ನವಲಗುಂದ: ಹೆಸರು ಬೀಜಕ್ಕಾಗಿ ರೈತರ ಅಲೆದಾಟ

By Kannadaprabha NewsFirst Published Jun 7, 2021, 2:06 PM IST
Highlights

* ಧಾರವಾಡ ಜಿಲ್ಲೆಯ ತಾಲೂಕಿಗೆ ಬೇಕಿದೆ ಹೆಚ್ಚುವರಿ 300 ಕ್ವಿಂಟಲ್‌ ಹೆಸರು
* ಉದ್ದು, ತೊಗರಿ, ಶೇಂಗಾ, ಗೋವಿನಜೋಳ ಬೀಜಕ್ಕೆ ಕೊರತೆಯಿಲ್ಲ 
* ಧಾರವಾಡ ಹೆಸರು ಬೀಜ ಮತ್ತು ನಿರ್ಮಲಾ ಹೆಸರು ಬೀಜಕ್ಕೆ ಹೆಚ್ಚಿನ ಬೇಡಿಕೆ 
 

ಈಶ್ವರ ಜಿ. ಲಕ್ಕುಂಡಿ

ನವಲಗುಂದ(ಜೂ.07): ಬಿತ್ತಲು ಹೆಸರು ಬೀಜ ಖರೀದಿಗೆ ಪಟ್ಟಣಕ್ಕೆ ಬಂದ ರೈತರು ನಿರಾಸೆಯ ಮೊಗ ಹೊತ್ತು ತೆರಳಿದ್ದಾರೆ. ಕಳೆದ ವರ್ಷಕ್ಕಿಂತ 70 ಕ್ವಿಂಟಲ್‌ ಹೆಸರು ಬೀಜವನ್ನು ಕೃಷಿ ಇಲಾಖೆ ಒದಗಿಸಿದ್ದರೂ ಇನ್ನೂ ಸರಿ ಸುಮಾರು 300 ಕ್ವಿಂಟಲ್‌ ಅಗತ್ಯವಿದೆ.

ಹೆಸರು ಬೀಜ ಸಿಗುತ್ತೋ ಇಲ್ಲವೋ ಎಂಬ ಆತಂಕದಲ್ಲಿ ಪಟ್ಟಣದ ರೈತ ಸಂರ್ಪಕ ಕೇಂದ್ರಕ್ಕೆ ಶನಿವಾರ ಬೆಳಗ್ಗೆ 6 ಗಂಟೆಗೆ ರೈತರು ದೌಢಾಯಿಸಿದ್ದರು. ಆದರೆ, 11 ಗಂಟೆ ಸುಮಾರಿಗೆ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಖಾಲಿಯಾಗಿತ್ತು.
ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಮೊದಲು 7 ಟನ್‌, ಬಳಿಕ 20 ಟನ್‌ ಧಾರವಾಡ ಹೆಸರು ( ಬಿಜಿಎಸ್‌-9 )ಬೀಜ ಪೂರೈಕೆಯಾಗಿತ್ತು. ಆದರೆ ಇವೆಲ್ಲವೂ ಈಗ ಖಾಲಿಯಾಗಿದೆ. ಉತ್ತಮ ಮಳೆ ಸುರಿದಿದ್ದರಿಂದ ಹೆಸರು ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ. ಕೇಂದ್ರಕ್ಕೆ ತೆರಳಿದ ರೈತರಿಗೆ ಸೋಮವಾರ ಬರುವಂತೆ ಸಿಬ್ಬಂದಿ ಹೇಳಿ ಕಳಿಸುತ್ತಿದ್ದಾರೆ. ಹೀಗಾಗಿ ರೈತರು ನಿರಾಸೆಯಲ್ಲಿ ವಾಪಸ್‌ ಹೋಗುತ್ತಿದ್ದಾರೆ.

