
ಹಾವೇರಿ(ಮೇ.04): ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಗೆ ಹಸಿ ಮೆಣಸಿನಕಾಯಿ ಸಾಗಿಸಲು ಅವಕಾಶ ಇಲ್ಲದೇ ಬೆಲೆ ಕುಸಿತ ಉಂಟಾಗಿ ತಾಲೂಕಿನ ಆಲದಕಟ್ಟಿ ಗ್ರಾಮದ ರೈತನೊಬ್ಬ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಗುಂಟೂರು ಮೆಣಸಿನಕಾಯಿ ಗಿಡಗಳನ್ನು ಟ್ರ್ಯಾಕ್ಟರ್ ಹೊಡೆದು ನಾಶಮಾಡಿದ್ದಾನೆ.
ರೈತ ಬಸವಂತಪ್ಪ ಅಗಡಿ ಅವರು ಬೆಳೆದ 3 ಎಕರೆ ಗುಂಟೂರು ಚಿಲ್ಲಿಯನ್ನು ರೂಟರ್ ಹೊಡೆದು ನಾಶಪಡಿಸಿದ್ದಾರೆ. ಬಸವಂತಪ್ಪನವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಗುಂಟೂರು ತಳಿಯ ಹಸಿಮೆಣಸಿನಕಾಯಿಯನ್ನು ಸಾಕಷ್ಟುಕಷ್ಟಪಟ್ಟು ಬೆಳೆಸಿದ್ದರು. ಲಕ್ಷಾಂತರ ರು. ಖರ್ಚು ಮಾಡಿದ್ದರು.
ನಕಲಿ ಬೀಜ ಮಾರಾಟ ಹಗರಣ: ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ, ಸಚಿವ ಪಾಟೀಲ
ಕೊರೋನಾ ಹಾವಳಿಯಿಂದಾಗಿ ಪುಣೆ-ಮುಂಬೈ ಹಾಗೂ ಹೊರ ಜಿಲ್ಲೆಗಳಿಗೆ ಚಿಲ್ಲಿ ರಫ್ತಾಗದಿರುವುದರಿಂದ ಒಂದು ಕ್ವಿಂಟಲ್‌ಗೆ ಕೇವಲ 800 ರಿಂದ 1000 ಮಾತ್ರ ಬೆಲೆ ಇದೆ. ಅಲ್ಲದೇ ಕಾಯಿ ಬಿಡಿಸಲು ಆಳುಗಳು ಸಿಗದ ಕಾರಣ ಬೇಸತ್ತು ಹುಲುಸಾಗಿ ಬೆಳೆದ ಚಿಲ್ಲಿಯನ್ನು ನಾಶಪಡಿಸಿದ್ದಾನೆ. ಬೀಜ, ಗೊಬ್ಬರ, ಔಷಧ ಹಾಗೂ ಕಳೆ ಮತ್ತು ಗಳೆ ಇತ್ಯಾದಿಗಾಗಿ ಮೂರು ಎಕರೆಗೆ ಒಟ್ಟು 1.5 ಲಕ್ಷ ಖರ್ಚು ಮಾಡಿದ್ದ ರೈತನಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ಪ್ರಗತಿಪರ ರೈತರಾದ ಶಿವಯೋಗಿ ವಾರ್ತಿ, ಸದಾನಂದ ಹಿರೇಮಠ, ಮಂಜುನಾಥ ಅಗಡಿ, ಕೃಷಿ ಸಲಹೆಗಾರ ಡಾ. ಜಿ.ಎಸ್. ಕುಲಕರ್ಣಿ ಒತ್ತಾಯಿಸಿದ್ದಾರೆ.