ಉತ್ತರ ಕನ್ನಡ ಜಿಲ್ಲೆಗೆ ಭೂಕಂಪನಾತಂಕ; ವಿಜ್ಞಾನಿಗಳ ತಂಡ ಭೇಟಿ!

By Sathish Kumar KH  |  First Published Dec 2, 2024, 5:59 PM IST

ಉತ್ತರ ಕನ್ನಡ ಜಿಲ್ಲೆಯಲ್ಲಿ 5 ಬಾರಿ ಭೂಕಂಪದ ಅನುಭವದ ನಂತರ, ವಿಜ್ಞಾನಿಗಳ ತಂಡವು ಮಾಹಿತಿ ಸಂಗ್ರಹಿಸಲು ಭೇಟಿ ನೀಡುತ್ತಿದೆ. ಭೂಕಂಪನದ ಕಾರಣ ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಲು ತಜ್ಞರು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.


ಉತ್ತರ ಕನ್ನಡ (ಡಿ.02): ಕರಾವಳಿ ಮತ್ತು ಘಟ್ಟ ಪ್ರದೇಶವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ 5 ಬಾರಿ ಭೂಕಂಪ ಆಗಿರುವ ಅನುಭವ ಉಂಟಾದ ಬೆನ್ನಲ್ಲಿಯೇ ವಿಜ್ಷಾನಿಗಳ ತಂಡವು ಜಿಲ್ಲೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲು ಮುಂದಾಗಿದೆ.

ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯ 'ಒಂದು ರಾಜ್ಯ ಹಲವು ಪ್ರಪಂಚ' ಎಂಬ ಟ್ಯಾಗ್‌ಲೈನ್‌ಗೆ ಹೊಂದಾಣಿಕೆ ಆಗುವ ಜಿಲ್ಲೆಗಳಲ್ಲಿ ಉತ್ತರ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇಲ್ಲಿ ಕರಾವಳಿ ತೀರ, ಘಟ್ಟ ಪ್ರದೇಶಗಳು, ಜಲಪಾತಗಳು, ನದಿಗಳು, ರಾಜ ಮನೆತನಗಳ ಕುರುಹುಗಳು ಹಾಗೂ ದೇವಸ್ಥಾನಗಳು ಸೇರಿದಂತೆ ಎಲ್ಲವೂ ಸಂಪದ್ಭರಿತವಾಗಿವೆ. ಆದರೆ, ಈ ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಬೃಹತ್ ಕಟ್ಟಡಗಳು, ರಸ್ತೆ ನಿರ್ಮಾಣ, ಘಟ್ಟ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಾ ಮೂಲ ಪರಿಸರವನ್ನು ಹಾನಿಗೀಡು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಮಳೆಗಾಲದಲ್ಲಿ ಭಾರೀ ದೊಡ್ಡ ಪ್ರಮಾಣದ ಭೂ ಕುಸಿತ ಉಂಟಾಗಿತ್ತು. ಇದರ ಬೆನ್ನಲ್ಲಿಯೇ ಇದೀಗ ನಿನ್ನೆ ಭೂಕಂಪನ ಆಗಿರುವ ಅನುಭವವಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಷಾನಿಗಳ ತಂಡವು ಕಾರವಾರ ಜಿಲ್ಲೆಗೆ ಭೇಟಿ ನೀಡಿ ಮಾಹತಿ ಕಲೆ ಹಾಕುತ್ತಿದೆ.