ಅದರಲ್ಲೂ ಧಾರವಾಡ ಹೆಸರು ಬೀಜ ಮತ್ತು ನಿರ್ಮಲಾ ಹೆಸರು ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ಪಟ್ಟಣ ಮತ್ತು ತಾಲೂಕಿನ ಕೆಲವು ರೈತರು ತಮ್ಮ ಮನೆಯಲ್ಲಿ ಕಳೆದ ವರ್ಷದ ಶೇಖರಣೆ ಮಾಡಿಟ್ಟ ಹೆಸರು ಬೀಜಗಳನ್ನು 8 ಸೇರಿಗೆ (1 ಚಿಟ್‌) 800 ರಿಂದ 1 ಸಾವಿರ ವರೆಗೂ ಮಾರಾಟ ಮಾಡುತ್ತಿರುವುದು ಕಂಡುಬಂತು. ಕಳೆದ ವರ್ಷ ಇದಕ್ಕೆ 700-700 ಬೆಲೆಯಿತ್ತು. ಬೆಲೆ ಹೆಚ್ಚಾಗಿದ್ದರ ಬಗ್ಗೆ ರೈತರು ಪ್ರಶ್ನಿದರು. ನಿರ್ಮಲಾ ತಳಿಯ ಬೀಜಗಳೆಂದು ಹೇಳಿದ ಬಳಿಕ ರೈತರು ತೆಗೆದುಕೊಂಡು ಹೋಗಿದ್ದಾರೆ.

ಕೋವಿಡ್‌ ಸರಪಳಿ ಕತ್ತರಿಸಿದ ಸಂಪೂರ್ಣ ಲಾಕ್‌ಡೌನ್‌..!

ರೈತ ಸಂರ್ಪಕ ಕೇಂದ್ರಗಳಲ್ಲಿ ಪ್ರತಿ 5 ಕೆ.ಜಿ. ಧಾರವಾಡ ಹೆಸರು ಬೀಜಕ್ಕೆ ಎಸ್‌ಸ್ಸಿ ಹಾಗೂ ಎಸ್‌.ಟಿ ವರ್ಗಕ್ಕೆ ಸಬ್ಸಿಡಿಯಲ್ಲಿ 435 ದರ ಇದ್ದರೆ ಅದಕ್ಕೆ ಸಿಬ್ಬಂದಿ 450. ಪಡೆಯುತ್ತಿದ್ದಾರೆ. ಇನ್ನೂ ಸಾಮಾನ್ಯ ವರ್ಗದ ರೈತರಿಗೆ 495 ಇದ್ದರೆ ಅದಕ್ಕೆ 500 ಪಡೆಯಲಾಗುತ್ತಿದೆ. ಪ್ರತಿ ಕೆಜಿಗೆ ಹೆಚ್ಚುವರಿ ಎಂದು 5-15 ಅಗ್ರೋಗಳಲ್ಲಿ ಪಡೆಯುತ್ತಿದ್ದಾರೆ.

300 ಕ್ವಿಂಟಲ್‌ ಹೆಸರು ಬೇಕು

ನವಲಗುಂದ ಮತ್ತು ಅಣ್ಣಿಗೇರಿ ತಾಲೂಕುಗಳಿಗೆ 517 ಕ್ವಿಂಟಲ್‌ ಧಾರವಾಡ ಹೆಸರು ಬೀಜ ನೀಡಲಾಗಿದೆ. ಅದರಲ್ಲಿ ನವಲಗುಂದಕ್ಕೆ-120, ಅಣ್ಣಿಗೇರಿ-238, ಮೊರಬ-83, ಶೆಲವಡಿ-75 ಕ್ವಿಂಟಲ್‌ ನೀಡಿದ್ದೇವೆ. ಕಳೆದ ವರ್ಷಕ್ಕಿಂತ ಈ ಬಾರಿ 70 ಕ್ವಿಂಟಲ್‌ ಹೆಚ್ಚಿಗೆ ಹೆಸರು ಬೀಜಗಳನ್ನು ನೀಡಲಾಗಿದೆ. ಇನ್ನೂ ರೈತರ ಬೇಡಿಕೆ ಇರುವುದರಿಂದ ಸುಮಾರು 300 ಕ್ವಿಂಟಲ್‌ವರೆಗೂ ಹೆಸರು ಬೀಜ ಬೇಕಾಗುತ್ತದೆ. ಉದ್ದು, ತೊಗರಿ, ಶೇಂಗಾ, ಗೋವಿನಜೋಳ ಬೀಜಕ್ಕೆ ಕೊರತೆಯಿಲ್ಲ ಎಂದು ಕೃಷಿ ಸಹಾಯಕ ಅಧಿಕಾರಿ ಶ್ರೀಕಾಂತ ಚಿಂಬಲಗಿ ತಿಳಿಸಿದ್ದಾರೆ.
 

click me!