
ಬೆಂಗಳೂರು (ಅ.30): ರಾಜಧಾನಿಯ ಎರಡು ಪ್ರಮುಖ ರಸ್ತೆಗಳಿಗೆ ಸಾಧಕರ ಹೆಸರು ನಾಮಕರಣ ಮಾಡಬೇಕು ಎಂಬ ಮನವಿ ದಿನದಿಂದ ದಿನಕ್ಕೆ ಒತ್ತಾಯದ ರೂಪ ಪಡೆದುಕೊಳ್ಳುತ್ತಿದೆ. ಇದೀಗ ದಿವಂಗತ ನಟ ಪುನೀತ್ ರಾಜಕುಮಾರ್ ಹಾಗೂ ವಿರಾಟ್ ಕೊಹ್ಲಿ ಅವರ ಹೆಸರನ್ನು ಎರಡು ಪ್ರತ್ಯೇಕ ರಸ್ತೆಗಳಿಗೆ ಇರಿಸುವ ಮೂಲಕ ಅಭಿಮಾನಿಗಳ ಆಶಯ ಈಡೇರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಶಾಂತಿನಗರ ಬಸ್ ಟರ್ಮಿನಲ್ ಎದುರಿನ ಪುನೀತ್ ರಾಜಕುಮಾರ್ ಅವರ ಹೆಸರು ಹಾಗೂ ವಿಲ್ಸನ್ ಗಾರ್ಡನ್ನ 8ನೇ ಅಡ್ಡರಸ್ತೆಗೆ ವಿರಾಟ್ ಕೊಹ್ಲಿ ಹೆಸರು ಇಡಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ, ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರು ಸರ್ಕಾರದ ಜೊತೆಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ. ವಿಲ್ಸನ್ ಗಾರ್ಡನ್ನ 8ನೇ ಅಡ್ಡರಸ್ತೆ ಹಾಗೂ ಶಾಂತಿನಗರ ಬಸ್ ನಿಲ್ದಾಣದ ಮುಂಭಾಗದ ರಸ್ತೆಗಳಿಗೆ ಈವರೆಗೆ ಯಾವುದೇ ಅಧಿಕೃತ ಹೆಸರು ಇರಿಸಿಲ್ಲ. ಹೀಗಾಗಿ ಈ ಎರಡೂ ರಸ್ತೆಗಳಿಗೆ ಈ ಎರಡು ಹೆಸರು ನಾಮಕರಣ ಮಾಡುವಂತೆ ಆಗ್ರಹ ಮಾಡಲಾಗಿದೆ.
ರಸ್ತೆ ದುರಸ್ತಿಗೂ ಮುನ್ನ ಚರಂಡಿ ಸ್ವಚ್ಛಗೊಳಿಸಿ: ತುಷಾರ್ ಗಿರಿನಾಥ್
ಗುಂಡಿ ಮುಚ್ಚಲು ನ.5 ಗಡುವು: ನಗರದ ರಸ್ತೆ ಗುಂಡಿಗಳನ್ನು ನ.5ರ ಒಳಗಾಗಿ ಸಂಪೂರ್ಣವಾಗಿ ಮುಚ್ಚುವಂತೆ ಎಂಜಿನಿಯರ್‌ಗಳಿಗೆ ಬಿಬಿಎಂಪಿಯ ಮುಖ್ಯಆಯುಕ್ತ ತುಷಾರ್ ಗಿರಿನಾಥ್ ಗಡುವು ನೀಡಿದ್ದಾರೆ. ಕಳೆದೊಂದು ವಾರದಿಂದ ಮಳೆ ತಗ್ಗಿದ್ದರೂ ಗುಂಡಿ ಮುಚ್ಚುವಲ್ಲಿ ಪಾಲಿಕೆ ಎಂಜಿನಿಯರ್‌ಗಳು ವಿಫಲವಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವನ್ನು ನೋಡಿದ ಪಾಲಿಕೆ ಮುಖ್ಯ ಆಯುಕ್ತರು ರಸ್ತೆಗಳ ಗುಂಡಿಗಳನ್ನು ಮುಚ್ಚಲು ನ.5ರವರೆಗೆ ಗಡುವು ನೀಡಿ ಕಚೇರಿ ಆದೇಶ ಹೊರಡಿಸಿದ್ದಾರೆ.
