ತುಮಕೂರು: ದೇವರಾಯನ ದುರ್ಗಕ್ಕೆ ಬೆಂಕಿ ಭೀತಿ!

By Kannadaprabha NewsFirst Published Mar 1, 2020, 11:23 AM IST
Highlights

ಅತ್ತ ಅರಣ್ಯ ಇಲಾಖೆಯ ದೊಡ್ಡ ಹುದ್ದೆಯಿಂದ ಹಿಡಿದು ಕೆಳ ಹಂತದ ಸಿಬ್ಬಂದಿಯೆಲ್ಲಾ ನರಹಂತಕ ಚಿರತೆ ಸೆರೆ ಹಿಡಿಯಲು ಹೊರಟಿದ್ದರೆ ಇತ್ತ ತುಮಕೂರಿನ ಜನತೆಗೆ ಪ್ರಾಣವಾಯುವಾಗಿರುವ ದೇವರಾಯನದುರ್ಗ ಅರಣ್ಯ ಅಕ್ಷರಶಃ ಬೆಂಕಿ ಭೀತಿ ಎದುರಿಸುತ್ತಿದೆ.

ತುಮಕೂರು(ಮಾ.01): ಅತ್ತ ಅರಣ್ಯ ಇಲಾಖೆಯ ದೊಡ್ಡ ಹುದ್ದೆಯಿಂದ ಹಿಡಿದು ಕೆಳ ಹಂತದ ಸಿಬ್ಬಂದಿಯೆಲ್ಲಾ ನರಹಂತಕ ಚಿರತೆ ಸೆರೆ ಹಿಡಿಯಲು ಹೊರಟಿದ್ದರೆ ಇತ್ತ ತುಮಕೂರಿನ ಜನತೆಗೆ ಪ್ರಾಣವಾಯುವಾಗಿರುವ ದೇವರಾಯನದುರ್ಗ ಅರಣ್ಯ ಅಕ್ಷರಶಃ ಬೆಂಕಿ ಭೀತಿ ಎದುರಿಸುತ್ತಿದೆ.

ಪ್ರತಿ ಬೇಸಿಗೆಯಲ್ಲೂ ದೇವರಾಯನದುರ್ಗ ಅರಣ್ಯ ಪ್ರದೇಶ ಬೆಂಕಿ ಭೀತಿಯನ್ನು ಎದುರಿಸಬೇಕಾಗಿದೆ. ತುಮಕೂರಿನ ಬೆಳಗುಂಬ ದಾಟಿದ ಕೂಡಲೇ ಆರಂಭವಾಗುವ ಕಾಡು ನರಸಿಂಹಸ್ವಾಮಿ ದೇವಸ್ಥಾನದವರೆಗೂ ಹಬ್ಬಿದೆ. ಇಲ್ಲಿಯವರೆಗೂ ಕಾಡು ಬೆಂಕಿ ಭೀತಿಯನ್ನು ಎದುರಿಸುತ್ತಿದೆ. ಪ್ರತಿ ಬೇಸಿಗೆಯಲ್ಲಿ ರಾಮದೇವರ ಬೆಟ್ಟಬೆಂಕಿಯಿಂದ ಹೆಚ್ಚು ಹಾನಿಯಾದ ಪ್ರದೇಶ.

ಬೇಸಿಗೆ ಸಿದ್ಧತೆಯೇ ಆಗಿಲ್ಲ:

ಪ್ರತಿ ಬೇಸಿಗೆಯಲ್ಲಿ ಅರಣ್ಯವನ್ನು ಸಂರಕ್ಷಿಸುವ ಸಲುವಾಗಿ ಕೆಲವೊಂದು ಮುಂಜಾಗ್ರತೆಯನ್ನು ಅರಣ್ಯ ಇಲಾಖೆ ತೆಗೆದುಕೊಳ್ಳಬೇಕಾಗಿದೆ. ಆದರೆ ಬೇಸಿಗೆ ಆರಂಭವಾಗಿದ್ದರೂ ಯಾವ ಸಿದ್ಧತೆಯೂ ನಡೆದಿಲ್ಲ. ಇಲಾಖೆಯಲ್ಲಿ ಇರುವ ಸಿಬ್ಬಂದಿಯೇ ಕಡಿಮೆ. ಅವರೆಲ್ಲರನ್ನು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಕಾಡ ಹಾದಿ ರಸ್ತೆ ಎರಡೂ ಒಣಗಿರುವ ಕಟ್ಟಿಗೆಗಳು ಹೇರಳವಾಗಿದೆ. ಇವೆಲ್ಲವನ್ನು ತೆರವುಗೊಳಿಸಬೇಕಾಗಿದೆ. ಆದರೆ ಅರಣ್ಯ ಇಲಾಖೆ ಆ ಕೆಲಸವನ್ನು ಮಾಡಿಯೇ ಇಲ್ಲ.

