ಆರಿದ್ರಾ ನೀಗಿಸುವುದೇ ಕಲಬುರಗಿ ಜಿಲ್ಲೆಯ ಮಳೆ ದಾರಿದ್ರ್ಯ?

By Kannadaprabha News  |  First Published Jun 25, 2023, 8:30 PM IST

ಜೂ.22ರಿಂದ ಆರಂಭವಾಗಿರುವ ಆರಿದ್ರಾ ಮಳೆ ಜು.4ರೊಳಗೆ ಸುರಿದು ಕೊರತೆ ನೀಗಿಸಲಿ, ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ, ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ, ಮಳೆ ಕೊರತೆಯಿಂದಾಗಿ ತೊಗರಿ ಕಣಜ ಕಲಬುರಗಿ ಜಿಲ್ಲೆ ರೈತರ ಸಮೂಹದಲ್ಲಿ ಭಾರಿ ಚರ್ಚೆ 


ಶೇಷಮೂರ್ತಿ ಅವಧಾನಿ

ಕಲಬುರಗಿ(ಜೂ.25): ‘ಹೊಲಾ ಹಸನ ಮಾಡ್ಕೊಂಡು ಮಳೆ ದಾರಿ ಕಾಯ್ಕೊಂತ ಕುಂತೀವಿ, ತಿಂಗಳಾಯ್ತು ಮಳೆರಾಯ ನಾಪತ್ತಾ ಆಗ್ಯಾನ್ರಿ. ಮಿರ್ಗಾ ಮಿಂಚಿ ಬರಬೇಬೇಕಿದ್ದ ಮಳಿ ಇನ್ನೂ ಪತ್ತಾ ಇಲ್ಲ, ಹೆಸರ, ಉದ್ದ ಹಾಕಿ ಮುಂಗಾರು ಹಣದ ಬೆಳೆ ಬೆಳೆದು ಜೇಬು ಭಾರವಾಗಿಸಿಕೊಳ್ಳೋ ನಮ್ಮ ಯೋಚನೆ, ಯೋಜನೆ ಮಳೆರಾಯನಿಂದಾಗಿ ಉಲ್ಟಾಹೊಡೆದಿದೆ. ನಮ್ಮ ಜೇಬು ಖಾಲಿಯಾಗಿದೆ’.

Tap to resize

Latest Videos

undefined

ಮುಂಗಾರು ವಿಳಂಬವಾಗಿ ಕಂಗಾಲಾಗಿರುವ ಕಲಬುರಗಿ ರೈತರ ಗೋಳಿನ ಮಾತುಗಳಿವು. ಹೊಲ, ಗದ್ದೆ ಸ್ವಚ್ಛಮಾಡಿಕೊಂಡು ಕುಂತಿರೋ ರೈತರು ಮಳೆ ಬಂದ ಮರುಕ್ಷಣವೇ ಹೆಸರು, ಉದ್ದು, ಅಲಸಂದಿ ಬಿತ್ತೋ ಸಿದ್ಧತೆಯಲ್ಲಿದ್ದಾರೆ. ಆದರೆ ಸಿದ್ಧ​ರಾ​ಗಿ ತಿಂಗಳಾದ್ರೂ ಮಳೆ ಬಾರ​ದೆ ರೈತ ಸಮೂಹದಲ್ಲಿ ಭಾರಿ ದಿಗಿಲು ಉಂಟಾಗಿದೆ.

ಕಲಬುರಗಿ ರೈತರ ಜಮೀನಿನಲ್ಲಿ ಲ್ಯಾಂಡ್‌ ಆದ ತರಬೇತಿ ವಿಮಾನ: ಪೈಲಟ್ಸ್‌ ಸೇಫ್‌

‘ನನ್ನ ನಾಲ್ಕೂವರೆ ಹೊಲ್ದಾಗ ಹೆಸರ, ಉದ್ದ ಬಿತ್ತಿ ರೊಕ್ಕಾ ಮಾಡ್ಕೋಬೇಕು ಅಂತ ಅನ್ಕೊಂಡದ್ದೆ. ಹೊಲ ಹಸನ ಮಾಡಿ ಮುಗಲ ನೋಡ್ಕೊಂತ ಕುಂತೀನಿ, ಮೋಡಗಳು ಕಾಣವಲ್ತು, ಮಳಿ ಹನಿವಲ್ತು, ಎಡ್ಡು ಎತ್ಗೋಳು, 1 ಆಕಳು, ಮನ್ಯಾಗ 7 ಮಂದಿ, ಸಣ್ಣ ರೈತ ನಾನು, ನನ್ನ ಇಪ್ಲ ನನಗೇ ಗೊತ್ತು, ಮಳಿ ಹೀಂಗ ಹೋದ್ರ ನಮ್ಮಂಥೋರು ಏನ್‌ ಮಾಡ್ಬೇಕು?’ ಎಂದು ಗೋಳಾ​ಡು​ತ್ತಾ​ರೆ ಕೇಸರಟಗಿ ರೈತ ಕೇಶುರಾಯ.
‘ಕನ್ನಡಪ್ರಭ’ ಜೊತೆ ಮಾತನಾಡಿದ ಕೇಶುರಾಯ, ಈಗ ಮಳಿ ಬಂದ್ರೂ ಹೆಸರು, ಉದ್ದು, ಅಲಸಂದಿ ಆಗೋದಿಲ್ಲ, ಅದೇನಿದ್ರೂ ತೊಗರಿ ಬಿತ್ತಬೇಕು. ಇನ್ನ ಮಳಿ ಲೇಟ್‌ ಆದ್ರ ತೊಗರಿನೂ ಬರೋದಿಲ್ಲ, ಸೂರ್ಯಕಾಂತಿಗೆ ಮೊರೆ ಹೋಗಬೇಕಷ್ಟೆ’ ಎಂದರು.

