ಕಾಲುವೆಗೆ ನೀರು ಬಿಡದೆ ರೈತರ ಜೀವ ಹಿಂಡುತ್ತಿರುವ ಅಧಿಕಾರಿಗಳು

By Suvarna NewsFirst Published Jan 9, 2020, 8:48 AM IST
Highlights

ಕಾಲುವೆ ನೀರು ಪೂರೈಕೆಯಿಲ್ಲದೆ ಬಾಡುತ್ತಿರುವ ಬೆಳೆ| ನರಗುಂದ ತಾಲೂಕಿನ ರೈತರು ಕಳೆದ ನಾಲ್ಕೈದು ವರ್ಷಗಳ ಬರಗಾಲದಿಂದ ಸಾಕಷ್ಟು ಹಾನಿ ಅನುಭವಿಸಿ ತೀವ್ರ ಸಂಕಷ್ಟದಲ್ಲಿದ್ದಾರೆ| ಈ ವರ್ಷ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಅತಿಯಾದ ಮಳೆಯಿಂದ ಹಾನಿಯಾಗುವ ಮೂಲಕ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ|

ಎಸ್‌.ಜಿ. ತೆಗ್ಗಿನಮನಿ

ನರಗುಂದ(ಜ.09): ಪ್ರಸಕ್ತ ಸಾಲಿನಲ್ಲಿ ತಾಲೂಕಿಗೆ ನೀರು ಪೂರೈಕೆ ಮಾಡುವ ಮಲಪ್ರಭಾ ಜಲಾಶಯ ಸಂಪೂರ್ಣ ಭರ್ತಿಯಾದರೂ ಸಹ ಈ ಭಾಗದ ರೈತರಿಗೆ ಕಾಲುವೆ ನೀರು ಸಿಗದೆ ಇರುವುದರಿಂದಾಗಿ ಹೊಲದಲ್ಲಿ ಬಿತ್ತನೆ ಮಾಡಿದ ಬೆಳೆಗಳು ನೀರಿಲ್ಲದೇ ಬಾಡಿ ಹೋಗುತ್ತಿವೆ.

ಈಗಾಗಲೇ ನರಗುಂದ ತಾಲೂಕಿನ ರೈತರು ಕಳೆದ ನಾಲ್ಕೈದು ವರ್ಷಗಳ ಬರಗಾಲದಿಂದ ಸಾಕಷ್ಟು ಹಾನಿ ಅನುಭವಿಸಿ ತೀವ್ರ ಸಂಕಷ್ಟದಲ್ಲಿದ್ದಾರೆ. ಇದಲ್ಲದೇ ಈ ವರ್ಷ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಅತಿಯಾದ ಮಳೆಯಿಂದ ಹಾನಿಯಾಗುವ ಮೂಲಕ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನು ಹಿಂಗಾರು ಹಂಗಾಮಿನಲ್ಲಿ ರೈತ ತನ್ನ ಜಮೀನುಗಳಲ್ಲಿ ಗೋವಿನ ಜೋಳ, ಸೂರ್ಯಕಾಂತಿ, ಗೋದಿ, ಬಿಳಿಜೋಳ, ಈರಳ್ಳಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿ ಮಲಪ್ರಭಾ ಕಾಲುವೆ ಮೂಲಕ ಪೂರೈಕೆಯಾಗುವ ನೀರನ್ನು ಜಮೀನುಗಳಿಗೆ ಹಾಯಿಸಿಕೊಂಡು ಉತ್ತಮ ಬೆಳೆ ತೆಗೆಯಬೇಕೆಂದು ನಿರೀಕ್ಷೆಯಲ್ಲಿದ್ದರು. ಆದರೆ, ಕಾಲುವೆ ನೀರು ಸಧ್ಯ ರೈತರ ಜಮೀನುಗಳಿಗೆ ಬರದೇ ಇರುವ ಹಿನ್ನಲೆಯಲ್ಲಿ ಹೊಲದಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಬಿಸಿಲಿನ ತಾಪಕ್ಕೆ, ತೇವಾಂಶದ ಕೊರತೆಯಿಂದಾಗಿ ಒಣಗಿ ಹೋಗುತ್ತಿವೆ.

