ಬಿರುಗಾಳಿ ಸಹಿತ ಮಳೆಗೆ ನೆಲಕಚ್ಚಿದ ಬಾಳೆ, ಮಾವು: ಸಂಕಷ್ಟದಲ್ಲಿ ರೈತ..!

By Kannadaprabha NewsFirst Published Apr 20, 2020, 9:02 AM IST
Highlights

ಗುಡುಗು, ಸಿಡಿಲು, ಬಿರುಗಾಳಿ ಸಹಿತ ಸುರಿದ ಮಳೆ| ನೆಲಕಚ್ಚಿದ ತೋಟಗಾರಿಕಾ ಬೆಳೆಗಳು| ಅಪಾರ ಪ್ರಮಾಣದ ನಷ್ಟ| 16 ಎಕರೆ ಮಾವು ಹಾಕಲಾಗಿದ್ದು, ಬಹುತೇಕ ಮರ ಬಿದ್ದಿದ್ದು, ಎಲ್ಲ ಗಿಡಗಳ ಮಾವಿನ ಕಾಯಿ ಬಿದ್ದಿದೆ. 5ಕ್ಕೂ ಹೆಚ್ಚು ಟನ್‌ ಮಾವು ಧರೆಗುರಳಿದೆ|

ಗಜೇಂದ್ರಗಡ(ಏ.20): ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ರಾತ್ರಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಸುರಿದ ಮಳೆಗೆ ಇಲ್ಲಿನ ತೋಟಗಾರಿಕಾ ಬೆಳೆಗಳು ನೆಲಕಚ್ಚಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಳೆ, ಮಾವು, ವಿಲ್ಯದೆಳೆ ಬೆಳೆ ಬಹುತೇಕ ನೆಲಕ್ಕುರಳಿದ್ದು, ಭಾರಿ ಪ್ರಮಾಣದ ಹಾನಿಯಾಗಿದೆ.

ಪಟ್ಟಣದ ಸೇರಿದಂತೆ ಗೋಗೇರಿ, ಜೀಗೇರಿ, ಮ್ಯಾಕಲಝರಿ, ಕುಂಟೋಜಿ, ರಾಮಾಪೂರ, ಕಾಲಕಾಲೇಶ್ವರ, ಲಕ್ಕಲಕಟ್ಟಿ, ನೆಲ್ಲೂರ, ಮ್ಯಾಕಲ್‌ಝರಿ, ರಾಜೂರ ಸೇರಿ 62 ಹೆಕ್ಟೇರ್‌ ಪ್ರದೇಶದಲ್ಲಿ ಬಾಳೆ ಹಾಗೂ 300 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಸಸಿ ನಡುವ ಕಾರ್ಯದಿಂದ ಹಿಡಿದು, ಮಡಿ ಹಾಕುವುದು, ಗೊಬ್ಬರ ಕಟ್ಟುವುದು ಸೇರಿದಂತೆ ಫಸಲು ನೀಡುವ ವರೆಗೂ 1 ಎಕರೆ ಬಾಳೆಗೆ ಕನಿಷ್ಟ. 50 ರಿಂದ 60 ಸಾವಿರ ಖರ್ಚು ಬರುತ್ತದೆ. ಬಾಳೆ ಎಕರೆಗೆ 15 ಟನ್‌ ಬರುತ್ತದೆ. ಈ ಬಾಳೆಗೆ ಕ್ವಿಂಟಲ್‌  900 ಇದೆ. ಇತ್ತ ಮಾವು ಬೆಳೆಗಾರರು 1 ಎಕರೆ ವಾರ್ಷಿಕ . 1.5 ಲಕ್ಷ ಆದಾಯ ಬರುತ್ತದೆ. ಹೀಗಾಗಿ ಇಂತಹ ಲಾಭದಾಯಕ ಬೆಳೆ ಬೆಳೆದು ಕೊಳವೆ ಬಾವಿ ಆಶ್ರಿತ ರೈತರು ಆರ್ಥಿಕ ಸಂಕಷ್ಟದಿಂದ ಹೊರ ಬರುವ ಕನಸು ಹೊಂದಿದ್ದ ಅನ್ನದಾತನಿಗೆ ಶನಿವಾರ ಸುರಿದ ಬಿರುಗಾಳಿ ಸಹಿತ ಸುರಿದ ಮಳೆ ಬೆಳೆಗಾರನ ಕನಸನ್ನು ಸಂಪೂರ್ಣ ಭಗ್ನಗೊಳಿಸಿದೆ.