ಮಳೆ - ಮೇವು- ಬಿತ್ತನೆ ಎಲ್ಲವೂ ಅಯೋಮಯ

ಜಿಲ್ಲೆಯಲ್ಲಿ ವಾಡಿಕೆಯಂತೆ ಜೂನ್‌ನಲ್ಲಿ 74 ಮಿಮೀ ಮಳೆ ಸುರಿಯಬೇಕಿತ್ತು. ಸುರಿದದ್ದು ಕೇವಲ 24 ಮಿಮೀ. ಮುಂಗಾರು ಮಳೆ ವಿಳಂಬ ಕಾರಣ ಜಿಲ್ಲೆಯಲ್ಲಿ 8.87 ಲಕ್ಷ ಹೆಕ್ಟೇರ್‌ ಪೈಕಿ 25,928 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. 28,300 ಕ್ವಿಂಟಲ್‌ ಬೀಜ ದಾಸ್ತಾನಿದೆ. 27 ಸಾವಿರ ಹೆಕ್ಟೇರ್‌ ಪ್ರದೇಶ ಪೈಕಿ ಶೇ.4ರಷ್ಟುಪ್ರದೇಶದಲ್ಲಿ ಮಾತ್ರ ತೋಟಗಾರಿಕೆ ಬೆಳೆ ಬೆಳೆಯಲಾಗಿದೆ. ಜೋಳದ ಕಣಕಿ 1 ಚಕ್ಕಡಿಗೆ 4 ರಿಂದ 5 ಸಾವಿರ ರುಪಾಯಿ ಬೆಲೆ ಬಾಳುತ್ತಿದೆ. ಹಸಿ ಮೇವು ಕೊರತೆ ಕಾಡಲಾರಂಭಿಸಿದೆ. 

ಕಳೆದ ಬಾರಿ ಅತಿ​ವೃಷ್ಟಿ, ಈ ಬಾರಿ ಅನಾ​ವೃಷ್ಟಿ, ಆತಂಕದಲ್ಲಿ ರೈತರು!

ಬತ್ತುತ್ತಿವೆ ಕೊಳವೆ, ತೆರೆದ ಬಾವಿ

ಜಿಲ್ಲೆಯಲ್ಲಿ ಕೊಳವೆ ಬಾವಿ, ತೆರೆದ ಬಾವಿ ಹಾಗೂ ಕೆರೆಗಳಲ್ಲಿ ನೀರಿನ ಪ್ರಮಾಣ ತಗ್ಗುತ್ತಿದೆ. ಕಲಬುರಗಿ ನಗರದಲ್ಲಿರುವ ಅಪ್ಪನ ಕೆರೆಯಿಂದಲೇ ಈ ಜಲಮಟ್ಟಕುಸಿತ ಶುರುವಾಗಿದ್ದರಿಂದ ಜಿಲ್ಲೆಯಲ್ಲಿ ಬಹುತೇಕ ಕೆರೆಗಳ ಜಲರಾಶಿ ಬತ್ತುತ್ತಿದೆ. ಇದರಿಂದಾಗಿ ಸುತ್ತಲಿನ ಬಾವಿ, ಬೋರ್‌ವೆಲ್‌ಗಳಿಗೂ ಗ್ರಹಣ ಅಮರುತ್ತಿದೆ. ಕೇಸರಟಗಿ ಸುತ್ತಮುತ್ತ ಈಗಾಗೇ 15 ರಿಂದ 20 ಬೋರ್‌ವೆಲ್‌ ಒಣಗಿ ನಿಂತಿವೆ.

ಕುಡಿಯುವ ನೀರಿಗೂ ತತ್ವಾರ

ಗ್ರಾಮೀಣ ಕುಡಿಯುವ ನೀರಿನ ಮೇಲೂ ಮಳೆ ಪ್ರಭಾ​ವ ಉಂಟಾಗಿದೆ. ಆಳಂದ, ಅಫಜಲ್ಪುರ, ಕಲಬುರಗಿ ಭಾಗದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಗೊಬ್ಬೂರ್‌, ತೆಗ್ಗೆಳ್ಳಿ ಸೇರಿದಂತೆ ಹಲವೆಡೆ ನೀರಿನ ಸಮಸ್ಯೆ ಉಲ್ಬಣಿಸಿದೆ. ಅಫಜಪ್ಪುರ ಪಟ್ಟಣ ಮತ್ತು ತಾಲೂಕಿನ ಗ್ರಾಮೀಣ ವಿಭಾಗಕ್ಕೆ ಕುಡಿಯುವ ನೀರು ಪೂರೈಕೆಗೆ ಸೊನ್ನ ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡಬೇಕಿದ್ದು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ.

click me!