಅವಧಿಯೊಳಗೆ ಮನೆಗಳನ್ನು ಕಟ್ಟಿಕೊಳ್ಳಲಾದವರಿಗೆ ನೂತನ ಪರಿಷ್ಕೃತ ದಂಡದಿಂದ ಸಂಕಷ್ಟ ಎದುರಾಗಿದೆ.

ನಿಗದಿತ ಅವಧಿಯಲ್ಲಿ ಮನೆ ಕಟ್ಟದಿದ್ದರೆ ನಿವೇಶನ ವಾಪಸ್ ಪಡೆಯಬೇಕೆಂಬ ನಿಯಮವಿದೆ. 1994-96 ಅವಧಿಯಲ್ಲಿ ಬಿಡಿಎ ನಿವೇಶನ ಹಿಂಪಡೆದಿದ್ದಕ್ಕೆ ಕೆಲವರು ಕೋರ್ಟ್‌ಗೆ ಹೋಗಿದ್ದರು. ದಂಡ ವಿಧಿಸಿ ನಿವೇಶನ ಕೊಡುವಂತೆ ಕೋರ್ಟ್ ಸೂಚನೆಯನ್ನು ಕೊಟ್ಟಿತ್ತು. ಅಂದಿನಿಂದ ದಂಡ ವಿಧಿಸುತ್ತಾ ಬಂದಿದ್ದೇವೆ. ಖರೀದಿಸಿದ ನಿವೇಶನದ ಬೆಲೆ ಏರಿಕೆಯೂ ಆಗಿದೆ. ಅಂತೆಯೇ ದಂಡವೂ ಪರಿಷ್ಕರಣೆಯಾಗುತ್ತಿದೆ ಎಂದು ಬಿಡಿಎ,(ಎಫ್‌ಎಂ) ಹಣಕಾಸು ಸದಸ್ಯ ಲೋಕೇಶ್ ತಿಳಿಸಿದ್ದಾರೆ. 

click me!