ಕೃಷಿ ಯಾಂತ್ರೀಕರಣಗೊಂಡ ಬಳಿಕ ದೇಶದ ಕೃಷಿಕರು ಮತ್ತು ಕೂಲಿ ಕಾರ್ಮಿಕರ ಬದುಕು ಅತಂತ್ರಗೊಂಡಿದೆ. ಆದರೆ, ಕಾರ್ಫೋರೇಟ್ ಕುಳಗಳು ವಿಜೃಂಭಿಸುತ್ತಿದ್ದು, ಶ್ರಮಿಕರು ಅಧೋಗತಿಗೆ ಇಳಿಯುತ್ತಿದ್ದಾರೆ ಎಂದು ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಜೆ.ಎನ್. ನಾಗರಾಜು ಆತಂಕ ವ್ಯಕ್ತಪಡಿಸಿದರು.
ಮಂಡ್ಯ (ನ.14): ಕೃಷಿ ಯಾಂತ್ರೀಕರಣಗೊಂಡ ಬಳಿಕ ದೇಶದ ಕೃಷಿಕರು ಮತ್ತು ಕೂಲಿ ಕಾರ್ಮಿಕರ ಬದುಕು ಅತಂತ್ರಗೊಂಡಿದೆ. ಆದರೆ, ಕಾರ್ಫೋರೇಟ್ ಕುಳಗಳು ವಿಜೃಂಭಿಸುತ್ತಿದ್ದು, ಶ್ರಮಿಕರು ಅಧೋಗತಿಗೆ ಇಳಿಯುತ್ತಿದ್ದಾರೆ ಎಂದು ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಜೆ.ಎನ್. ನಾಗರಾಜು ಆತಂಕ ವ್ಯಕ್ತಪಡಿಸಿದರು.
ನಗರದ (Karnataka) ಸಂಘದ ಆವರಣದಲ್ಲಿ ಕೂಲಿಕಾರರ ಐದನೇ ಮಂಡ್ಯ ಜಿಲ್ಲಾ ಸಮ್ಮೇಳನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ 500, 1000 ಎಚ್.ಪಿ. ಸಾಮರ್ಥ್ಯದ ಮೋಟಾರು ಯಂತ್ರಗಳು ಒಮ್ಮೆಗೇ ಸಾವಿರಾರು ಎಕರೆ ಕೃಷಿಯನ್ನು (Agriculture) ನಿರ್ವಹಿಸುವ ಸನ್ನಿವೇಶ ಸೃಷ್ಟಿಯಾಗಲಿದೆ. ತಂತ್ರಜ್ಞಾನದ ಬೆಳವಣಿಗೆಯಿಂದ ಕೃಷಿ ಕಾರ್ಯಚಟುವಟಿಕೆ ಸುಲಭವೆಂಬಂತೆ ಕಂಡುಬಂದರೂ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಈ ಅಂಶವನ್ನು ಸರ್ಕಾರಗಳು ಮರೆಮಾಚುತ್ತಿವೆ. ಇದೇ ವೇಳೆ ಸಂಘಟನೆಗಳು ರೈತರ ಪರ ಗಟ್ಟಿಧನಿ ಎತ್ತುವಲ್ಲಿ ವಿಫಲವಾಗುತ್ತಿದ್ದು, ಸಾಂಕೇತಿಕ ಪ್ರತಿಭಟನೆಗಷ್ಟೇ ಸೀಮಿತಗೊಳ್ಳುತ್ತಿರುವುದು ವಿಷಾದದ ಸಂಗತಿ ಎಂದರು.
ಅವೈಜ್ಞಾನಿಕ ನೀತಿ:
ಆಳುವ ಸರ್ಕಾರಗಳ ಅವೈಜ್ಞಾನಿಕ ನೀತಿಯಿಂದ ಇಂದು ಕೃಷಿ ಯಾಂತ್ರೀಕರಣಗೊಂಡು ಹೆಚ್ಚು ಉತ್ಪಾದನೆಯಾಗುತ್ತಿದ್ದರೂ, ರೈತರು ಮತ್ತು ಕೃಷಿ ಕೂಲಿಕಾರ್ಮಿಕರ ಬದುಕು ತೀವ್ರ ಬವಣೆಯ ಪರಿಸ್ಥಿತಿಗೆ ತಳ್ಳಲ್ಪಟ್ಟಿದೆ ಎಂದರು.
ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ ಜಾಗತೀಕರಣದಿಂದ ರೈತರು ಇಂದು ಸಾಕಷ್ಟುಕಷ್ಟ-ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಕೃಷಿ ನಾಶವಾಗುವಂತಹ ಸನ್ನಿವೇಶ ಕಣ್ಣೆದುರಿಗೆ ಬಂದು ನಿಂತಿದೆ. ಇಷ್ಟಾದರೂ ರೈತ ಪರ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆಗಳಿಗಷ್ಟೇ ಸೀಮಿತಗೊಳ್ಳುತ್ತಿದ್ದು, ಕಳಕಳಿಯ ಮತ್ತು ಅಂತರಾಳದ ಪ್ರತಿಭಟನೆ ವ್ಯಕ್ತವಾಗುತ್ತಿಲ್ಲ. ದೆಹಲಿ ಪ್ರತಿಭಟನೆಯ ವೇಳೆ ಬಿಜೆಪಿಯೇತರ ಪಕ್ಷಗಳು ತಮ್ಮ ಜನರನ್ನು ಹೋರಾಟಕ್ಕಿಳಿಸಿದ್ದರೆ ರೈತ ವಿರೋಧಿ ನೀತಿಗಳಾವುವೂ ಅನುಷ್ಠಾನಗೊಳ್ಳಲು ಸಾಧ್ಯವೇ ಇರುತ್ತಿರಲಿಲ್ಲ ಎಂದು ವಿಶ್ಲೇಷಿಸಿದರು. ಇಂತಹ ಸನ್ನಿವೇಶದಲ್ಲಿ ಜನಪರ ಸಂಘಟನೆಗಳು ತಮ್ಮ ಹಿತರಕ್ಷಣೆಗೆ ಮುಂದಾಗದೆ ಮುಂದಾಗುವ ಅನಾಹುತದ ಎಚ್ಚರಿಕೆ ಅರಿತು ನಡೆಯಬೇಕಿದೆ ಎಂದು ಸಲಹೆ ನೀಡಿದರು.
ರೈತರ ಬದುಕು ಅತಂತ್ರ:
ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, 25-30 ವರ್ಷಗಳ ಹಿಂದೆ ಕೃಷಿ ಕೂಲಿಕಾರರಿಗೆ ಕೃಷಿ ಬಿಟ್ಟರೆ ಬೇರೇನೂ ತಿಳಿದಿರಲಿಲ್ಲ. ಆಗಲೇ ಕೃಷಿಯೂ ಚೆನ್ನಾಗಿತ್ತು. ರೈತನ ಬದುಕೂ ಚೆನ್ನಾಗಿತ್ತು. ಆದರೆ, ಇಂದು ಕೃಷಿಯಲ್ಲಿ ಯಾಂತ್ರೀಕರಣ ಹೆಚ್ಚಾಗಿದ್ದು, ವಾಣಿಜ್ಯ ಕೃಷಿ ಮೇಳೈಸಿದೆ. ಹೆಚ್ಚೆಚ್ಚು ಮಾರುಕಟ್ಟೆವ್ಯವಸ್ಥೆಯಾದರೂ ಕೂಡ ರೈತರ ಬದುಕು ಮಾತ್ರ ದಿನೇ ದಿನೇ ಸೊರಗುತ್ತಿದೆ. ಇದಕ್ಕೆ ವಾಸ್ತವ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ಮತ್ತು ಅದಕ್ಕೆ ಪರಿಹಾರ ಒದಗಿಸಲು ಇದುವರೆಗೆ ನಮ್ಮನ್ನಾಳಿದ ಯಾವ ಸರ್ಕಾರಗಳೂ ಮುಂದಾಗಿಲ್ಲ ಎಂದು ದೂರಿದರು.
