Mandya : ನಿಂತು ನಿಂತು ಓಡುವ ಮೈಷುಗರ್‌...!

By Kannadaprabha NewsFirst Published Oct 20, 2022, 5:37 AM IST
Highlights

ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು ಎನ್ನುವಂತೆ ನಾಲ್ಕು ವರ್ಷಗಳ ಬಳಿಕ ಮೈಷುಗರ್‌ ಆರಂಭಗೊಂಡರೂ ಸಮಸ್ಯೆಗಳಿಂದ ಮುಕ್ತಿ ಕಂಡಿಲ್ಲ. ಹಿಂದಿನಂತೆಯೇ ಕುಂಟುತ್ತಾ, ತೆವಳುತ್ತಾ ಕಾರ್ಖಾನೆ ಸಾಗುತ್ತಿದೆ. ಸರಾಗವಾಗಿ ಮುನ್ನಡೆಯುವ ಲಕ್ಷಣಗಳೇ ಕಾಣದಂತಾಗಿದೆ. ಕಾರ್ಖಾನೆಗೆ ಕಬ್ಬು ತಂದ ರೈತರ ಪರಿಸ್ಥಿತಿ ಹೈರಾಣಾಗಿದೆ.

ಮಂಡ್ಯ(ಅ.20):  ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು ಎನ್ನುವಂತೆ ನಾಲ್ಕು ವರ್ಷಗಳ ಬಳಿಕ ಮೈಷುಗರ್‌ ಆರಂಭಗೊಂಡರೂ ಸಮಸ್ಯೆಗಳಿಂದ ಮುಕ್ತಿ ಕಂಡಿಲ್ಲ. ಹಿಂದಿನಂತೆಯೇ ಕುಂಟುತ್ತಾ, ತೆವಳುತ್ತಾ ಕಾರ್ಖಾನೆ ಸಾಗುತ್ತಿದೆ. ಸರಾಗವಾಗಿ ಮುನ್ನಡೆಯುವ ಲಕ್ಷಣಗಳೇ ಕಾಣದಂತಾಗಿದೆ. ಕಾರ್ಖಾನೆಗೆ ಕಬ್ಬು ತಂದ ರೈತರ ಪರಿಸ್ಥಿತಿ ಹೈರಾಣಾಗಿದೆ.

