ಆಳಂದದಲ್ಲಿ ಪ್ರತಿಭಟನೆ: ಕಬ್ಬು ಬೆಳೆಗಾರರ ಬಂಧನ

By Web DeskFirst Published Oct 4, 2019, 1:06 PM IST
Highlights

ಪ್ರತಿಭಟನೆ: ಕಬ್ಬು ಬೆಳೆಗಾರರ ಬಂಧನ, ಬಿಡುಗಡೆ| ಮಾನ್ಪಡೆ ಸೇರಿ ಹಲವರ ಬಂಧನ | ಮುಖಂಡರ ಸಾಮೂಹಿಕ ಹೋರಾಟದ ಬಿಸಿ | ಮೂರು ಗಂಟೆ ಹೆದ್ದಾರಿ ತಡೆ | ಸಂಚಾರಕ್ಕಾಗಿ ಪರದಾಟ| ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ವಿರುದ್ಧ ಘೋಷಣೆ| ರೈತರು ಟೈಯರ್‌ಗೆ ಬೆಂಕಿ ಹಚ್ಚಿ ಗೊಬ್ಬೆ ಹಾಕಿ ಕಾರ್ಖಾನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು| ಪ್ರತಿಯೊಬ್ಬರ ಕೈಯಲ್ಲಿ ಕಬ್ಬು ಹಿಡಿದು ಹೆದ್ದಾರಿಯ ಆಯಾ ಭಾಗದಲ್ಲಿ ನೆಟ್ಟು ಪ್ರತಿಭಟನೆ ನಡೆಸಿದರು|

ಆಳಂದ[ಅ.4]: ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯು ಕಬ್ಬು ಬೆಳೆಗಾರರ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕಾರ್ಖಾನೆ ಮುಂದೆ ಹಮ್ಮಿಕೊಂಡಿದ್ದ ಸತ್ಯಾಗ್ರಹಕ್ಕೆ ಮಣಿಯದ ಹಿನ್ನೆಲೆ ರೊಚ್ಚಿಗೆದ್ದ ರೈತ ಮುಖಂಡರು ಸಾಮೂಹಿಕವಾಗಿ ಗುರುವಾರ ಪಟ್ಟಣದ ಹಳೆಯ ಚೆಕ್ ಪೋಸ್ಟ್ ಬಳಿ ರಾಜ್ಯ ಹೆದ್ದಾರಿಯನ್ನು ಸುಮಾರು ಮೂರು ಗಂಟೆಗಳ ಕಾಲ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆ ವಿರುದ್ಧ ಘೋಷಣೆ

ಯುವ ರೈತರು ಟೈಯರ್‌ಗೆ ಬೆಂಕಿ ಹಚ್ಚಿ ಗೊಬ್ಬೆ ಹಾಕಿ ಕಾರ್ಖಾನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಯೊಬ್ಬರ ಕೈಯಲ್ಲಿ ಕಬ್ಬು ಹಿಡಿದು ಹೆದ್ದಾರಿಯ ಆಯಾ ಭಾಗದಲ್ಲಿ ನೆಟ್ಟು ಪ್ರತಿಭಟನೆ ನಡೆಸಿದರು. ಹೆದ್ದಾರಿ ತಡೆಯಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ತುಳಜಾಪೂರ, ಸೊಲ್ಲಾಪೂರ, ಮುಂಬೈ, ಪುಣೆ, ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಸಂಚರಿಸಬೇಕಾಗಿದ್ದ ಸಾರಿಗೆ ಸಂಸ್ಥೆಯ ಬಸ್ ಹಾಗೂ ಖಾಸಗಿ ಜೀಪ್, ಲಾರಿ ಇನ್ನಿತರ ಲಕ್ಷಾಂತರ ವಾಹನಗಳು ಆಯಾ ಮಾರ್ಗದ ಮೂರ್ನಾಲ್ಕು ಕಿ.ಮೀ. ದೂರದಲ್ಲೇ ವಾಹನಗಳನ್ನು ಪೊಲೀಸರು ತಡೆದಿದ್ದರು. ಇದರಿಂದಾಗಿ ಪ್ರಯಾಣಿಕರು ನಡೆದುಕೊಂಡು ಪಟ್ಟಣದಲ್ಲಿದ್ದ ಗುರುವಾರದ ಸಂತೆಗೆ ಇನ್ನಿತರ ಕಡೆ ಸಂಚರಿಸಿದರು. ಮಹಿಳೆಯರು, ಮಕ್ಕಳು, ನೌಕರರು ದೂರದ ನಡಿಗೆಗೆ ಹೈರಾಣಾದರು. ದೂರದ ಪ್ರಯಾಣಿಕರು ನಿಂತು ಸುಸ್ತಾಗಿ ಆಡಳಿತ ವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆಯವರು ಸಮಯ ಕೇಳಿದ್ದಾರೆ. ಕಾಲಾವಕಾಶ ನೀಡಿ ಪ್ರತಿಭಟನೆ ಕೈಬಿಡುವಂತೆ ತಹಸೀಲ್ದಾರ್ ಬಸವರಾಜ ಎಂ. ಬೆಣ್ಣೆಶಿರೂರ ಮನವಿ ಮಾಡಿದಾಗ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಮುಂದಾದಾಗ ಮುಖಂಡ ಮಾರುತಿ ಮಾನ್ಪಡೆ, ಕಲ್ಯಾಣಿ ಜಮಾದಾರ, ಮೈನೋದ್ದೀನ ಜವಳಿ ಮೌಲಾ ಮುಲ್ಲಾ ಸೇರಿ ಹಲವರನ್ನು ಪೊಲೀಸರು
ಬಂಧಿಸಿ ನಂತರ ಬಿಡುಗಡೆ ಗೊಳಿಸಿದರು. 

