ಕೊರೋನಾ ಹೆಚ್ಚುತ್ತಿದ್ದರೂ ಬುದ್ದಿ ಕಲಿಯದ ಜನ: ಮಾಂಸಕ್ಕಾಗಿ ಮುಗಿಬಿದ್ದ ಜನ

By Kannadaprabha NewsFirst Published Apr 20, 2020, 8:49 AM IST
Highlights

ಗದಗ ನಗರದಲ್ಲಿ 3 ಪ್ರಕರಣಗಳು ಪತ್ತೆಯಾದರೂ ಮಾಂಸಕ್ಕಾಗಿ ಮುಗಿಬಿದ್ದ ಜನ| ತರಕಾರಿ ಮಾರುಕಟ್ಟೆಯಲ್ಲಿ ಮತ್ತೆ ಅದೇ ಜನಜಂಗುಳಿ, ಸೋಂಕಿನ ಮೂಲ ತನಿಖೆಯನ್ನು ಮುಂದುವರಿಸಿರುವ ಜಿಲ್ಲಾಡಳಿತ| ಜನಜಂಗುಳಿಯಿಂದ ತುಂಬಿದ್ದ ಮಟನ್‌ ಮಾರುಕಟ್ಟೆಯಲ್ಲೂ ಸಹ ಪಾಲನೆಯಾಗದ ಲಾಕ್‌ಡೌನ್‌ ನಿಯಮ|

ಗದಗ(ಏ.20):  ಜಿಲ್ಲೆಯಲ್ಲಿ ಈಗಾಗಲೇ ಮಹಾಮಾರಿ ಕೊರೋನಾ ತನ್ನ ಪ್ರಭಾವವನ್ನು ಬೀರಲು ಪ್ರಾರಂಭಿಸಿದ್ದರೂ ಕೆಲವು ಸಾರ್ವಜನಿಕರು ಮಾತ್ರ ಇದಕ್ಕೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೇ ನಿಷ್ಕಾಳಜಿ ತೋರುತ್ತಿದ್ದಾರೆ. ಶನಿವಾರವಷ್ಟೇ ಜಿಲ್ಲೆಯಲ್ಲಿ ಮೂರನೇ ಕೊರೋನಾ ಪ್ರಕರಣ ಬೆಳಕಿಗೆ ಬಂದಿದೆ. ಇಷ್ಟಿದ್ದರೂ ಭಾನುವಾರ ಬೆಳ್ಳಂಬೆಳಗ್ಗೆ ಲಾಕ್‌ಡೌನ್‌ ಉಲ್ಲಂಘನೆ ಮಾಡಿ ತರಕಾರಿ ಹಾಗೂ ಮಾಂಸವನ್ನು ಮುಗಿಬಿದ್ದು ಖರೀದಿ ಮಾಡಿದ್ದಾರೆ.

ಭಾನುವಾರ ಬೆಳಗಿನ ಜಾವದಿಂದಲೇ ತರಕಾರಿ ಮಾರುಕಟ್ಟೆಗೆ ಧಾವಿಸಿದ ಅವಳಿ ನಗರದ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ತರಕಾರಿ ಕೊಳ್ಳಲು ಮುಂದಾದರು. ಬಹುತೇಕರು ಮುಖಕ್ಕೆ ಮಾಸ್ಕ್‌ ಸಹ ಧರಿಸಿರಲಿಲ್ಲ. ತರಕಾರಿ ಮಾರುಕಟ್ಟೆಯಲ್ಲಿ ಪೊಲೀಸ್‌ ಸಿಬ್ಬಂದಿ ಹಲವಾರು ಬಾರಿ ಸೂಚಿಸಿದರೂ ಸಾರ್ವಜನಿಕರು ಮಾತ್ರ ನಿರ್ಲಕ್ಷ್ಯದ ಧೋರಣೆ ಮುಂದುವರಿಸಿದರು.

ಕೊರೋನಾ ಶಂಕಿತರನ್ನು ಕರೆತಂದು PPE ಕಿಟ್‌ ಬೇಕಾಬಿಟ್ಟಿ ಬಿಸಾಡಿದ ಆ್ಯಂಬುಲೆನ್ಸ್‌ ಚಾಲಕ

ಸಗಟು ಮಾರಾಟದಲ್ಲೇ ಗೊಂದಲ:

