ಕಲ್ಯಾಣ ಕರ್ನಾಟಕ ರೈತರ ಜೀವನಾಡಿ ಟಿಬಿ ಡ್ಯಾಂ ನೀರಿಲ್ಲದೆ ಖಾಲಿ ಖಾಲಿ..!

By Kannadaprabha News  |  First Published Jun 9, 2023, 1:25 PM IST

ರಾಜ್ಯದ ಕಲ್ಯಾಣ ಕರ್ನಾಟಕ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ದಿನೇ ದಿನೆ ನೀರು ಖಾಲಿಯಾಗುತ್ತಿದ್ದು, ಜಲಾಶಯ ನೆಚ್ಚಿರುವ ರೈತರು ಕಂಗಾಲಾಗಿದ್ದಾರೆ.


ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ಜೂ.9) : ರಾಜ್ಯದ ಕಲ್ಯಾಣ ಕರ್ನಾಟಕ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ದಿನೇ ದಿನೆ ನೀರು ಖಾಲಿಯಾಗುತ್ತಿದ್ದು, ಜಲಾಶಯ ನೆಚ್ಚಿರುವ ರೈತರು ಕಂಗಾಲಾಗಿದ್ದಾರೆ. ರಾಜ್ಯದ ಬಳ್ಳಾರಿ, ವಿಜಯನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ 3.5 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ಈ ಜಲಾಶಯ ನೀರು ಒದಗಿಸುತ್ತದೆ. ಇನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 1.46 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಈ ಜಲಾಶಯ ಮೂರು ರಾಜ್ಯಗಳ ಅನ್ನದಾತರ ಬದುಕಿಗೆ ಆಸರೆಯಾಗಿದೆ. ಈ ಜಲಾಶಯದಿಂದ ಕೈಗಾರಿಕೆಗಳಿಗೂ ಅನುಕೂಲ ಇದೆ.

Tap to resize

Latest Videos

undefined

ಕುಡಿಯುವ ನೀರಿಗೂ ರಾಜ್ಯದ ನಾಲ್ಕು ಜಿಲ್ಲೆಗಳು ಈ ಜಲಾಶಯದ ಮೇಲೆಯೇ ಅವಲಂಬನೆಯಾಗಿವೆ. ಆಂಧ್ರಪ್ರದೇಶದ ಕೆಲ ಜಿಲ್ಲೆಗಳು ಕುಡಿಯುವ ನೀರಿಗೆ ತುಂಗಭದ್ರಾ ಜಲಾಶಯವನ್ನೇ ನೆಚ್ಚಿಕೊಂಡಿದೆ. ತೆಲಂಗಾಣ ರಾಜ್ಯ ಕೂಡ ಕುಡಿಯುವ ನೀರಿನ ಕೋಟಾದಡಿ ನೀರು ಪಡೆಯುತ್ತಿದೆ. ಹಾಗಾಗಿ ಈ ಭಾಗಕ್ಕೆ ಈ ಜಲಾಶಯವೇ ಆಧಾರವಾಗಿದೆ.

Tungabhadra Dam: ಟಿಬಿ ಡ್ಯಾಂನಲ್ಲಿ ಬರೀ 3 ಟಿಎಂಸಿ ನೀರು; ಕುಡಿಯುವ ನೀರಿಗೆ ಪರದಾಟ, ರೈತರಿಗೂ ಸಂಕಷ್ಟಸಾಧ್ಯತೆ!

