ಮಳೆಗಾಲ ಬಂದರೆ ಹಾವೇರಿಯ ಈ ರೈತರಿಗೆ ಜೀವ ಭಯ ಶುರುವಾಗುತ್ತೆ. ಇವರ ಕಷ್ಟ ಯಾರಿಗೂ ಬೇಡ. ತಾವು ಬೆಳೆದ ಬೆಳೆ ನೀರಲ್ಲಿ ಸಾಗಿಸಬೇಕು. ಆಳೆತ್ತರದ ನೀರಲ್ಲಿ ಹಸುಗಳ ಜೊತೆ ಈಜಿ ದಡ ಸೇರಬೇಕು.
ಹಾವೇರಿ ( ಜುಲೈ 17): ಮಳೆಗಾಲ ಬಂದರೆ ಇಲ್ಲಿ ರೈತರಿಗೆ ಜೀವ ಭಯ ಶುರುವಾಗುತ್ತೆ. ಇವರ ಕಷ್ಟ ಯಾರಿಗೂ ಬೇಡ. ತಾವು ಬೆಳೆದ ಬೆಳೆ ನೀರಲ್ಲಿ ಸಾಗಿಸಬೇಕು. ಆಳೆತ್ತರದ ನೀರಲ್ಲಿ ಹಸುಗಳ ಜೊತೆ ಈಜಿ ದಡ ಸೇರಬೇಕು. ತಾವು ಬೆಳೆದ ತರಕಾರಿ, ಸೊಪ್ಪು ಸಾಗಿಸೋಕೆ ತೆಪ್ಪ ಬಳಸಬೇಕು. ಸ್ಬಲ್ಪ ಯಾಮಾರಿದರೂ ಜೀವ ಹೋಗುತ್ತೆ. ಈಜು ಬಂದರೆ ಬಚಾವ್. ಇಲ್ಲದಿದ್ದರೆ ಯಮನ ಪಾದವೇ ಗತಿ. ಹೌದು ಇದು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಶಿಡ್ಲಾಪುರ ಗ್ರಾಮದ ರೈತರ ಗೋಳಿನ ಕಥೆ. ಶಿಡ್ಲಾಪುರ ಗ್ರಾಮದ ರೈತರಿಗೆ ಜಲ ದಿಗ್ಭಂಧನ ಎದುರಾಗಿದೆ. 200 ಎಕರೆ ಜಮೀನಿಗೆ ಹೋಗೋ ದಾರಿಯೇ ಜಲಾವೃತವಾಗಿದೆ. ಇದರಿಂದ ಪ್ರತಿ ದಿನ ಅಂಗೈಯಲ್ಲಿ ಜೀವ ಹಿಡಿದುಕೊಂಡೇ ರೈತರು ಬದುಕು ಸಾಗಿಸ್ತಿದ್ದಾರೆ. ಕೆರೆ ನೀರಿನಿಂದ ದಾರಿ ಮುಳುಗಡೆಯಾದ ಹಿನ್ನೆಲೆಯಲ್ಲಿ ಬೆಳೆಗಳಿಗೆ ಗೊಬ್ಬರ ಹಾಕದೇ ಗಿಡಗಳ ಬೆಳವಣಿಗೆ ಕುಂಠಿತಗೊಂಡಿದೆ. ಮೆಣಸಿಕಾಯಿ ಗಿಡಗಳು ನಿರಂತರ ಮಳೆಗೆ ಕೊಳೆತು ಹೋಗಿವೆ.ಬೆಳೆದ ಮೆಣಸಿಕಾಯಿ ಬೆಳೆಯನ್ನು ರೈತರು ತೆಪ್ಪದಲ್ಲಿ ಸಾಗಿಸ್ತಿದ್ದಾರೆ. ಒಂದು ಸಣ್ಣ ಸೇತುವೆ ನಿರ್ಮಿಸಿಕೊಡಿ ಎಂದರೂ ಇವರ ಗೋಳು ಯಾರಿಗೂ ಕೇಳಿಲ್ಲ. ಬೆಳೆದ ಬೆಳೆ ನೀರಲ್ಲಿ ಹೊತ್ತು ಸಾಗಿಸಬೇಕು. ಇಲ್ಲದಿದ್ದರೆ ತೆಪ್ಪ ಹುಡುಕಬೇಕು. ಏತ ನೀರಾವರಿ ಯೋಜನೆ ನೀರು ಕೆರೆಗೆ ಬಂದರೆ ಇಲ್ಲಿ ಹೊಲಗಳಿಗೆ ಹೋಗೋ ಮಾರ್ಗ ಬಂದ್ ಆಗುತ್ತೆ.