ಫೈರ್‌ ಲೈನ್‌ಗಳ ಬಗ್ಗೆ ಗಮನಹರಿಸಿಲ್ಲ:

ಸಾಮಾನ್ಯವಾಗಿ ಕಾಡಿನಲ್ಲಿ ಬೆಂಕಿ ಬಿದ್ದರೆ ಏಕ ಒಣಗಿರುವ ಮರಗಳು ಬೆಂಕಿಗಾಹುತಿಯಾಗುತ್ತವೆ. ಬೆಂಕಿ ಕೆನ್ನಾಲಿಗೆ ತಪ್ಪಿಸಲು ಮಧ್ಯದಲ್ಲಿ ಗಿಡಗಳನ್ನು ಕಟಾವು ಮಾಡಿ ಬರೀ ಖಾಲಿ ಜಾಗವನ್ನು ಉಳಿಸುತ್ತಾರೆ. ಒಂದು ವೇಳೆ ಬೆಂಕಿ ಹೊತ್ತಿಕೊಂಡರೆ ಖಾಲಿ ಜಾಗದವರೆಗೆ ಮಾತ್ರ ಬೆಂಕಿ ಕೆನ್ನಾಲಿಗೆ ಚಾಚುತ್ತದೆ. ಉಳಿದ ಕಾಡು ಉಳಿಯುತ್ತದೆ. ಆದರೆ, ಈ ಬಾರಿ ಆ ಕೆಲಸವನ್ನು ಅರಣ್ಯ ಇಲಾಖೆ ಮಾಡಿಲ್ಲ. ಸಾಮಾನ್ಯವಾಗಿ ಮಾಚ್‌ರ್‍ ತಿಂಗಳಿನಲ್ಲಿ ಬೇಸಿಗೆ ಕಾಲಿಡುವ ಮೊದಲೇ ಅಂದರೆ 2 ತಿಂಗಳ ಮೊದಲೇ ಕಾಡನ್ನು ಸಂರಕ್ಷಿಸುವ ಕೆಲಸ ಮಾಡಬೇಕಾಗಿತ್ತು. ಆದರೆ ಈವರೆಗೂ ಅದು ಸಾಧ್ಯವಾಗಿಲ್ಲ.

ಈಗಾಗಲೇ ದೇವರಾಯನದುರ್ಗ ಅರಣ್ಯದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಎರಡು ಬಾರಿ ಬೆಂಕಿಗೆ ಬಿದ್ದಿದೆ. ಅದೃಷ್ಟವತಾಶ್‌ ಸಮಯಕ್ಕೆ ಸರಿಯಾಗಿ ಅಗ್ನಿಶಾಮಕದ ಗಳ ಸಿಬ್ಬಂದಿ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಸಿಬ್ಬಂದಿ ಕೊರತೆ:

ಮೊದಲೇ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಇರುವ ಅಲ್ಪಸ್ವಲ್ಪ ಸಿಬ್ಬಂದಿಯನ್ನು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ಕಳಿಸಲಾಗಿದೆ. ಅಲ್ಲದೇ ಬೇಸಿಗೆ ಹೊಸ್ತಿಲಿಗೆ ಬಂದಾಗ ದಿನಗೂಲಿ ನೌಕರರನ್ನು ತೆಗೆದುಕೊಳ್ಳುವುದು ವಾಡಿಕೆ. ಆದರೆ ಈ ಬಾರಿ ಇನ್ನೂ ದಿನಗೂಲಿ ನೌಕರರನ್ನು ಕೆಲಸಕ್ಕೆ ತೆಗೆದುಕೊಂಡಿಲ್ಲ.

