ಎಸ್ಸಿ, ಎಸ್ಟಿ ನೌಕರರು ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ| ಸಾರಿಗೆ ನೌಕರರು ಮುಷ್ಕರ ಪ್ರಾರಂಭಿಸಿ 10 ದಿನಗಳಾದರೂ ಈವರೆಗೂ ಸರ್ಕಾರ ಸ್ಪಂದಿಸುತ್ತಿಲ್ಲ| ಇದೇ ಮೊದಲ ಬಾರಿಗೆ ಖಾಸಗಿ ವಾಹನಗಳಿಗೆ ಅವಕಾಶ ಕೊಟ್ಟಿದ್ದಾರೆ| ಸರ್ಕಾರದ ಧೋರಣೆ ನೋಡಿದರೆ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ಎಂಬ ಶಂಕೆ ವ್ಯಕ್ತವಾಗುತ್ತಿದೆ: ಜಕ್ಕಪ್ಪನವರ|
ಹುಬ್ಬಳ್ಳಿ(ಏ.17): ಸಾರಿಗೆ ನಿಗಮಗಳನ್ನು ಖಾಸಗೀಕರಣಗೊಳಿಸಲು ಬಿಜೆಪಿ ಸರ್ಕಾರ ಹುನ್ನಾರ ನಡೆಸಿದೆ. ಅದಕ್ಕೆ ಅವಕಾಶ ಕೊಡಬಾರದೆಂದರೆ ನೌಕರರು ಕೂಡಲೇ ಕೆಲಸಕ್ಕೆ ಹಾಜರಾಗಬೇಕು. ಅದರಲ್ಲೂ ಎಸ್ಸಿ, ಎಸ್ಟಿ ನೌಕರರು ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಬೇಕು ಎಂದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಸಂಘ ವಾಯವ್ಯ ಸಮಿತಿ ಅಧ್ಯಕ್ಷ ಎಫ್.ಎಚ್. ಜಕ್ಕಪ್ಪನವರ ಮನವಿ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರು ಮುಷ್ಕರ ಪ್ರಾರಂಭಿಸಿ 10 ದಿನಗಳಾದರೂ ಈವರೆಗೂ ಸರ್ಕಾರ ಸ್ಪಂದಿಸುತ್ತಿಲ್ಲ. ಇದೇ ಮೊದಲ ಬಾರಿಗೆ ಖಾಸಗಿ ವಾಹನಗಳಿಗೆ ಅವಕಾಶ ಕೊಟ್ಟಿದ್ದಾರೆ. ಸರ್ಕಾರದ ಧೋರಣೆ ನೋಡಿದರೆ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದರು.
undefined
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕೆಲ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿದೆ. ಅದರ ಅಣತಿಯಂತೆ ಇಲ್ಲಿನ ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣಗೊಳಿಸುತ್ತಿದೆ. ಮುಷ್ಕರ ನಿರತರ ವಿರುದ್ಧ ಕೈಗೊಳ್ಳುತ್ತಿರುವ ಶಿಸ್ತುಕ್ರಮದಲ್ಲೂ ಎಸ್ಸಿ, ಎಸ್ಟಿನೌಕರರನ್ನೇ ಹೆಚ್ಚಾಗಿ ಗುರಿಯಾಗಿಸಿಕೊಳ್ಳಲಾಗುತ್ತಿದೆ. ಕೆಲಸದಿಂದ ವಜಾ, ವರ್ಗಾವಣೆ, ಅಮಾನತು ಶಿಕ್ಷೆಗೊಳದವರಲ್ಲಿ ಶೇ. 40ರಷ್ಟುಎಸ್ಸಿ, ಎಸ್ಟಿನೌಕರರೇ ಇದ್ದಾರೆ. ಆದಕಾರಣ ಎಸ್ಸಿ, ಎಸ್ಟಿನೌಕರರು ಕೂಡಲೇ ಕೆಲಸಕ್ಕೆ ಹಾಜರಾಗಬೇಕು ಎಂದು ಒತ್ತಾಯಿಸಿದರು.
