* ಮುಧೋಳದಲ್ಲಿ ವೆಂಟಿಲೇಟರ್ ಬಳಕೆ ಇಲ್ಲ
* ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು
* ಆರೋಗ್ಯ ಇಲಾಖೆ ಬಳಿ ಕೇವಲ 46 ವೆಂಟಿಲೇಟರ್
ಈಶ್ವರ ಶೆಟ್ಟರ
ಬಾಗಲಕೋಟೆ(ಮೇ.17): ವೈದ್ಯಕೀಯ ಕ್ಷೇತ್ರದ ಸುಧಾರಿತ ಜಿಲ್ಲೆಯಾಗಿರುವ ಬಾಗಲಕೋಟೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು ವೆಂಟಿಲೇಟರ್‌ಗಳು ಇರುವುದೇ 105. ಈ ಪೈಕಿ ಸರ್ಕಾರದ ಬಳಿ ಇರುವುದು 45 ವೆಂಟಿಲೇಟರ್‌ಗಳು (ಪಿಎಂ ಕೇರ್ಸ್ ನಿಧಿಯಿಂದ ಒಟ್ಟು 30 ವೆಂಟಿಲೇಟರ್‌ಗಳು ಬಂದಿವೆ.) ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವುದು 60 ವೆಂಟಿಲೇಟರ್‌ಗಳಿವೆ. ಅಂದರೆ ಇಲ್ಲಿ ಸರ್ಕಾರಕ್ಕಿಂತ ಖಾಸಗಿ ಆಸ್ಪತ್ರೆಗಳಲ್ಲಿಯೇ ಹೆಚ್ಚಾಗಿವೆ.
ಪಿಎಂ ಕೇರ್ಸ್ ನಿಧಿಯಿಂದ ಬಂದ ಒಟ್ಟು 30 ವೆಂಟಿಲೇಟರ್‌ಗಳನ್ನು ಪ್ರತಿ ತಾಲೂಕು ಆಸ್ಪತ್ರೆಗಳಿಗೆ ನೀಡಲಾಗಿದೆ. ಈ ಪೈಕಿ ಎಲ್ಲವೂ ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಲಭ್ಯವಾಗಿದ್ದು, ಮುಧೋಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಸೋಂಕು ದೃಢವಾಗಿದ್ದರಿಂದ ಮೂರು ವೆಂಟಿಲೇಟರ್‌ಗಳು ಬಳಕೆಯಾಗುತ್ತಿಲ್ಲ. ಅಲ್ಲದೆ, ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿಯಾಗಿದೆ. ಆಕ್ಸಿಜನ್ ಬೇಡಿಕೆ ಸಹ ಹೆಚ್ಚುತ್ತಲೇ ಇದೆ.
ಕನಿಷ್ಠ ಜಿಲ್ಲೆಯಲ್ಲಿ ಏನಿಲ್ಲವೆಂದರೂ 1200ಕ್ಕೂ ಹೆಚ್ಚು ಸೋಂಕಿತರು ಆಕ್ಸಿಜನ್, ಐಸಿಯು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವೆಂಟಿಲೇಟರ್‌ಗಳ ಅಗತ್ಯ ಹೆಚ್ಚಾಗಿದೆ. ಇದ್ದ ವ್ಯವಸ್ಥೆಯಲ್ಲಿ ಸೌಲಭ್ಯಗಳನ್ನು ಮುಂದುವರಿಸುವ ಅನಿವಾರ್ಯತೆ ಆರೋಗ್ಯ ಇಲಾಖೆ ಮೇಲಿದೆ. ಆದರೂ ಹೆಚ್ಚುತ್ತಿರುವ ಕೊರೋನಾ ರೋಗಿಗಳ ಶ್ವಾಸಕೋಶ ಸಂಬಂಧಿಸಿದ ಸೋಂಕಿಗೆ ಇರುವ ವೆಂಟಿಲೇಟರ್‌ಗಳು ಜೀವ ತುಂಬಬಹುದೆ ಎಂಬ ಪ್ರಶ್ನೆ ಎದುರಾಗಿದೆ.