ತ್ರಿವಳಿ ರಾಜ್ಯದ ಡ್ಯಾಂ:

ತುಂಗಭದ್ರಾ ಜಲಾಶಯವನ್ನು ಆಗಿನ ಮದ್ರಾಸ್‌ ಪ್ರಾಂತ್ಯ ಹಾಗೂ ಹೈದರಾಬಾದ್‌ ನವಾಬರು ಸೇರಿ 1945ರಲ್ಲಿ ಕಾಮಗಾರಿ ಆರಂಭಿಸಿ, 1953ರಲ್ಲಿ ನಿರ್ಮಿಸಲಾಗಿದೆ. ಹಾಗಾಗಿ ಈ ಜಲಾಶಯ ಈಗ ಮೂರು ರಾಜ್ಯಗಳಿಗೂ ಸೇರಿದೆ. ತುಂಗಭದ್ರಾ ಮಂಡಳಿ ಸ್ವಾಯತ್ತ ಸಂಸ್ಥೆಯಾಗಿದ್ದು, ಮೂರು ರಾಜ್ಯಗಳಿಗೂ ನೀರಿನ ಹಂಚಿಕೆ ಮಾಡುತ್ತಿದೆ. ಕರ್ನಾಟಕಕ್ಕೆ ಶೇ. 60ರಷ್ಟುನೀರು ದೊರೆತರೆ, ಆಂಧ್ರಪ್ರದೇಶಕ್ಕೆ ಶೇ. 40ರಷ್ಟುನೀರಿನ ಪ್ರಮಾಣದಲ್ಲಿ ಹಂಚಿಕೆಯಾಗುತ್ತದೆ. ಆಂಧ್ರ ತನ್ನ ಪಾಲಿನ ನೀರಿನಲ್ಲಿ ತೆಲಂಗಾಣಕ್ಕೂ ಹಂಚಿಕೆ ಮಾಡುತ್ತದೆ.

ಜಲಾಶಯದಲ್ಲಿ ಹೂಳಿನ ಗೋಳು:

ತುಂಗಭದ್ರಾ ಜಲಾಶಯದಲ್ಲಿ 28 ಟಿಎಂಸಿಯಷ್ಟುಹೂಳು ತುಂಬಿದೆ. ಈ ಜಲಾಶಯದಲ್ಲಿ ಹೂಳು ತುಂಬಿರುವ ಹಿನ್ನೆಲೆ ಜಲಾಶಯ ನಿರ್ಮಾಣ ಕಾಲಕ್ಕೆ 133 ಟಿಎಂಸಿಯಷ್ಟಿದ್ದ ಸಂಗ್ರಹ ಸಾಮರ್ಥ್ಯ ಈಗ 105.788 ಟಿಎಂಸಿಗೆ ಕುಸಿದಿದೆ. ಜಲಾಶಯದಲ್ಲಿ ಹೂಳು ತುಂಬುತ್ತಿರುವುದರಿಂದ ನೀರಿನ ಸಂಗ್ರಹ ಸಾಮರ್ಥ್ಯದಲ್ಲೂ ಗಣನೀಯ ಕಡಿಮೆಯಾಗಿದೆ. ಈ ಭಾಗದಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಜಲಾಶಯದಲ್ಲಿ ತುಂಬಿರುವ ಹೂಳಿಗೆ ಮುಕ್ತಿ ಕಾಣಿಸುತ್ತಿಲ್ಲ. ಇನ್ನೊಂದೆಡೆಯಲ್ಲಿ ಸಮನಾಂತರ ಜಲಾಶಯ ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳುತ್ತಿದ್ದರೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಬರೀ ಡಿಪಿಆರ್‌ ಸುತ್ತವೇ ಗಿರಕಿ ಹೊಡೆಯಲಾಗುತ್ತಿದೆ. ಜಲಾಶಯದಲ್ಲಿ ಹೂಳು ತೆಗೆಯಬೇಕು ಎಂಬುದು ಈ ಭಾಗದ ರೈತರ ಆಗ್ರಹವಾಗಿದೆ.

