ನಮ್ಮ ಪ್ರಣಾಳಿಕೆ ಒಪ್ಪುವ ಪಕ್ಷಕ್ಕೆ ರೈತರ ಬೆಂಬಲ

By Kannadaprabha News  |  First Published Mar 15, 2023, 12:09 PM IST

ರೈತರ ಚುನಾವಣಾ ಪ್ರಣಾಳಿಕೆಯನ್ನು ಬಹಿರಂಗವಾಗಿ ಒಪ್ಪುವ ಪಕ್ಷಕ್ಕೆ ರಾಜ್ಯದ ರೈತರ ಬೆಂಬಲ ನೀಡಲಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.


  ಮೈಸೂರು :  ರೈತರ ಚುನಾವಣಾ ಪ್ರಣಾಳಿಕೆಯನ್ನು ಬಹಿರಂಗವಾಗಿ ಒಪ್ಪುವ ಪಕ್ಷಕ್ಕೆ ರಾಜ್ಯದ ರೈತರ ಬೆಂಬಲ ನೀಡಲಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.

ನಗರದ ತಾಲೂಕು ಕಚೇರಿ ಹಿಂಭಾಗದಲ್ಲಿರುವ ಪಿಡಬ್ಲ್ಯೂಡಿ ಅತಿಥಿಗೃಹದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರೈತರ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರೈತರಿಗೆ ಕನಿಷ್ಠ ಆದಾಯ ಖಾತರಿ ಭದ್ರತೆ ಒದಗಿಸಬೇಕು. ಪ್ರಾಣಿಗಳ ಹಾವಳಿಯಿಂದ ರೈತನ ಬದುಕು ಹಾಳಾಗುತ್ತಿದೆ. ಆದಕಾರಣ ಹಗಲು ವೇಳೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ 12 ಗಂಟೆಗಳ ನಿರಂತರ ವಿದ್ಯುತ್‌ ನೀಡುವ ಭರವಸೆ ಬೇಕು ಎಂದರು.

Latest Videos

undefined

ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಆಗಬೇಕು. ಕೃಷಿ ಸಾಲ ನೀತಿ ಬದಲಾಗಬೇಕು. ದೇಶದ 135 ಕೋಟಿ ಜನರಿಗೆ ಆಹಾರ ಉತ್ಪಾದನೆ ಮಾಡುವ ರೈತನಿಗೆ ಬಡ್ಡಿ ರಹಿತವಾಗಿ ಕೃಷಿ ಸಾಲವನ್ನು ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನೀಡುವಂತಾ ಯೋಜನೆ ಜಾರಿಗೆ ಬರಬೇಕು. ಕೃಷಿ ಸಾಲಕ್ಕೆ ಸಿಬಿಲ್‌ ಸ್ಕೋರ್‌ ಪರಿಗಣನೆ ಕೈಬಿಡಬೇಕು. ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಶಾಸನ ಜಾರಿ, ಡಾ. ಸ್ವಾಮಿನಾಥನ್‌ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು ಎಂದು ಅವರು ಹೇಳಿದರು.

ಫಸಲ್‌ ಭೀಮಾ ಬೆಳೆ ವಿಮೆ ಯೋಜನೆ ತಿದ್ದುಪಡಿ ಮಾಡಬೇಕು, ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ಅನ್ವಯ ಮಾಡಬೇಕು. ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕು. ಅಗತ್ಯ ಸಂದರ್ಭಗಳಲ್ಲಿ ರೈತರ ಅನುಮತಿ ಪಡೆಯಬೇಕು. ಆಂತಹ ರೈತರಿಗೆ ಜೀವನ ಭದ್ರತೆ ರೂಪಿಸಬೇಕು ಎಂದರು.

ಕಬ್ಬು ಕಟಾವು ಸಾಗಾಣಿಕೆ ದುಬಾರಿ ವೆಚ್ಚ ಹಾಗೂ ರೈತರ ಸುಲಿಗೆ ತಪ್ಪಿಸಲು ಕಬ್ಬಿನ ಎಫ್‌ಆರ್‌ಪಿ ಧರ ರೈತರ ಹೊಲದಲ್ಲಿನ ಧರ ಎಂದು ನಿಗದಿಪಡಿಸಬೇಕು. ರೈತರು ಆಲೆಮನೆಗಳಲ್ಲಿ ಕಬ್ಬಿನಿಂದ ಎಥನಾಲ್‌ ಉತ್ಪಾದನೆಗೆ, ಟ್ಯ್ರಾಕ್ಟರ್‌ ಮತ್ತಿತರ ಯಂತ್ರಗಳಿಗೆ ಬಳಸಿಕೊಳ್ಳಲು ರೈತರಿಗೆ ಅವಕಾಶ ನೀಡಬೇಕು. ಬಾಳೆ ಬೆಳೆಯನ್ನು ಸೇರಿಸುವ ರೀತಿಯಲ್ಲಿ ಕಬ್ಬು ಬೆಳೆಯ ಉತ್ಪಾದನೆಗೆ ಎನ್‌ಆರ್‌ಇಜಿ ಯೋಜನೆಯನ್ನು ಸೇರಿಸಬೇಕು ಎಂದು ಅವರು ತಿಳಿಸಿದರು.

ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳಿಗೆ ಪ್ರತ್ಯೇಕ ಮಾರುಕಟ್ಟೆ, ಪ್ರತ್ಯೇಕ ಹೆಚ್ಚುವರಿ ಧರ ನಿಗದಿ ಯೋಜನೆ ಜಾರಿಗೆ ಬರಬೇಕು.

ವಿದೇಶಿ ಬಹುರಾಷ್ಟ್ರೀಯ ಬಂಡವಾಳಶಾಹಿ ಕಂಪನಿಗಳು ಚಿಲ್ಲರೆ ಮಾರಾಟ ವ್ಯವಸ್ಥೆಗೆ ಕಡಿವಾಣ ಹಾಕಬೇಕು. ಕೃಷಿ ಕ್ಷೇತ್ರದಲ್ಲಿ ಹೂಡಿಕೆ ನಿಷೇಧಿಸಬೇಕು. ರಾಜ್ಯದ ಕಬ್ಬು ಬೆಳೆಗಾರರಿಗೆ ವಂಚನೆ ಎಸಗುತ್ತಿರುವ ಕಾನೂನು ಉಲ್ಲಂಘಿಸುತ್ತಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕುಟುಂಬಸ್ಥರನ್ನು ಸಚಿವ ಸಂಪುಟಕ್ಕೆ ಸೇರಿಸಿಕೂಳ್ಳಬಾರದು. ರಾಜ್ಯದಲ್ಲಿ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವ ಭರವಸೆ ನೀಡಬೇಕು ಎಂದರು.

ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್‌, ಮುಖಂಡರಾದ ಅತ್ತಹಳ್ಳಿ ದೇವರಾಜು, ಕೆರೆಹುಂಡಿ ರಾಜಣ್ಣ, ಬರಡನಪುರ ನಾಗರಾಜ್‌, ಕಮಲಮ್ಮ, ದೇವಮಣಿ, ಸಿದ್ದೇಶ, ರವಿ, ವೆಂಕಟೇಶ್‌, ಮಂಜುನಾಥ್‌, ರಾಮೇಗೌಡ, ಶಿವಸ್ವಾಮಿ, ಪ್ರದೀಪ್‌, ಶಿವಣ್ಣ ಮೊದಲಾದವರು ಇದ್ದರು.

click me!