ನಂತರ ಪೊಲೀಸರು ಹರ ಸಾಹಸ ಪಟ್ಟು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಮೊದಲು ಪ್ರತಿಭಟನೆಯಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಪಾಲ್ಗೊಂಡಿದ್ದ ಮಾಜಿ ಶಾಸಕ ಬಿ.ಆರ್. ಪಾಟೀಲ್ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ಮುಖಂಡ ರಮೇಶ ಲೋಹಾರ, ಕಿಸಾನಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ, ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ್ ಕೋರಳ್ಳಿ, ಜಿಪಂ ಸದಸ್ಯ ಸಿದ್ಧರಾಮ ಪ್ಯಾಟಿ, ತಾಪಂ ಮಾಜಿ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ ಸೇರಿದಂತೆ ಅನೇಕರು ಮಾತನಾಡಿ, ಕಬ್ಬು ಬೆಳೆಗಾರರಿಗೆ ಬಿಲ್ ಕೇಳಿದರೆ ಎನ್‌ಎಸ್‌ಎಲ್ ಕಾರ್ಖಾನೆ ಅವಮಾನಿಸುವ ಮೂಲಕ ಗೂಂಡಾಗಿರಿ ಮಾಡುತ್ತಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸತ್ಯಾಗ್ರಹ ಕೈಗೊಂಡ ಬಳಿಕ 138 ರು. ಸಬ್ಸಿಡಿ ಹಣವನ್ನು ಪಾವತಿಸಲು ಮುಂದಾಗಿದ್ದಾರೆ. ಇನ್ನೂ ಕಬ್ಬಿನ ಸಾರಿಗೆ ವೆಚ್ಚದ ಪೂರ್ಣಹಣವನ್ನು ಪಾವತಿಸದೆ ಹೋದಲ್ಲಿ ಪರಿಸ್ಥಿತಿ ನೆಟ್ಟಿಗಿರಲ್ಲ ಎಂದು ಗುಡುಗಿದರು. ಕಾರ್ಖಾನೆ ಮತ್ತು ರೈತರ ನಡುವಿನ ಕಂದಕವನ್ನು ಸಂಬಂಧಿತ ಜಿಲ್ಲಾ ಮತ್ತು ಸಕ್ಕರೆ ಸಚಿವರು ಸಭೆ ಕರೆದು ನಿವಾರಿಸಲು ಮುಂದಾಗಬೇಕು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸುಭಾಷ ಗುತ್ತೇದಾರ ಅವರಿಗೆ ಮಾನ್ಪಡೆ ಮತ್ತು ರಮೇಶ ಲೋಹಾರ ಒತ್ತಾಯಿಸಿದರು.

ಶಾಸಕ ಗುತ್ತೇದಾರ್ ಜತೆ ಹಣಮಂತರಾವ್ ಮಲಾಜಿ, ರಾಜಶೇಖರ ಮಲಶೆಟ್ಟಿ ಇನ್ನಿತರ ಮುಖಂಡರು ಆಗಮಿಸಿದ್ದರು. ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಧರ್ಮರಾಜು ಸಾಹು, ಭೀಮಾಶಂಕರ ಮಾಡಿಯಾಳ, ಸುಧಾಮ ಧನ್ನಿ, ದತ್ತಾತ್ರೆಯ ಕುಡಕಿ, ರಾಜಶೇಖರ ಯಂಕಂಚಿ ಅನೇಕರು ಭಾಗವಹಿಸಿದ್ದರು. ಡಿವೈಎಸ್‌ಪಿ ಟಿ.ಎನ್. ಸುಲ್ಪಿ, ಸಿಪಿಐ ಶಿವಾನಂದ ಗಾಣಿಗೇರ್ ಭದ್ರತೆ ಒದಗಿಸಿದ್ದರು.

click me!