* ಹದಿನೈದು ದಿನಗಳಿಂದ ಮಳೆಯ ಅಭಾವ
* ಶೇ.27ರಷ್ಟು ಮಳೆ ಕೊರತೆ
* ವಾರದೊಳಗೆ ಮಳೆಯಾಗದಿದ್ದರೇ ಮುಂಗಾರು ಅಷ್ಟಕಷ್ಟೆ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಆ.08): ನಿರೀಕ್ಷೆಗಿಂತಲೂ ಅಧಿಕ ಮಳೆಯಾಗಿದೆ. ಆದರೂ ಜಿಲ್ಲಾದ್ಯಂತ ಬರದ ಛಾಯೆ ಆವರಿಸಿದೆ. ಮುಂಗಾರು ಹಂಗಾಮಿನಲ್ಲಿ ಕಂಗೊಳಿಸುತ್ತಿದ್ದ ಬೆಳೆಗಳು ಹದಿನೈದು ದಿನಗಳಿಂದ ಮಳೆ ಇಲ್ಲದೆ ಬಾಡಲಾರಂಭಿಸಿವೆ. ವಾರದೊಳಗಾಗಿ ಮಳೆಯಾಗದಿದ್ದರೆ ಬರದ ಛಾಯೆ ಆವರಿಸುವುದು ಪಕ್ಕಾ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.
ಪ್ರಸಕ್ತ ವರ್ಷ ಈ ಅವಧಿಗೆ 242 ಮಿಲಿಮೀಟರ್ ಮಳೆಯಾಗಬೇಕಿತ್ತು, ಆದರೆ 307 ಮಿ.ಮೀ. ಮಳೆ ಸುರಿದಿದೆ. ಆದರೂ ಬರುವಂತೆ ಆಗಿರುವುದು ಮಾತ್ರ ರೈತರನ್ನು ಕಂಗೆಡಿಸಿದೆ. ಜು. 20ರ ವರೆಗೂ ಜಿಲ್ಲೆಯಲ್ಲಿ ಮಳೆ ಸಕಾಲಕ್ಕೆ ಆಗಿದೆ. ಜಾಸ್ತಿಯೇ ಆಗಿದೆ. ಇದರಿಂದ ರೈತರು ನಿರೀಕ್ಷೆ ಮೀರಿ ಬಿತ್ತನೆ ಮಾಡಿದ್ದಾರೆ. ಶೇ.100 ಮುಂಗಾರು ಬಿತ್ತನೆಯಾಗಿದೆ. ಆದರೆ, ಈಗ ಏಕಾಏಕಿ ಮಳೆ ಕೈಕೊಟ್ಟಿದ್ದರಿಂದ ಸಮಸ್ಯೆಯಾಗಿದೆ.
ಜು. 20ರ ಬಳಿಕ ಮಳೆಯಾಗಿರುವುದೇ ಅಪರೂಪ. ಜಿಲ್ಲೆಯ ಸರಾಸರಿ ಲೆಕ್ಕಾಚಾರದಲ್ಲಿ ಶೇ. 27ರಿಂದ 40ರಷ್ಟುಮಳೆ ಕೊರತೆಯಾಗಿದೆ. ಬಿತ್ತನೆಯಾದ ಮೇಲೆ ಕಾಳು ಕಟ್ಟುವ ಹಂತದಲ್ಲಿ ಹಾಗೂ ಬೆಳೆ ಸರಿಯಾಗಿ ದಷ್ಟಪುಷ್ಟವಾಗಿ ಬೆಳೆಯುವ ಈ ಸಮಯದಲ್ಲಿಯೇ ಮಳೆ ಕೈಕೊಟ್ಟಿರುವುದರಿಂದ ಸಮಸ್ಯೆಯಾಗಿದೆ. ಹೀಗಾಗಿ, ರೈತರು ಚಿಂತೆಗೀಡಾಗಿದ್ದಾರೆ.
ಹಾವೇರಿ: ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ರೈತರ ಬದುಕು ಮೂರಾಬಟ್ಟೆ..!
ಇಲಾಖೆ ಲೆಕ್ಕಚಾರವೇನು?
ಮಳೆಯಾಶ್ರಿತ ಬೆಳೆಗೆ ಜಿಲ್ಲೆಯಲ್ಲಿ ತುರ್ತಾಗಿ ಮಳೆಯಾಗಬೇಕಾಗಿದೆ. ಇಲ್ಲದಿದ್ದರೆ ಮುಂಗಾರು ಹಂಗಾಮು ನಷ್ಟವಾಗುತ್ತಾ ಹೋಗುತ್ತದೆ. ನಾಲ್ಕಾರು ದಿನದೊಳಗೆ ಮಳೆಯಾದರೆ ಮುಂಗಾರು ಸಮೃದ್ಧವಾಗಿ ಬರುತ್ತದೆ. ಆದರೆ, ನಾಲ್ಕು ದಿನಕ್ಕಿಂತ ಅಧಿಕವಾದರೆ ತಡೆದುಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತವೆ. ವಾರ ಗತಿಸಿ ಹೋದರೇ ಶೇ.50ರಷ್ಟು ಹಾನಿಯಾಗುತ್ತದೆ ಎನ್ನುತ್ತಾರೆ. ಇನ್ನು ಹತ್ತಾರು ದಿನಗಳ ಕಾಲ ಹೀಗೆಯೇ ಮಳೆಯ ಅಭಾವ ಮುಂದುವರೆದರೆ ಬರ ಪೂರ್ಣ ಎನ್ನುವ ಮಾಹಿತಿ ನೀಡುತ್ತಾರೆ.
