ತಾಲೂಕಿನ ಪೂರ್ವ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಹೊಸ ರೂಪರೇಷೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.
ಅಥಣಿ (ಜೂ.09): ತಾಲೂಕಿನ ಪೂರ್ವ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಹೊಸ ರೂಪರೇಷೆಗಳನ್ನು ಸಿದ್ಧಪಡಿಸಿಕೊಳ್ಳಬೇಕು ಮತ್ತು ಉತ್ತರ ಭಾಗದ ರೈತರ ಬಹುದಿನಗಳ ಬಹುನಿರೀಕ್ಷೆಯ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ಬರುವ ಡಿಸೆಂಬರ್‌ರೊಳಗಾಗಿ ಕೃಷಿ ಭೂಮಿಗಳಿಗೆ ನೀರು ಒದಗಿಸಬೇಕು ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ನೀರಾವರಿ ಯೋಜನೆ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ನೀರಾವರಿ ಯೋಜನೆಯ ಅಧಿಕಾರಿಗಳ ಸಭೆ ನಡೆಸಿ ತಾಲೂಕಿನ ಏತ ನೀರಾವರಿ ಯೋಜನೆಗಳ ಅನುಷ್ಠಾನದ ಕುರಿತು ಮಾಹಿತಿ ಪಡೆದುಕೊಂಡ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಈ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲರಾದ ಅಧಿಕಾರಿಗಳಿಗೆ ಖಡಕ ಎಚ್ಚರಿಕೆ ನೀಡಿದರು. ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿಗೆ .800 ಕೋಟಿ ಅಗತ್ಯವಿದೆ. ಝಂಜರವಾಡ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ಪೈಪಲೈನ್ ಅಳವಡಿಸಿ ನೀರೆತ್ತಲಾಗುವ ಕಾಮಗಾರಿಗೆ ತ್ವರಿತಗತಿಯಲ್ಲಿ ಚಾಲನೆ ಆಗಬೇಕು.
ಅನ್ನದಾತರಲ್ಲಿ ರಾಜಕೀಯ ಬೇಡ, ತಿಂಗಳಿಗೊಮ್ಮೆ ರೈತರ ಸಮಾವೇಶ: ಶಾಸಕ ಪ್ರದೀಪ್ ಈಶ್ವರ್
ಈ ಯೋಜನೆಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ರೂಪಿಸಿರುವ ಕೆಲವು ರೂಪುರೇಷೆಗಳನ್ನು ಬದಲಾವಣೆ ಮಾಡುವುದು ಅಗತ್ಯವಿದೆ. ಈ ಯೋಜನೆಯಿಂದ ಅಥಣಿ ತಾಲೂಕಿನ ತೆಲಸಂಗ, ಕಿಲಾರದಡ್ಡಿ, ಬೋಸಲೆವಾಡಿ, ಕನ್ನಾಳ, ಕಕಮರಿ, ಬನ್ನೂರ, ಕೊಟ್ಟಲಗಿ ಗ್ರಾಮಗಳ ಒಟ್ಟು 9950 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಒಟ್ಟು 2,903 ಟಿಎಂಸಿ ನೀರಿನ ಅಗತ್ಯವಿದೆ. ಈ ಭಾಗದ 9 ಕೆರೆಗಳಿಗೆ ನೀರು ತುಂಬಿಸುವುದು, 100ಕ್ಕೂ ಅಧಿಕ ಚೆಕ್ ಡ್ಯಾಮ್‌ಗಳಿಗೆ ನೀರುಹರಿಸುವ ಉದ್ದೇಶವಾಗಿದೆ. ಇದಲ್ಲದೆ 1500ಕ್ಕೂ ಅಧಿಕ ಕೃಷಿ ಹೊಂಡಗಳನ್ನು ನಿರ್ಮಿಸುವ ಉದ್ದೇಶವಿದ್ದು, ಇದಕ್ಕೆ ಅಗತ್ಯವಾದ ಭೂಸ್ವಾಧೀನ ಕಷ್ಟಸಾಧ್ಯ.