ಬರೀ 5 ಟಿಎಂಸಿ ನೀರು:

ತುಂಗಭದ್ರಾ ಜಲಾಶಯದಲ್ಲಿ ಸದ್ಯ ಬರೀ 5.035 ಟಿಎಂಸಿಯಷ್ಟುಮಾತ್ರ ನೀರಿದೆ. ಕಳೆದ ವರ್ಷ ಈ ವೇಳೆ 39.694 ಟಿಎಂಸಿಯಷ್ಟುನೀರಿತ್ತು. ಈ ಬಾರಿ ಮುಂಗಾರು ಮಾರುತ ಇನ್ನೂ ತೂಗುಯ್ಯಾಲೆಯಲ್ಲಿದೆ. ಹಾಗಾಗಿ ಜಲಾಶಯಕ್ಕೆ ನೀರು ಬಂದಿಲ್ಲ. ಶಿವಮೊಗ್ಗ, ತೀರ್ಥಹಳ್ಳಿ, ಆಗುಂಬೆ ಭಾಗದಲ್ಲಿ ಮಳೆ ಸುರಿದರೆ, ಜಲಾಶಯಕ್ಕೆ ನೀರು ಹರಿದು ಬರಲಿದೆ. ಜಲಾಶಯದ ಒಳ ಹರಿವು 468 ಕ್ಯುಸೆಕ್‌ನಷ್ಟಿದೆ.

ಕಳೆದ ಹತ್ತು ವರ್ಷಗಳ ಸರಾಸರಿಯಲ್ಲಿ ಈ ವೇಳೆ ಜಲಾಶಯದಲ್ಲಿ 8.490ಯಷ್ಟುನೀರು ಇರುತ್ತಿತ್ತು. ಆದರೆ, ಈ ಬಾರಿ ಇನ್ನೂ ಮೂರು ಟಿಎಂಸಿಯಷ್ಟುನೀರು ಕಡಿಮೆ ಇದೆ. ಸದ್ಯ ಇರುವ 5.035 ನೀರಿನಲ್ಲಿ ಎರಡು ಟಿಎಂಸಿಯಷ್ಟುನೀರು ಡೆಡ್‌ಸ್ಟೋರೇಜ್‌ನಲ್ಲಿದೆ. ಈ ನೀರು ಬಳಕೆಗೆ ಬರುವುದಿಲ್ಲ. ಈಗ ಬರೀ ಮೂರು ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯ ಇದೆ. ಕಳೆದ ವರ್ಷ ಜಲಾಶಯದಿಂದ ನದಿಗೆ 450 ಟಿಎಂಸಿಗೂ ಅಧಿಕ ನೀರು ನಿರುಪಯುಕ್ತವಾಗಿ ಹರಿದಿದೆ.

ಹಾಗಾಗಿ ಕೊಪ್ಪಳದ ಗಂಗಾವತಿ ಬಳಿಯ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡಬೇಕು ಎಂಬುದು ಈ ಭಾಗದ ರೈತರ ಒತ್ತಾಯವಾಗಿದೆ. ಕಳೆದ ವರ್ಷ ಬಸವರಾಜ ಬೊಮ್ಮಾಯಿ ಸರ್ಕಾರ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ .250 ಕೋಟಿ ಮೀಸಲಿಟ್ಟು, ಡಿಪಿಆರ್‌ ಕೂಡ ಸಿದ್ಧಪಡಿಸಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರತ್ತ ರೈತರು ದೃಷ್ಟಿನೆಟ್ಟಿದ್ದಾರೆ.

ಹೊಸಪೇಟೆ: ಗಣಪತಿ ವಿಸರ್ಜನೆ ವೇಳೆ ಭಾರೀ ದುರಂತ, ಕಾಲುವೆಗೆ ಬಿದ್ದ ಕ್ರೇನ್!

ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ನಿವಾರಣೆಯಾಗಬೇಕು. ಜತೆಗೆ ಜಲಾಶಯ ನೆಚ್ಚಿರುವ ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೂಳಿನ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಬೇಕು.

ವಿ.ಎ. ಗಾಳೆಪ್ಪ, ಜಿಲ್ಲಾಧ್ಯಕ್ಷರು, ರೈತ ಸಂಘ ಹಾಗೂ ಹಸಿರುಸೇನೆ ವಿಜಯನಗರ ಜಿಲ್ಲೆ

click me!