ಯ (Factory)  ಯಂತ್ರೋಪಕರಣಗಳನ್ನು ಕಬ್ಬು ಅರೆಯುವಿಕೆಗೆ ಸಮರ್ಪಕವಾಗಿ ಸಜ್ಜುಗೊಳಿಸದೆ, ಪೂರ್ಣ ಪ್ರಮಾಣದಲ್ಲಿ ಪೂರ್ವ ತಯಾರಿ ಮಾಡಿಕೊಳ್ಳದೆ ಕಾರ್ಖಾನೆ ಆರಂಭಿಸಿದ್ದರ ಪರಿಣಾಮವನ್ನು armers )  ಎದುರಿಸುವಂತಾಗಿದೆ. ಕಾರಣ ಹೇಳುವುದರಲ್ಲೇ ಕಾಲಹರಣ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ರೈತರು ರೊಚ್ಚಿಗೆದ್ದಿದ್ದಾರೆ. ಸಮರ್ಪಕವಾಗಿ ಕಬ್ಬು ಅರೆಯದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಾವು ಹೇಗೋ ಬೇರೆ ಕಾರ್ಖಾನೆಗೆ ಕಬ್ಬನ್ನು ಸಾಗಿಸುತ್ತಿದ್ದೆವು. ಆದರೆ, ಮೈಷುಗರ್‌ಗೇ ಕಬ್ಬನ್ನು ನೀಡಬೇಕೆಂದು ಬಲವಂತವಾಗಿ ಇಲ್ಲಿಗೆ ಕರೆತಂದರು. ಎರಡು ದಿನವಾದರೂ ಕಬ್ಬು ಅರೆದಿಲ್ಲ. ಇಲ್ಲಿ ಮಲಗಲು ಯಾವುದೇ ವ್ಯವಸ್ಥೆ ಇಲ್ಲ. ಎತ್ತುಗಳಿಗೆ ಮೇವಿನ ವ್ಯವಸ್ಥೆ ಇಲ್ಲ. ಊಟ-ತಿಂಡಿ ಇಲ್ಲದೆ ವಿಪರೀತ ಸೊಳ್ಳೆಗಳ ಕಾಟದ ನಡುವೆ ನರಕಯಾತನೆ ಅನುಭವಿಸುತ್ತಿದ್ದೇವೆ. ನಮ್ಮನ್ನು ಯಾರೂ ಕೇಳೋರೇ ದಿಕ್ಕಿಲ್ಲ ಎಂದು ಕಬ್ಬು ತಂದಿರುವ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಬಗಾಸ್‌ ಯಾರ್ಡ್‌ಗೆ ನೀರು ನುಗ್ಗಿಬಿಟ್ಟಿತು, ಬೆಲ್ಟ್‌ ತುಂಡಾಯಿತು, ಬೆಲ್ಟ್‌ ಕನ್ವೆಯರ್‌ ನೀರಿನಲ್ಲಿ ಮುಳುಗಿತು. ಹೀಗೆ ಒಂದಲ್ಲಾ ಒಂದು ಕಾರಣ ಹೇಳುತ್ತಿರುವ ಅಧಿಕಾರಿಗಳು ಕಾರ್ಖಾನೆಗೆ ಕಬ್ಬು ತಂದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಅತ್ತ ಕಬ್ಬು ಅರೆಯುವಿಕೆ ಸಮರ್ಪಕವಾಗಿ ನಡೆಯದೆ, ಇತ್ತ ಯಾರ್ಡ್‌ನಿಂದ ವಾಪಸ್‌ ತೆಗೆದುಕೊಂಡು ಹೋಗಲಾಗದೆ ರೈತರು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಒಂದು ದಿನ ಕಾರ್ಖಾನೆ ಕಬ್ಬು ಅರೆದರೆ ಎರಡು ದಿನ ನಿಲ್ಲುತ್ತದೆ. ಆ ಎರಡು ದಿನ ರೈತರು ಕಾರ್ಖಾನೆ ಆರಂಭಕ್ಕಾಗಿ ಕಾದುಕೂರಬೇಕು. ಅಧಿಕಾರಿಗಳೇನೋ ಕಾರಣ ಹೇಳಿ ಹೊರಟುಹೋಗುತ್ತಾರೆ. ಕಬ್ಬು, ಎತ್ತಿನಗಾಡಿ, ಹಸುಗಳೊಂದಿಗೆ ಬಂದ ರೈತರ ಪಾಡೇನು ಎಂದು ಯಾರೂ ವಿಚಾರಿಸುವುದೇ ಇಲ್ಲ. ಮಳೆ, ಬಿಸಿಲು, ಚಳಿ, ಗಾಳಿ ಎನ್ನದೆ ಕಾಯುತ್ತಾ ಕೂರುವುದು ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರಿಗೆ ಅನಿವಾರ್ಯವಾಗಿದೆ.

ರೈತರು ತಾವು ಕಷ್ಟಪಟ್ಟು ಬೆಳೆದ ಕಬ್ಬನ್ನು ಕಾರ್ಖಾನೆ ಅಧಿಕಾರಿಗಳಿಗೆ ಇಷ್ಟಬಂದಾಗ ಅರೆಯುವಂತಾಗಿದೆ. ಕಾರ್ಖಾನೆಯೊಳಗೆ ನೂರೆಂಟು ಸಮಸ್ಯೆಗಳಿವೆ ಎಂದು ಹೇಳುವ ಅಧಿಕಾರಿಗಳು, ಅವುಗಳನ್ನು ಪರಿಹರಿಸಿಕೊಳ್ಳದೆ ಕಾರ್ಖಾನೆ ಆರಂಭಿಸಿದ್ದಾದರೂ ಏಕೆ?, ರೈತರು ತಂದ ಕಬ್ಬನ್ನು ಸಮರ್ಪಕವಾಗಿ ಅರೆಯದಿದ್ದ ಮೇಲೆ ಯಾವ ಪುರುಷಾರ್ಥಕ್ಕೆ ಚಾಲನೆ ನೀಡಬೇಕಿತ್ತು. ಕಬ್ಬು ಬೆಳೆಗಾರರ ಬದುಕಿನೊಂದಿಗೆ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಕಿಡಿಕಾರಿದರು.

ಮೈಷುಗರ್‌ ಬಾಯ್ಲರ್‌ಗೆ ಬೆಂಕಿ ಹಾಕಿದವರು ಈಗ ಕಾಣೆಯಾಗಿದ್ದಾರೆ. ಜನಪ್ರತಿನಿಧಿಗಳು ನಾಪತ್ತೆಯಾಗಿದ್ದಾರೆ. ಹೋರಾಟಗಾರರು ಕಣ್ಮರೆಯಾಗಿದ್ದಾರೆ. ಇವರೆಲ್ಲರ ನಡುವೆ ಕಬ್ಬು ತಂದ ರೈತರು ಅನಾಥರಾಗಿದ್ದಾರೆ.

ಕಾರ್ಖಾನೆ ಸಮರ್ಪಕವಾಗಿ ಕಬ್ಬು ಅರೆಯದಿರುವ ಬಗ್ಗೆ ಅಧಿಕಾರಿಗಳಿಗೆ ರೈತರು ಕರೆ ಮಾಡಿದರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು ಒಂದು ರೀತಿ ಹೇಳಿದರೆ, ಕಾರ್ಖಾನೆ ವ್ಯವಸ್ಥಾಪಕರೇ ಒಂದು ರೀತಿ ಹೇಳುವರು, ತಹಸೀಲ್ದಾರ್‌ ಮತ್ತೊಂದು ರೀತಿ ಹೇಳುತ್ತಾರೆ. ಇವರೆಲ್ಲರ ಮಾತನ್ನು ನಂಬಿ ಹಗಲು ಕಂಡ ಬಾವಿಗೆ ಇರುಳು ಬಿದ್ದಂತಾಗಿದೆ ಎಂದು ವೇದನೆ ಪಡುತ್ತಿದ್ದಾರೆ.

ಮೈಷುಗರ್‌ ಕಾರ್ಖಾನೆ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ. ಅದನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಸರ್ಕಾರ ವಿಫಲವಾಗಿದೆ. ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗಿರುವ ಆಡಳಿತಾರೂಢ ಜನಪ್ರತಿನಿಧಿಗಳು ಕಬ್ಬು ಬೆಳೆಗಾರರನ್ನು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

-------------

ಕಬ್ಬು ಅರೆಯುವ ಯೋಗ್ಯತೆ ಇಲ್ಲದಿದ್ದ ಮೇಲೆ ಕಾರ್ಖಾನೆಯನ್ನು ಏಕೆ ಆರಂಭಿಸಬೇಕಿತ್ತು. ಕಬ್ಬು ತಂದು ಎರಡು ದಿನವಾದರೂ ಕಾರ್ಖಾನೆ ಆರಂಭಗೊಂಡಿಲ್ಲ. ಕಷ್ಟಪಟ್ಟು ನಾವು ಕಬ್ಬು ಬೆಳೆಯೋದು. ಇವರಿಗಷ್ಟಬಂದಾಗ ಅರೆಯೋದಾ. ಅಲ್ಲಿಯವರೆಗೆ ನಾವೂ ಕಾಯ್ಕೊಂಡು ಕೂರೋದಾ. ಸಂಪೂರ್ಣವಾಗಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳದಿದ್ದ ಮೇಲೆ ಕಾರ್ಖಾನೆ ಏಕೆ ಆರಂಭಿಸಿದಿರಿ. ಇದು ಬೇಜವಾಬ್ದಾರಿತನವಲ್ಲದೆ ಮತ್ತೇನು?

ರಮೇಶ್‌, ಕೀಲಾರ

---------------------

ಕಬ್ಬು ತಂದ ರೈತರಿಗೆ ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಮಳೆ ಬಂದಿರುವುದರಿಂದ ಮಲಗಲು ಜಾಗವೇ ಇಲ್ಲ. ವಿಪರೀತ ಸೊಳ್ಳೆಗಳ ಕಾಟ. ದನಗಳಿಗೆ ಸರಿಯಾಗಿ ಮೇವಿಲ್ಲದೆ ಪರದಾಡುವಂತಾಗಿದೆ. ನಮಗೂ ಊಟ-ತಿಂಡಿಗೆ ತೊಂದರೆಯಾಗಿದೆ. ಕಾರ್ಖಾನೆ ಆರಂಭವಾಗುವುದನ್ನೇ ನೋಡುತ್ತಾ ಕೂರುವಂತಾಗಿದೆ. ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ನಮ್ಮ ಪರಿಸ್ಥಿತಿ ಯಾರಿಗೂ ಬೇಡ.

- ನಾಗರಾಜು, ರೈತ

 

click me!