ಒಂದು ನೀರಿನ ಹೊಂಡ ನಿರ್ಮಾಣ ಮಾಡುವುದಕ್ಕೆ ಸು.30 ಗುಂಟೆ ಜಾಗ ಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ರೈತರೊಂದಿಗೆ ಚರ್ಚೆ ಮಾಡಿಕೊಂಡು ಒಂದು ವಾರದ ಒಳಗಾಗಿ ಮತ್ತೊಮ್ಮೆ ಸಭೆ ನಡೆಸಿ ನೀರಾವರಿ ಸಚಿವರು ಮತ್ತು ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಂಡು ಯೋಜನೆಯ ಸಾಧ್ಯವಾದಷ್ಟುಬೇಗನೆ ಅನುಷ್ಠಾನಗೊಳಿಸೋಣ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಖೀಳೆಗಾವಿ ಬಸವೇಶ್ವರ ಏತ ನೀರಾವರಿ ಯೋಜನೆ ಕಳೆದ 5 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಯೋಜನೆಗೆ ಒಳಪಡುವ ಗ್ರಾಮಗಳ ರೈತರು ನೀರಿನ ಸಮಸ್ಯೆ ಬಗ್ಗೆ ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅನುದಾನ ತರಲು ನಾವು ಶ್ರಮಿಸುತ್ತೇವೆ. ಈ ಯೋಜನೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು. ಬರುವ ನವೆಂಬರ್ ಇಲ್ಲವೇ ಡಿಸೆಂಬರ್‌ರೊಳಗಾಗಿ ನೀರು ಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳೆಲ್ಲ ಕಾರ್ಯ ಪ್ರವೃತ್ತರಾಗಬೇಕು ಎಂದು ಕಾಗವಾಡ ಶಾಸಕ ರಾಜು ಕಾಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೋಗಸ್ ಬಿಲ್ ತೆಗೆದ ಬಗ್ಗೆ ತುಟಿ ಬಿಚ್ಚದ ಅಧಿಕಾರಿಗಳು: ತಾಲೂಕಿನಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಕರಿಮಸೂತಿ ಯಾತ ನೀರಾವರಿ ಯೋಜನೆ, ತುಂಗಳ ಸಾವಳಗಿ ಯಾತ ನೀರಾವರಿ ಯೋಜನೆ, ಐನಾಪುರ ಯಾತ ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಕಾಲುವೆಗಳ ರಿಪೇರಿ ಮತ್ತು ಹೂಳೆತ್ತುವ ಕಾಮಗಾರಿಗಳ ಬಗ್ಗೆ ಶಾಸಕರಿಬ್ಬರೂ ಮಾಹಿತಿ ಕೇಳಿದಾಗ ನೀರಾವರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಲು ಪೇಚಾಡಿದ ಪ್ರಸಂಗ ಜರುಗಿತು. ಇದರಿಂದ ಆಕ್ರೋಶಗೊಂಡ ಶಾಸಕರು ನೀವು ಕಳೆದ 5 ವರ್ಷಗಳಲ್ಲಿ ಕಾಲುವೆಗಳ ರಿಪೇರಿ ಮತ್ತು ಯಾವ ರೀತಿ ನಿರ್ವಹಣೆ ಮಾಡಿದ್ದೀರಿ ಎಂಬುವುದು ನಮಗೆ ಗೊತ್ತಿದೆ. ರಿಪೇರಿ ಮಾಡದೇ ರಿಪೇರಿ ಎಂದು ಅನೇಕ ಕಾಮಗಾರಿಗಳಲ್ಲಿ ಬೋಗಸ್ ಬಿಲ್ ತೆಗೆದಿದ್ದೀರಿ. ಕಾಲುವೆಗಳನ್ನು ಎತ್ತರಿಸುವ ಕಾಮಗಾರಿಯಲ್ಲಿ ಮತ್ತು ಪುನರ್ವಸತಿ ನಿರ್ಮಾಣ ಕೇಂದ್ರಗಳ ಕಾಮಗಾರಿಗಳಲ್ಲಿ ಅನೇಕ ಕಳಪೆ ಕಾಮಗಾರಿಗಳನ್ನು ಮಾಡಿದ್ದೀರಿ. ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಾಲುವೆಗೆ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳಿ: ಕರಿಮಸುತಿ ಯಾತ ನೀರಾವರಿ ಯೋಜನೆಯ ಕಾಲುವೆಯ ಕಾಮಗಾರಿಗಳ ದುರಸ್ತಿಯನ್ನ ಶೀಘ್ರದಲ್ಲಿಯೇ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಉತ್ತರ ವಲಯದ ಮುಖ್ಯ ಅಭಿಯಂತರ ರಾಜೇಶ ಅಮೀನಭಾವಿ, ಬಿ.ಆರ್.ರಾಥೋಡ, ಶ್ರೀಧರ ಭಾಗಿ, ಪ್ರವೀಣ ಹುಣಸಿಕಟ್ಟಿ, ಪ್ರದೀಪ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಗ್ಯಾರಂಟಿ ಕಾರ್ಡ್ ಹಿಡಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ: ಶಾಸಕ ಸಿ.ಸಿ.ಪಾಟೀಲ್
ಪ್ರತ್ಯೇಕ ಸಭೆ: ಅಥಣಿ ಮತ್ತು ಕಾಗವಾಡ ಇಬ್ಬರು ಶಾಸಕರ ಸಭೆ ಮುಗಿದ ನಂತರ ಉತ್ತರ ವಲಯದ ಮುಖ್ಯ ಇಂಜನೀಯರ ರಾಜೇಶ ಅಮ್ಮೀನಭಾವಿ ಇಬ್ಬರು ಶಾಸಕರು ಇಲಾಖೆಯ ಅಧಿಕಾರಿಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದನ್ನು ಗಂಭೀರವಾಗಿ ಪರಿಗಣಿಸಿ ಅಥಣಿ ವಲಯದ ನೀರಾವರಿ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿ ಇಲಾಖೆಯಲ್ಲಿ ಆಗಿರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ತಕ್ಷಣ ಸುಧಾರಿಸಿಕೊಳ್ಳದಿದ್ದರೇ ಶಿಸ್ತುಕ್ರಮ ಕೈಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.