ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ದರ ಹೆಚ್ಚಳ, ಕೃಷಿ ಉತ್ಪನ್ನಗಳ ದರ ನಿಗದಿಯಲ್ಲಿ ನ್ಯಾಯಯುತ ತೀರ್ಮಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಯಿತು.
ದಾವಣಗೆರೆ (ಆ.14): ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ದರ ಹೆಚ್ಚಳ, ಕೃಷಿ ಉತ್ಪನ್ನಗಳ ದರ ನಿಗದಿಯಲ್ಲಿ ನ್ಯಾಯಯುತ ತೀರ್ಮಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಯಿತು. ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ವಿ.ಪಟೇಲ್ ನೇತೃತ್ವದಲ್ಲಿ ಸುಮಾರು 2 ತಾಸುಗಳ ಕಾಲ ಹೆದ್ದಾರಿ ತಡೆ ನಡೆಸಿದ ರೈತರು ಕೇಂದ್ರ, ರಾಜ್ಯ ಸರ್ಕಾರಗಳು, ಸಕ್ಕರೆ ಸಚಿವರ ವಿರುದ್ಧ ಘೋಷಣೆ ಕೂಗಿ ಹೆದ್ದಾರಿಯಲ್ಲೇ ರಕ್ತದಾನ ಮಾಡಿ, ಶೇಂಗಾ ಬೀಜ ಮತ್ತು ಬೆಲ್ಲ ಹಂಚುವ ಮೂಲಕ ವಿನೂತನ ಹೋರಾಟ ನಡೆಸಿದರು.
ಇದೇ ವೇಳೆ ಮಾತನಾಡಿದ ತೇಜಸ್ವಿ ಪಟೇಲ್, ಕೇಂದ್ರ ಸರ್ಕಾರ ಕಳೆದ ವಾರ ಕಬ್ಬಿಗೆ ನ್ಯಾಯಯುತ ಲಾಭದಾಯಕ ಬೆಲೆ (ಎಫ್‌ಆರ್‌ಪಿ) ನಿಗದಿಪಡಿಸಿದೆ. ಹಿಂದೆ ಎಫ್‌ಆರ್‌ಪಿ ದರ 1,900 ರು. ಇತ್ತು. ಈಗ 3,050 ರು.ಗೆ ಹೆಚ್ಚಿಸಿದೆ. ಮೇಲ್ನೋಟಕ್ಕೆ ದರ ಹೆಚ್ಚಳವೆನಿಸಿದರೂ ಅದರ ಹಿಂದೆ ಪ್ರತಿ ಟನ್ ಕಬ್ಬಿಗೆ 95 ಕೆಜಿ ಸಕ್ಕರೆಗೆ ಅಷ್ಟೇ ದರ ಇತ್ತು. ಈಗ 107 ಕೆಜಿ ಸಕ್ಕರೆ ಇಳುವರಿಗೆ ಹೊಸ ದರ ಅನ್ವಯಿಸುತ್ತದೆ. ಹೀಗಾದರೆ ರೈತರಿಗೆ ಯಾವ ರೀತಿ ಲಾಭದಾಯಕ? ಕೇಂದ್ರವು ಒಂದು ಕಡೆ ಎಫ್‌ಆರ್‌ಪಿ ಬೆಲೆ ಹೆಚ್ಚಿಸಿ, ಮತ್ತೊಂದು ಕಡೆ ರೈತರಿಗೆ ಯಾವುದೇ ಲಾಭ ಸಿಗದಂತೆ ಮಾಡಿದೆ ಎಂದು ಆರೋಪಿಸಿದರು.
ಈದ್ಗಾದಲ್ಲಿ ಧ್ವಜಾರೋಹಣ, ಗಣೇಶ ಪ್ರತಿಷ್ಠಾಪನೆ
ಹೃದಯದ ಆಳದಿಂದ ಬರಲಿ: ಕೇಂದ್ರದ ಇಂತಹ ದ್ವಂಧ್ವ ನಿಲುವು ಖಂಡಿಸಿ, ವಿದ್ಯುತ್ ಖಾಸಗೀಕರಣ ಮಾಡುವುದನ್ನು ವಿರೋಧಿಸಿ ಹೆದ್ದಾರಿ ತಡೆ ನಡೆಸಿದ್ದೇವೆ. ಪ್ರತಿ ವರ್ಷ ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ನೀಡುವ ಬಾಕಿ ಹಣ ಹಾಗೆ ಉಳಿಯುತ್ತಿದೆ. ಕೇಂದ್ರವು ಮಾತೆತ್ತಿದರೆ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳುತ್ತದೆ. ಅದು ಹೃದಯದ ಆಳದಿಂದ ಬಂದಿದ್ದರೆ ಅದನ್ನು ದರ ನಿಗದಿಯಲ್ಲಿ ಕೇಂದ್ರ ತೋರಿಸಲಿ. 2022-23ನೇ ಸಾಲಿಗೆ ಅನ್ವಯವಾಗುವಂತೆ 95 ಕೆಜಿ ಸಕ್ಕರೆ ಇಳುವರಿಗೆ, 1 ಟನ್ ಕಬ್ಬಿಗೆ 3500 ರು. ದರ ನಿಗದಿ ಮಾಡಲಿ ಎಂದು ಒತ್ತಾಯಿಸಿದರು.
