ಶಿಗ್ಗಾಂವಿ: ಜಿಂಕೆ ಹಾವಳಿಗೆ ಅನ್ನದಾತ ಕಂಗಾಲು

By Kannadaprabha News  |  First Published Aug 17, 2023, 11:00 PM IST

ಮೊದಲೇ ಈ ವರ್ಷ ಮುಂಗಾರು ಮಳೆ ತಡವಾಗಿದೆ. ಒಮ್ಮೆ ಬಿತ್ತನೆಯನ್ನು ಮಾಡುವ ರೈತರು 2-3 ಸಲ ಬಿತ್ತನೆ ಮಾಡಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಕಾಡುಪ್ರಾಣಿಗಳ ಹಾವಳಿಯಿಂದ ಆ ನಿರೀಕ್ಷೆ ಎಲ್ಲಿ ಹುಸಿಯಾಗುತ್ತದೆ ಎಂಬ ಆತಂಕ ತಾಲೂಕಿನ ರೈತ ವಲಯವನ್ನು ಕಾಡುತ್ತಿದೆ.


ಬಸವರಾಜ ಹಿರೇಮಠ

ಶಿಗ್ಗಾಂವಿ(ಆ.17):  ಮಲೆನಾಡು ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಗೋವಿನಜೋಳ ಬೆಳೆದ ರೈತರು ನಷ್ಟ ಅನುಭವಿಸುವಂತಾಗಿದ್ದು ಒಂದೆಡೆಯಾದರೆ ಬಯಲು ಸೀಮೆಯಲ್ಲಿ ಜಿಂಕೆಗಳ ಹಾವಳಿಯಿಂದ ತಾಲೂಕಿನ ಅನ್ನದಾತರು ಕಂಗಾಲಾಗಿದ್ದಾರೆ.

Tap to resize

Latest Videos

undefined

ಮೊದಲೇ ಈ ವರ್ಷ ಮುಂಗಾರು ಮಳೆ ತಡವಾಗಿದೆ. ಒಮ್ಮೆ ಬಿತ್ತನೆಯನ್ನು ಮಾಡುವ ರೈತರು 2-3 ಸಲ ಬಿತ್ತನೆ ಮಾಡಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಕಾಡುಪ್ರಾಣಿಗಳ ಹಾವಳಿಯಿಂದ ಆ ನಿರೀಕ್ಷೆ ಎಲ್ಲಿ ಹುಸಿಯಾಗುತ್ತದೆ ಎಂಬ ಆತಂಕ ತಾಲೂಕಿನ ರೈತ ವಲಯವನ್ನು ಕಾಡುತ್ತಿದೆ.

ಹಾವೇರಿ: 15 ದಿನದಲ್ಲಿ 3 ರೈತರ ಆತ್ಮಹತ್ಯೆ

ಬೆಳೆದು ನಿಂತ ಬೆಳೆಗಳು ಜಿಂಕೆಗಳ ಚೆಲ್ಲಾಟದಿಂದ ಹಾಳಾಗುತ್ತಿದೆ. ಹೀಗಾಗಿ ಜಿಂಕೆಗಳು ರೈತರಿಗೆ ಮಾತ್ರ ಶಾಪವಾಗಿ ಪರಿಣಮಿಸಿವೆ. ಜಿಂಕೆಗಳು ಬೆಳೆಗಳನ್ನು ತಿನ್ನುವುದಕ್ಕಿಂತ ಹೆಚ್ಚು ಚೆಲ್ಲಾಟವಾಡುತ್ತಾ ಹೊಲದ ತುಂಬೆಲ್ಲಾ ಓಡಾಡುತ್ತಿರುವುದರಿಂದ ಬೆಳೆಗಳು ನೆಲಕ್ಕೆ ಬಿದ್ದು ಹಾಳಾಗುತ್ತಿದೆ. ದಿನವಿಡೀ ರೈತರು ಹೊಲಗಳಲ್ಲಿ ಜಿಂಕೆಗಳನ್ನು ಕಾಯುವುದೇ ಒಂದು ಕಾಯಕವಾಗಿದೆ. ಜಿಂಕೆಗಳ ಹಾವಳಿಯನ್ನು ತಪ್ಪಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.

ಕಡಿಮೆ ಖರ್ಚಿನ ಬೆಳೆಯೆಂದು ರೈತರು ಹೆಚ್ಚು ಸೋಯಾಬಿನ್‌, ಹೆಸರು, ಉದ್ದು ಬಿತ್ತನೆ ಮಾಡಿದ್ದಾರೆ. ಈ ಬೆಳೆಗಳು ಜಿಂಕೆಗಳಿಗೂ ಪ್ರಿಯವಾಗಿವೆ. ಹಾಗಾಗಿ ಶಿಗ್ಗಾಂವಿ ತಾಲೂಕಿನ ಬಂಕಾಪುರ, ಕುಂದೂರು, ಹಿರೇಮಲ್ಲೂರ, ಚಿಕ್ಕಮಲ್ಲೂರ, ಹನುಮರಹಳ್ಳಿ, ನೆಲ್ಲೂರ, ಗುಂಡೂರ, ಕಂಕಣವಾಡ, ಗಂಜೀಗಟ್ಟಿ, ಬನ್ನಿಕೊಪ್ಪ, ಬನ್ನೂರ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಜಿಂಕೆಗಳು ಗುಂಪು ಗುಂಪಾಗಿ ಪೈರನ್ನು ಹಾಳು ಮಾಡುತ್ತಿವೆ. ಈ ಭಾಗದ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.