ಸ್ವಕ್ಷೇತ್ರಕ್ಕೆ ಆಂಬುಲೆನ್ಸ್ ಪಿಪಿಇ ಕಿಟ್, ಮಾಸ್ಕ್ ಕಳುಹಿಸಿಕೊಟ್ಟ ಸಿದ್ದರಾಮಯ್ಯ
ಬಳಕೆ ಯಾವಾಗ?:
ಕೊರೋನಾ ಸೋಂಕು ಸೇರಿದಂತೆ ಶ್ವಾಸಕೋಶ ಸಂಬಂಧಿಸಿದ ತೀವ್ರ ತರವಾದ ಉಸಿರಾಟ ಸಮಸ್ಯೆ ಉಲ್ಬಣಗೊಂಡಾಗ ರೋಗಿಯು ಸಾವು ಬದುಕಿನ ನಡುವೆ ಹೋರಾಟದ ಸಂದರ್ಭದಲ್ಲಿ ವೆಂಟಿಲೇಟರ್ ಬಳಕೆ ಅನಿವಾರ್ಯವಾಗಿರುತ್ತದೆ. ಇವುಗಳನ್ನು ಬಳಿಸುವವರು ತಜ್ಞ ಅರವಳಿಕೆ ವೈದ್ಯರಾಗಲಿ ಅಥವಾ ಫಿಜಿಷಿಯನ್ ಅವರು ವೆಂಟಿಲೇಟರ್ ಅನ್ನು ನಿರ್ವಹಿಸಬಹುದಾಗಿದೆ.
ಆರೋಗ್ಯ ಇಲಾಖೆ ಬಳಿ ಕೇವಲ 46 ವೆಂಟಿಲೇಟರ್:
ಜಿಲ್ಲೆಯಲ್ಲಿರುವ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಒಟ್ಟು ವೆಂಟಿಲೇಟರ್‌ಗಳು 105. ಆದರೆ ಅದರಲ್ಲಿ ಆರೋಗ್ಯ ಇಲಾಖೆಯ ಬಳಿ ಇರುವುದು ಕೇವಲ 46 ವೆಂಟಿಲೇಟರ್‌ಗಳು ಮಾತ್ರ. ಇನ್ನೂ ಅಚ್ಚರಿ ಎಂದರೆ 46 ರಲ್ಲಿ 31 ವೆಂಟಿಲೇಟರ್‌ಗಳು ಬಾಗಲಕೋಟೆ ನವನಗರದಲ್ಲಿರುವ 250 ಹಾಸಿಗೆಯ ಜಿಲ್ಲಾಸ್ಪತ್ರೆಯಲ್ಲಿ ಇದ್ದರೆ ಇನ್ನುಳಿದ 15 ವೆಂಟಿಲೇಟರ್‌ಗಳು 6 ತಾಲೂಕುಗಳಲ್ಲಿನ ಆಸ್ಪತ್ರೆಗಳಲ್ಲಿವೆ. ಜಿಲ್ಲಾಸ್ಪತ್ರೆ ಹೊರತುಪಡಿಸಿದರೆ ಇವುಗಳ ನಿರ್ವಹಣೆ ಸಹ ಅಷ್ಟೊಂದು ಆಯಾ ತಾಲೂಕು ಆಸ್ಪತ್ರೆಗಳಲ್ಲಿ ಆಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಮುಧೋಳದಲ್ಲಿ ವೆಂಟಿಲೇಟರ್ ಬಳಕೆ ಇಲ್ಲ:
ಉಪಮುಖ್ಯಮಂತ್ರಿಗಳ ಸ್ವಕ್ಷೇತ್ರ ಮುಧೋಳದಲ್ಲಿ ಸದ್ಯ ಮೂರು ವೆಂಟಿಲೇಟರ್‌ಗಳು ತಾಲೂಕು ಆಸ್ಪತ್ರೆಯಲ್ಲಿ ಲಭ್ಯವಿದ್ದರೂ ಕಾರ್ಯನಿರ್ವಹಣೆ ಮಾಡುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ವೆಂಟಿಲೇಟರ್ ನಿರ್ವಹಣೆ ಮಾಡುವ ಅರವಳಿಕೆ ತಜ್ಞವೈದ್ಯರು, ವೈದ್ಯರು ಕೊರೋನಾ ಸೋಂಕಿಗೆ ಒಳಗಾಗಿರುವುದರಿಂದ ಇಲ್ಲಿ ವೆಂಟಿಲೇಟರ್ ಇದ್ದೂ ಇಲ್ಲದಂತಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಇರುವ ಇನ್ನುಳಿದ 12 ವೆಂಟಿಲೇಟರ್‌ಗಳಲ್ಲಿ ಆಯಾ ತಾಲೂಕುಗಳಲ್ಲಿ ಅರವಳಿಕೆ ತಜ್ಞರು ಇದ್ದರೇ ಮಾತ್ರ ಕಾರ್ಯನಿರ್ವಹಣೆ ಸಾಧ್ಯ. ಇರದೆ ಹೋದರೆ ಆಯಾ ವೆಂಟಿಲೇಟರ್‌ಗಳನ್ನು ಬೇರೆಯವರಿಗೆ ನಿರ್ವಹಿಸಲು ಸಾಧ್ಯವಿರದೆ ಇರುವುದರಿಂದ ರೋಗಿಗಳಿಗೆ ಪರಾರಯಯ ಆಸ್ಪತ್ರೆಗೆ ಕಳಿಸುವುದು ಆರೋಗ್ಯ ಇಲಾಖೆಗೆ ಅನಿವಾರ್ಯವಾಗಿದೆ.
ಬ್ಲ್ಯಾಕ್ ಫಂಗಸ್ ಎಫೆಕ್ಟ್: ಅಲರ್ಟ್ ಆದ ಬಾಗಲಕೋಟೆ ಜಿಲ್ಲಾಡಳಿತ
ಸರ್ಕಾರ ಸದ್ಯದ ಸ್ಥಿತಿಯಲ್ಲಿ ವೈದ್ಯಕೀಯ ಉಪಕರಣಗಳನ್ನು ಹೆಚ್ಚಿಸುವ ಅನಿವಾರ್ಯತೆಯಲ್ಲಿ ಇದೆಯಾದರೂ ಜಿಲ್ಲಾ ಕೇಂದ್ರಗಳಲ್ಲಿ ಆಗುತ್ತಿರುವ ಸಾವು ನೋವುಗಳಿಗೆ ಆಕ್ಸಿಜನ್ ಹಾಗೂ ವೆಂಟಿಲೇಟರ್ ನಂತಹ ಅಗತ್ಯ ಸೌಲಭ್ಯ ನೀಡದೆ ಹೋದರೆ ನಿಶ್ಚಿತವಾಗಿಯೂ ಬಾಗಲಕೋಟೆ ಸಾವಿನ ಮನೆಯಾಗಿ ಮಾರ್ಪಾಡು ಆಗುವುದರಲ್ಲಿ ಅನುಮಾನವೇ ಇಲ್ಲವಾಗಿದೆ.
ಜಿಲ್ಲೆಯಲ್ಲಿ ಒಟ್ಟು ಖಾಸಗಿ ಹಾಗೂ ಆರೋಗ್ಯ ಇಲಾಖೆಯ ಬಳಿ 105 ವೆಂಟಿಲೇಟರ್‌ಗಳಿದ್ದು, ಆರೋಗ್ಯ ಇಲಾಖೆಯ 46 ವೆಂಟಿಲೇಟರ್‌ಗಳಲ್ಲಿ 31 ಜಿಲ್ಲಾಸ್ಪತ್ರೆಯಲ್ಲಿ ಪ್ರತಿನಿತ್ಯ ಬಳಿಕೆಯಲ್ಲಿವೆ. ಆದರೆ ತಾಲೂಕು ಆಸ್ಪತ್ರೆಯಲ್ಲಿನ 15 ವೆಂಟಿಲೇಟರ್‌ಗಳಲ್ಲಿ ತಜ್ಞರ ಕೊರತೆ ಇದ್ದಲ್ಲಿ ಮಾತ್ರ ಸ್ವಲ್ಪ ತೊಂದರೆಯಾಗುತ್ತಿದೆ ಎಂದು ಬಾಗಲಕೋಟೆ ಡಿಎಚ್‌ಒ ಡಾ.ಅನಂತ ದೇಸಾಯಿ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona