ಕೈಕೊಟ್ಟ ಮಳೆ: ಕಂಗೆಟ್ಟ ರೈತಾಪಿ ವರ್ಗ

By Kannadaprabha News  |  First Published Sep 24, 2023, 8:12 PM IST

ಬೆಳಗಾವಿ ಮತ್ತು ಖಾನಾಪುರ ತಾಲೂಕಿನಲ್ಲಿ ಆಲೂಗಡ್ಡೆ ಮತ್ತು ಸಿಹಿ ಗೆಣಸು ಬೆಳೆದ ರೈತರು ಕಡಿಮೆ ಮಳೆಯಿಂದ ಇಳುವರಿಯಲ್ಲಿ ಭಾರಿ ನಷ್ಟದ ಆತಂಕದಲ್ಲಿದ್ದಾರೆ. ಜತೆಗೆ ಬೆಳಗಾವಿ ಮತ್ತು ಖಾನಾಪುರ ತಾಲೂಕನ್ನು ಬರಪೀಡಿತ ಪಟ್ಟಿಗೆ ಸರ್ಕಾರ ಘೋಷಿಸದ ಕಾರಣ ಇವರಿಗೆ ಡಬಲ್‌ ಹೊಡೆತ ಬಿದ್ದಂತಾಗಿದೆ. 


ಜಗದೀಶ ವಿರಕ್ತಮಠ

ಬೆಳಗಾವಿ(ಸೆ.24): ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ರೈತಾಪಿ ವರ್ಗ ಕಂಗೆಟ್ಟಿದೆ. ಈ ಮಧ್ಯೆ ಸರ್ಕಾರ ಬೆಳಗಾವಿ ಮತ್ತು ಖಾನಾಪೂರ ತಾಲೂಕುಗಳನ್ನು ಬರಪೀಡಿತ ಪ್ರದೇಶದಿಂದ ಕೈಬಿಟ್ಟಿರುವುದು ರೈತರನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ.

Tap to resize

Latest Videos

ಬೆಳಗಾವಿ ಮತ್ತು ಖಾನಾಪುರ ತಾಲೂಕಿನಲ್ಲಿ ಆಲೂಗಡ್ಡೆ ಮತ್ತು ಸಿಹಿ ಗೆಣಸು ಬೆಳೆದ ರೈತರು ಕಡಿಮೆ ಮಳೆಯಿಂದ ಇಳುವರಿಯಲ್ಲಿ ಭಾರಿ ನಷ್ಟದ ಆತಂಕದಲ್ಲಿದ್ದಾರೆ. ಜತೆಗೆ ಬೆಳಗಾವಿ ಮತ್ತು ಖಾನಾಪುರ ತಾಲೂಕನ್ನು ಬರಪೀಡಿತ ಪಟ್ಟಿಗೆ ಸರ್ಕಾರ ಘೋಷಿಸದ ಕಾರಣ ಇವರಿಗೆ ಡಬಲ್‌ ಹೊಡೆತ ಬಿದ್ದಂತಾಗಿದೆ. ಈ ಬಾರಿ ಬೆಳಗಾವಿ ತಾಲೂಕಿನಲ್ಲಿ ಸುಮಾರು 1500 ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗಿದ್ದು, ಬೆಳಗಾವಿ ಮತ್ತು ಖಾನಾಪುರ ತಾಲೂಕಿನಲ್ಲಿ 10 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಸಿಹಿ ಗೆಣಸು ಬಿತ್ತನೆ ಮಾಡಲಾಗಿದೆ. ಆಲೂಗಡ್ಡೆ ಮತ್ತು ಸಿಹಿ ಗೆಣಸಿನಿಂದ ಉತ್ತಮ ಆದಾಯದ ನಿರೀಕ್ಷೆ ಹೊಂದಿದ್ದರು.

ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಸ್ವಗ್ರಾಮದಲ್ಲಿ ಕಲ್ಲು ತೂರಾಟ: ಲಾಠಿ ಚಾರ್ಜ್‌

ಆದರೆ, ಬರಗಾಲವು ರೈತರ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದು, ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಜೂನ್, ಆಗಸ್ಟ್‌ ಮತ್ತು ಸೆಪ್ಟೆಂಬರ್ ತಿಂಗಳ ವಾಡಿಕೆ ಮಳೆಗೆ ಹೋಲಿಸಿದರೆ ಅರ್ಧಕ್ಕಿಂತ ಕಡಿಮೆ ಮಳೆಯಾಗಿದೆ. ಜುಲೈನಲ್ಲಿ ಉತ್ತಮ ಮಳೆಯಾಗಿದ್ದು ಬೆಳೆಗಳ ಉಳಿವಿಗೆ ಸಹಕಾರಿಯಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಉತ್ತಮ ಮಳೆಯಾಗದ ಕಾರಣ ಆಲೂಗಡ್ಡೆ, ಗೆಣಸು ಬೆಳೆಗಳು ನಿರೀಕ್ಷೆಯಂತೆ ಬೆಳವಣಿಗೆಯಾಗಿಲ್ಲ.