ಈ ಕೆರೆಗೆ ಒಂದು ಸಣ್ಣ ಸೇತುವೆ ನಿರ್ಮಿಸಿ ಕೊಡಿ ಎಂದು ಹಲವು ವರ್ಷಗಳಿಂದ ಸಿಎಂ ಬಸವರಾಜ ಬೊಮ್ಮಾಯಿ, ಸೇರಿದಂತೆ ಅಧಿಕಾರಿಗಳಿಗೆ ಮನವಿ ಮಾಡಿ ಸಾಕಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ರೈತರ ಈ ಬೇಡಿಕೆ ಕೇವಲ ಭರವಸೆಯಾಗೇ ಉಳಿದಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ಶಿಡ್ಲಾಪುರ ಗ್ರಾಮದ ಜನ ತಮ್ಮ ಗೋಳು ತೋಡಿಕೊಂಡಿದ್ದಾರೆ. ಸಣ್ಣ ಸೇತುವೆ ನಿರ್ಮಿಸಿಕೊಡಿ ಎಂದು ಸಿಎಂ ಸೇರಿದಂತೆ ಅಧಿಕಾರಿಗಳಿಗೆ ಕೈ ಮುಗಿದು ಮನವಿ ಮಾಡಿದ್ದಾರೆ.
undefined
ಮಳೆಯಬ್ಬರ ಕಡಿಮೆಯಾಗಿದ್ದರೂ ಜಿಲ್ಲೆಯಲ್ಲಿ ಹರಿಯುತ್ತಿರುವ ನದಿಗಳು ಉಕ್ಕೇರಿ ಹರಿಯುತ್ತಿವೆ. ಇದರಿಂದ ತುಂಗಭದ್ರಾ ಹಾಗೂ ವರದಾ ನದಿಗಳ ಅಬ್ಬರದಿಂದಾಗಿ ತಾಲೂಕಿನ ಗುತ್ತಲ ಹೋಬಳಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವು ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು ಸಾವಿರಾರು ಎರಕೆ ಪ್ರದೇಶದಲ್ಲಿನ ಬೆಳೆ ಜಲಾವೃತಗೊಂಡಿವೆ.
ಶುಕ್ರವಾರ ರಾತ್ರಿಯಿಂದಲೇ ತುಂಗಭದ್ರಾ ನದಿಯ ಅಪಾಯ ಮಟ್ಟಮೀರಿ ಹರಿಯುತ್ತಿದ್ದು ಶನಿವಾರ ಸಂಜೆ ನದಿಯ ನೀರಿನ ಮಟ್ಟ8 ಮೀ. ತಲುಪಿದ್ದು ಅನೇಕ ಗ್ರಾಮಗಳ ಸಂಚಾರ ಸ್ಥಗಿತಗೊಂಡಿದೆ. ವರದಾ ನದಿ ಪ್ರವಾಹದಿಂದ ಕೆಲವು ಸೇತುವೆಗಳು ಮುಳುಗಿದ್ದು, ಸಂಚಾರ ಸ್ಥಗಿತಗೊಂಡಿದೆ.
ಚೌಡಯ್ಯದಾನಪುರ- ಕಂಚಾರಗಟ್ಟಿರಸ್ತೆ ಸಂಚಾರ ಬಂದ್ ಆಗಿದೆ. ತುಂಗಭದ್ರಾ ನದಿಯ ಅಬ್ಬರಕ್ಕೆ ಕಂಚಾರಗಟ್ಟಿ, ನರಶೀಪುರ, ಹರಳಹಳ್ಳಿ, ಹಾವನೂರ, ಹುರಳಿಹಾಳ, ಗಳಗನಾಥ, ಗುಯಿಲಗುಂದಿ, ಮೇವುಂಡಿ ಹಾಗೂ ತೆರೆದಹಳ್ಳಿ ಗ್ರಾಮಗಳ ಸಾವಿರಾರು ಎಕರೆ ಪ್ರದೇಶ ಜಲಾವೃತಗೊಂಡಿದೆ.
