* ಇದರ ವಿರುದ್ಧ ದೂರು ಕೊಟ್ಟು ತನಿಖೆಗೆ ಮುಂದಾದ ರೈಲ್ವೆ ಇಲಾಖೆ
* ನಿರುದ್ಯೋಗಿಗಳನ್ನು ಮರಳು ಮಾಡಿ ದುಡ್ಡು ಮಾಡುವ ಜಾಲ ಸಾಧ್ಯತೆ: ರೈಲ್ವೆ ಇಲಾಖೆ ಕಳವಳ
* ಜಿಎಂ ಕೋಟಾದಡಿ ನೇಮಕಾತಿಯೇ ಆಗುವುದಿಲ್ಲ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಏ.28): ರಾಜ್ಯ ಸರ್ಕಾರದ ವ್ಯಾಪ್ತಿಯ ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಅಕ್ರಮ ನೇಮಕಾತಿಯ ಹಗರಣ ಹೊರಬರುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ(Central Government) ರೈಲ್ವೆ ಇಲಾಖೆಯಲ್ಲೇ(Railway Recruitment) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ನೋಟಿಫಿಕೇಶನ್‌ನ್ನೇ ನಕಲಿ ಹೊರಡಿಸಿರುವುದು ಬೆಳಕಿಗೆ ಬಂದಿದೆ. ಇದೀಗ ರೈಲ್ವೆ ಇಲಾಖೆಯೂ ಇದರ ವಿರುದ್ಧ ದೂರು ನೀಡಲು ಮುಂದಾಗಿದ್ದು, ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ಮೋಸ ಮಾಡುವ ರಾಕೇಟ್‌ಗಳು ಇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇಂಥವರಿಂದ ಹುಷಾರಾಗಿರಿ ಎಂದು ಎಚ್ಚರಿಕೆ ನೀಡಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಜಾಗೃತಿಯನ್ನುಂಟು ಮಾಡುವ ಕೆಲಸವನ್ನು ರೈಲ್ವೆ ಇಲಾಖೆ ಮಾಡುತ್ತಿದೆ.
ಏನಾಗಿದೆ?:
ನೈಋುತ್ಯ ರೈಲ್ವೆ(South Western Railway) ವಲಯದ ವ್ಯಾಪ್ತಿಯಲ್ಲಿ ಜಿಎಂ (ಮಹಾಪ್ರಬಂಧಕರು) ಕೋಟಾದಡಿ ಇಂತಿಷ್ಟುಟೆಕ್ನಿಕಲ್ ಹಾಗೂ ನಾನ್ ಟೆಕ್ನಿಕಲ್ 2800 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಸಾರ್ವಜನಿಕವಾಗಿ ಮಾಡಬಾರದು ಎಂದು ಖಚಿತ ಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂಬುದು ಸೇರಿದಂತೆ ವಿವಿಧ ಸೂಚನೆಗಳುಳ್ಳ ಪತ್ರ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಸಾರ್ವಜನಿಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಬಾರದೆಂದು ಇಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ರೈಲ್ವೆ ಇಲಾಖೆಯಲ್ಲಿ ಕದ್ದುಮುಚ್ಚಿ ನೇಮಕಾತಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಯೂ ಹರಿದಾಡುತ್ತಿರುವ ಪತ್ರದಿಂದ ಉದ್ಭವವಾಗುತ್ತದೆ.
PSI Recruitment Scam: ದಿವ್ಯಾ ವಿರುದ್ಧ ಅರೆಸ್ಟ್ ವಾರೆಂಟ್: ಸರೆಂಡರ್ ಆಗದಿದ್ರೆ ಆಸ್ತಿ ಜಪ್ತಿ..!
ನಕಲಿ ಸಹಿ, ಸೀಲು:
ಹೀಗೆ ಜಿಎಂ(GM) ಕೋಟಾದಡಿ ಹೊರಡಿಸಿರುವ ನೋಟಿಫಿಕೇಶನ್‌ನಲ್ಲಿ ಜಿಎಂ ಸಹಿ ಹಾಗೂ ಸೀಲುಗಳನ್ನು ಸಹ ನಕಲಿಯೇ ಮಾಡಲಾಗಿದೆ. ಸಹಿ ದಿನಾಂಕ 2022ರ ಮಾರ್ಚ್ 31 ಎಂದು ನಮೂದಾಗಿದೆ. ಈ ಪತ್ರ ನೋಡಿದರೆ ಯಾರೂ ಇದು ನಕಲಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಈ ರೀತಿ ಪತ್ರ, ನೋಟಿಫಿಕೇಶನ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ(Social Media) ಹರಿಬಿಟ್ಟು ನಿರುದ್ಯೋಗಿಗಳನ್ನು ನಂಬಿಸಿ ದುಡ್ಡು ವಸೂಲಿ ಮಾಡುವ ಜಾಲವಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಸಾಕಷ್ಟುಜನರು ಮೋಸ ಹೋಗಿರುವ ಸಾಧ್ಯತೆಯೂ ಉಂಟು. ಈ ಬಗ್ಗೆ ತನಿಖೆ ನಡೆಸಬೇಕು ಎಂಬ ಆಗ್ರಹ ಸಾರ್ವಜನಿಕರದ್ದು.