Tap to resize

Latest Videos

ಕರ್ನಾಟಕ ಸ್ಟೇಟ್ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್‌ನ ಇಬ್ಬರು ವಿಜ್ಞಾನಿಗಳ ಭೇಟಿ ನೀಡುತ್ತಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರ ಸೂಚನೆ ಮೇರೆಗೆ ವಿಜ್ಞಾನಿಗಳು ಆಗಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಭೂಕಂಪನ ಅನುಭವದ ಬಗ್ಗೆ ಈಗಾಗಲೇ ರಶ್ಮಿ ಮಹೇಶ್ ಅವರು ಜಿಲ್ಲಾಡಳಿತದಿಂದ ಮಾಹಿತಿ ಪಡೆದಿದ್ದಾರೆ. ನಿನ್ನೆ ಶಿರಸಿ, ಕುಮಟಾ, ಸಿದ್ಧಾಪುರ, ಯಲ್ಲಾಪುರ ವ್ಯಾಪ್ತಿಯಲ್ಲಿ ಭೂ ಕಂಪನದ ಅನುಭವವಾಗಿತ್ತು. ಶಿರಸಿಯ ಮತ್ತಿಘಟ್ಟಾ, ಸಂಪಖಂಡ, ಹೆಗಡೆಕಟ್ಟಾ, ಯಲ್ಲಾಪುರ ಭಾಗದ ಚವತ್ತಿ, ಸಿದ್ಧಾಪುರ ಭಾಗದ ಕಾನಸೂರು, ತಟ್ಟಿಕೈ, ಹೆಗ್ಗರಣಿ, ಹೆರೂರು, ಗೋಳಿಮಕ್ಕಿ ಭಾಗದಲ್ಲೂ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು. ಎರಡು ದಿನಗಳಿಂದ ಭಾರೀ ಶಬ್ದ ಕೇಳಿ ಬರುತ್ತಿತ್ತು. ಜೊತೆಗೆ ನಿನ್ನೆ ಬೆಳಗ್ಗೆ 11.30ರಿಂದ ಮಧ್ಯಾಹ್ನ 1 ಗಂಟೆಯ ನಡುವೆ ಒಟ್ಟು 5 ಬಾರಿ ಭೂ ಕಂಪನದ ಅನುಭವವಾಗಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ವರುಣನ ಅಬ್ಬರ, ಚಾರ್ಮಾಡಿ ಘಾಟ್‌ನಲ್ಲಿ ಭೂಕುಸಿತ: ಇನ್ನೂ ನಾಲ್ಕು ದಿನ ಮಳೆ

ಆದರೆ, ಭೂಕಂಪ ಆಗಿರುವ ಬಗ್ಗೆ ಜಿಲ್ಲೆಯ ಜೊಯಿಡಾದಲ್ಲಿರುವ ವಿಪತ್ತು ನಿರ್ವಹಣಾ ಕೋಶದಲ್ಲಿ ಈ ಬಗ್ಗೆ ದಾಖಲಾಗಿರಲಿಲ್ಲ. ನ್ಯಾಶನಲ್ ಸೆಂಟರ್ ಫಾರ್ ಸಿಸ್ಮೋಲಜಿಯ ವೆಬ್‌ಸೈಟ್‌ನಲ್ಲಿ ಭೂ ಕಂಪವಾದ ಪಾಯಿಂಟ್ ದಾಖಲು ಆಗಿದೆ. ಈ ಹಿನ್ನೆಲೆಯಲ್ಲಿ ಭೂಮಿಯ ಅಧ್ಯಯನಕ್ಕಾಗಿ ಜಿಲ್ಲೆಗೆ ಇಬ್ಬರು ವಿಜ್ಞಾನಿಗಳು ಆಗಮಿಸುತ್ತಿದ್ದಾರೆ ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಮಾಹಿತಿ ನೀಡಿದ್ದಾರೆ.

ಸ್ಥಳೀಯ ವಿಜ್ಞಾನಿಗಳು ಉತ್ತರಕನ್ನಡ ಜಿಲ್ಲೆಯಲ್ಲಿ ಭೂ ಕಂಪನದ ಬಗ್ಗೆ ಮಾಹಿತಿ ನೀಡಿದ್ದರು. ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿ ಭೂ ಕಂಪನವಾಗುವ ಝೋನ್ ಅಲ್ಲದಿದ್ದರೂ, ಪಶ್ಚಿಮ ಘಟ್ಟಗಳ ಭೂಮಿಯಡಿ ಪ್ಲೇಟ್‌ಗಳು ಚಲಿಸಿರುವ ಸಾಧ್ಯತೆಯಿದೆ. ಭೂಮಿಯಡಿ ಪ್ಲೇಟ್‌ಗಳು ಚಲಿಸಿರುವ ಸಾಧ್ಯತೆಯಿಂದಲೇ ಭಾರೀ ಶಬ್ದ, ಭೂಕಂಪದ ಅನುಭವವಾಗಿರಬಹುದು. ಸಣ್ಣ ಪ್ರಮಾಣದಲ್ಲಿ ಪ್ಲೇಟ್‌ಗಳು ಚಲಿಸಿದ್ದರಿಂದ ರಿಕ್ಟರ್ ಮಾಪಕದಲ್ಲಿ ತಡವಾಗಿ ವರದಿಯಾಗುವ ಸಾಧ್ಯತೆ ಇರುತ್ತದೆ. ಆದರೂ, ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ ಬಳಿಕವೇ ಅಂತಿಮ ನಿರ್ಧಾರಕ್ಕೆ ಬರಬೇಕು ಎಂದು ವಿಜ್ಞಾನಿಗಳು ತಿಳಿಸಿದ್ದರು.

ಇದನ್ನೂ ಓದಿ: Breaking: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ: ಜೋರು ಶಬ್ದಕ್ಕೆ ಬೆಚ್ಚಿಬಿದ್ದ ಜನತೆ!

click me!