ಉಪಚುನಾವಣಾ ಕದನ: ಬಸ್‌ಗಳಿಲ್ಲದೇ ಮತದಾನಕ್ಕೆ ಆಗಮಿಸಲು ಮತದಾರರ ಪರದಾಟ..!
ಬೆಂಗಳೂರಲ್ಲಿ ಬಿಎಂಟಿಸಿ ಆಸ್ತಿ ಮೌಲ್ಯ ಅಂದಾಜು .2 ಲಕ್ಷ ಕೋಟಿ ಇದೆ. ಇತರೆ ನಿಗಮಗಳ ಮೌಲ್ಯವೂ ಕೋಟಿಗಟ್ಟಲೇ ಇದೆ. ಇವೆಲ್ಲವನ್ನು ಅಂಬಾನಿ, ಅದಾನಿ ತೆಕ್ಕೆಗೆ ಹಾಕುವ ಯತ್ನ ತೆರೆಮರೆಯಲ್ಲಿ ನಡೆಯುತ್ತಿವೆ. ಇದರ ಹಿಂದೆ ಆರ್‌ಎಸ್‌ಎಸ್ ಇದೆ ಎಂದು ಆರೋಪಿಸಿದರು.
ಸಾರಿಗೆ ಸಂಸ್ಥೆಯಲ್ಲಿ 1.11 ಲಕ್ಷಕ್ಕೂ ಅಧಿಕ ಸಿಬ್ಬಂದಿಯಿದ್ದಾರೆ. ಇದರಲ್ಲಿ 98,159 ಮಂದಿ ಚಾಲಕ ಮತ್ತು ನಿರ್ವಾಹಕರಾಗಿದ್ದಾರೆ. ಒಬ್ಬೊಬ್ಬ ನಿರ್ವಾಹಕನ ಮೇಲೆ ತಲಾ ಎರಡು ಆರೋಪ ಪಟ್ಟಿಯನ್ನು ಹಾಕಲಾಗಿದೆ. ಸಿಬ್ಬಂದಿಯ ಸಂಬಳ ಸರ್ಕಾರಿ ನೌಕರರಿಗಿಂತ ಶೇ. 20ರಷ್ಟುಕಡಿಮೆ ಇದೆ. ಸಾರಿಗೆ ನಿಯಮಗಳಲ್ಲಿ ಸಿಬ್ಬಂದಿ ಮೇಲೆ ನಡೆಯುವ ದೌರ್ಜನ್ಯ ಹೆಚ್ಚುತ್ತಲೇ ಇದೆ. ಸರ್ಕಾರಿ ನೌಕರರಿಗೆ ನೀಡುವ ಸವಲತ್ತುಗಳನ್ನು ಸಾರಿಗೆ ಸಿಬ್ಬಂದಿಗೆ ನೀಡಬೇಕು ಎಂದು ಆಗ್ರಹಿಸಿದರು.
ಕೂಡಲೇ ಎಲ್ಲ ಎಸ್ಸಿ, ಎಸ್ಟಿನೌಕರರು ಕೆಲಸಕ್ಕೆ ಹಾಜರಾಗಬೇಕು. ಮೂರನೆಯ ಹಂತದ ಹೋರಾಟವನ್ನು ಮುಂದೆ ಮಾಡೋಣ. ಅದಕ್ಕೆ ನಮ್ಮ ಬೆಂಬಲವಿದೆ. ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬ ಬೇಡಿಕೆ ಈಡೇರಿಸಬೇಕು. ಹೀಗೆ ಮುಷ್ಕರ ನಡೆಸುತ್ತಾ ಹೋದರೆ ಖಾಸಗೀಕರಣ ಮಾಡುವುದರಲ್ಲಿ ಸಂಶಯವಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ವಿಭಾಗದ ಅಧ್ಯಕ್ಷ ಜಿ.ಸಿ. ಕಮಲದಿನ್ನೆ, ಧಾರವಾಡ ಘಟಕದ ಎ.ಪಿ. ಮಾನೆ, ಪಾಲಿಕೆಯ ಮಾಜಿ ಸದಸ್ಯ ಮೋಹನ ಹಿರೇಮನಿ ಇದ್ದರು.