ಗದಗ- ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ಮನೆಮನೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಹರಸಾಹಸ ಪಟ್ಟು ಪ್ರಾರಂಭ ಮಾಡಿದೆ. ಆದರೆ, ವಾರ್ಡ್‌ಗಳಿಗೆ ತೆರಳುವವರಿಗೆ ಬೆಳಗ್ಗೆ ನಡೆಸುವ ಸಗಟು ಹರಾಜು ಪ್ರಕ್ರಿಯೆಯಲ್ಲಿಯೇ ಸಾಕಷ್ಟುಗೊಂದಲ ಉಂಟಾಗುತ್ತಿದ್ದು, ತರಕಾರಿ ಹರಾಜು ಮಾಡುವ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸುವ ವ್ಯಾಪಾರಸ್ಥರು ಕನಿಷ್ಠ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದಿಲ್ಲ, ತರಕಾರಿ ಮಾರಾಟಕ್ಕೆ ತರುವವರೂ ಸುರಕ್ಷತಾ ಕ್ರಮ ಅನುಸರಿಸುತ್ತಿಲ್ಲ. ಸ್ವಲ್ಪ ನಿರ್ಲಕ್ಷ್ಯ ಮಾಡಿದರೆ ಕಡಿಮೆ ದರ ಸಿಗುತ್ತದೆ ಎಂದು ಅವಸರದಲ್ಲಿ ನಿಯಮ ಪಾಲಿಸುತ್ತಿಲ್ಲ.

ಅವ್ಯವಸ್ಥಿತ ಮಾಂಸ ಖರೀದಿ:

ಭಾನುವಾರವಾಗಿರುವ ಹಿನ್ನೆಲೆಯಲ್ಲಿ ಗದಗ ನಗರದ ಮಟನ್‌ ಮಾರುಕಟ್ಟೆಗೆ ಮಾಂಸಪ್ರಿಯರ ದಂಡೇ ಹರಿದು ಬಂದಿತ್ತು. ಜನಜಂಗುಳಿಯಿಂದ ತುಂಬಿದ್ದ ಮಟನ್‌ ಮಾರುಕಟ್ಟೆಯಲ್ಲೂ ಸಹ ಲಾಕ್‌ಡೌನ್‌ ನಿಯಮ ಪಾಲನೆಯಾಗಲಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಪದೇ ಪದೇ ವಿನಂತಿಸಿಕೊಂಡರೂ ಜನರು ಅಸಡ್ಡೆ ತೋರಿದರು. ಒಮ್ಮೆಲೇ ಜನರು ಮಾಂಸ ಮಾರುಕಟ್ಟೆಗೆ ಮುಗಿಬಿದ್ದ ಹಿನ್ನೆಲೆಯಲ್ಲಿ ದರಲ್ಲಿಯೂ ಸಾಕಷ್ಟುಹೆಚ್ಚಳವಾಗಿ, ಖರೀದಿಗೆ ಬಂದವರಿಗೆ ಶಾಕ್‌ ಆಯಿತು. ಆದರೂ ಅನಿವಾರ್ಯವಾಗಿ ಮಟನ್‌ ಕೆಜಿಗೆ 700, ಚಿಕನ್‌ ಕೆಜಿಗೆ 200, ಫಿಶ್‌ ಕೆಜಿಗೆ 400 ರಂತೆ ಖರೀದಿ ಮಾಡಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಇನ್ನೂ ನಿಗೂಢ:

ಗದಗ ನಗರದ ಒಂದೇ ಪ್ರದೇಶದ ಇಬ್ಬರು ಮಹಿಳೆಯರು, ಓರ್ವ ಪುರುಷನಿಗೆ ಕೊರೋನಾ ದೃಢವಾಗಿದೆ. ಆದರೆ ಅವರಿಗೆ ಸೋಂಕು ಹೇಗೆ ತಗುಲಿದೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಶೋಧನೆಯಲ್ಲಿ ತೊಡಗಿರುವ ಜಿಲ್ಲಾಡಳಿತಕ್ಕೆ ಇನ್ನೂ ಯಾವುದೂ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಇನ್ನು ಆ ಭಾಗದಲ್ಲಿ ವಾಸಿಸುತ್ತಿದ್ದ ಹಲವಾರು ಜನರನ್ನು ಸಾರಿಗೆ ಸಂಸ್ಥೆಯ ಬಸ್‌ಗಳ ಮೂಲಕ ಶನಿವಾರ ತಡರಾತ್ರಿಯೇ ಬೇರೆಡೆ ಸ್ಥಳಾಂತರಿಸಿದ್ದು, ವೃದ್ಧೆ ವಾಸಿಸುತ್ತಿದ್ದ ಮನೆಯ ಸುತ್ತಲ ಭಾಗದಲ್ಲಿ ಸದ್ಯ ಯಾರೊಬ್ಬರೂ ವಾಸಿಸುತ್ತಿಲ್ಲ. ಆ ಎಲ್ಲ ಪ್ರದೇಶಕ್ಕೂ ಔಷಧ ಸಿಂಪಡಿಸಿ ಲಾಕ್‌ ಮಾಡಲಾಗಿದೆ. ಆದರೆ, ಕಾಯಿಲೆ ಮೂಲ ಮಾತ್ರ ಪತ್ತೆಯಾಗಿಲ್ಲ.

click me!