Fake Cotton Seed: ನಕಲಿ ಹತ್ತಿ ಬೀಜ ಸಂಶಯ: ಸಂಕಷ್ಟದಲ್ಲಿ ಅನ್ನದಾತ..!

By Kannadaprabha NewsFirst Published Dec 23, 2021, 5:54 AM IST
Highlights

*   ಹತ್ತಿ ಬೀಜ ಕೋಟಾ ಸಂಶಯ; ವರದಿಯತ್ತ ರೈತರ ಚಿತ್ತ
*   ಎಕರೆಗೆ 10-12ಕ್ವಿಂಟಲ್‌ ಅಲ್ಲ, 3-4 ಕ್ವಿಂಟಲ್‌ ಹತ್ತಿ ಸಿಗೋದು ಡೌಟು
*   ಹುಬ್ಬಳ್ಳಿ, ಗದಗ, ಹಾವೇರಿಯಲ್ಲೂ ಸಮಸ್ಯೆ
 

ಮಯೂರ ಹೆಗಡೆ
ಹುಬ್ಬಳ್ಳಿ(ಡಿ.23):
 ನಿರೀಕ್ಷಿತ ಹತ್ತಿ ಬೆಳೆ ಬಾರದ ಕಾರಣ ಪೂರೈಕೆಯಾದ ಬಿಟಿ ಹತ್ತಿ ತಳಿ ಬೀಜದ ಗುಣಮಟ್ಟದ ಕುರಿತು ರೈತರು(Farmers) ದೂರಿದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ(Department of Agriculture) ತನಿಖೆಗಾಗಿ ಮಾದರಿ ಬೀಜ ಪಡೆದು ಒಂದು ತಿಂಗಳಾದವರೂ ವರದಿ ಬಂದಿಲ್ಲ.

ಒಂದು ಕಡೆ ನವೆಂಬರ್‌ ಅಕಾಲಿಕ ಮಳೆಗೆ(Untimely Rain) ಹತ್ತಿ ಬೆಳೆ(Cotton Crop Damage) ನಾಶವಾಗಿದ್ದರೆ, ಇನ್ನೊಂದು ಕಡೆ ನಿರೀಕ್ಷಿತ ಬೆಳೆ ಬಾರದೆ ರೈತರು ಕಂಗಾಲಾಗಿದ್ದಾರೆ. ಮಹಿಕೋ ಕಂಪನಿಯ ಬಿಟಿ ಹತ್ತಿ ಎಂಆರ್‌ಸಿ 73-83, ಬಿಟಿ 73-51 ತಳಿ ಹತ್ತಿ ಬಿತ್ತಿದವರು ತಲೆ ಮೇಲೆ ಕೈ ಹೊತ್ತಿದ್ದಾರೆ. ಹುಬ್ಬಳ್ಳಿಯ ಕಿರೇಸೂರ, ಹೆಬಸೂರು, ಕರ್ಲವಾಡ, ಛಬ್ಬಿ, ಕೊಟಗೊಂಡಹುಣಸಿಯ 2 ಸಾವಿರ ರೈತರು, ಕುಂದಗೋಳ ತಾಲೂಕು, ಗದಗದ ಶಿರಹಟ್ಟಿ, ಹಾವೇರಿಯ ಸವಣೂರು ರೈತರಿಗೆ ಈ ಸಮಸ್ಯೆ ಉಂಟಾಗಿದೆ.

ಯಾದಗಿರಿ: ನಕಲಿ ಹತ್ತಿಬೀಜ ಮಾರಾಟ, ಮುಂಚೂಣಿಯಲ್ಲಿ ಗುರುಮಠಕಲ್‌ ?

