ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು: ಕುಮಾರಸ್ವಾಮಿ

By Kannadaprabha NewsFirst Published Jan 18, 2023, 9:30 PM IST
Highlights

ಸರ್ಕಾರ ಅಧಿಕಾರಕ್ಕೆ ಬಂದರೆ ಲಚ್ಯಾಣ ಗ್ರಾಮದ ಅಭಿವೃದ್ಧಿಗೆ ಬದ್ಧ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆದರೂ ರೈತರು ನೆಮ್ಮದಿಯಿಂದ ಬದುಕುವ ವಾತಾವರಣ ಇಲ್ಲ: ಮಾಜಿ ಸಿಎಂ ಕುಮಾರಸ್ವಾಮಿ. 

ಇಂಡಿ(ಜ.18):  ರಾಜ್ಯದಲ್ಲಿ ಜೆಡಿಎಸ್‌ ಪಕ್ಷಕ್ಕೆ ಆಶೀರ್ವಾದ ಮಾಡಿ ಸರ್ಕಾರ ರಚನೆಯಾದರೆ ಕೊಡುಗು ಜಿಲ್ಲೆಯ ನಿರಾಶ್ರಿತರಿಗೆ ಕಟ್ಟಿಕೊಟ್ಟಂತೆ ಭೀಮಾನದಿ ಪ್ರವಾಹದಿಂದ ತೊಂದರೆ ಅನುಭವಿಸಿದ ಗ್ರಾಮಗಳನ್ನು ಸ್ಥಳಾಂತರಿಸಿ ಸುಸಜ್ಜಿತ ಹೊಸಗ್ರಾಮ ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದರು.

ತಾಲೂಕಿನ ಲಚ್ಯಾಣ ಗ್ರಾಮಕ್ಕೆ ಮಂಗಳವಾರ ಆಗಮಿಸಿದ ಪಂಚರತ್ನ ಯೋಜನೆ ರಥಯಾತ್ರೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಸನ್ಮಾನ, ಸ್ವೀಕರಿಸಿ ಮಾತನಾಡಿದ ಅವರು, ಲಚ್ಯಾಣ ಗ್ರಾಮ ಪವಾಡ, ಪುಣ್ಯಸ್ಥಳ. 2005ರಲ್ಲಿ ನಾನು ಶ್ರೀಮಠಕ್ಕೆ ಭೇಟಿದ ನಂತರ ಅಧಿಕಾರ ಪಡೆದುಕೊಂಡಿದ್ದು, ಲಚ್ಯಾಣ ಗ್ರಾಮ ದತ್ತು ತಗೆದುಕೊಳ್ಳಬೇಕು ಎಂಬ ತಮ್ಮ ಬೇಡಿಕೆಯನ್ನು ಸ್ವೀಕರಿಸಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಲಚ್ಯಾಣ ಗ್ರಾಮದ ಅಭಿವೃದ್ಧಿಗೆ .10 ರಿಂದ 20 ಕೋಟಿ ಖರ್ಚಾದರೂ ಸರಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ ಮಠಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕೆ ಮಠಕ್ಕೆ ಎಲ್ಲ ಅನುಕೂಲ ಕಲ್ಪಿಸಿಕೊಡಲಾಗುತ್ತದೆ. ಪಕ್ಷದ ಅಭ್ಯರ್ಥಿ ಬಿ.ಡಿ.ಪಾಟೀಲ ಅವರನ್ನು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡರು ಚುನಾವಣೆ ಹೊತ್ತಲ್ಲಿ ಉಚಿತ ಘೋಷಣೆ ಮಾಡ್ತಾರೆ; ಎಚ್.ಡಿ.ಕುಮಾರಸ್ವಾಮಿ

ಮಾಜಿ ಪ್ರಧಾನಿ ದೇವೆಗೌಡರು ಪ್ರಧಾನಮಂತ್ರಿ ಆಗದೆ ಇದ್ದಿದ್ದರೇ ಆಲಮಟ್ಟಿ ಆಣೆಕಟ್ಟಿನ ನೀರಾವರಿ ಯೋಜನೆಗಳು ಕಾಂಗ್ರೆಸ್‌, ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಮಾಡುತ್ತಿರಲಿಲ್ಲ. ದೇವೆಗೌಡರು ಈ ಭಾಗಕ್ಕೆ ನೀಡಿದ ನೀರಾವರಿ ಕೊಡುಗೆಯಿಂದ ಇಂದು ಈ ಭಾಗ ಸ್ವಲ್ಪಮಟ್ಟಿಗೆ ನೀರಾವರಿ ಆಗಿದೆ. ತೊಗರಿ ಬೆಳೆ ನಷ್ಟದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಈಗಿನ ಸರ್ಕಾರಕ್ಕೆ ಕಾಣುತ್ತಿಲ್ಲ. ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ತೊಗರಿ ಬೆಳೆ ಹಾನಿಯಾಗಿರುವುದಕ್ಕೆ ಪರಿಹಾರ ನೀಡುತ್ತೇವೆ. ನಾನು ಮುಖ್ಯಮಂತ್ರಿ ಆಗಿದ್ದಾಗ 25 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ್ದೇನೆ. ಆದರೆ, ಇಂದಿನ ಬಿಜೆಪಿ ಸರ್ಕಾರ ಇದರಲ್ಲಿ ಇನ್ನೂ 2 ಲಕ್ಷ ರೈತರಿಗೆ ಬೆಳೆ ಪರಿಹಾರ ಹಣ ನೀಡಿರುವುದಿಲ್ಲ ಎಂದು ಆರೋಪಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಈ ದೇಶದ ರೈತರು ನೆಮ್ಮದಿಯಿಂದ ಬದುಕುವ ವಾತಾವರಣ ಇಲ್ಲ ಎಂದು ತಿಳಿಸಿದರು.

ಬಿಜೆಪಿಯ ವಿಜಯಪುರದ ಶಾಸಕರು, ಬಿಜೆಪಿಯ ಸಚಿವ ಮಧ್ಯ ನಡೆದಿರುವ ವಾಕ್ಸಮರ ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಅವರ ಹಿಂಥ ಸಂಸ್ಕೃತಿಯಿಂದ ಯಾವ ಅಭಿವೃದ್ಧಿ ಕಾಣಬಹುದು ಎಂದು ತಿಳಿಸಿದರು.

ಜೆಎಡಿಎಸ್‌ ಅಭ್ಯರ್ಥಿ ಬಿ.ಡಿ.ಪಾಟೀಲ, ಆರ್‌.ಕೆ.ಪಾಟೀಲ, ಬಿ.ಜಿ.ಪಾಟೀಲ, ಮರೇಪ್ಪ ಗಿರಣಿವಡ್ಡರ, ವಿಜಯಕುಮಾರ ಬೋಸಲೆ, ಪ್ರಕಾಶ ಅಂಗಡಿ, ಡಾ.ರಮೇಶ ರಾಠೋಡ, ಸಿದ್ದು ಡಂಗಾ, ಶ್ರೀಶೈಲಗೌಡ ಪಾಟೀಲ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

click me!