ಪ್ರಾಂತ ರೈತ ಸಂಘದ ಪ್ರಧಾನ ಕಾರ‍್ಯದರ್ಶಿ ಟಿ.ಯಶ್ವಂತ್, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ಜಾ.ದಳ ರೈತ ವಿಭಾಗದ ಕಾರ‍್ಯದರ್ಶಿ ಬಿಳಿಯಪ್ಪ, ಪ್ರೊ. ಹುಲ್ಕೆರೆ ಮಹದೇವು, ರವಿಕುಮಾರ್, ಶಿವನಂಜಯ್ಯ, ಹನುಮೇಶ್ ಮತ್ತಿತರರಿದ್ದರು.
ರೈತರು ವ್ಯವಸಾಯದ ಜೊತೆ ಜೂಜಾಟ ಆಡುವಂತಹ ಪರಿಸ್ಥಿತಿಗೆ ಅನಿವಾರ‍್ಯವಾಗಿ ಸಿಲುಕಿದ್ದಾರೆ. ಬೆಳೆ ಆದರೆ ಆಯಿತು, ಇಲ್ಲದಿದ್ದರೆ ಇಲ್ಲ. ಬೆಳೆ ಬಂದರೆ ಬೆಲೆ ಸಿಗುವ ಖಾತರಿ ಇಲ್ಲ. ಇಂತಹ ಸನ್ನಿವೇಶದಲ್ಲಿ ನಾವು ಪರಾರಯಯ ದಾರಿ ಕಂಡುಕೊಳ್ಳದಿದ್ದರೆ ಕೃಷಿ ಕೂಲಿಕಾರರ ಬದುಕು ಅತಂತ್ರವಾಗುತ್ತದೆ. ಈ ನಿಟ್ಟಿನಲ್ಲಿ ಈ ವಿಚಾರ ಸಂಕಿರಣದಲ್ಲಿ ಚರ್ಚಿಸಿ ಕೈಗೊಂಡ ನಿರ್ಣಯವನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಅನಿವಾರ‍್ಯವಾಗಿದೆ.
- ಎಂ.ಪುಟ್ಟಮಾದು, ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ
ಜನಪ್ರತಿನಿಧಿಗಳ ಆದಾಯ ದುಪ್ಪಟ್ಟು, ರೈತರ ಆದಾಯ ಇಳಿಕೆ
- ಬಂಡವಾಳಶಾಹಿಗಳ ಸ್ವತ್ತಾಗುತ್ತಿರುವ ಕೃಷಿ ಭೂಮಿ
ಪ್ರಸ್ತುತ ಸನ್ನಿವೇಶದಲ್ಲಿ ರೈತರು ಮತ್ತು ಕೃಷಿ ಕೂಲಿಕಾರ್ಮಿಕರ ಆದಾಯ ಕೆಳಮುಖವಾಗುತ್ತಿದ್ದರೆ, ಜನಪ್ರತಿನಿಧಿಗಳ ಆದಾಯ ದುಪ್ಪಟ್ಟುಗೊಳ್ಳುತ್ತಿದೆ ಎಂದು ಕಿಸಾನ್ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್ ಮೋಹನ್‌ಕುಮಾರ್ ವಿಷಾದಿಸಿದರು.
ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಂಡವಾಳಶಾಹಿಗಳು ಕೃಷಿ ಕ್ಷೇತ್ರಕ್ಕೆ ಬಂದ ಪರಿಣಾಮ ನೀರಾವರಿ ಪ್ರದೇಶಗಳೆಲ್ಲ ನಿವೇಶನಗಳಾಗಿ ಪರಿವರ್ತಿತವಾಗುತ್ತಿವೆ. ಅನ್ನ ಬೆಳೆಯುವ ಭೂಮಿ ಬಂಡವಾಳವಿರುವವರ ಸ್ವತ್ತಾಗುತ್ತಿದೆ. ಈ ಬಗ್ಗೆ ಜನಸಾಮಾನ್ಯರಿಗೂ ಅರಿವಿದೆ. ಆದರೂ, ಯಾರೂ ನಿರೀಕ್ಷಿತ ಪ್ರಮಾಣದಲ್ಲಿ ಧನಿ ಎತ್ತುತ್ತಿಲ್ಲ. ವಿಧವಾ ವೇತನ, ಬಡವರ ಮಾಸಾಶನವನ್ನು ಕನಿಷ್ಠ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಮೀನಮೇಷ ಎಣಿಸುತ್ತಿರುವ ಆಡಳಿತಗಾರರು, ತಮ್ಮ ಭತ್ಯೆಗಳನ್ನು ಮಾತ್ರ ಚರ್ಚೆ ಇಲ್ಲದೆ ಸದನದಲ್ಲಿ ಅನುಮೋದಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ರೈತರನ್ನು ಭಿಕ್ಷೆ ಬೇಡುವ ಪರಿಸ್ಥಿತಿಗೆ ತಂದಿಟ್ಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಮಧ್ಯೆ ಒಂದು ಲಕ್ಷ ರು.ನಿಂದ ಮೂರು ಲಕ್ಷ ರು.ವರೆಗೆ ಬಡ್ಡಿ ರಹಿತ ಕೃಷಿ ಸಾಲ ಸಿಗುವಂತಾಗಿದೆ. ಕೃಷಿ ಬೆಲೆ ಆಯೋಗ ರಚನೆಯಾಗಿದೆ. ಇದೆಲ್ಲ ಸಕಾರಾತ್ಮಕ ಬೆಳವಣಿಗೆಯಾದರೂ, ಇದರ ಸಕಾಲಿಕ ಅನುಷ್ಠಾನದಲ್ಲಿ ವಿಳಂಬವಾದ ಪರಿಣಾಮ ಅರ್ಹ ಫÜಲಾನುಭವಿಗಳ ಸಂಖ್ಯೆ ಏರಿಕೆಯಾಗುತ್ತಿಲ್ಲ. ಕೃಷಿ ಬೆಲೆ ಆಯೋಗ ರಚನೆಯಾದರೂ, ಇಂದು ನಾವು ಕಬ್ಬಿಗೆ ವೈಜ್ಞಾನಿಕ ದರ ನೀಡಿ ಎಂದು ರಸ್ತೆಯಲ್ಲಿ ಕುಳಿತು ಧರಣಿ ನಡೆಸುವಂತಾಗಿದೆ. ಆದರೂ, ಯಾವೊಬ್ಬ ಜನಪ್ರತಿನಿಧಿಯೂ ಕ್ಯಾರೆ ಎನ್ನದ ಸ್ಥಿತಿಯನ್ನು ಕಾಣುತ್ತಿದ್ದೇವೆ. ಒಬ್ಬ ರಾಜಕಾರಣಿ 1200 ರಿಂದ 1500 ಎಕರೆ ಮಾಲೀಕನಾಗಿರುವುದನ್ನು ಕಾಣುತ್ತಿರುವ ನಾವು, ಸಮ ಸಮಾಜ ನಿರ್ಮಾಣ ಎಂದು ಭಾಷಣ ಕುಟ್ಟುತ್ತಲೇ ಇದ್ದೇವೆ. ಇದಕ್ಕೆ ಕಾರಣ ಜನರ ಸಮಸ್ಯೆ ಮುಖ್ಯವಾಗಿ ಪರಿಗಣಿಸದ ರಾಜಕಾರಣಿಗಳು ಅಧಿಕಾರ, ಅಂತಸ್ತನ್ನು ಮಾತ್ರ ಬಹುಮುಖ್ಯವಾಗಿ ಪರಿಗಣಿಸಿದ್ದಾರೆ. ಈ ನಿಟ್ಟಿನಲ್ಲಿ ಸಂಘಟನೆಗಳು ಸಮಾಜಮುಖಿಯಾಗದ ಹೊರತು ರೈತನಿಗೆ ಉಳಿಗಾಲವಿಲ್ಲ ಎಂದು ಅಭಿಪ್ರಾಯಿಸಿದರು.