ರೈತ ಸೋಮರಡ್ಡಿ ಸೋಮನಗೌಡರ, ಕಳೆದ ಜೂನ್‌ ತಿಂಗಳಲ್ಲಿ ಬಿತ್ತಿದ್ದೇವೆ. ಕೆಲವೆಡೆ ಸಸಿ ಚೆನ್ನಾಗಿ ಬೆಳೆದಿವೆ. ಇನ್ನು ಕೆಲವೆಡೆ ಸಸಿ ಮೊಣಕಾಲು ಎತ್ತರಕ್ಕೂ ಬೆಳೆದಿಲ್ಲ. ಅದರಲ್ಲೂ ಸಸಿಗೆ 80-120 ಕಾಯಿ ಬದಲಾಗಿ, ಕೇವಲ 8-10 ಕಾಯಿಗಳು ಬಂದಿವೆ. ಅವು ಕೂಡ ಇರುಕಾಗಿವೆ. ಕಳೆದ ವರ್ಷ ಕನಿಷ್ಠ 12 ಕ್ವಿಂಟಲ್‌ ಹತ್ತಿ ಬಂದಿತ್ತು. ಈ ಬಾರಿ 2-4 ಕ್ವಿಂಟಲ್‌ ಹತ್ತಿ ಬಂದರೆ ಹೆಚ್ಚು ಎಂಬಂತಾಗಿದೆ ಎಂದು ಅವಲತ್ತುಕೊಂಡರು.

ಒಂದು ಎಕರೆಗೆ ಬಿತ್ತನೆ, ಔಷಧ ಸಿಂಪಡಣೆ, ಕೂಲಿ ಸೇರಿ ಕನಿಷ್ಠ 40 ಸಾವಿರ ಖರ್ಚಾಗಿದೆ. ಮಳೆ ಆಗಿ ಒಂದಿಷ್ಟುವ್ಯತ್ಯಾಸ ಆಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಕಳೆದ 20 ವರ್ಷದ ಅವಧಿಯಲ್ಲಿ ಇಷ್ಟುಕನಿಷ್ಠ ಇಳುವರಿಯನ್ನು ನೋಡಿರಲಿಲ್ಲ. ಕಳೆದ ವರ್ಷ ಇದೇ ಬೀಜ 10-15 ಕ್ವಿಂಟಲ್‌ ಇಳುವರಿ ಬಂದಿತ್ತು. ಅಗತ್ಯ ಕ್ರಮಗಳನ್ನು ಕೈಗೊಂಡರೂ ಇಳುವರಿ ಬಂದಿಲ್ಲ ಏನರ್ಥ? ಎಂದು ಇನ್ನೊಬ್ಬ ರೈತ ಗೋವಿಂದಪ್ಪ ಪಾಮಾಲಿ ಹೇಳಿದರು.

ವರದಿ ನೀಡಿಲ್ಲ:

ಒಂದು ತಿಂಗಳ ಹಿಂದೆಯೆ ಸ್ಥಳೀಯ ರೈತರು ಕೃಷಿ ಸಹಾಯಕ ನಿರ್ದೇಶಕರಿಗೆ ದೂರು(Complaint) ನೀಡಿದ ಪರಿಣಾಮ ವಿಜ್ಞಾನಿಗಳನ್ನು ಕರೆಸಿ ಹೊಲಗಳಲ್ಲಿ ಸಮೀಕ್ಷೆ(Survey) ಮಾಡಿಸಲಾಗಿತ್ತು. ಮಾದರಿ ಬೀಜಗಳನ್ನು ಧಾರವಾಡ(Dharwad) ಪ್ರಯೋಗಾಲಯಕ್ಕೆ(Lab) ತೆಗೆದುಕೊಂಡು ಹೋಗಿದ್ದರು. ಈವರೆಗೂ ಅದರ ವರದಿ ಬಂದಿಲ್ಲ. ಮೈಕೊ ವಿತರಿಸಿರುವ ಬೀಜದ ಗುಣಮಟ್ಟದ ಸತ್ಯಾಸತ್ಯತೆ ಮುಚ್ಚಿಡುವ ಪ್ರಯತ್ನ ಆಗುತ್ತಿದೆಯೆ ಎಂದು ರೈತ ಸುಭಾಷ ಅವ್ವಣ್ಣವರ ಪ್ರಶ್ನಿಸಿದರು.

ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಐ.ಬಿ., ಈಗಾಗಲೆ ಪರೀಕ್ಷೆಗೆ ಬೀಜ, ಸಸಿಯನ್ನು ವಿಜ್ಞಾನಿಗಳು ಪಡೆದಿದ್ದಾರೆ. ಜಿಲ್ಲೆಯಲ್ಲಿ ಎಲ್ಲೆಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂಬ ಅಧ್ಯಯನ ನಡೆದಿದೆ. ರೈತರಿಂದ ಮಾಹಿತಿ ಪಡೆಯಲಾಗುತ್ತಿದೆ. ಕೃವಿವಿ ಈ ಕುರಿತು ಪರಿಶೀಲನೆ ಕೈಗೊಂಡಿದ್ದು ವರದಿ ನೀಡಲಿದೆ ಎಂದರು.

ನಮಗೆ ಪೂರೈಕೆಯಾದ ಬೀಜವನ್ನು ಕೇಳಿದ ರೈತರಿಗೆ ನೀಡಿದ್ದೇವೆ ಎಂದು ಸ್ಥಳೀಯ ರೈತರಿಗೆ ಹತ್ತಿ ಬೀಜ ವಿತರಿಸಿದ ವಿಜಯಲಕ್ಷ್ಮೀ ಸೀಡ್ಸ್‌ ಕಾರ್ಪೋರೆಷನ್‌ ತಿಳಿಸಿದರು.

Karnataka Rains: ಅಕಾಲಿಕ ಮಳೆಗೆ ಹತ್ತಿ ಬೆಳೆಗಾರರ ಬದುಕು ಮೂರಾಬಟ್ಟೆ..!

ಮಳೆ ಕಾರಣವಾದರೆ ಬೇರೆ ಕಂಪನಿಯ ಬೀಜ ಪಡೆದು ಬಿತ್ತನೆ ಮಾಡಿದವರಿಗೇಕೆ ಉತ್ತಮ ಇಳುವರಿ ಬಂದಿದೆ?. ಎಂಆರ್‌ಸಿ 73-83 ಬಿತ್ತಿದವರಿಗೆ ಕನಿಷ್ಠ ಇಳುವರಿ ಬರಲು ಕಾರಣವೇನು? ಅಂತ ಕಿರೇಸೂರ ರೈತ ಸುಭಾಷ ಅವ್ವಣ್ಣವರ ಪ್ರಶ್ನಿಸಿದ್ದಾರೆ.  

ಶಿರಹಟ್ಟಿ ತಾಲೂಕಿನಲ್ಲಿ ಹತ್ತಿ ಬೆಳೆದ ಶೇ. 75 ರಷ್ಟುರೈತರು ಎಂಆರ್‌ಸಿ 73-83, ಬಿಟಿ 73-51 ಹತ್ತಿ ಬಿತ್ತಿದ್ದಾರೆ. ಆದರೆ, ಕಳಪೆ ಬೀಜದ ಪರಿಣಾಮ ನಿರೀಕ್ಷಿತ ಬೆಳೆ ಬಂದಿಲ್ಲ. ರೈತರಿಗೆ ಅಪಾರ ನಷ್ಟವಾಗಿದೆ ಅಂತ ಶಿರಹಟ್ಟಿ ಮಚೇನಹಳ್ಳಿ ರೈತ ನಾರಾಯಣ ಮೂಲಿಮನಿ ಹೇಳಿದ್ದಾರೆ.  

ಹತ್ತಿ ಕಳಪೆ ಬೀಜದ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಮಾದರಿ ಬೀಜ ಪಡೆದು ಸಂಶೋಧನೆಗೆ ಒಳಪಡಿಸಲಾಗಿದೆ. ಧಾರವಾಡ ಕೃಷಿ ವಿವಿ ವಿಜ್ಞಾನಿಗಳು ಇದರ ಕುರಿತು ವರದಿ ನೀಡಿದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ ಅಂತ ಧಾರವಾಡ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ.ಬಿ ತಿಳಿಸಿದ್ದಾರೆ.  
 

click me!