ಇನ್ನು ವರದಾ ನದಿಯ ಗಳಗನಾಥ ಗ್ರಾಮದ ಬಳಿ ತುಂಗಭದ್ರಾ ನದಿಯೊಂದಿಗೆ ಸಂಗಮವಾದ ಸ್ಥಳವಾಗಿದ್ದು ಈ ಸಂಗಮ ಸ್ಥಳದ ಹಿಂಭಾಗದಲ್ಲಿ ಬರುವ ಗಳಗನಾಥ, ಬೆಳವಿಗಿ, ನೀರಲಗಿ, ಮರೋಳ, ಹಾಲಗಿ, ಮರಡೂರ, ಅಕ್ಕೂರ, ಹೊಸರಿತ್ತಿ, ಕಿತ್ತೂರ, ಕೆಸರಳ್ಳಿ, ಕೋಣನತಂಬಿಗಿ, ಹಂದಿಗನೂರ ಗ್ರಾಮಗಳಲ್ಲಿನ ಸಾವಿರಾರು ಎಕರೆ ಪ್ರದೇಶ ವರದಾ ನದಿಯ ಪಾಲಾಗಿವೆ.
ತುಂಗಭದ್ರಾ ಹಾಗೂ ವರದಾ ನದಿಯ ಪ್ರವಾಹಕ್ಕೆ ಮೆಕ್ಕೆಜೋಳ, ಹತ್ತಿ, ಮೆಣಸಿಕಾಯಿ, ಟೊಮ್ಯಾಟೋ, ಮುಳುಗಾಯಿ, ಸೌತೆ, ರೇಷ್ಮೆ, ಶೇಂಗಾ, ಅಡಕೆ, ಪೇರಲ, ಚಿಕ್ಕು, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಜಲಾವೃತವಾಗಿ ಹಾನಿಗೆ ಒಳಗಾಗಿವೆ. ಕೃಷಿ ಮತ್ತು ತೋಟಗಾರಿಕೆಯ ಎರಡು ಬೆಳೆಗಳು ಸೇರಿ ಸುಮಾರು 3 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾದ ಬಗ್ಗೆ ಅಂದಾಜಿಸಲಾಗಿದೆ.
ಪ್ರವಾಹದಲ್ಲಿ ಸಿಲುಕಿರುವ ನವಿಲುಗಳು: ಗುತ್ತಲ ಹೋಬಳಿಯ ಅಕ್ಕೂರ ಗ್ರಾಮದಲ್ಲಿ ಅನೇಕ ನವಿಲುಗಳು ಪ್ರವಾಹದ ಮಧ್ಯ ಸಿಲುಕಿದ್ದು, ಶುಕ್ರವಾರದಿಂದ ಅವುಗಳು ಹೆಚ್ಚಾಗಿ ಕೂಗುತ್ತಿದ್ದು, ಅವುಗಳಿಗೆ ಆಹಾರದ ಕೊರೆತೆ ಇರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದ ಡಿಸಿಎಫ್ ಬಾಲಕೃಷ್ಣ ಅವರು ನವಿಲುಗಳಿಗೆ ಆಹಾರ ಒದಗಿಸುವ ಅಥವಾ ರಕ್ಷಣೆಗೆ ಕ್ರಮಕೈಗೊಳ್ಳುವುದಾಗಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಹಾಲಗಿ- ಮರೋಳ ಮಧ್ಯದ ವರದಾ ಸೇತುವೆ ಮೇಲೆ ಅಪಾರ ಪ್ರಮಾಣ ನೀರು ಹರಿಯುತ್ತಿದ್ದರೂ ಸಹ ಅಪಾಯವನ್ನು ಲೆಕ್ಕಿಸದೇ ಸೇತುವೆ ದಾಟುತ್ತಿರುವ ಜನರು, ಸೆಲ್ಪಿ ತೆಗೆದುಕೊಳ್ಳುವಲ್ಲಿ ನಿರತಾಗಿದ್ದ ಯುವಕ- ಯುವತಿಯರಿಗೆ ಲೋಕೋಪಯೋಗಿ ಇಲಾಖೆಯ ಎಇಇ ಶ್ರೀಮಂತ ಹದಗಲ್ ಎಚ್ಚರಿಕೆ ನೀಡಿ ಸೇತುವೆ ಸಂಚಾರಕ್ಕೆ ನಿರ್ಭಂದಿಸಿದರು. ಅನೇಕರು ಇವರ ಮಾತನ್ನು ಲೆಕ್ಕಿಸದೇ ಸಂಚಾರವನ್ನು ಮುಂದೆವರೆಸಿದಾಗ ಗುತ್ತಲ ಠಾಣೆಯ ಪೊಲೀಸರಿಗೆ ದೂರವಾಣಿ ಮೂಲಕ ಪರಿಸ್ಥಿತಿಯನ್ನು ತಿಳಿಸಿ ಸಂಚಾರ ನಿರ್ಭಂದಿಸುವಂತೆ ವಿನಂತಿಸಿದರು.