ಅತಿವೃಷ್ಟಿ, ನೆರೆ ಪರಿಹಾರವೂ ಲಕ್ಕಿ ಡಿಪ್‌ನಂತಾಗಿದೆ. ಬೆಳೆ ಹಾನಿಗೊಳಗಾದ ರೈತರಿಗೆ ಈ ವರೆಗೂ ಪರಿಹಾರವನ್ನೇ ನೀಡಿಲ್ಲ. ಅತಿವೃಷ್ಟಿ, ನೆರೆ ಹಾವಳಿಯಿಂದಾಗಿ ಆದ ಬೆಳೆ ಹಾನಿಗೆ ವೈಜ್ಞಾನಿಕವಾಗಿ ನಷ್ಟದ ಪರಿಹಾರ ಲೆಕ್ಕ ಮಾಡಿ, ಪರಿಹಾರದ ಹಣ ನೀಡಬೇಕು. ವಿದ್ಯುತ್ ಖಾಸಗೀಕರಣ ಹಿಂಪಡೆಯಬೇಕು ಎಂಬುದಾಗಿ ತೇಜಸ್ವಿ ಪಟೇಲ್ ತಾಕೀತು ಮಾಡಿದರು. ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮನವಿ ಸ್ವೀಕರಿಸಿ, ಪ್ರತಿಭಟನಾಕಾರರರು ಸಲ್ಲಿಸಿದ ಮನವಿ, ಬೇಡಿಕೆಗಳನ್ನು ರಾಜ್ಯ ಸರ್ಕಾರಕ್ಕೆ ಕಳಿಸಿ ಕೊಡುವುದಾಗಿ ತಿಳಿಸಿದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ, ಹುಚ್ಚವ್ವನಹಳ್ಳಿ ಮಂಜುನಾಥ, ರೈತ ಸಂಘದ ಮುಖಂಡರಾದ ನಿಟುವಳ್ಳಿ ಅಂಜಿನಪ್ಪ ಪೂಜಾರ, ಹುಲ್ಮನಿ ಠಾಕೂರ್, ಎಂ.ಬಿ.ಮುರುಗೆಯ್ಯ, ಕೈದಾಳೆ ಶ್ರೀಧರ್, ತಿಪ್ಪೇಸ್ವಾಮಿ, ಡಿ.ಟಿ.ಶಂಕರ್, ಕೆ.ಬಸವರಾಜಪ್ಪ, ಎಂ.ಬಿ.ಮಠದ್, ಹನುಮೇಗೌಡ ಇತರರು ಇದ್ದರು.
CNG ಬೆಲೆ ದುಪ್ಪಟ್ಟು ಹೆಚ್ಚಳ; ಅಭಾವದ ವಿರುದ್ಧ ಪ್ರತಿಭಟನೆ
ರೈತರು-ಪೊಲೀಸರ ನಡುವೆ ತೀವ್ರ ವಾಗ್ವಾದ: ದಾವಣಗೆರೆ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ರಸ್ತೆ ತಡೆ ಜೊತೆಗೆ ರಕ್ತದಾನಕ್ಕೆ ಪೊಲೀಸ್ ಅಧಿಕಾರಿಗಳು ಅವಕಾಶ ನೀಡದ್ದರಿಂದ ಸುಮಾರು ಹೊತ್ತು ವಾಗ್ವಾದ ನಡೆಯಿತು. ನಮ್ಮನ್ನು ನೀವು ಬಂಧಿಸಿದರೂ ನಾವು ಸ್ಥಳ ಬಿಟ್ಟು ಕದಲುವುದಿಲ್ಲ. ರಕ್ತದಾನ ಮಾಡುವುದಕ್ಕೂ ನೀವು ಅವಕಾಶ ನೀಡದಿರುವುದು ಸರಿಯಲ್ಲ. ನಾವು ಹೆದ್ದಾರಿ ತಡೆ ನಡೆಸಿದ ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಮನವಿ ಸ್ವೀಕರಿಸಲಿ ಎಂದು ಪಟ್ಟು ಹಿಡಿದರು. ಅಂತಿಮವಾಗಿ ಜಿಲ್ಲಾಧಿಕಾರಿ ಸ್ಥಳಕ್ಕೆ ಧಾವಿಸಿ ಮನವಿ ಸ್ವೀಕರಿಸಿದರು.