
ಚಾಮರಾಜನಗರ(ಏ.12): ಕೊರೋನಾದಿಂದ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ರೈತರೊಬ್ಬರು ಬೆಳೆದ ಹುರುಳಿಯನ್ನು ಹಂಚುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಸಮೀಪದ ಹೆಗ್ಗವಾಡಿಪುರದ ರೈತ ನಾಯಕ ಮಹೇಶ್ ಕುಮಾರ್ ತಮ್ಮ 4 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಹುರುಳಿ ಬೆಳೆದಿದ್ದರು. ಈಗ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕೂಲಿ ಸಿಗುತ್ತಿಲ್ಲ. ಸರ್ಕಾರ ಇವರ ನೆರವಿಗೆ ಪಡಿತರ ನೀಡಿದ್ದರೂ, ಇದು ಇನ್ನೂ ಸಾಲದಾಗಿದೆ. ಈ ಹಿನ್ನೆಲೆಯಲ್ಲಿ ತಾವು ಬೆಳೆದ 7 ಕ್ವಿಂಟಾಲ್ ಹುರುಳಿಯನ್ನು ಹೆಗ್ಗವಾಡಿಪುರ ಹಾಗೂ ದೇಶವಳ್ಳಿ ಗ್ರಾಮದ ಸಂಕಷ್ಟಕ್ಕೊಳಗಾದ ಕೆಲ ಕುಟುಂಬಗಳಿಗೆ ನೀಡಲು ಮುಂದಾಗಿ ಇದನ್ನು ಶನಿವಾರ ಹಂಚಿಕೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹುರುಳಿ ಒಂದು ಪೌಷ್ಟಿಕ ಕಾಳು. ಇದರಲ್ಲಿ ಹೇರಳ ಜೀವಸತ್ವಗಳಿವೆ. ರೋಗ ನಿರೋಧಕ ಶಕ್ತಿಯೂ ಅಧಿಕವಾಗಿದೆ. ಈ ಹಿಂದೆ ಸಂಕ್ರಾಮಿಕ ರೋಗ ಬಂದ ಸಂದರ್ಭದಲ್ಲಿ ಹುರುಳಿಯನ್ನು ಬೇಯಿಸಿ ಇದರ ನೀರನ್ನು ಕುಡಿಸುವುದು ಹಾಗೂ ಇದನ್ನು ತಿನ್ನಿಸುವ ಪದ್ಧತಿ ರೂಢಿಯಲ್ಲಿತ್ತು ಎಂದು ನನ್ನ ಪೂರ್ವಜರಿಂದ ನಾನು ತಿಳಿದುಕೊಂಡಿದ್ದೇನೆ ಎಂದರು.
ಸೇಫ್ ಆಗುತ್ತಿದ್ದ ಭಾರತವನ್ನು ತಬ್ಲಿಘಿ ಡೇಂಜರ್ ಝೋನ್‌ಗೆ ತಳ್ಳಿದ್ದು ಹೇಗೆ?
ಈ ಹಿನ್ನೆಲೆಯಲ್ಲಿ ಇದನ್ನು ಮಾರುವ ಬದಲು ಪ್ರತಿ ಸಂತ್ರಸ್ತ ಕುಟುಂಬಗಳಿಗೂ ನೀಡಲು ಮನಸ್ಸು ಮಾಡಿದ್ದೇನೆ. ಹೆಗ್ಗವಾಡಿಪುರ ಹಾಗೂ ದೇಶವಳ್ಳಿ ಗ್ರಾಮದ ಕೆಲ ಕುಟುಂಬಗಳಿಗೆ ಇದನ್ನು ಹಂಚಲಾಗುತ್ತಿದೆ. ತಲಾ ಅರ್ಧ ಕೆಜಿಯಂತೆ ಒಂದು ಸಾವಿರಕ್ಕೂ ಹೆಚ್ಚಿನ ಕುಟುಂಬಗಳಿಗೆ ಇದನ್ನು ಹಂಚಲಾಗುತ್ತಿದೆ.
ಕೆಲ ಹಕ್ಕಿಪಿಕ್ಕಿ ಜನಾಂಗಗಳಿಗೂ ಹೊದಿಕೆ, ದಿಂಬು ಹಾಗೂ ಆಹಾರ ಪದಾರ್ಥಗಳನ್ನು ವಿತರಿಸಲಾಗಿದೆ ಇದರೊಂದಿಗೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿಯೊಬ್ಬರೂ ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದೊಂದಿಗೆ ಸಂತ್ರಸ್ತರೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಪತ್ನಿ ಸುಮಾ, ಪುತ್ರರಾದ ಎಚ್.ಎಂ. ಅಜಯ್, ಎಚ್.ಎಂ. ಓಂಕಾರ್, ಮಲ್ಲೇಶ್ ಇತರರು ಇದ್ದರು.