ಮನೆ ಮಂದಿಯೊಂದಿಗೆ ಹೊಲಗದ್ದೆಗೆ ತೆರಳಿ ಚರಗ ಚೆಲ್ಲಿ ಎಳ್ಳ ಅಮವಾಸೆ ಆಚರಣೆ ಮಾಡಿದ ರೈತರು| ಖಡಕ್ ರೊಟ್ಟಿ, ಬದನೆಕಾಯಿ ಪಲ್ಯೆ, ಹೋಳಿಗೆ, ಕಡಬು ಸೇರಿ ಹಲವು ಖಾದ್ಯದ ಭೋಜನ| ಚರಗ ಚೆಲ್ಲಿದ ಬಳಿಕ ಹೊಲದಲ್ಲಿ ಮಕ್ಕಳೊಂದಿಗೆ ಆಡವಾಡಿ ನಲಿದ ರೈತ ಮಹಿಳೆಯರು|
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಡಿ.26): ಉತ್ತರ ಕರ್ನಾಟಕದಲ್ಲಿ ಆಚರಿಸುವ ಎಳ್ಳ ಅಮವಾಸೆ ಹಬ್ಬವನ್ನು ರೈತರು ಜಿಲ್ಲೆಯಲ್ಲಿ ಬುಧವಾರ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ಹಳ್ಳಿ ಹಳ್ಳಿಗಳಲ್ಲೂ ರೈತಾಪಿ ಕುಟುಂಬಗಳು ತಮ್ಮ ಹೊಲ ಗದ್ದೆಗಳಿಗೆ ತೆರಳಿ ಚರಗ ಚಲ್ಲಿ ಹಬ್ಬ ಆಚರಣೆ ಮಾಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಚರಗದ ಹಬ್ಬಕ್ಕೆ ವಿಶೇಷ ಸ್ಥಾನ
ಉತ್ತರ ಕರ್ನಾಟಕದಲ್ಲಿ ಚರಗದ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಹೌದು, ಪ್ರತಿ ವರ್ಷ ಎಳ್ಳ ಅಮವಾಸೆ ಬಂದ್ರೆ ಸಾಕು ರೈತರ ಪಾಲಿಗೆ ಅದೊಂದು ದೊಡ್ಡ ಹಬ್ಬ. ಹೀಗಾಗಿ ಚರಗ ಚಲ್ಲೋದಕ್ಕೆ ರೈತಾಪಿ ಕುಟುಂಬಗಳು ನಾಲ್ಕೈದು ದಿನ ಮುಂಚೆಯೇ ತಯಾರಿ ಮಾಡಿಕೊಳ್ಳುತ್ತಾರೆ.
ಎಳ್ಳ ಅಮವಾಸೆ ದಿನ ಬೆಳಿಗ್ಗೆಯೇ ಮನೆ ಮಂದಿ ಜೊತೆಗೆ ತಮ್ಮ ಸ್ನೇಹಿತರ ಕುಟುಂಬದೊಂದಿಗೆ ಹೊಲಕ್ಕೆ ಹೋಗುತ್ತಾರೆ. ಬಂದವರು ಮನೆಯಲ್ಲಿ ಮಾಡಿದ ಅಡುಗೆಯನ್ನ ಹೊಲಕ್ಕೆ ತಂದು ಭೂತಾಯಿಗೆ ಪೂಜೆ ಸಲ್ಲಿಸಿ ಹುಲ್ಲುಲ್ಲುಗೆ ಚಲಾಮ್ರಿಗೋ ಎಂಬ ಘೋಷಣೆಗಳೊಂದಿಗೆ ಹೊಲಕ್ಕೆ ನೈವೇದ್ಯ ನೀಡುತ್ತಾರೆ. ಆದರೆ ಇಂತಹ ಎಳ್ಳ ಅಮವಾಸೆಗೆ ಸೂರ್ಯಗ್ರಹಣದ ಎಫೆಕ್ಟ್ ಆಗಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಾದ್ಯಂತ ಬುಧವಾರ ಹಬ್ಬವನ್ನ ಆಚರಣೆ ಮಾಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹೊಲದಲ್ಲಿ ಚರಗದ ಬಳಿಕ ಮನೆಯಿಂದ ತಂದ ಖಡಕ್ ರೊಟ್ಟಿ, ಬದನೆಕಾಯಿ ಪಲ್ಯ, ಮೊಸರು, ಚಟ್ನಿ, ಕಡಬು, ಹೋಳಿಗೆ ಹೀಗೆ ಒಂದೆ ಎರಡೇ ವಿಶೇಷ ಅಡುಗೆಗಳನ್ನ ಎಲ್ಲರೊಂದಿಗೆ ಹಂಚಿಕೊಂಡು ಊಟ ಮಾಡಿ ಖುಷಿ ಪಟ್ಟಿದ್ದಾರೆ. ಬಳಿಕ ಹೊಲದಲ್ಲಿ ಮಕ್ಕಳೊಂದಿಗೆ ಓಡಾಡಿ ಆಡಿ ನಲಿದಾಡಿದ್ದಾರೆ.