ಜಾಗೃತಿ, ದೂರು:
ಈ ಪತ್ರದ ಬಗ್ಗೆ ನೈಋುತ್ಯ ರೈಲ್ವೆ ವಲಯವು ಇದೀಗ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಜಿಎಂ ಕೋಟಾದಡಿ ಯಾವುದೇ ನೇಮಕಾತಿ ಮಾಡಿಕೊಳ್ಳುವ ಅವಕಾಶವೇ ರೈಲ್ವೆ ಇಲಾಖೆಯಲ್ಲಿಲ್ಲ. ರೈಲ್ವೆ ಇಲಾಖೆಯ ಯಾವುದೇ ಹುದ್ದೆಗಳಿದ್ದರೂ ಆರ್‌ಆರ್‌ಬಿ (Railway Recruitment Board) ಮೂಲಕವೇ ಮಾಡಿಕೊಳ್ಳಲಾಗುತ್ತದೆ. ಜತೆಗೆ ಸಾರ್ವಜನಿಕರಿಗೆ ಸಲೀಸಾಗಿ ಸಿಗುವ ಮಾರ್ಗದ ಮೂಲಕವೇ ನೋಟಿಫಿಕೇಶನ್ ಹೊರಡಿಸಲಾಗುತ್ತದೆ. ಸಮಗ್ರ ಮಾಹಿತಿ ಇದರಲ್ಲಿ ಇರುತ್ತದೆ. ಇದೀಗ ಹರಿದಾಡುತ್ತಿರುವ ಪತ್ರ ಅಥವಾ ನೋಟಿಫಿಕೇಶನ್ ನಕಲಿಯಾಗಿದೆ. ನಿರುದ್ಯೋಗಿಗಳನ್ನು ಮರಳು ಮಾಡಿ ಮೋಸ ಮಾಡುವ ಜಾಲವೂ (ರಾಕೇಟರ್ಸ್) ಇದರಲ್ಲಿ ಇರುವ ಸಾಧ್ಯತೆಯುಂಟು. ರೈಲ್ವೆ ಇಲಾಖೆಯಲ್ಲಿ ಈ ರೀತಿ ನೇಮಕಾತಿಯಾಗುವುದಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಜಾಗೃತಿ ಮೂಡಿಸುತ್ತಿದೆ. ಜತೆಗೆ ನಕಲಿ ಪತ್ರ ಅಥವಾ ನೋಟಿಫಿಕೇಶನ್ ಹೊರಡಿಸಿರುವ ಬಗ್ಗೆ ದೂರು ನೀಡಿ ತನಿಖೆ ನಡೆಸಲು ಮುಂದಾಗಿದ್ದೇವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಡಿಕೆಶಿ ಜತೆಗೆ ದಿವ್ಯಾ ಹಾಗರಗಿ ಫೋಟೋ ವೈರಲ್: ಸಾಮಾಜಿಕ ಜಾಲತಾಣದಲ್ಲಿ ಬಿಸಿ-ಬಿಸಿ ಚರ್ಚೆ
ಒಟ್ಟಿನಲ್ಲಿ ಪಿಎಸ್‌ಐ ಅಕ್ರಮ ನೇಮಕಾತಿ ಬೆನ್ನಲ್ಲೇ ಇದೀಗ ರೈಲ್ವೆ ಇಲಾಖೆಯಲ್ಲಿ ಅರ್ಜಿ ಆಹ್ವಾನಿಸದೇ ಹುದ್ದೆಗಳ ಭರ್ತಿಗೆ ನಕಲಿ ಜಾಲವೊಂದು ಕೆಲಸ ಮಾಡುತ್ತಿದೆಯೇ? ಎಂಬ ಪ್ರಶ್ನೆ ಹರಿದಾಡುತ್ತಿರುವ ಪತ್ರ ಹಾಗೂ ಇಲಾಖೆಯ ಜಾಗೃತಿಯಿಂದ ಉದ್ಭವಾಗಿದೆ.
ರೈಲ್ವೆ ಇಲಾಖೆಯಲ್ಲಿ ಇಂತಿಷ್ಟು ಹುದ್ದೆಗಳು ಖಾಲಿಯಿವೆ ಎಂಬ ನಕಲಿ ನೋಟಿಫಿಕೇಶನ್‌ನ ಪ್ರತಿ ದೊರೆತಿದೆ. ಅದರಲ್ಲಿ ಜಿಎಂ ಕೋಟಾದಡಿ ನೇಮಕಾತಿ ಎಂದು ಕೂಡ ಇದೆ. ಜಿಎಂ ಕೋಟಾದಡಿ ನೇಮಕಾತಿಯೇ ಆಗುವುದಿಲ್ಲ. ಪತ್ರ ಅಥವಾ ನೋಟಿಫಿಕೇಶನ್‌ಗೆ ಬಳಿಸಿರುವ ಸೀಲು, ಸಹಿ ಎಲ್ಲವೂ ನಕಲಿಯಾಗಿವೆ. ಆರ್‌ಪಿಎಫ್‌ಗೆ ದೂರು ನೀಡುವಂತೆ ಸಂಬಂಧಪಟ್ಟವಿಭಾಗಕ್ಕೆ ಸೂಚಿಸಲಾಗಿದೆ. ಅಮಾಯಕರಿಂದ ದುಡ್ಡು ಮಾಡಿಕೊಳ್ಳುವ ಜಾಲ ಇದಾಗಿರಬಹುದು. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಅಂತ ನೈಋುತ್ಯರೈಲ್ವೆ ಇಲಾಖೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.