ಯಾದಗಿರಿ : ಅನ್ನ ನೀಡಿದ ಕೈಗಳ ಬದುಕು ಅತಂತ್ರ !

By Kannadaprabha News  |  First Published Sep 5, 2019, 1:10 PM IST

ರೈತರ ಕುಟುಂಬಗಳಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರದ ಕೆಲವೊಂದು ಅವೈಜ್ಞಾನಿಕ ನಿಯಮಗಳಿಂದ, ಅನೇಕರು ಬೀದಿಪಾಲಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯಲ್ಲಿ ಕಂಡು ಬಂದಿವೆ. ಮನೆ ಯಜಮಾನನನ್ನು ಕಳೆದಕೊಂಡ ದುಃಖ ಒಂದೆಡೆಯಾದರೆ, ಇನ್ನೊಂದೆಡೆ ಪರಿಹಾರಕ್ಕಾಗಿ ಆ ಕುಟುಂಬಗಳನ್ನು ಕಚೇರಿ ಸುತ್ತ ಅಲೆದಾಡಿಸುವಂತೆ ಮಾಡಿದೆ. ಒಟ್ಟಿನಲ್ಲಿ ದಾರಿ ಕಾಣದೇ ರೈತರು ಆಥ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. 


ಆನಂದ್ ಎಂ. ಸೌದಿ

ಯಾದಗಿರಿ [ಸೆ.05]:  ದೇಶದ ಬೆನ್ನೆಲಬು ಅನ್ನದಾತರ ಬದುಕು ಸಂಕಷ್ಟದಲ್ಲಿದೆ. ಬರ ಹಾಗೂ ನೆರೆ ಹಾವಳಿಯಿಂದ ನೊಂದು ಬೆಂದರೆ ರೈತರ ಕುಟುಂಬಗಳು ಬೀದಿಗೆ ಬಿದ್ದಿವೆ. 

Latest Videos

undefined

ಸಾಲಬಾಧೆ  ಹಾಗೂ ಬೆಳೆ ನಷ್ಟದಿಂದ ಆತಂಕಗೊಂಡ ಅನ್ನದಾತರು ಆತ್ಮಹತ್ಯೆಯ ದಾರಿ ತುಳಿದಿರುವುದು ಆಘಾತ ಮೂಡಿಸಿದೆ. ಕಳೆದೈದು ವರ್ಷಗಳಲ್ಲಿ ಯಾದಗಿರಿ ಜಿಲ್ಲೆಯಲ್ಲಿ 230 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಈ  ರೈತರ ಕುಟುಂಬಗಳಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರದ ಕೆಲವೊಂದು ಅವೈಜ್ಞಾನಿಕ ನಿಯಮಗಳಿಂದ, ಅನೇಕರು ಬೀದಿಪಾಲಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯಲ್ಲಿ ಕಂಡು ಬಂದಿವೆ. ಮನೆ ಯಜಮಾನನನ್ನು ಕಳೆದಕೊಂಡ ದುಃಖ ಒಂದೆಡೆಯಾದರೆ, ಇನ್ನೊಂದೆಡೆ ಪರಿಹಾರಕ್ಕಾಗಿ ಆ ಕುಟುಂಬಗಳನ್ನು ಕಚೇರಿ ಸುತ್ತ ಅಲೆದಾಡಿಸುವಂತೆ ಮಾಡಿದೆ.

ಸಂಕಷ್ಟದಲ್ಲಿ ನಿಂಗಪ್ಪ ಕುಟುಂಬ

ಮೂರು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ, ಹತ್ತಿ ಹಾಗೂ ಸಜ್ಜೆ ಬೆಳೆ ಹಾಕಿದ್ದ ಶಹಾಪುರ ತಾಲೂಕಿನ ಬೇವಿನಳ್ಳಿ ಗ್ರಾಮದ 39 ರ ಹರೆಯದ ನಿಂಗಪ್ಪ, ನಿರೀಕ್ಷಿತ ಮಟ್ಟದಲ್ಲಿ ಬೆಳೆ ಬರದಿದ್ದರಿಂದ ಆತಂಕಗೊಂಡಿದ್ದರು. ಕಾಲುವೆಯಲ್ಲಿಯೂ ಹನಿ ನೀರು ಹರಿಯದೆ, ಮಳೆಯೂ ಇಲ್ಲದೆ ಬೆಳೆಗಳು ಒಣಗತೊಡಗಿದಾಗ ಕಂಗಾಲಾದ ಆತ ಫೆ. 13, 2019 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು.
 