ನಾಲ್ಕು ಗ್ರಾಮಗಳ ರೈತರಿಗಿಲ್ಲ ನೀರು:

ಈ ವರ್ಷ ಮಲಪ್ರಭಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಮೇಲಾಗಿ ಈ ಭಾಗದ ರೈತರು ಒಂದು ಬಾರಿಯಾದರೂ ಉತ್ತಮ ಬೆಳೆ ತೆಗೆಯಬೇಕೆಂದು ಕನಸು ಕಾಣುತ್ತಿದ್ದು, ಆದರೆ, ರೈತರ ಕನಸು ಸಾಕಾರಗೊಳ್ಳುವಲ್ಲಿ ಅಧಿಕಾರಿಗಳು ವಿಫಲಗೊಳಿಸುತ್ತಿದ್ದಾರೆ. ಮಲಪ್ರಭಾ ಬಲದಂಡೆ 14ನೇ ಬ್ಲಾಕ್‌ನ ಕಾಲುವೆ ತಾಲೂಕಿನ ಹದಲಿ, ಬೈರನಹಟ್ಟಿ, ಸುರಕೋಡ, ಮುದ್ಗಣಿಕಿ ಗ್ರಾಮಗಳಿಗೆ ನೀರು ಪೂರೈಕೆ ಆಗುತ್ತದೆ. ಆದರೆ, ಕಾಲುವೆಗೆ ಜಲಾಶಯದಿಂದ ನೀರು ಪೂರೈಕೆ ಪ್ರಾರಂಭವಾಗಿ 1 ತಿಂಗಳು ಗತಿಸಿದರೂ ಕೂಡ ಈ ನಾಲ್ಕು ಗ್ರಾಮಗಳ ರೈತರ ಜಮೀನುಗಳಿಗೆ ಕಾಲುವೆಗೆ ಸರಿಯಾಗಿ ನೀರು ಪೂರೈಕೆಯಿಲ್ಲದೆ ಸಧ್ಯ ಬೆಳೆಗಳು ಒಣಗಿ ರೈತ ಸಂಕಷ್ಟದ ಪರಿಸ್ಥಿತಿ ಅನುಭವಿಸುವಂತಾಗಿದೆ.

ಗುತ್ತಿಗೆದಾರರ ನಿರ್ಲಕ್ಷ್ಯ:

ಈ ಭಾಗದ ರೈತರು ಹಲವಾರು ಬಾರಿ ಸಂಬಂಧ ಪಟ್ಟನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಅಧಿಕಾರಿಗಳು ಮಾತ್ರ 14ನೇ ಬ್ಲಾಕ್‌ನ ನೀರು ಪೂರೈಕೆ ಮಾಡುವ ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರರಿಗೆ ತಿಳಿಸುವುದಾಗಿ ಹಾರಿಕೆ ಉತ್ತರ ನೀಡಿ ಕೈ ತೊಳೆದುಕೊಂಡಿದ್ದಾರೆ. ಇನ್ನು ರೈತರು ತಮ್ಮ ಕಾಲುವೆಗೆ ಪ್ರತಿ ದಿನ ನೀರು ಪೂರೈಕೆ ಮಾಡಲು ಯಾವ ಗುತ್ತಗೆದಾರರು ಬಂದಿಲ್ಲ ಎಂದು ಹೆಸರು ಹೇಳದ ಹದಲಿ ಗ್ರಾಮದ ರೈತ ಗುತ್ತಗೆದಾರ ಮತ್ತು ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನರಗುಂದ ತಾಲೂಕಿನ ಹದಲಿ, ಬೈರನಹಟ್ಟಿ, ಸುರಕೋಡ, ಮುದ್ಗಣಕಿ ಗ್ರಾಮಗಳಿಗೆ ಕಳೆದ 1 ತಿಂಗಳಿಂದ ಸರಿಯಾಗಿ ಕಾಲವೆ ನೀರು ಬರದೇ ಇರುವ ಹಿನ್ನಲೆಯಲ್ಲಿ ರೈತ ಬಿತ್ತನೆ ಮಾಡಿದ ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿವೆ. ಈ ಬಗ್ಗೆ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ನೀರು ಪೂರೈಕೆ ಮಾಡುವ ಗುತ್ತಿಗೆದಾರರು ಕ್ರಮ ತಗೆದುಕೊಳ್ಳದಿದ್ದರೆ ಈ ನಾಲ್ಕು ಗ್ರಾಮದ ರೈತರು ನೀರಾವರಿ ನಿಗಮದ ಕಚೇರಿಗೆ ಕೀಲಿ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಕರ್ನಾಟಕ ರೈತ ಸೇನೆ ಸಂಘದ ಅಧ್ಯಕ್ಷ ಚಂದ್ರಗೌಡ ಪಾಟೀಲ ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ನೀರಾವರಿ ನಿಗಮದ ಸಹಾಯಕ ಅಭಿಯಂತರ ಡಿ. ಸುಧಾಕರ ಅವರು, ಈ ನಾಲ್ಕು ಗ್ರಾಮಗಳ ರೈತರ ಜಮೀನುಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಲು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಒಂದು ವೇಳೆ ಅವರು ಮುಂದಿನ ದಿನಗಳಲ್ಲಿ ಸರಿಯಾಗಿ ಜಮೀನುಗಳಿಗೆ ನೀರು ಪೂರೈಕೆ ಮಾಡದಿದ್ದರೆ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 
 

click me!