ಕಲಬುರಗಿ: ಬಿತ್ತನೆ ಬೀಜ ತಂದು ಮಳೆ ನಿರೀಕ್ಷೆ​ಯಲ್ಲಿ ರೈತ

Published : Jun 10, 2023, 08:19 PM IST
ಕಲಬುರಗಿ: ಬಿತ್ತನೆ ಬೀಜ ತಂದು ಮಳೆ ನಿರೀಕ್ಷೆ​ಯಲ್ಲಿ ರೈತ

ಸಾರಾಂಶ

ಮೃಗಶಿರಾ ಮಳೆ ಸಕಾಲಕ್ಕೆ ತಾಲೂಕಿನಾದ್ಯಂತ ಸಂಪೂರ್ಣವಾಗಿ ಬಿದ್ದರೆ ರೈತರು ಹುಲುಸಾದ ಬೆಳೆ ಬೆಳೆಯಬಹುದಾಗಿದೆ. ಆದರೆ, ಈ ಮಳೆಯ ಮೇಲೆಯೇ ರೈತನ ಬದುಕು ನಿಂತಿದೆ.

ಅಫಜಲ್ಪುರ(ಜೂ.10): ಕಳೆದ ಒಂದು ತಿಂಗಳಿಂದ ಉರಿ ಬಿಸಿಲು ಅದರ ಜೊತೆಗೆ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ರೋಹಿಣಿ ಮಳೆಯಾಗುತ್ತದೆ ಬಿತ್ತನೆ ಕಾರ್ಯ ಕೈಗೊಳ್ಳಬೇಕು ಎಂದು ರೈತರು ಜಮೀನು ಹಸನು ಮಾಡಿ ತುದಿಗಾಲ ಮೇಲೆ ನಿಂತಿದ್ದರು. ಆದರೆ ರೋಹಿಣಿ ಮಳೆ ರೈತ ಸಮುದಾಯಕ್ಕೆ ಕೈ ಕೊಟ್ಟಿದೆ. ಜೂನ್‌ 8ರಂದು ಮೃಗಶಿರ ಮಳೆ ಆರಂಭವಾಗಿದೆ. ಈಗ ಮೃಗಶಿರ ಮಳೆಯಾದರೂ ಆಗುತ್ತದೆಯೋ ಇಲ್ಲವೋ ಎಂಬ ಚಿಂತೆ ರೈತ ಸಮುದಾಯವನ್ನು ಕಾಡುತ್ತಿದೆ. ಈಗ ಎಲ್ಲ ರೈತರ ಚಿತ್ತ ಮೃಗಶಿರ ಮಳೆಯತ್ತ ನೆಟ್ಟಿದೆ.

ರೋಹಿಣಿ ಮಳೆಯಾದರೆ ಓಣಿ ತುಂಬಾ ಜೋಳ ಎಂಬ ಪ್ರತೀತಿ ತಾಲೂಕಿನ ರೈತರಲ್ಲಿ ಇತ್ತು. ಆದರೆ ರೋಹಿಣಿ ಮಳೆಯಾಗದೆ ರೈತ ವಲಯದಲ್ಲಿ ಸಾಕಷ್ಟು ಚಿಂತೆಗೀಡು ಮಾಡಿದೆ. ಈ ಮಳೆಯಾದರೂ ಕೈ ಹಿಡಿಯುತ್ತದೆ ಇಲ್ಲವೋ ಎಂಬ ಆತಂಕ ರೈತರನ್ನು ಕಾಡುತ್ತಿದೆ. ರೋಹಿಣಿ ಮಳೆಯಾದರೆ ರೈತರು ತುಸು ವಿಳಂಬವಾಗಿ ಭೂಮಿಗೆ ಕಾಳು ಹಾಕುತ್ತಾರೆ.

'ಬಾಕಿ ಬಿಲ್‌ ಪಾವತಿಸದಿದ್ದರೆ ಉಚಿತ ವಿದ್ಯುತ್‌ ಇಲ್ಲ'

ಮೃಗಶಿರಾ ಮಳೆ ಸಕಾಲಕ್ಕೆ ತಾಲೂಕಿನಾದ್ಯಂತ ಸಂಪೂರ್ಣವಾಗಿ ಬಿದ್ದರೆ ರೈತರು ಹುಲುಸಾದ ಬೆಳೆ ಬೆಳೆಯಬಹುದಾಗಿದೆ. ಆದರೆ, ಈ ಮಳೆಯ ಮೇಲೆಯೇ ರೈತನ ಬದುಕು ನಿಂತಿದೆ.