ಇದರಿಂದಾಗಿ ಉತ್ತಮ ಉತ್ಪನ್ನ ನಿರೀಕ್ಷೆಯಲ್ಲಿದ್ದ ರೈತರಿಗೆ ಒಂದು ಕಡೆ ವರುಣನ ಅವಕೃಪೆಯಿಂದಾಗಿ ಸಂಕಷ್ಟ ಎದುರಾಗಿದ್ದರೆ, ಮತ್ತೊಂದು ಕಡೆ ಸರ್ಕಾರ ಜಿಲ್ಲೆಯ 14 ತಾಲೂಕುಗಳ ಪೈಕಿ ಬೆಳಗಾವಿ ಮತ್ತು ಖಾನಾಪೂರ ತಾಲೂಕುಗಳನ್ನು ಮಾತ್ರ ಬರಪೀಡಿತ ಪ್ರದೇಶ ಪಟ್ಟಿಯಿಂದ ಕೈ ಬಿಟ್ಟಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಮಧ್ಯೆ ಈಗಾಗಲೇ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಲೂಗಡ್ಡೆ ಹಾಗೂ ಸಿಹಿ ಗೆಣಸುಗಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ ಧಾರವಾಡದ ತೋಟಗಾರಿಕೆ ಇಲಾಖೆಯ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಆಲೂಗಡ್ಡೆ ಬೆಳೆಯಲು ಭೂಮಿ ಬೆಳೆಯಲು, ಬೀಜ, ಗೊಬ್ಬರ, ಕೀಟನಾಶಕಗಳಿಗೆ ಸುಮಾರು ₹ 40ರಿಂದ ₹ 50 ಸಾವಿರ ಖರ್ಚು ಮಾಡಲಾಗಿದೆ. ಆದರೆ, ಬರಗಾಲದಿಂದಾಗಿ ಇಳುವರಿ ಸಿಗುವ ನಿರೀಕ್ಷೆ ಹುಸಿಯಾಗಿದೆ. ನಾವು ಬಿತ್ತನೆಗೆ ಬಳಸಿದ ಆಲೂಗಡ್ಡೆಯಷ್ಟು ಆಲೂಗಡ್ಡೆ ಇಳುವರಿಯನ್ನು ಪಡೆಯಬಹುದೆಂದು ನಮಗೆ ಖಚಿತವಾಗಿಲ್ಲ. ಸರ್ಕಾರ ಸಮೀಕ್ಷೆ ನಡೆಸಿ, ಬೆಳಗಾವಿ ತಾಲೂಕನ್ನೂ ಬರಪೀಡಿತ ಎಂದು ಘೋಷಿಸಿ ನಷ್ಟ ಭರಿಸಲು ಕ್ರಮಕೈಗೊಳ್ಳಬೇಕು ಎಂದು ಆಲೂಗಡ್ಡೆ ಬೆಳೆಗಾರ ಮದನ್ ಪಾವಲೆ ತಿಳಿಸಿದ್ದಾರೆ.  

ಕರ್ನಾಟಕದಲ್ಲಿ ಮಳೆಯ ಅಭಾವ: ಮೋಡ ಬಿತ್ತನೆಗೆ ಅಂತಿಮ ಹಂತದ ಸಿದ್ಧತೆ

ಸರ್ಕಾರ ಬೆಳಗಾವಿ ತಾಲೂಕನ್ನೂ ಬರಪೀಡಿತ ಎಂದು ಘೋಷಿಸಿ ಪರಿಹಾರ ನೀಡಬೇಕು. ನಮ್ಮ ಇತರೆ ಬೆಳೆಗಳಾದ ಭತ್ತ, ಮೆಕ್ಕೆಜೋಳ, ಕಬ್ಬು ಕೂಡ ಮಳೆಯಿಲ್ಲದೇ ಬತ್ತು ಹೋಗಿವೆ. ಸರ್ಕಾರ ಎಲ್ಲ ಬೆಳೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತರು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಕಬ್ಬು ಬೆಳೆಗಾರ ಸುರೇಶ ಪಾಟೀಲ ಬತ್ತ ಹೇಳಿದ್ದಾರೆ.  

ನಾವು ಈಗಾಗಲೇ ವಿವಿಧ ಗ್ರಾಮಗಳ ಹೊಲಗಳಿಗೆ ಭೇಟಿ ನೀಡುವ ಆಲೂಗಡ್ಡೆ ಮತ್ತು ಇತರೆ ತೋಟಗಾರಿಕೆ ಬೆಳೆಗಳ ಸಮೀಕ್ಷೆಯನ್ನು ಪ್ರಾರಂಭಿಸಿದ್ದೇವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇಳುವರಿ ತುಂಬಾ ಕಡಿಮೆಯಾಗಿದೆ. ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಾಲೂಕು ತೋಟಗಾರಿಕಾ ಅಧಿಕಾರಿ ಪ್ರವೀಣ್ ಮಹೇಂದ್ರಕರ್ ತಿಳಿಸಿದ್ದಾರೆ.  

click me!