ನಾನು ತಪ್ಪು ಮಾಡಿದ್ರೆ ಜೈಲಿಗೆ ಹಾಕಲಿ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ರಾಮನಗರ (ಡಿ.26): ನಾನು ರಾಜಕಾರಣ ಮತ್ತು ವ್ಯವಹಾರವನ್ನು ಹಸನಾಗಿ ಮಾಡಿದ್ದೇನೆ. ಯಾರಿಗೂ ಮೋಸ ಮಾಡಿಲ್ಲ. ಲೂಟಿ ಹೊಡೆದಿಲ್ಲ. ನಾನು ತಪ್ಪು ಮಾಡಿದ್ರೆ ಈಗಲೂ ಜೈಲಿಗೆ ಹಾಕಲಿ ಕಾಂಪ್ರುಮೈಸ್ ಮಾಡಿಕೊಳ್ಳುವ ಜಾಯಮಾನ ನನ್ನದಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ದ್ಯಾವರಸೇಗೌಡನದೊಡ್ಡಿ ರಸ್ತೆಯ ರಾಮನಗರ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಿರ್ಮಿಸಲಾಗಿರುವ ‘ಒಕ್ಕಲಿಗ ಭವನ’ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
undefined
ಅವಮಾನ ಆಗಿಲ್ಲ: ತಿಹಾರ್ ಜೈಲಿಗೆ ಹೋಗಿ ಬಂದಿದ್ದರಿಂದ ನನಗೆ ಅವಮಾನ ಆಗಿಲ್ಲ. ನಾನು ತಪ್ಪನ್ನೇ ಮಾಡಿಲ್ಲ. ಹೀಗಿರುವಾಗ ನಾನೇಕೆ ಎದೆಗುಂದಲಿ. ಯಾರು ಏನೇ ಮಾಡಲಿ, ಯಾವ ರೂಪದಲ್ಲಿ ಬೇಕಾದರೂ ಕಿರುಕುಳ ನೀಡಲಿ, ಈ ದಿಕ್ಕಿನಲ್ಲಿ ಯಾವುದೇ ರಾಜಿ ಇಲ್ಲದೆ, ನನ್ನ ಕ್ಷೇತ್ರ ಹಾಗೂ ನನ್ನ ಜನಾಂಗದ ಸಮಗ್ರಅಭಿವೃದ್ಧಿಗೆ ದುಡಿಯುತ್ತೇನೆ ಎಂದರು.
ನನ್ನ ರಾಜಕೀಯ ಬದುಕಾಗಲಿ, ಸಾರ್ವಜನಿಕ ಜೀವನವಾಗಲಿ, ವಹಿವಾಟು-ವ್ಯವಹಾರಗಳಾಗಲಿ ಎಲ್ಲವೂ ಹಸನಾಗಿವೆ. ಕಾನೂನು ಮೀರಿ ಯಾವುದೇ ವ್ಯವಹಾರ ಮಾಡಿಲ್ಲ. ನಾನು ತಪ್ಪು ಮಾಡಿದರೆ ಶಿಕ್ಷೆಯಾಗಲಿ ಎಲ್ಲದಕ್ಕೂ ನಾನು ಸಿದ್ಧನಿದ್ದೇನೆ. ಎಂಥದ್ದೇ ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ. ಆದರೆ, ಕಾಯ್ದೆಗಳು ದುರುಪಯೋಗ ಆಗುತ್ತಿರುವುದಕ್ಕೆ ಬೇಸರವಿದೆ ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಸಾಕಷ್ಟುಷಡ್ಯಂತ್ರ ನಡೆದಿತ್ತು. ಕಾನೂನನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿತ್ತು. ನಾನು ಕಷ್ಟದಲ್ಲಿದ್ದಾಗ ಒಕ್ಕಲಿಗ ಸಮಾಜ ಬೆನ್ನಿಗೆ ನಿಂತಿತ್ತು. ಒಕ್ಕಲಿಗರು ಮಾತ್ರವಲ್ಲದೆ ಎಲ್ಲಾ ಸಮುದಾಯಗಳ ಪ್ರಾರ್ಥನೆಯ ಫಲವಾಗಿ ನಿಮ್ಮೆಲ್ಲರ ಮುಂದೆ ನಿಂತಿದ್ದೇನೆ. ನಿಮ್ಮೆಲ್ಲರ ಪಾದಗಳಿಗೆ ನನ್ನ ನಮಸ್ಕಾರ ಎಂದು ಕೃತಜ್ಞತೆ ಸಲ್ಲಿಸಿದರು.
ಶಿರಾ ತಾಲೂಕು ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಮಹಾಸ್ವಾಮೀಜಿ ಮಾತನಾಡಿ, ಪ್ರಧಾನಿ ಮೋದಿ ಅವರಿಗೆ ಡಿ.ಕೆ.ಶಿವಕುಮಾರ್ ಮೇಲೆ ಬಲು ಪ್ರೀತಿ ಇದೆ. ಹಾಗಾಗಿಯೇ ಅವರಿಗೆ ತೊಂದರೆ ನೀಡಿ, ಒಕ್ಕಲಿಗರು ಒಂದೆಡೆ ಸೇರಿಸುವ ಕೆಲಸ ಮಾಡಿದರು ಎಂದು ಪರೋಕ್ಷವಾಗಿ ಟೀಕಿಸಿದರು.
ಸುರೇಶ್ ಶ್ರಮ: ಡಿ.ಕೆ. ಶಿವಕುಮಾರ್ ಸಂಕಷ್ಟದಲ್ಲಿ ಸಿಲುಕಿದಾಗ ಅವರ ಬಿಡುಗಡೆಗಾಗಿ ಸಹೋದರ ಡಿ.ಕೆ. ಸುರೇಶ್ ಹಗಲಿರಳು ಶ್ರಮಿಸಿದರು. ರಾಮನ ನೆರವಿಗೆ ಲಕ್ಷ್ಮಣ ನಿಂತಿದ್ದನ್ನು ನಾವೆಲ್ಲರು ಕೇಳಿದ್ದೇವೆ. ಆದರೆ, ಡಿ.ಕೆ.ಸುರೇಶ್ ತನ್ನ ಸಹೋದರನ ವಿಚಾರದಲ್ಲಿ ಲಕ್ಷ್ಮಣಗಿಂತಲೂ ಹತ್ತು ಹೆಜ್ಜೆ ಮುಂದಿದ್ದರು. ಜನ ಸೇವೆಯನ್ನೇ ಹವ್ಯಾಸ ಮಾಡಿಕೊಂಡಿರುವ ಸುರೇಶ್ ರಾಷ್ಟ್ರ ಕಂಡ ಮಾದರಿ ಲೋಕಸಭಾ ಸದಸ್ಯ ಎಂದು ಬಣ್ಣಿಸಿದರು.
ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಈಗೀಗ ಡಿ.ಕೆ.ಶಿವಕುಮಾರ್ ಅವರು ಆಧ್ಯಾತ್ಮಿಕವಾಗಿ ಬಹಳ ಮಾತನಾಡುತ್ತಿದ್ದಾರೆ. ಅವರು ಅನುಭವಿಸಿದ ಕಷ್ಟಗಳನ್ನು ನೋಡಿದ್ದೇವೆ. ಮನುಷ್ಯನಿಗೆ ಜೀವನದಲ್ಲಿ ಕಷ್ಟಗಳು ಬರುತ್ತವೆ. ನಡೆಯುವವರು ಎಡವುತಾರೆಯೇ ಹೊರತು ಕುಳಿತವರಲ್ಲ ಎಂದು ಹೇಳಿದರು.