ಕಾರ್ಕಳ ಕಜೆ ಅಕ್ಕಿ, ಬಿಳಿಬೆಂಡೆ ಬ್ರಾಂಡ್‌ ಆಗಲು ರೈತರ ಸ್ಪಂದನೆ ಅಗತ್ಯ: ಸುನಿಲ್‌

By Kannadaprabha News  |  First Published Jul 25, 2022, 9:39 AM IST

ಕಾರ್ಕಳ ಕಜೆ ಅಕ್ಕಿ, ಬಿಳಿಬೆಂಡೆ ಬ್ರಾಂಡ್‌ ಆಗಲು ರೈತರ ಸ್ಪಂದನೆ ಅಗತ್ಯ: ಸಚಿವ ಸುನಿಲ್‌ ಕುಮಾರ್ ಹೇಳಿದರು. "ನಮ್ಮ ಬೆಳೆ ನಮ್ಮ ಬ್ರಾಂಡ್‌- ಕಾರ್ಕಳ ಬಿಳಿಬೆಂಡೆ’ ಬೀಜ ವಿತರಣ, ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಾರ್ಕಳ (ಜು.25) : ಕಾರ್ಕಳವನ್ನು ದೇಶದ ಬ್ರಾಂಡ್‌ ಆಗಿ ಪರಿವರ್ತಿಸುವ ಸಲುವಾಗಿ ಕಾರ್ಕಳ ಕಜೆ ಅಕ್ಕಿ ಹಾಗೂ ಕಾರ್ಕಳದ ಬಿಳಿಬೆಂಡೆಯನ್ನು ದೇಶವ್ಯಾಪಿಯಾಗಿ ಪಸರಿಸಲು ಸಹಕಾರ ನೀಡಲು ಸರ್ಕಾರ ಸಿದ್ಧವಿದೆ. ಇದಕ್ಕೆ ರೈತರು ಪೂರಕವಾಗಿ ಸ್ಪಂದಿಸಬೇಕು. ಈ ಮೂಲಕ ತಮ್ಮ ಬೆಳೆಗೆ ರೈತರು ಬೆಂಬಲ ಬೆಲೆ ಪಡೆಯಲು ಸಾಧ್ಯವಾಗುತ್ತದೆ ಎಂದು ಇಂಧನ ಸಚಿವ ಸುನಿಲ್‌ ಕುಮಾರ್‌ ಹೇಳಿದರು.

ಕಾರ್ಕಳ(Karkala) ತೋಟಗಾರಿಕಾ ಇಲಾಖೆ, ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘ, ರೈತ ಉತ್ಪಾದಕ ಕಂಪನಿ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕಾರ್ಕಳ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ ‘ನಮ್ಮ ಬೆಳೆ ನಮ್ಮ ಬ್ರಾಂಡ್‌- ಕಾರ್ಕಳ ಬಿಳಿ ಬೆಂಡೆ’ ಬೀಜ ವಿತರಣೆ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು

Tap to resize

Latest Videos

ಕಾರ್ಕಳ ರಾಜ್ಯದಲ್ಲಿಯೇ ಅತ್ಯಧಿಕ ಕಿಂಡಿ ಅಣೆಕಟ್ಟುಗಳನ್ನು ಹೊಂದಿದ ತಾಲೂಕಾಗಿ ಗುರುತಿಸಿದ್ದು ಅಂತರ್ಜಲ ವೃದ್ಧಿಗೆ ಸಾಕ್ಷಿಯಾಗಲಿದೆ. ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ರಾಜಿಯಿಲ್ಲ ಎಂದರು. ಕಾರ್ಕಳ ಉತ್ಸವದಿಂದ ಸಾಂಸ್ಕೃತಿಕವಾಗಿ ನಾಡಿಗೆ ಪರಿಚಯಿಸುವ ಕೆಲಸ ನಡೆದಿದೆ. ಕಾರ್ಕಳ ರಾಜ್ಯದ ಗಮನ ಸೆಳೆದಿದೆ. ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಪರಶುರಾಮ ಥೀಂ ಪಾರ್ಕ್ ಸದ್ಯದಲ್ಲೇ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಮೂಡಿಬರಲಿದೆ ಎಂದರು.