ಅಕಾಲಿಕ ಮಳೆ: ಕೋಟ್ಯಂತರ ರುಪಾಯಿ ಬೆಳೆ ಹಾನಿ, ಸಂಕಷ್ಟದಲ್ಲಿ ರೈತ!

ಸಮೀಪದ ಉಣಚಗೇರಿ ಗ್ರಾಮದ ಸೋಮಪ್ಪ ಗೋವಿಂದಪ್ಪ ರಾಠೋಡ ಎಂಬುವರ ಫಲಕ್ಕೆ ಬಂದಿದ್ದ ಬಾಳೆ ಭಾಗಶಃ ನೆಲಕಚ್ಚಿದೆ. ಫಸಲು ಕಟಾವು ಹಂತದಲ್ಲಿತ್ತು. ಆದರೆ, ಭಾರಿ ಬಿರುಗಾಳಿಗೆ ಬೆಳೆಗಳೆಲ್ಲ ನೆಲಕಚ್ಚಿದ್ದು, 2 ಎಕರೆ ಬಾಳೆ ತೊಟ ನಾಶವಾಗಿದೆ. 2 ಸಾವಿರ ಸಸಿಯನ್ನು ನೆಡಲಾಗಿದೆ. ಪ್ರತಿ ಒಂದು ಗೊನೆ ಬಾಳೆ 40 ಕೆಜಿ ಬರುತ್ತದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 10 ಸಾವಿರ ಇದೆ. ಆದರೆ, ಶನಿವಾರ ಸುರಿದ ಬಿರುಗಾಳಿ ಮಳೆಗೆ ಬೆಳೆಗಳು ಸಂಪೂರ್ಣ ನೆಲಕ್ಕಚ್ಚಿದ್ದು ಸುಮಾರು 2 ಲಕ್ಷ ನಷ್ಟವಾಗಿದೆ ಎನ್ನುತ್ತಾರೆ ಸೋಮಪ್ಪ ರಾಠೋಡ.

ಹಣ್ಣುಗಳ ರಾಜನೆಂದು ಕರೆಯಿಸಿಕೊಳ್ಳುವ ಮಾವಿನ ಫಸಲು ನಿರೀಕ್ಷೆಯಂತೆ ಉತ್ತಮ ಹೂ ತುಂಬಿ ಮಾಮರಗಳ ಟೊಂಗೆಗಳಲ್ಲಿ ಮೈದುಂಬಿಕೊಂಡು ಗೊಂಚಲುಗಳು ಹಣ್ಣು ಬಂದಿತ್ತು. ಕೇವಲ 15 ದಿನಗಳಲ್ಲಿ ಈ ಸಲ ಬಂಪರ್‌ ಫಸಲು ಕಟಾವು ಮಾಡುವ ಹಂತದಲ್ಲಿತ್ತು. ಆದರೆ, ಅಕಾಲಿಕ ಗಾಳಿ ಮಿಶ್ರಿತ ಮಳೆಯಿಂದ ಕಾಯಿ ಬಿದ್ದಿದ್ದು, ಎಲ್ಲವನ್ನೂ ನಾಶ ಪಡಿಸಿರುವದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. 16 ಎಕರೆ ಮಾವು ಹಾಕಲಾಗಿದ್ದು, ಬಹುತೇಕ ಮರ ಬಿದ್ದಿದ್ದು, ಎಲ್ಲ ಗಿಡಗಳ ಮಾವಿನ ಕಾಯಿ ಬಿದ್ದಿದೆ. 5ಕ್ಕೂ ಹೆಚ್ಚು ಟನ್‌ ಮಾವು ಧರೆಗುರಳಿದೆ. 4 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಗೊಗೇರಿ ಗ್ರಾಮದ ರೈತರ ಬಸವರಾಜ ಮೂಲಿಮನಿ.

ಬಾಳೆ, ಮಾವು ಸೇರಿ ಇತರ ತೋಟಗಾರಿಕೆ ಬೆಳೆಗಳು ಶನಿವಾರ ಬೀಸಿದ ಬಿರುಗಾಳಿ ಹಾಗೂ ಮಳೆಯಿಂದ ಹಾನಿಯಾಗಿವೆ. ಹೀಗಾಗಿ ಇಲಾಖೆ ಸಿಬ್ಬಂದಿಗಳಿಂದ ಹಾನಿಯ ಸರ್ವೇ ಕಾರ್ಯ ನಡೆಸಲಾಗುವುದು ಎಂದು ರೋಣ ತಾಲೂಕಿನ  ತಾಂಬೂಟಿ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿ ಮಹ್ಮದರಫೀಕ ಅವರು ಹೇಳಿದ್ದಾರೆ. 
 

click me!