ನಿಂಗಪ್ಪ ಹಾಗೂ ಆತನ ಇಬ್ಬರು ಸಹೋದರರಾದ ದೇವಪ್ಪ ಮತ್ತು ಅಯ್ಯಣ್ಣ ತಲಾ ಮೂರು ಎಕರೆ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದರು. ತಾಯಿ ಲಕ್ಷ್ಮೀಬಾಯಿ ಹೆಸರಿಗೆ ಜಮೀನು ಇತ್ತು. ವಿವಿಧ ಬ್ಯಾಂಕುಗಳಲ್ಲಿ ಇದಕ್ಕಾಗಿನ ಬೆಳೆಸಾಲ ನಾಲ್ಕೈದು ಲಕ್ಷ ರು.ಗಳಷ್ಟಿತ್ತು. ಪತ್ನಿ ಶೇಖಮ್ಮ ಹಾಗೂ ಮೂವರು ಹೆಣ್ಣು ಮಕ್ಕಳಾದ ಏಳು ವರ್ಷದ ನಾಗಮ್ಮ, ನಾಲ್ಕು ವರ್ಷದ ದೇವಮ್ಮ ಹಾಗೂ ಒಂದು ವರ್ಷದ ಭೀಮಬಾಯಿ ನಿಂಗಪ್ಪನನ್ನೇ ನೆಚ್ಚಿಕೊಂಡಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಡೀ ಕುಟುಂಬದ ಜವಾಬ್ದಾರಿ ಹೊತ್ತ ಹಿರಿಮಗ ನಿಂಗಪ್ಪ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮನೆಮಂದಿಗೆಲ್ಲ ಬರಸಿಡಿಲು ಬಡಿದಂತಾಗಿದೆ. ಅಂಗೈಯಗಲ ಗುಡಿಸಲಿನಲ್ಲಿಯೇ ಮಕ್ಕಳ ಸಮೇತ ಬದುಕು ಸಾಗಿಸುತ್ತಿರುವ ಪತ್ನಿ ಶೇಖಮ್ಮ ಹಾಗೂ ಮಕ್ಕಳ ಬದುಕು ದುಸ್ತರವಾಗಿದೆ. 

ಇನ್ನು, ಸಾಲದ ದಾಖಲೆಗಳು ನಿಂಗಪ್ಪನ ಹೆಸರಿನಲ್ಲಿ ಇಲ್ಲದ್ದರಿಂದ ಸರ್ಕಾರದ ಪರಿಹಾರ ತಿರಸ್ಕೃತಗೊಂಡಿದೆ. ತಾಯಿ ಲಕ್ಷ್ಮೀಬಾಯಿ ಹೆಸರಿನಲ್ಲಿ ಜಮೀನು ಇದ್ದ ಕಾರಣ ಸಹಜವಾಗಿಯೇ ಬ್ಯಾಂಕುಗಳು ಲಕ್ಷ್ಮೀಬಾಯಿ ಹೆಸರಿಗೆ ಸಾಲ ನೀಡಿವೆ. ಆದರೆ, ಆಸ್ತಿ ಇಲ್ಲದವರ ಹೆಸರಿಗೆ ಬ್ಯಾಂಕುಗಳು ಸಾಲ ಕೊಡುವುದೂ ಇಲ್ಲ. ಹೀಗಾಗಿ, ನಿಂಗಪ್ಪನ ಬದಲಾಗಿ, ತಾಯಿ ಹೆಸರಲ್ಲಿ ಸಾಲ ಪಡೆಯಲಾಗಿತ್ತು.

