ಪುತ್ರನನ್ನೇ ಕೈಯಾರೆ ನೇಣಿಗೆ ಹಾಕಿದ ತಂದೆ : ತಾಯಿಯೂ ಆತ್ಮಹತ್ಯೆ

By Web DeskFirst Published Jun 3, 2019, 8:36 AM IST
Highlights

ತಾನೇ ಹೆತ್ತ ಮಗನನ್ನು ತಂದೆಯೇ ಸ್ವತಃ ನೇಣಿಗೇರಿಸಿದ್ದು, ತಾಯಿಯೂ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು :  ಹನ್ನೆರಡು ವರ್ಷದ ಪುತ್ರನನ್ನು ತಂದೆಯೇ ನೇಣು ಹಾಕಿದ್ದು, ಆತನ ಎದುರೇ ಪತ್ನಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಎಚ್‌ಎಎಲ್‌ನ ವಿಭೂತಿಪುರದಲ್ಲಿ ನಡೆದಿದೆ. 

ಆದರೆ ತಂದೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಪುತ್ರಿ ತಡೆದಿದ್ದು, ಆರೋಪಿ ಸುರೇಶ್‌ಬಾಬುನನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಭೂತಿಪುರ ನಿವಾಸಿ ಗೀತಾಬಾಯಿ (34) ಮತ್ತು ಪುತ್ರ ವರುಣ್ (12) ಮೃತರು. ಘಟನೆ ಸಂಬಂಧ ಸುರೇಶ್‌ನ ಪುತ್ರಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.

ಸುರೇಶ್ ಬಾಬು ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದು, ಗೀತಾಬಾಯಿ ಮನೆ ಕೆಲಸ ಮಾಡುತ್ತಿದ್ದರು. ದಂಪತಿಗೆ 12 ವರ್ಷದ ಪುತ್ರ ಹಾಗೂ 17 ವರ್ಷ ಪುತ್ರಿ ಇದ್ದಾಳೆ. ಈ ಹಿಂದೆ ಚೀಟಿ ವ್ಯವಹಾರ ನಡೆಸುತ್ತಿದ್ದರು. ಕೆಲವರು ವಂಚನೆ ಮಾಡಿದ್ದರಿಂದ ದಂಪತಿ ನಷ್ಟಕ್ಕೆ ಒಳಗಾಗಿದ್ದರು. ಚೀಟಿ ಹಾಕಿದ್ದವರು ಹಣ ಕೊಡುವಂತೆ ನಿತ್ಯ ಸುರೇಶ್ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರು. ಈ ವಿಚಾರವಾಗಿ ದಂಪತಿ ಒತ್ತಡಕ್ಕೆ ಒಳಗಾಗಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿತ್ತು. ಅದರಂತೆ ಶನಿವಾರ ರಾತ್ರಿ ಒಂದು ಗಂಟೆ ಸುಮಾರಿಗೆ ಸುರೇಶ್ ಬಾಬು ಪುತ್ರ ವರುಣ್‌ನನ್ನು ದುಪ್ಪಟದಿಂದ ಫ್ಯಾನ್‌ಗೆ ನೇಣು ಹಾಕಿದ್ದಾನೆ. 

ಈ ವೇಳೆ ಪತ್ನಿ ಹಾಗೂ ಪುತ್ರಿ ಚೀರಾಡಿದ್ದಾರೆ. ಬಳಿಕ ಸುರೇಶ್ ಪುತ್ರನನ್ನು ನೇಣಿನ ಕುಣಿಕೆಯಿಂದ ಇಳಿಸಿ ಬೇಡ್ ಮೇಲೆ ಮಲಗಿಸಿದ್ದಾನೆ. ಈ ವೇಳೆ ಬಾಲಕ ಉಸಿರಾಡುತ್ತಿರುವುದನ್ನು ಕಂಡು ಸುರೇಶ್ ಪುತ್ರನ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಪುತ್ರ ಸತ್ತ ಕೂಡಲೇ ಅದೇ ಫ್ಯಾನ್‌ಗೆ ಗೀತಾಬಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ನಂತರ ಆತ್ಮಹತ್ಯೆಗೆ ಸುರೇಶ್ ಯತ್ನಿಸಿದ್ದು, ಪುತ್ರಿ ತಡೆದಳು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಆತನ ಪುತ್ರಿ ಗೊಂದಲದ ಹೇಳಿಕೆ ನೀಡುತ್ತಿದ್ದು, ಆಕೆಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಪ್ರಾಥಮಿಕ ತನಿಖೆಯಲ್ಲಿ ಕುಟುಂಬ ಚೀಟಿ ವ್ಯವಹಾರದಿಂದ ನಷ್ಟ ಅನುಭವಿಸಿ ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಮಾಹಿತಿ ನೀಡಿದರು. 