ಇನ್ನೊಂದೆಡೆ ಮಲೆನಾಡು ಪ್ರದೇಶದ ಅರಣ್ಯ ಅಂಚಿನಲ್ಲಿರುವ ಪ್ರದೇಶದಲ್ಲಿ ವಿವಿಧ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದೆ. ರೈತರು ಹಗಲು-ರಾತ್ರಿ ಎನ್ನದೆ ಗೋವಿನಜೋಳ ಬೆಳೆಯನ್ನು ಕಾಯುವಂತಹ ಪರಿಸ್ಥಿತಿ ಇದೆ. ಕಾಡು ಹಂದಿ, ಯೇದು (ಮುಳ್ಳು ಹಂದಿ) ಮಾತ್ರ ಯಾರಿಗೂ, ಯಾವುದಕ್ಕೂ ಹೆದರುವುದಿಲ್ಲ. ಆದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಎನ್ನುವುದು ರೈತರ ಆತಂಕವಾಗಿದೆ.

ಶಿಗ್ಗಾಂವಿ: ರಸ್ತೆ ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು

ಪ್ರತಿವರ್ಷ ರೈತರು ಇದೇ ರೀತಿ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಕೃಷಿ ಇಲಾಖೆ ಮತ್ತು ಅರಣ್ಯ ಇಲಾಖೆ ಗಂಭೀರ ಚಿಂತನೆ ನಡೆಸಬೇಕು ಎಂಬುದು ರೈತರ ಆಗ್ರಹವಾಗಿದೆ.
ಮುಂಗಾರಿನ ಬಿತ್ತನೆಯಿಂದ ಹಿಡಿದು ಹಿಂಗಾರಿನ ಬೆಳೆ ಕೊಯ್ಲಿನವರೆಗೂ ಹಗಲಿರುಳು ಕಾಡುಪ್ರಾಣಿಗಳನ್ನು ಹಗಲು ರಾತ್ರಿ ಪಾಳೆಯಲ್ಲಿ ಕಾಯುವಂತಾಗಿದೆ. ಬಯಲು ಸೀಮೆಯಲ್ಲಿ ಜಿಂಕೆ ಕಾಯುವುದು ನಮಗೆ ಒಂದು ಹೆಚ್ಚುವರಿ ಕೆಲಸವಾಗಿದೆ. ಜಿಂಕೆಗಳ ಹಾವಳಿಯಿಂದ ರೈತರು ಬೆಳೆ ಕಳೆದುಕೊಳ್ಳುವಂತಾಗಿದೆ. ಹಲವು ವಷÜರ್‍ಗಳಿಂದ ರೈತರು ಜಿಂಕೆಗಳ ಹಾವಳಿಗೆ ಬೇಸತ್ತು ಹೋಗಿದ್ದಾರೆ. ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಜಿಂಕೆಗಳ ಹಾವಳಿ ತಪ್ಪಿಸಲು ಮುಂದಾಗಬೇಕಾಗಿದೆ ಎಂದು ಕುನ್ನೂರಿನ ರೈತ ನಿಂಗಪ್ಪ ಎಸ್‌. ದೊಡ್ಡಮನಿ ತಿಳಿಸಿದ್ದಾರೆ.

ಜಮೀನಿನಲ್ಲಿ ಜಿಂಕೆಗಳಿಂದ ಹಾಗೂ ಕಾಡಂಚಿನಲ್ಲಿ ಕಾಡು ಹಂದಿಗಳ ಕಾಟದಿಂದ ಆಗುವ ಹಾನಿಗೆ ಅರಣ್ಯ ಇಲಾಖೆಯ ಮೂಲಕ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ಹಾನಿಗೊಳಗಾದ ರೈತರು ಹಾನಿಯ ಕುರಿತು ಅರಣ್ಯ ಇಲಾಖೆಗೆ ಅಗತ್ಯ ದಾಖಲಾತಿಗಳೊಂದಿಗೆ ಜಿಪಿಎಸ್‌ ಪೋಟೊದೋಂದಿಗೆ ಅರ್ಜಿ ಸಲ್ಲಿಸಿದರೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ದುಂಡಸಿ ವಲಯ ಅರಣ್ಯಾಧಿಕಾರಿ ರವಿ ಎಂ.ಪಿ. ತಿಳಿಸಿದ್ದಾರೆ. 

click me!