ಬಾಗಲಕೋಟೆ: ಪ್ಯಾರಿ ಶುಗರ್ಸ್‌ ವಿರುದ್ಧ ರೈತರ ಪ್ರತಿಭಟನೆ

Suvarna News   | Asianet News
Published : Dec 13, 2019, 08:15 AM ISTUpdated : Dec 13, 2019, 11:33 AM IST
ಬಾಗಲಕೋಟೆ: ಪ್ಯಾರಿ ಶುಗರ್ಸ್‌ ವಿರುದ್ಧ ರೈತರ ಪ್ರತಿಭಟನೆ

ಸಾರಾಂಶ

ಸ್ಥಳೀಯರ ಕಬ್ಬು ಕಟಾವ್‌ ಮಾಡದೇ ದೂರದಿಂದ ಕಬ್ಬು ತರಿಸಲಾಗುತ್ತಿದೆ ಎಂದು ಡಿಸಿ ಕಚೇರಿ ಎದುರು ಧರಣಿ| ಮೊದಲು ಸ್ಥಳೀಯ ರೈತರ ಕಬ್ಬು ಕಟಾವ್‌ ಮಾಡಿ ಕಾರ್ಖಾನೆಗೆ ಸಾಗಿಸಬೇಕು| ಕಬ್ಬಿನ ದರ ನಿಗದಿ ಮಾಡಲು ಮನವಿ ಮಾಡಿದರೂ ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲ|

ಬಾಗಲಕೋಟೆ(ಡಿ.13): ತಾಲೂಕಿನ ನಾಗರಾಳ ಗ್ರಾಮದಲ್ಲಿರುವ ಇಐಡಿ ಪ್ಯಾರಿ ಶುಗರ್ಸ್‌ ಸಕ್ಕರೆ ಕಾರ್ಖಾನೆಯ ಕಬ್ಬು ಪೂರೈಕೆದಾರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಜಿಲ್ಲಾಡಳಿತದ ಭವನದ ಎದುರು ಪ್ರತಿಭಟನೆ ನಡೆಸಿದರು.

ಗುರುವಾರ ಕಾರ್ಖಾನೆ ವ್ಯಾಪ್ತಿಯ ರೈತರು ಹಾಗೂ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿ ಕಾರ್ಖಾನೆಯಲ್ಲಿ 2019-20ನೇ ಸಾಲಿನ ಹಂಗಾಮಿನಲ್ಲಿ ಪೂರೈಸಿದ ಕಬ್ಬಿನ ತೂಕಕ್ಕೆ ಶೇಕಡಾವಾರು 1 ಕ್ಕಿಂತಲೂ ಹೆಚ್ಚು ಇತರೆ ಸಾಮಗ್ರಿ ಎಂದು ಕಡಿತಗೊಳಿಸುತ್ತಿದ್ದಾರೆ. ಜಿಲ್ಲೆಯ ಇತರೆ ಯಾವುದೇ ಕಾರ್ಖಾನೆಯವರು ಶೇಕಡಾವಾರು 1ಕ್ಕಿಂತ ಹೆಚ್ಚು ಕಡಿತಗೊಳಿಸುತ್ತಿಲ್ಲ. ಆದರೆ ಇಐಡಿ ಕಾರ್ಖಾನೆಯಲ್ಲಿ ಮಾತ್ರ ಇದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾರ್ಖಾನೆ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಕಬ್ಬನ್ನು ಕಟಾವು ಮಾಡದೇ ಬೇರೆಡೆಯಿಂದ ಅಂದಾಜು 100 ಕಿಮೀಗಿಂತಲೂ ಹೆಚ್ಚು ದೂರದಿಂದ ಕಬ್ಬನ್ನು ತಂದು ಕಾರ್ಖಾನೆಯನ್ನು ನಡೆಸುತ್ತಿದ್ದಾರೆ. ಹಾಗಾಗಿ ಸ್ಥಳೀಯ ಕಬ್ಬನ್ನು ಮೊದಲು ಕಟಾವು ಮಾಡಲು ಹಾಗೂ ಸಾಗಾಣಿಕೆ ಮತ್ತು ಕಟಾವು ದರ ಘೋಷಿಸದೆ ಈಗಾಗಲೇ ಕಬ್ಬು ಸರಬರಾಜು ಮಾಡಿ 20ಕ್ಕೂ ಹೆಚ್ಚು ದಿನಗಳಾಗಿದ್ದು ಸರ್ಕಾರ ನಿಗದಿಪಡಿಸಿದ ದರದ ಬಗ್ಗೆ ಯಾವುದೇ ರೀತಿಯ ಘೋಷಣೆ ಮಾಡದೇ ಪ್ರತಿ ಟನ್‌ಗೆ 2 ಸಾವಿರದಂತೆ ಮಾತ್ರ ಸಂದಾಯ ಮಾಡಿದ್ದಾರೆ. ಇದು ರೈತರಿಗೆ ಮಾಡಿದ ಬಹುದೊಡ್ಡ ಮೋಸ ಎಂದು ಹೇಳಿದರು.

ಈ ಎಲ್ಲಾ ವಿಷಯಗಳನ್ನು ಕಾರ್ಖಾನೆಯವರ ಗಮನಕ್ಕೆ ಈಗಾಗಲೇ ತಂದಿದ್ದು ಯಾವುದೇ ರೀತಿಯ ಪ್ರಕ್ರಿಯೆಯನ್ನು ನೀಡದೆ ಆಡಳಿತ ಮಂಡಳಿಯ ನಿರ್ದೇಶನದಂತೆ ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಸ್ಥಳೀಯ ರೈತರ ಕಬ್ಬು ಕಟಾವು ಮಾಡಲು ಆಸಕ್ತಿ ವಹಿಸಿಲ್ಲ. ಇದರಿಂದ ರೈತರಿಗೆ ಬಹುದೊಡ್ಡ ಅನ್ಯಾಯವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಮಸ್ಯೆಗಳ ಬಗ್ಗೆ ಕೇಳಲುಹೋದ ರೈತರಿಗೆ ವಕೀಲರಿಂದ ಕಾನೂನು ನೋಟಿಸ್‌ ಕೊಟ್ಟು ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ರೈತರಿಗೆ ಬಹಳ ತೊಂದರೆಯಾಗಿದೆ. ಇಂತಹ ಗಂಭೀರ ಲೋಪ ಮಾಡುತ್ತಿರುವ ಇಐಡಿ ಪ್ಯಾರಿ ಶುಗ​ರ್‍ಸ್ ಆಡಳಿತ ಮಂಡಳಿಗೆ ಜಿಲ್ಲಾಡಳಿತ ಸೂಕ್ತ ನಿರ್ದೇಶನ ನೀಡಿ ರೈತರ ತೊಂದರೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದರೆ ಕಾರ್ಖಾನೆಯ ವಿರುದ್ಧ ರೈತರು ಧರಣಿ ಸತ್ಯಾಗ್ರಹ ಮಾಡುವ ಅನಿವಾರ್ಯತೆ ಬರಬಹುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮುತ್ತಣ್ಣಾ ಗೌಡರ, ಮಲ್ಲು ಉಪ್ಪಾರ, ಹಣಮಂತ ದೊಡಮನಿ, ಶ್ರೀಕರ ದೇಸಾಯಿ, ಮಲ್ಲು ಗೌಡರ ಮುಂತಾದವರ ಉಪಸ್ಥಿತರಿದ್ದರು.
 

PREV
click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