ಪ್ರಧಾನಿ ಮೋದಿ ಅವರ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸುವ ಪ್ರಯತ್ನಕ್ಕೆ ಎಲ್ಲ ರೈತರ ಸಹಕಾರ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಬಿಳಿಬೆಂಡೆಗೆ ಬೇರೆ ರಾಜ್ಯಗಳಿಂದ ಬೇಡಿಕೆ ಬರುವಂತಾಗಬೇಕು. ವರ್ಷದ ಎಲ್ಲ ಕಾಲದಲ್ಲಿ ಬೆಳೆಯುವ ಬಿಳಿ ಬೆಂಡೆ ಕಾರ್ಕಳ ದ ಹೆಗ್ಗಳಿಕೆಗೆ ಪಾತ್ರವಾಗಲಿ ಎಂದು ಸಚಿವರು ಆಶಯ ವ್ಯಕ್ತಪಡಿಸಿದರು.

ಸ್ವಾತಂತ್ರ್ಯದ ಪೂರ್ವ ತಯಾರಿಗೆ ಕರೆ: 75ನೇ ವರ್ಷದ ಸ್ವಾತಂತ್ರೋತ್ಸವಕ್ಕೆ ಪೂರ್ವ ತಯಾರಿ ನಡೆಯುತ್ತಿದ್ದು, ಆಗಸ್ಟ್‌ 9ರಿಂದಲೇ ರಾಜ್ಯದ ಪ್ರತಿಯೊಬ್ಬರ ಮನೆಮನೆಗಳಲ್ಲೂ ಸ್ವಾತಂತ್ರ್ಯ ದ ಪತಾಕೆ ರಾರಾಜಿಸಬೇಕು. ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುವ ಕೆಲಸವಾಗಬೇಕು. ಮನೆಮನೆಗಳಲ್ಲೂ ದೇಶಪ್ರೇಮವನ್ನು ಹುಟ್ಟು ಹಾಕಬೇಕು ಎಂದು ಸಚಿವರು ಕರೆ ನೀಡಿದರು.

ಮುಖ್ಯಅತಿಥಿ ಕಾರ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್‌ ಶರೀಫ್‌, ತೋಟಗಾರಿಕಾ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಅಂತೋನಿ ಡಿಸೋಜ ಮಾತನಾಡಿದರು. ಕಾರ್ಕಳ ಪುರಸಭಾಧ್ಯಕ್ಷೆ ಸುಮಾ ಕೇಶವ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ರೈತ ಉತ್ಪಾದಕ ಕಂಪನಿಯ ಉಪಾಧ್ಯಕ್ಷ ಹರಿಶ್ಚಂದ್ರ ತೆಂಡೂಲ್ಕರ್‌, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ. ಲಕ್ಷ್ಮಣ್‌ ಹಾಗೂ ಡಾ. ಧನಂಜಯ ಬಿ., ನಿರ್ದೇಶಕ ಹರೀಶ್‌ ಅಂಚನ್‌ ಮುಂತಾದವರು ಉಪಸ್ಥಿತರಿದ್ದರು.

ಕಾರ್ಕಳ ಪತ್ರಕರ್ತರ ಸಂಘದ ಕೋಶಾಧಿಕಾರಿ ಬಾಲಕೃಷ್ಣ ಭೀಮಗುಳಿ ಸ್ವಾಗತಿಸಿದರು. ತೋಟಗಾರಿಕಾ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಭುವನೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಉತ್ಪಾದಕ ಸಂಸ್ಥೆಯ ಸಿಇಒ ಪ್ರಮಿತ್‌ ಸುವರ್ಣ ನಿರೂಪಿಸಿದರು. ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ರಾವ್‌ ವಂದಿಸಿದರು.

click me!