ಚಿಕ್ಕಮಗಳೂರು: ಆಲೂಗೆಡ್ಡೆ ಬೆಳೆ ಮೇಲೆ ಟ್ರ್ಯಾಕ್ಟರ್ ಚಲಾಯಿಸಿದ ರೈತ..!

By Girish GoudarFirst Published May 31, 2023, 9:03 AM IST
Highlights

ಆಲೂಗೆಡ್ಡೆ ಬೀಜ ನೆಲದಲ್ಲಿ ಕರಗಿರೋದ್ರಿಂದ ಮನನೊಂದು ಟ್ರ್ಯಾಕ್ಟರ್ ಚಾಲನೆ, ಕಳಪೆ ಬಿತ್ತನೆ ಬೀಜ ವಿತರಣೆ ಆರೋಪ ಮಂಡಿ ವಿರುದ್ಧ ರೈತರ ಅಸಮಾಧಾನ, ಚಿಕ್ಕಮಗಳೂರಿನ ಸಿರ್ಗಾಪುರ ಗ್ರಾಮದಲ್ಲಿ ನಡೆದ ಘಟನೆ 
 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಮೇ.31): ಆಲೂಗೆಡ್ಡೆ ಬೆಳೆಯನ್ನು ಬೆಳೆದರೆ ಕೈ ಸುಟ್ಟುಕೊಳ್ಳುವುದೂ ಖಂಡಿತ ಎನ್ನುವ ಮಾತು ರೈತತಾಪಿ ವರ್ಗದಲ್ಲಿ ಇದೆ. ಚಿಕ್ಕಮಗಳೂರಿನಲ್ಲಿ ರೈತರು ಆಲೂಗೆಡ್ಡೆ ಬೆಳೆ ಬೆಳೆದು ಲಾಭ ನಿರೀಕ್ಷೆಯನ್ನು ನೋಡುತ್ತಿದ್ದರು. ಆದ್ರೆ ಕಳಪೆ ಗುಣ ಮಟ್ಟದ ಬಿತ್ತನೆ ಬೀಜದ ಪರಿಣಾಮ ಆಲೂಗೆಡ್ಡೆ ಬೀಜ ನೆಲದಲ್ಲಿ ಕರಗಿರೋದ್ರಿಂದ ಮನನೊಂದು ಟ್ರ್ಯಾಕ್ಟರ್ ಚಾಲನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. 

ಕಳಪೆ ಬಿತ್ತನೆ ಬೀಜ ವಿತರಣೆ ಆರೋಪ ಮಂಡಿ ವಿರುದ್ಧ ರೈತರ ಅಸಮಾಧಾನ 

ಚಿಕ್ಕಮಗಳೂರು ಜಿಲ್ಲೆಯ ರೈತರು ಹಲವು ತರಕಾರಿ ಬೆಳೆಗಳನ್ನು ಬೆಳೆಯತ್ತಾರೆ ಇದರ  ಜೊತಗೆ ಆಲೂಗಡೆ ಬೆಳೆಯನ್ನು ಕೂಡ ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಈ ಬಾರಿ ಸುಮಾರು 5 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಆಲೂಗಡ್ಡೆಯನ್ನು ಬೆಳೆಯಲಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಆಲೂಗಡ್ಡೆ ಬೆಳೆ ಆರಂಭದಲ್ಲಿ ಬಿದ್ದ ಮಳೆಗೆ ಹುಲುಸಾಗಿ ಬೆಳೆದಿತ್ತು. ಜಿಲ್ಲೆಯ ತರೀಕೆರೆ, ಲಿಂಗದಹಳ್ಳಿ, ಅಂಬಳೆ, ಕಸಬಾ, ಖಾಂಡ್ಯ, ಕೋಡಿಹಳ್ಳಿ, ಬಿಗ್ಗದೇವನಹಳ್ಳಿ, ಬೀಕನಹಳ್ಳಿ, ಹಂಪಾಪುರ, ಬಿಳೇಕಲ್ಲು ಮುಂತಾದ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಲೂಗಡ್ಡೆಯನ್ನು ಬೆಳೆಯಲಾಗುತ್ತಿದೆ. ಈ ಭಾಗದ ರೈತರು ಈ ಬಾರಿ ಹಾಸನದಿಂದ ಉತ್ತಮ ತಳಿ ಆಲೂಗಡ್ಡೆಯ ಬೀಜವನ್ನು ದುಬಾರಿ ಹಣ ನೀಡಿ ಬೀಜ ಮತ್ತು ಗೊಬ್ಬರವನ್ನು ತಂದು ಬಿತ್ತನೆ ಮಾಡಿದ್ದಾರೆ..ಹೀಗೆ ಬಿತ್ತನೆ ಮಾಡಿರುವ ಆಲೂಗೆಡ್ಡೆ ಬೆಳೆ ಕೈಕೊಟ್ಟಿರುವ ಪರಿಣಾಮ ರೈತ ಹಾಸನ ಖಾಸಗಿ ಮಂಡಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. 