ಮುಂಗಾರು ಹಂಗಾಮಿನ ಮಳೆ ಕಾಳುಕಡಿಗಳ ಬೆಳೆಯಾಗಿದೆ. ಈ ಮಳೆಯಾದರೆ ಕಾಳುಕಡಿ ಸಮೃದ್ಧಿವಾಗಿ ಬೆಳೆಯುತ್ತವೆ. ರೈತರು ಈ ಹಂಗಾಮಿನಲ್ಲಿ ಹೆಚ್ಚು ಹೆಚ್ಚಾಗಿ ದ್ವಿದಳಧಾನ್ಯ ಬೆಳೆಯುತ್ತಾರೆ. ರೋಹಿಣಿ ಮಳೆಯಂತೆ ಮೃಗಶಿರ ಮಳೆ ಕೈ ಕೊಟ್ಟರೆ ರೈತರ ಬದುಕು ಮತ್ತೆ ಚಿಂತಾಜನಕವಾಗುತ್ತದೆ.ಬಿತ್ತನೆಗೆ ಸಕಾಲಕ್ಕೆ ಮಳೆಯಾಗದೇ ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ರೋಹಿಣಿ ಮಳೆ ಕೈ ಕೊಟ್ಟಿದೆ. ಮೃಗಶಿರ ಮಳೆ ಕೈ ಹಿಡಿಯುತ್ತದೆ ಎಂಬ ಆಶಾ ಭಾವನೆ ರೈತರಲ್ಲಿ ಇದೆ. ರೈತರ ಈ ಆಶಯ ಈಡೇರಿದರೆ ರೈತರು ಸಮೃದ್ಧ ಬೆಳೆ ಪಡೆದು ನೆಮ್ಮದಿ ಜೀವನ ಸಾಗಿಸಬಹುದು. ಆದರೆ ಈ ವರ್ಷ ವರುಣ ಕೈ ಹಿಡಿಯುತ್ತಾನೆಯೋ ಇಲ್ಲವೋ ಎಂಬ ಅಳಕು ಅನ್ನದಾತನಲ್ಲಿ ಮನೆ ಮಾಡಿದೆ.

ಕಲ​ಬು​ರ​ಗಿ: ಯುವಕನ ಕೊಲೆ, ಇಬ್ಬರ ಬಂಧನ

ರೋಹಿಣಿ ಮಳೆಗೆ ಬಿತ್ತನೆಯಾಗಬೇಕಿತ್ತು. ಆದರೆ ಮಳೆ ಮುಂಗಾರು ಪೂರ್ವ ಬಂದಿದ್ದರಿಂದಾಗಿ ವಿಪರೀತ ಬಿಸಿಲಿನ ಪ್ರಖರತೆಗೆ ಭೂಮಿಯಲ್ಲಿ ತೇವಾಂಶವಿಲ್ಲದೆ ಬಿತ್ತನೆ ಮಾಡಲು ಆಗಿಲ್ಲ. ಸಕಾಲಕ್ಕೆ ರೋಹಿಣಿ ಮಳೆಯಾಗಿದ್ದರೆ ಹೆಸರು, ಉದ್ದು ಬಿತ್ತನೆ ಮಾಡಬಹುದಿತ್ತು. ಆದರೆ ಮಳೆಯಾಗದೆ ಬಿತ್ತನೆ ಆಗಲಿಲ್ಲ. ಇನ್ನು ಬಿತ್ತನೆ ಶೂನ್ಯವಾಗಿದೆ. ರೋಹಿಣಿ ಮಳೆಯಾಗಿದ್ದರೆ ಹೆಸರು, ಉದ್ದು ಬಿತ್ತನೆ ಮಾಡ್ತಿದ್ದೀವಿ. ಇನ್ನು ಮಳೆಯಾಗಿಲ್ಲ. ಭೂಮಿಯಲ್ಲಿ ತೇವಾಂಶವಿಲ್ಲದ್ದರಿಂದ ಬಿತ್ತನೆ ಮಾಡಿಲ್ಲ. ಮನೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹ ಮಾಡಿಕೊಂಡಿದ್ದೇವೆ. ಆದರೆ, ಇನ್ನೂ ಮಳೆಯಾಗುತ್ತಿಲ್ಲ. ಮೃಗಶಿರ ಮಳೆಯಾದರೂ ಆಗುತ್ತದೆಯೋ ಇಲ್ಲವೋ ಎಂದು ಆಕಾಶದತ್ತ ಮುಖ ಮಾಡಿದ್ದೇವೆ ಅಂತ ತಾಲೂಕಿನ ಮಣ್ಣೂರ ಗ್ರಾಮದ ರೈತರಾದ ಕಾಶೀನಾಥ ಜೇವೂರ ಶಾಂತಪ್ಪ ವಾಯಿ ಉಸ್ಮಾನಸಾಬ ಶೇಷಗಿರಿ ಲಗಶೆಪ್ಪ ಭಾಸಗಿ ಮಹ್ಮದ ಕರಿಂ ಮಂಗಲಗಿರಿ ಹೇಳಿದ್ದಾರೆ.

ಮುಂಗಾರು ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜ ವಿತರಣೆಗೆ ರೈತ ಸಂಪರ್ಕ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ ಅಂತ ಅಫಜಲ್ಪುರ ಸಹಾಯಕ ಕೃಷಿ ನಿರ್ದೇಶಕ ಎಸ್‌ ಎಚ್‌ ಗಡಗಿಮನಿ ತಿಳಿಸಿದ್ದಾರೆ.  

PREV
Read more Articles on
click me!

Recommended Stories

ವಿಜಯಪುರದ ಚಡಚಣದಲ್ಲಿ ಪತ್ತೆಯಾದ ನಿಗೂಢ ರಣಹದ್ದು: ಕಾಲಿನಲ್ಲಿರೋ ವಸ್ತು ನೋಡಿ ಜನರು ಶಾಕ್
ಮಹಾ ಜಿಪಂ ಎಲೆಕ್ಷನ್‌ಗೆ ಮೈಸೂರು ಇಂಕ್‌ ಬಳಕೆ