ಸಚಿವರ ಸಭೆಯಲ್ಲಿ ಪ್ರಸ್ತಾಪ
ಶಾಸಕ ಅಮರೇಗೌಡ ಭಯ್ಯಾಪುರ ಅವರು ಸಚಿವ ಹಾಲಪ್ಪ ಆಚಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬರದ ಪ್ರಸ್ತಾಪ ಮಾಡಿದ್ದಾರೆ. ಜಿಲ್ಲೆಯಲ್ಲಿ ಮಳೆಯ ಅಭಾವ ಕಾಡುತ್ತಿದ್ದು, ವಾರದೊಳಗಾಗಿ ಮಳೆಯಾಗದಿದ್ದರೆ ಮುಂಗಾರು ವೈಫಲ್ಯವಾಗುತ್ತದೆ. ಆದ್ದರಿಂದ ಈಗಲೇ ಕ್ರಮ ವಹಿಸಿ ಎಂದು ಆಗ್ರಹಿಸಿದ್ದಾರೆ.
ಇದನ್ನು ಕೃಷಿ ಇಲಾಖೆಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಈಗಾಗಲೇ ಮಳೆಯ ಅಭಾವ ಕುರಿತು ಸರ್ಕಾರಕ್ಕೆ ವರದಿ ಮಾಡಿದ್ದೇವೆ. ನಾಲ್ಕಾರು ದಿನಗಳಲ್ಲಿ ಮಳೆಯಾಗದಿದ್ದರೆ ಭಾರಿ ಸಮಸ್ಯೆಯಾಗುತ್ತದೆ ಮಳೆಯಾಶ್ರಿತ ಪ್ರದೇಶದಲ್ಲಿ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜು. 20ರಿಂದ ಮಳೆಯ ಅಭಾವ ಪ್ರಾರಂಭವಾಗಿದೆ. ಕಳೆದ ಹದಿನೈದು ದಿನಗಳಿಂದ ಅಷ್ಟಕಷ್ಟೆಮಳೆಯಾಗಿದ್ದರಿಂದ ಮುಂಗಾರು ಬೆಳೆಗಳು ಬಾಡಲಾರಂಭಿಸಿವೆ. ಕಳೆದ ಹದಿನೈದು ದಿನಗಳಲ್ಲಿ ಅಲ್ಲಲ್ಲಿ ಶೇ. 27ಕ್ಕೂ ಅಧಿಕ ಮಳೆಯ ಕೊರತೆಯಾಗಿದೆ ಎಂದು ಕೊಪ್ಪಳ ಕೃಷಿ ಇಲಾಖೆ ಜೆಡಿ ಸದಾಶಿವ ವಿ. ತಿಳಿಸಿದ್ದಾರೆ.
ಸಮಸ್ಯೆಯನ್ನು ಕೂಡಲೇ ಗುರುತಿಸಿ, ಮಳೆಯ ಅಭಾವ ಎದುರಾಗಿರುವ ಬಗ್ಗೆ ನನಗೂ ಮಾಹಿತಿ ಬಂದಿದೆ. ಆದ್ದರಿಂದ ನಾಲ್ಕಾರು ದಿನಗಳ ಕಾಲ ಕಾದು ನೋಡಿ ಬೆಳೆಯ ಹಾನಿಯ ಸರ್ವೆಯನ್ನು ಪ್ರಾರಂಭಿಸಿ, ಈ ಬಗ್ಗೆ ವರದಿ ಸಲ್ಲಿಸಿ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ನಾಲ್ಕಾರು ಗ್ರಾಮಗಳ ಹೊಲಕ್ಕೆ ಭೇಟಿ ನೀಡಿದ್ದೇನೆ, ಬೆಳೆಗಳು ಬಾಡುತ್ತಿದ್ದು, ರೈತರು ಆತಂಕಗೊಂಡಿದ್ದಾರೆ. ತಕ್ಷಣ ಮಳೆಬೇಕಾಗಿದೆ. ನಾಲ್ಕಾರು ದಿನದೊಳಗಾಗಿ ಮಳೆಯಾಗದಿದ್ದರೆ ಬರದ ಛಾಯೆ ಹೆಚ್ಚಾಗಲಿದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ ತಿಳಿಸಿದ್ದಾರೆ.