ಕಾಫಿನಾಡಿನ ಉರಗ ತಜ್ಞ ಸ್ನೇಕ್‌ ನರೇಶ್‌ ಹಾವು ಕಚ್ಚಿ ಸಾವು: ರಕ್ಷಣೆ ಮಾಡಿದ ಹಾವೇ ಕಚ್ಚಿಬಿಡ್ತು!

ಆಲೂಗೆಡ್ಡೆ ಬೆಳೆ ಮೇಲೆ ಟ್ರ್ಯಾಕ್ಟರ್  ಚಲಾಯಿಸಿದ ರೈತ  

ಸಾವಿರಾರು ರೂಪಾಯಿ ಖರ್ಚು ಮಾಡಿ ಆಲೂಗಡ್ಡೆ ಬೆಳೆ ಬೆಳೆದಿದ್ದ ಚಂದ್ರು ಎನ್ನುವ ರೈತರು ಮನನೊಂದು ಟ್ರ್ಯಾಕ್ಟರ್ ಚಾಲನೆ ಮಾಡಿ ಬೆಳೆ ನಾಶ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಸಿರ್ಗಾಪುರ ಗ್ರಾಮದಲ್ಲಿ ನಡೆದಿದೆ. ಹಾಸನದ ಆಲೂಗಡ್ಡೆ ಮಂಡಿಯಲ್ಲಿ 5 ದಿನಕ್ಕೆ ಬೆಳೆ ಬೆಳೆಯುತ್ತೆ ಎಂದು ಕೊಟ್ಟ ಬೀಜವನ್ನು 60 ರಿಂದ 70 ಜನ ರೈತರು ಮೂರು ಲಾರಿಯಲ್ಲಿ ತಂದಿದ್ದರು. ರೈತರಾದ ಚಂದ್ರು ತಮ್ಮ 10 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದರು ಆದರೆ 15 ದಿನವಾದರೂ ಬೆಳೆ ಬಾರದೆ ಹಾಗೂ ಆಲೂಗಡ್ಡೆ ಬೀಜ ನೆಲದಲ್ಲಿ ಕರಗಿರೋದ್ರಿಂದ ರೈತ ಮನನೊಂದು ಟ್ರ್ಯಾಕ್ಟರ್ ಚಲಾಯಿಸಿದ್ದಾರೆ. ಆಲೂಗಡ್ಡೆ ಮಂಡಿ ವಿರುದ್ಧ ರೈತರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಮಲೆನಾಡಿನಲ್ಲಿ ಆಲೂಗೆಡ್ಡೆ ಬೆಳೆ ಬೆಳೆದ ರೈತರು ಆತಂಕಕ್ಕೆ ಹಿಡಿಯಾಗಿದ್ದಾರೆ. ಕೂಡಲೇ ಅಧಿಕಾರಿಗಳು ಮಧ್ಯೆ ಪ್ರವೇಶಮಾಡಿ ಕನಿಷ್ಟ ಪರಿಹಾರವನ್ನಾದರೂ ನೀಡಬೇಕೆಂಬ ಆಗ್ರಹ ಜಿಲ್ಲೆಯ ಆಲೂಗೆಡ್ಡೆ ಬೆಳೆ ಬೆಳೆದ ರೈತರದ್ದು.

click me!