ಒಂದು ವೇಳೆ ಬೆಂಕಿ ಬಿದ್ದರೆ...

42.2 ಚ.ಕಿ.ಮೀ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರುವ ದೇವರಾಯನದುರ್ಗ ಅರಣ್ಯಕ್ಕೆ ಬೆಂಕಿ ಬಿದ್ದರೆ ಲಕ್ಷಾಂತರ ಸೂಕ್ಷ್ಮ ಜೀವಿಗಳು ಬೆಂಕಿಗೆ ಆಹುತಿಯಾಗುತ್ತದೆ. ಹಕ್ಕಿ ಮರಿಗಳು, ಮೊಟ್ಟೆಗಳು, ಕೀಟಗಳು ನಾಶವಾಗುತ್ತದೆ. ಜೀವವೈವಿಧ್ಯತೆಯೇ ಹೊರಟು ಹೋಗುತ್ತದೆ. ಮತ್ತೆ ಜೀವವೈವಿಧ್ಯತೆ ಮರು ಸ್ಥಾಪನೆಯಾಗಬೇಕಾದರೆ ವರ್ಷಗಳೇ ಬೇಕಾಗುತ್ತದೆ.

ದೇವರಾಯನದುರ್ಗ ಸಂರಕ್ಷಿತ ಅರಣ್ಯವನ್ನು ಸಂರಕ್ಷಿಸದೇ ಹೋದರೆ ಇದು ಕೂಡ ಬರಡು ಭೂಮಿಯಾಗುತ್ತದೆ. ಈಗಾಗಲೇ ಬೇಸಿಗೆ ಕಾಲಿಟ್ಟಿರುವುದರಿಂದ ಬೆಳಿಗ್ಗೆ ಮತ್ತು ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಲು ಸಿಬ್ಬಂದಿಗಳನ್ನು ನಿಯೋಜಿಸಬೇಕಾಗಿದೆ. ಮುಖ್ಯ ಸ್ಥಳಗಳಲ್ಲಿ ವಾಚ್‌ ಟವರ್‌ ನಿರ್ಮಾಣ ಮಾಡಿ ಕಾವಲು ಪಡೆ ಹಾಕಬೇಕಾಗಿದೆ. ರಾತ್ರಿ ವೇಳೆ ಕೆಲಸ ಮಾಡುವ ಸಿಬ್ಬಂದಿಗೆ ಸ್ವೆಟರ್‌, ಟಾಚ್‌ರ್‍ಗಳು ಹಾಗೂ ಬೈನಾಕ್ಯುಲರ್‌ ನೀಡಬೇಕಾಗಿದೆ. ಅರಣ್ಯ ಇಲಾಖೆಯಲ್ಲಿ ವೈರ್‌ಲೆಸ್‌ ಸೆಟ್‌ ಗಳೇ ಇಲ್ಲ. ಹೀಗಾಗಿ ರಾತ್ರಿ ವೇಳೆ ಕಾಡಿಗೆ ಬೆಂಕಿ ಬಿದ್ದರೆ ಸುದ್ದಿ ಮುಟ್ಟಿಸಲು ಕಷ್ಟಸಾಧ್ಯ. ಅಲ್ಲದೇ ಯಾವ ಮೊಬೈಲ್‌ ಫೋನುಗಳು ಕೂಡ ನೆಟ್‌ವರ್ಕ್ ಸಿಗುವುದಿಲ್ಲ. ಹೀಗಾಗಿ ವೈರ್‌ಲೆಸ್‌ ಸೆಟ್‌ ವ್ಯವಸ್ಥೆ ಮಾಡಬೇಕಾಗಿದೆ.

ಸುಮಾರು ಎರಡು ತಿಂಗಳ ಕಾಲ ದೊಡ್ಡ ಬೇಸಿಗೆ ಇದೆ. ಈ ಅವಧಿಯಲ್ಲಿ ಕಾಡನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಬೆಂಕಿಯಿಂದ ಕಾಡನ್ನು ಸಂರಕ್ಷಿಸಿಕೊಳ್ಳಲು ಸಿಬ್ಬಂದಿ ಸನ್ನದ್ದರಾಗಬೇಕಾಗಿದೆ.

