ಬೆಂಗಳೂರು(ಏ.13): ಕೊರೋನಾದಿಂದಾಗಿ ರೈತರ ಗೋಳು ಮುಗಿಯುತ್ತಿಲ್ಲ. ರಾಜ್ಯದಲ್ಲಿ ಬೆಳೆ ಮಾರಾಟ ಮಾಡಲು ಆಗದೆ ರೈತರು ಬೆಳೆ ನಾಶ ಮಾಡಿದ ಹಲವು ಘಟನೆಗಳು ಭಾನುವಾರವೂ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಅವರೆದಾಳು ಗ್ರಾಮದ ರೈತ ಮಹಿಳೆ ಭಾಗೀರಥಿ 3 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಚೆಂಡು ಹೂಗಳನ್ನು ಟ್ರ್ಯಾಕ್ಟರ್ ಮೂಲಕ ನೆಲಸಮಗೊಳಿಸಿದ್ದಾರೆ. ಸರ್ಕಾರ ಪರಿಹಾರ ನೀಡದಿದ್ದರೆ ಆತ್ಮಹತ್ಯೆಯೊಂದೇ ದಾರಿ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದ ರೈತ ರಮೇಶಗೌಡ ಬಿ.ದ್ಯಾಮನಗೌಡ್ರ ಎರಡು ಎಕರೆ ಹೊಲದಲ್ಲಿ ಬೆಳೆದಿದ್ದ ಪಪ್ಪಾಯಿ ಬೆಳೆ ನಾಶಪಡಿಸಿದ್ದಾರೆ. ಧಾರವಾಡ ತಾಲೂಕಿನ ಬೆನಕನಕಟ್ಟಿಗ್ರಾಮದಲ್ಲಿ ಶಂಕರಪ್ಪ ಯರಗಂಬಳಿಮಠ ಅವರು ಎದೆ ಎತ್ತರಕ್ಕೆ ಬೆಳೆದ ಸುಮಾರು 2 ಎಕರೆ ಪ್ರದೇಶದ ಸೇವಂತಿಗೆ ಹೂವನ್ನು ನಾಶಪಡಿಸಿದರು. ಚಿಕ್ಕಮಗಳೂರು ತಾಲೂಕಿನ ಅಂಡುವಾನೆ ಗ್ರಾಮದ ರೈತರೊಬ್ಬರು 400ಕ್ಕೂ ಹೆಚ್ಚು ಹಲಸಿನ ಹಣ್ಣನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ತಾನು ಬೆಳೆದ ಹುರುಳಿ ಹಂಚಿ ಮಾದರಿಯಾದ ರೈತ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕ್ಯಾದಿಗುಂಟೆ ಗ್ರಾಮದ ರೈತ ಧನಂಜಯ 4 ಎಕರೆಯಲ್ಲಿ ಬೆಳೆದಿರುವ 50 ಟನ್ ಬೂದು ಕುಂಬಳಕಾಯಿಯನ್ನು ಮಾರಲು ಆಗಿಲ್ಲ. ತೋಟಗಾರಿಕೆ ಇಲಾಖೆಗೆ ತಿಳಿಸಿದರೂ ಧಾವಿಸಿಲ್ಲ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬನ್ನಹಳ್ಳಿ ಗ್ರಾಮದ ರೈತ ಶಿವಲಿಂಗೇಗೌಡ ಅವರು ಪಾಲಿಹೌಸ್‌ನಲ್ಲಿ ಬೆಳೆದಿದ್ದ ದಪ್ಪಮೆಣಸಿನಕಾಯಿ ಹಾಗೆಯೇ ಕೊಳೆಯುತ್ತಿದೆ. ಮಂಡ್ಯದಲ್ಲಿ ಭಾರತೀನಗರದರಲ್ಲಿ ಹತ್ತಾರು ಎಕರೆಯಲ್ಲಿ ಕ್ಯಾಪ್ಸಿಕಮ್ ಬೆಳೆದ ರೈತರು ವ್ಯಾಪಾರ ಇಲ್ಲದೇ ಹೊಲದಲ್ಲಿಯೇ ಬಿಟ್ಟಿದ್ದಾರೆ.