
ನಂಜನಗೂಡು : ಆರ್. ಧ್ರುವನಾರಾಯಣ ಅವರ ಪುತ್ರ ದರ್ಶನ್‌ಧ್ರುವ ಅವರಿಗೆ ರಾಜಕೀಯ ಅನಿವಾರ್ಯವಲ್ಲ, ಆದರೆ ನಂಜನಗೂಡಿನ ಕಾಂಗ್ರೆಸ್‌ಗೆ ದರ್ಶನ್ ಧ್ರುವ ಅನಿವಾರ್ಯವಾಗಿದ್ದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಕಂಠು ಭಾವುಕವಾಗಿ ನುಡಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸದ್ಯ ಅವರ ಬಳಿ ಈ ಬಗ್ಗೆ ಕೂಲಂಕುಶವಾಗಿ ಮಾತನಾಡುವ ಪರಿಸ್ಥಿತಿಯಲ್ಲಿ ಅವರಿಲ್ಲ. ಶೀಘ್ರವೇ ಅವರಿಗೆ ನಿಮ್ಮೆಲ್ಲರ ಅಭಿಪ್ರಾಯವನ್ನು ಮನವರಿಕೆ ಮಾಡಿ ಕ್ಷೇತ್ರಕ್ಕೆ ಕರೆತರುವ ಪ್ರಯತ್ನ ಮಾಡಲಾಗುವುದು ಎಂದರು.
ನಿರಂತರ ಪ್ರವಾಸ:
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ 9 ಜಿಲ್ಲೆಗಳಲ್ಲಿ ನಿರಂತರವಾಗಿ ಪ್ರವಾಸ ಮಾಡಿ, ಪಕ್ಷ ಸಂಘಟನೆಯಲ್ಲಿ ತೊಡಗಿ ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂದು ಶಿಫಾರಸ್ಸು ಮಾಡುವ ಅಧಿಕಾರ ಹೊಂದಿದ್ದ ಆರ್. ಧ್ರುವನಾರಾಯಣ ಅವರು, ಕತ್ತೆಯಂತೆ ಪಕ್ಷಕ್ಕೆ ದುಡಿಯುತ್ತಿದ್ದರು. ಅವರು ಸ್ಪರ್ಧಿಸಲು ಬಯಸಿದ್ದ ನಂಜನಗೂಡು ಕ್ಷೇತ್ರಕ್ಕೆ ಧ್ರುವನಾರಾಯಣ ಅವರ ಒಬ್ಬರ ಹೆಸರನ್ನು ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಲು ನಮ್ಮ ಪಕ್ಷಕ್ಕೆ ಸಾಧ್ಯವಾಗಲಿಲ್ಲ ಎಂಬ ಬೇಸರ ನನಗೂ ಇದೆ. ಲಕ್ಷ್ಮಣ ರೇಖೆ ಮೀರಿದ ವರ್ತನೆಗಳು ಹಾಗೂ ಪಕ್ಷಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದರಿಂದ ಒತ್ತಡಕ್ಕೆ ಸಿಲುಕಿದ್ದರು. ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಹೊರಗೆ ಹಾಕದೇ ನಗುಮುಖದಲ್ಲೇ ಎಲ್ಲರೊಂದಿಗೂ ಮಾತನಾಡುತ್ತಿದ್ದರು. ಇದರಿಂದ ಗುಣಮುಖ ಆಗಿದ್ದ ಕಾಯಿಲೆಗಳು ಉಲ್ಬಣಗೊಂಡು ನಮ್ಮಿಂದ ದೂರ ಆಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅವರನ್ನು ನಂಬಿರುವ ನಂಜನಗೂಡು ಕ್ಷೇತ್ರದ ಕಾರ್ಯಕರ್ತರಿಗೆ ಅವರ ಪ್ರತಿರೂಪವಾಗಿ ಅವರ ಪುತ್ರ ದರ್ಶನ್ ಧ್ರುವ ಕಾಂಗ್ರೆಸ್‌ಗೆ ಅನಿವಾರ್ಯವಾಗಿದ್ದಾರೆಯೇ ಹೊರತು, ದರ್ಶನ್‌ಗೆ ರಾಜಕೀಯ ಅನಿವಾರ್ಯವಲ್ಲ. ಏಕೆಂದರೆ ಅವರು ವಿದೇಶದಲ್ಲಿ ಕಾನೂನು ಪದವಿ ವ್ಯಾಸಂಗ ಮಾಡಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವುದಲ್ಲದೆ, ಕೃಷಿಯಲ್ಲೂ ಸಕ್ರಿಯರಾಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾವಿನ ಅಘಾತದಿಂದ ಹೊರ ಬಂದ ಬಳಿಕ ದರ್ಶನ್ ಧ್ರುವ ಅವರೊಂದಿಗೆ ಸಮಾಲೋಚಿಸಿ ತಂದೆಯ ಸ್ಥಾನವನ್ನು ತುಂಬುವಂತೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಬಸವರಾಜು, ಕ್ಷೇತ್ರ ಉಸ್ತುವಾರಿಗಳಾದ ಸೋಮೇಶ್, ಬಿ.ಕೆ. ರವಿಕುಮಾರ್, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲತಾಸಿದ್ದಶೆಟ್ಟಿ, ಬಿಸಿಎಂ ಜಿಲ್ಲಾಧ್ಯಕ್ಷ ಕೆ. ಮಾರುತಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಮಹೇಶ್, ಸಿ.ಎಂ. ಶಂಕರ್, ಶ್ರೀಕಂಠನಾಯ್ಕ, ರಂಗಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಬಿ.ಎಂ. ನಾಗೇಶ್‌ರಾಜ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕೆ.ಎಂ. ಮಾದಪ್ಪ, ಮುದ್ದುಮಾದಶೆಟ್ಟಿ, ಮುಖಂಡರಾದ ಮಂಜುನಾಥ್, ಶಶಿರೇಖಾ, ಕುಳ್ಳಯ್ಯ, ನಾಗರಾಜಯ್ಯ, ರಾಜೇಶ್, ಎಂ. ರಾಜು, ವಿಜಯ್‌ಕುಮಾರ್, ನಗರಸಭಾ ಸದಸ್ಯರಾದ ಎಸ್.ಪಿ. ಮಹೇಶ್, ಗಂಗಾಧರ್, ಶ್ರೀಕಂಠಸ್ವಾಮಿ, ಯುವ ಕಾಂಗ್ರೇಸ್ ಅಧ್ಯಕ್ಷ ಅಶೋಕ್ ಇದ್ದರು.
-- ಯುಗಾದಿ ನಂತರ ಕಾರ್ಯಕ್ರಮ--
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ನಂಜನಗೂಡಿನಲ್ಲಿ ಶ್ರದ್ಧಾಂಜಲಿ ಸಭೆಯನ್ನು ಯುಗಾದಿ ಹಬ್ಬದ ಬಳಿಕ ಆಯೋಜನೆ ಮಾಡಲಾಗುವುದು. ಸುಮಾರು 15 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲು ಉದ್ದೇಶಿಸಲಾಗಿದ್ದು, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನಾಯಕರನ್ನು ಶ್ರದ್ಧಾಂಜಲಿ ಸಭೆಗೆ ಆಹ್ವಾನಿಸುವ ಜವಾಬ್ದಾರಿಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಂಠು ಹಾಗೂ ಎಸ್.ಸಿ. ಬಸವರಾಜು ಅವರು ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.