1. ಕಾಡಿನ ರಸ್ತೆ ಬದಿಯ ಕಟ್ಟಿಗೆ ತೆರವುಗೊಳಿಸಬೇಕು

2. ಹಗಲು ರಾತ್ರಿ ಸಿಬ್ಬಂದಿ ಕಾರ್ಯೋನ್ಮುಖರಾಗಬೇಕು

3. ರಾತ್ರಿ ಪಾಳಯದ ಸಿಬ್ಬಂದಿಗೆ ಅವಶ್ಯಕ ಪರಿಕರ ನೀಡಬೇಕು

4. ಬೈನಾಕ್ಯುಲರ್‌, ಟಾಚ್‌ರ್‍, ಸ್ವೆಟರ್‌ಗಳನ್ನು ಕೊಡಬೇಕಾಗಿದೆ

5. ವೈರ್‌ಲೆಸ್‌ ಸೆಟ್‌ ವ್ಯವಸ್ಥೆಯನ್ನು ಅತ್ಯಗತ್ಯವಾಗಿ ಮಾಡಬೇಕು

ಬೆಂಕಿಗೆ ಕಾರಣವಾಗುವ ಅಂಶಗಳು

1. ದೇವರಾಯನದುರ್ಗ ಬೆಟ್ಟದ ಮೇಲಿರುವ ನರಸಿಂಹಸ್ವಾಮಿ ದೇವರಿಗೆ ಆರತಿ ಬೆಳಗಲು ಕೆಲವರು ಕಾಡಿಗೆ ಬೆಂಕಿ ಹಾಕುತ್ತಾರೆ. ಬೆಟ್ಟದ ಬುಡದಲ್ಲಿ ಹಾಕುವ ಈ ಬೆಂಕಿಯಿಂದ ತಾವೇ ದೇವರಿಗೆ ಆರತಿ ಬೆಳಗಿದಂತಾಗುತ್ತದೆ ಎಂಬ ಮೂಢನಂಬಿಕೆ ಕೆಲವರಲ್ಲಿದೆ. ಹೀಗಾಗಿ ಪುಳ್ಳೆಗಳಿಗೆ ಬೆಂಕಿ ಹಾಕುತ್ತಾರೆ. ಆದರೆ ಅದನ್ನು ನಂದಿಸದೇ ಹಾಗೆ ಹೋಗುವುದರಿಂದ ಬೆಂಕಿ ಹೊತ್ತಿಕೊಂಡು ಕಾಡನ್ನು ನಾಶ ಮಾಡುತ್ತಿದೆ.

ಆಮದು ಕುಸಿತ: ಸ್ಥಳೀಯ ಮಾರ್ಕೆಟ್‌ಗಳಲ್ಲಿ ರೇಷ್ಮೆಗೆ ಬಂಪರ್ ಬೆಲೆ

ಕಾಡಿಗೆ ಬೆಂಕಿ ಬೀಳದಂತೆ ತಡೆಯಲು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುತ್ತೇವೆ. ಜಿಲ್ಲೆಯಲ್ಲಿರುವ ಎಲ್ಲಾ ಸಂರಕ್ಷಿತ ಅರಣ್ಯ ಪ್ರದೇಶಗಳಿಗೂ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಡಿಎಫ್‌ಒ ಗಿರೀಶ್‌ ಹೇಳಿದ್ದಾರೆ.

ಕಾಡಿಗೆ ಬೀಳುವ ಬೆಂಕಿಯಿಂದ ಅರಣ್ಯ ಹೆಚ್ಚು ಹಾನಿಯಾಗದಂತೆ ಅರಣ್ಯ ಇಲಾಖೆ ಎಲ್ಲಾ ಸೌಕರ್ಯ ಕಲ್ಪಿಸಬೇಕು. ಬೆಳಗ್ಗೆ ಮತ್ತು ರಾತ್ರಿ ಪಾಳಯದಲ್ಲಿ ಕೆಲಸ ನಿರ್ವಹಿಸಬೇಕು. ಸಿಬ್ಬಂದಿಗೆ ಬೇಕಾದ ಸಲಕರಣೆಗಳನ್ನು ನೀಡಬೇಕು ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಟಿವಿಎನ್‌ ಮೂರ್ತಿ ಹೇಳಿದ್ದಾರೆ.

-ಉಗಮ ಶ್ರೀನಿವಾಸ್‌

click me!