ಆತ್ಮಹತ್ಯೆ ನೆಪ ಹೇಳಿದ್ದ: ಪತ್ನಿ ಗೀತಾಬಾಯಿ ಚೀಟಿ ವ್ಯವಹಾರ ನಡೆಸುತ್ತಿದ್ದಳು. ಸಾರ್ವಜನಿಕರು ಮನೆ ಬಳಿ ಬಂದು ಹಣ ಕೇಳಿ  ಜಗಳವಾಡುತ್ತಿದ್ದರು. ಶನಿವಾರ ಸಂಜೆ ಕೂಡ ಮಹಿಳೆಯೊಬ್ಬರು ಚೀಟಿ ಹಣಕ್ಕೆ ಜಗಳವಾಡಿದ್ದರು. ಈ ಹಿನ್ನೆಲೆಯಲ್ಲಿ ನೊಂದು 
ಪತ್ನಿ ತನ್ನ ಕೊಠಡಿಯಲ್ಲಿ ಪುತ್ರನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿಕೆ ನೀಡಿದ್ದ. ಹೀಗಾಗಿ ಪೊಲೀಸರು ಅದನ್ನು ನಂಬಿದ್ದರು.

ಆರೋಪಿ ಪುತ್ರನನ್ನು ನೇಣಿಗೆ ಹಾಕುವ ವಿಡಿಯೋವನ್ನು 17 ವರ್ಷದ ಪುತ್ರಿ ಗೋಳಿಡುತ್ತಾ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಳು. ಈ ವಿಡಿಯೋ ಸ್ಥಳೀಯರೊಬ್ಬರ ಮೂಲಕ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಭಾನುವಾರ ಸಂಜೆ ವೇಳೆಗೆ ಪುತ್ರನನ್ನು ಸುರೇಶ್ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದರು.

ಆತ್ಮಹತ್ಯೆಗೆ ನಿರಾಕರಣೆ : ಪುತ್ರನ ಕೊಲೆ ಹಾಗೂ ಪತ್ನಿ ಆತ್ಮಹತ್ಯೆ ಬಳಿಕ ಪುತ್ರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರಾಕರಿಸಿದ್ದಾಳೆ. ನಂತರ ಆರೋಪಿ ಸುರೇಶ್ 17 ವರ್ಷದ ಪುತ್ರಿ ಬಳಿ ತಾಯಿ ಹಾಗೂ ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಬಳಿ ಹೇಳಿಕೆ ನೀಡು ಎಂದು ಹೇಳಿದ್ದ. ನಂತರ ಯಾರಿಗೂ ಅನುಮಾನ ಬಾರದಂತೆ ವರುಣ್ ಶವವನ್ನು ಪುನಃ ನೇಣು ಹಾಕಿದ್ದ ಎಂದು ಪೊಲೀಸರು ತಿಳಿಸಿದರು.

ನಾಟಕ  : ಸಂಜೆ ಮನೆಯಲ್ಲೆ ಇದ್ದೆ, ರಾತ್ರಿ 9 ಗಂಟೆಗೆ ಕೆಲಸಕ್ಕೆ ತೆರಳಿದ್ದೆ. ನಾನು ಬರುವಷ್ಟರಲ್ಲಿ ಪತ್ನಿ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿದ್ದರು. ದುಡ್ಡಿನ ವಿಷಯದಲ್ಲಿ ಸ್ವಲ್ಪ ಸಮಸ್ಯೆಯಾಗಿತ್ತು. ಮನೆಯಲ್ಲಿ ಇದೇ ವಿಚಾರವಾಗಿ ಸಣ್ಣ-ಪುಟ್ಟ ಜಗಳ ನಡೆಯುತ್ತಿತ್ತು. ಕೆಲವರಿಂದ ಸ್ವಲ್ಪ ಸಾಲ ತೆಗೆದು ಕೊಂಡಿದ್ದೆವು. ಈ ವಿಚಾರವಾಗಿ ಸ್ವಲ್ಪ ಜಗಳ ನಡೆದಿತ್ತು. ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತನಗೆ ಏನೂ ಗೊತ್ತಿಲ್ಲ ಎಂಬಂತೆ ಸುರೇಶ್ ಬಾಬು ಮಾಧ್ಯಮಗಳ ಬಳಿ ಹೇಳಿಕೆ ನಿಡಿದ್ದ. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯ್ಬಿ ಟ್ಟಿದ್ದ ಎಂದು ಪೊಲೀಸರು ತಿಳಿಸಿದರು. 

click me!