ಸರ್ಕಾರದ ನಿಯಮಾವಳಿ ಪ್ರಕಾರ, ಜಮೀನು ಸಂಬಂಧಿಕರ ಹೆಸರಿನಲ್ಲಿದ್ದರೂ ಪರವಾಗಿಲ್ಲ, ಸಾಲದ ದಾಖಲೆಗಳು ಮಾತ್ರ ಮೃತನ ಹೆಸರಿನಲ್ಲಿರಬೇಕೆಂದಿದೆ.  (ಆದೇಶ ಸಂಖ್ಯೆ: ಕೃಇ/57/ಕೃಉಇ/2015 (ಭಾಗ-1), ಬೆಂಗಳೂರು, ದಿನಾಂಕ : 25-11-2015). ಮೃತ ರೈತನ ಕುಟುಂಬದ ಕಾನೂನುಬದ್ಧ ಹಕ್ಕುದಾರರಿಗೆ 5 ಲಕ್ಷ ರು.ಗಳ ಪರಿಹಾರಧನ ನೀಡಲು ಸಹಾಯಕ ಆಯುಕ್ತರ ನೇತೃತ್ವದಲ್ಲಿ ರಚನೆಗೊಂಡ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿ ತೀರ್ಮಾನ ಕೈಗೊಳ್ಳತಕ್ಕದ್ದು ಎಂದು ಆದೇಶದಲ್ಲಿ ಹೇಳಿದೆ.

ಜಮೀನು ಅಥವಾ ಆಸ್ತಿ ಇದ್ದವರ ಹೆಸರಲ್ಲಿ ಮಾತ್ರ ಬ್ಯಾಂಕುಗಳು ಸಾಲ ಕೊಡುತ್ತವೆ ಹೊರತು ಸಂಬಂಧಿಕರ ಹೆಸರಲ್ಲಿ ಅಲ್ಲ. ಇದು ಅವೈಜ್ಞಾನಿಕ ಎನ್ನುವುದು ರೈತರ ಆರೋಪ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ವೇಳೆ ನಿಂಗಪ್ಪನ ಪತ್ನಿ ಶೇಖಮ್ಮ ಹಾಗೂ ಮಕ್ಕಳು ಸಲ್ಲಿಸಿದ್ದ ಮನವಿ ಇದೇ ಕಾರಣಕ್ಕಾಗಿ ಈಗ ತಿರಸ್ಕೃತಗೊಂಡಿದೆ. 

ತಂದೆ ಅಥವಾ ತಾಯಿ ಹೆಸರಲ್ಲಿ ಆಸ್ತಿಗಳಿದ್ದಾಗ, ಬ್ಯಾಂಕುಗಳು ಸಾಲ ಹೇಗೆ ಕೊಡುತ್ತವೆ? ಸಾಲ ಕೊಡದಿದ್ದಾಗ ದಾಖಲೆ ಎಲ್ಲಿಂದ ತರೋಣ

 ಹೊನ್ನಪ್ಪ ದಾಳಿ, ಮೃತ ರೈತ ನಿಂಗಪ್ಪನ ಅಳಿಯ, ಗೊಂದೆನೂರು, ಶಹಾಪುರ.

ಆತ್ಮಹತ್ಯೆ ಮಾಡಿಕೊಂಡಿದ್ದ ರೈತರನೇಕ ಕುಟುಂಬಗಳು, ಇಂತಹ ನಿಯಮಾವಳಿಯಿಂದಾಗಿ ಪರಿಹಾರದಿಂದ ವಂಚಿತಗೊಂಡು, ಬೀದಿಪಾಲಾಗುತ್ತಿವೆ. ಸರ್ಕಾರ ಈ ಬಗ್ಗೆ ಪುನಾ ಪರಿಶೀಲನೆ ನಡೆಸಲಿ. 

 ಬಸವರಾಜ್ ಹೊಸಮನಿ, ದೋರನಹಳ್ಳಿ ಗ್ರಾಮ ಪಂಚಾಯ್ತಿಯ ಮಾಜಿ ಸದಸ್ಯ. 

ನಿಯಮಾವಳಿ ಪ್ರಕಾರ, ಮೃತ ರೈತನ ಹೆಸರಿನಲ್ಲಿ ಸಾಲದ ದಾಖಲೆಗಳು ಇಲ್ಲ. ಇದರನುಸಾರ, ಸಮಿತಿ ಕೈಗೊಂಡ ತೀರ್ಮಾನದಂತೆ ಪರಿಹಾರ ತಿರಸ್ಕೃತಗೊಂಡಿದೆ.

 ಶಂಕರಗೌಡ ಸೋಮನಾಳ್, ಸಹಾಯಕ ಆಯುಕ್ತರು, ಯಾದಗಿರಿ. 

"

click me!