ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆಗೆ ಆಗಮಿಸಿದ್ದ ಸಿಎಂ ಯಡಿಯೂರಪ್ಪಗೆ ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ರೈತರ ಪ್ರತಿಭಟನೆಯ ಬಿಸಿ| ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪಗೆ ಘೇರಾವ್| ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಮನವಿ ಸಲ್ಲಿಸಬೇಕೆಂದು ಕಾರು ತಡೆಯಲು ಯತ್ನಿಸಿದ ರೈತರು|
ಬೆಳಗಾವಿ(ಅ.5): ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಶುಕ್ರವಾರ ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ರೈತರ ಪ್ರತಿಭಟನೆಯ ಬಿಸಿತಟ್ಟಿತು. ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪಗೆ ಘೇರಾವ್ ಹಾಕಿದರೆ, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಮನವಿ ಸಲ್ಲಿಸಬೇಕೆಂದು ಕಾರು ತಡೆಯಲು ರೈತರು ಯತ್ನಿಸಿದ ಘಟನೆಗಳು ಜರುಗಿವೆ.
ಬಿಎಸ್‌ವೈಗೆ ಘೇರಾವ್:
ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ಅಥಣಿ ಕಡೆಗೆ ಹೊರಟ ಯಡಿಯೂರಪ್ಪ ಅವರಿಗೆ ರೈತರು ಘೇರಾವ್ ಹಾಕಲು ಯತ್ನಿಸಿದರು. ಕಾರಿನಿಂದ ಇಳಿದು ಸಿಎಂ ತಮ್ಮ ಮನವಿ ಸ್ವೀಕರಿಸಲಿಲ್ಲ ಎಂದು ಅಸಮಾಧಾನಗೊಂಡ ರೈತ ಮುಖಂಡರು, ಪ್ರವಾಸಿ ಮಂದಿರದ ಗೇಟ್‌ನಲ್ಲಿ ಬೆಂಗಾವಲು ಪಡೆ ವಾಹನ ಆಗಮಿಸುತ್ತಿದ್ದಂತೆ ಏಕಾಏಕಿ ನಡುರಸ್ತೆಯಲ್ಲಿ ಮಲಗಿ ಪ್ರತಿಭಟನೆಗೆ ಮುಂದಾದರು. ಕೂಡಲೇ ಭದ್ರತಾ ಪಡೆ ಸಿಬ್ಬಂದಿ ರೈತ ಮಹಿಳೆ ಜಯಶ್ರೀ ಸೇರಿದಂತೆ 20ಕ್ಕೂ ಅಧಿಕ ರೈತರನ್ನು ವಶಕ್ಕೆ ಪಡೆದರು.
ಕಾರು ತಡೆಯಲು ಯತ್ನ:
ಮುಖ್ಯಮಂತ್ರಿಗಳಿಗೆ ಮನವಿ ಕೊಡಬೇಕೆಂದು ಸಿಎಂ ಕಾರನ್ನು ರೈತರು ತಡೆಯಲು ಯತ್ನಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಪಟ್ಟಣದ ಚೆನ್ಮಮ್ಮ ವೃತ್ತದಲ್ಲಿ ನಡೆದಿದೆ. ಸಿಎಂ ಮನವಿ ನೀಡಲೇಬೇಕೆಂದು ಅವರ ಕಾರು ಆಗಮಿಸುವ ವೇಳೆ ರಸ್ತೆಯಲ್ಲಿ ಕುಳಿತವರ ಪೊಲೀಸರು ಬಂಧಿಸಿದರು.
ಸಿಎಂ ಅಳಿಯನೆಂದು ಪೊಲೀಸರ ಮೇಲೆ ದರ್ಪ!
ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಾರ್ವಜನಿಕರಿಂದ ಅಹವಾಲು ಸ್ವೀಕಾರದ ಸಂದರ್ಭದಲ್ಲಿ ಸಿಎಂ ಅವರ ಅಳಿಯ ಎಂದು ಹೇಳಲಾಗುತ್ತಿರುವ ವ್ಯಕ್ತಿಯೊಬ್ಬ ಕರ್ತವ್ಯ ನಿರತ ಪೊಲೀಸರಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪ್ರವಾಸಿ ಮಂದಿರದಿಂದ ಕಾರು ಮೂಲಕ ಹೊರ ಹೋಗುತ್ತಿದ್ದ ವ್ಯಕ್ತಿಗೆ ನಿಧಾನವಾಗಿ ಹೋಗುವಂತೆ ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ ಅಳಿಯ ಎಂದು ಹೇಳುವ ವ್ಯಕ್ತಿ, ಕರ್ತವ್ಯ ನಿರತ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಗೂಂಡಾವರ್ತನೆ ತೋರಿದ್ದಾನೆ. ಇದರಿಂದ ಅಸಮಾಧಾನಗೊಂಡ ಪೊಲೀಸರು, ಮುಖ್ಯಮಂತ್ರಿ ಅಳಿಯನೆಂದು ಹೇಳಿಕೊಂಡು ಬಂದವನೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ಘಟನೆಯನ್ನು ಕಂಡ ಬಿಜೆಪಿ ಮುಖಂಡರು ಮಧ್ಯಪ್ರವೇಶಿ, ಪರಿಸ್ಥಿತಿ ತಿಳಿಸಿಗೊಳಿಸಿ ಸಿಎಂ ಅಳಿಯ ಎನ್ನಲಾಗುತ್ತಿರುವ ವ್ಯಕ್ತಿಯನ್ನು ಕಾರಿನಲ್ಲಿ ಹಾಕಿ ಕಳುಹಿಸಿದರು.