ಅ.26ರಂದು ಕಚೇರಿ ಸುತ್ತೋಲೆಯನ್ನು ಹೊರಡಿಸಿದ್ದು, 10 ದಿನಗಳ ಒಳಗಿ ರಸ್ತೆ ಮತ್ತು ಮೂಲ ಸೌಕರ್ಯ ವಿಭಾಗದ ಎಲ್ಲ ಹಂತದ ಎಂಜಿನಿಯರ್‌ಗಳಿಗೂ ಸುತ್ತೋಲೆ ತಲುಪಿಸಲು ಗಡುವು ನೀಡಲಾಗಿದೆ. ನಂತರದ ಅವಧಿಯಲ್ಲಿ ಸಮರೋಪಾದಿಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚುವ ಕಾರ್ಯವನ್ನು ಪೂರ್ಣಗೊಳಿಸಬೇಕು. ಈ ಬಗ್ಗೆ ಪ್ರಧಾನ ಮತ್ತು ಮುಖ್ಯ ಎಂಜಿನಿಯರ್‌ಗಳು ತಮ್ಮ ಅಧೀನದ ಅಧೀಕ್ಷಕ ಅಭಿಯಂತರ, ಕಾರ್ಯಪಾಲಕ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರ ಮತ್ತು ಸಹಾಯಕ ಅಭಿಯಂತರ ಅವರಿಗೆ ಸಂಬಂಧಪಟ್ಟಗುರಿಯನ್ನು ನೀಡಿ ಕೆಲಸ ಪೂರ್ಣಕ್ಕೆ ಕ್ರಮವಹಿಸಬೇಕು ಎಂದು ತಿಳಿಸಲಾಗಿದೆ.
ಫುಟ್‌ಪಾತ್‌ನಲ್ಲಿ ನಿರ್ಮಿಸಿದ್ದ ಶೆಡ್ ತೆರವುಗೊಳಿಸಿದ ಮುಖ್ಯ ಆಯುಕ್ತ ತುಷಾರ್
ಶಿಸ್ತು ಕ್ರಮದ ಎಚ್ಚರಿಕೆ: ರಸ್ತೆ ಗುಂಡಿಗಳನ್ನು ಮುಚ್ಚಲು ಈಗ ನೀಡಿರುವ ಕಾಲಮಿತಿಯ ಒಳಗಾಗಿ ಗುಂಡಿ ಮುಚ್ಚಲು ವಿಫಲರಾದ ಅಧಿಕಾರಿಗಳಿಗೆ ನ.6ರಂದು ನೋಟಿಸ್ ಜಾರಿಗೊಳಿಸಲಾಗುತ್ತದೆ. ಈ ನೋಟಿಸ್‌ಗೆ ಐದು ದಿನದ ಒಳಗಾಗಿ ಸೂಕ್ತ ಕಾರಣಗಳೊಂದಿಗೆ ಕಾರ್ಯದಲ್ಲಿ ವಿಫಲರಾಗಿರುವ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಈ ವೇಳೆ ರಸ್ತೆಗುಂಡಿ ಮುಚ್ಚುವಲ್ಲಿ ಯಾವುದೇ ಸಕಾರಣಗಳಿಲ್ಲದೇ ನಿರ್ಲಕ್ಷ್ಯದಿಂದ ವಿಫಲ ಆಗಿರುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ರಾಜ್ಯ ನಾಗರಿಕ ಸೇವಾ ನಿಯಮಗಳು ಅನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.