
ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಿವೃತ್ತ ಪ್ಯಾರಾ ಕಮಾಂಡೋ ಹಾಗೂ ಮಾಜಿ ಸೈನಿಕನಿಗೆ ಅವಮಾನವಾದ ಘಟನೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಕಾಸರಗೋಡು ಮೂಲದ ಮಾಜಿ ಸೈನಿಕ ಶ್ಯಾಮರಾಜ ಅವರಿಗೆ ಟೋಲ್ ವಿನಾಯಿತಿ ನಿರಾಕರಿಸಿದ ಹಿನ್ನೆಲೆ, ಈ ಘಟನೆಗೆ ಸಂಬಂಧಿಸಿದಂತೆ ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಘಟನೆ ಬಳಿಕ ಮಾತನಾಡಿದ ಶ್ಯಾಮರಾಜ, “ಟೋಲ್ ಸಿಬ್ಬಂದಿಗಳು ನನ್ನಿಂದ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ನನಗೆ ಅವಮಾನ ಮತ್ತು ಬೇಸರವಾಗಿದ್ದು ನಿಜ. ಆದರೆ ಅವರು ಕ್ಷಮೆ ಕೇಳಿರುವುದರಿಂದ ನಾನು ಅವರನ್ನು ಕ್ಷಮಿಸಿದ್ದೇನೆ. ನಾನು ಅವರನ್ನು ಕ್ಷಮಿಸದೇ ಇದ್ದರೆ ಮತ್ತಾರು ಕ್ಷಮಿಸುತ್ತಾರೆ? ಟೋಲ್ ಸಿಬ್ಬಂದಿಗಳು ನನ್ನ ಸಹೋದರರಂತೆಯೇ ಇದ್ದಾರೆ. ನಾವೆಲ್ಲರೂ ಸೇರಿ ಅವರನ್ನು ಕ್ಷಮಿಸೋಣ” ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ, “ನನ್ನ ಪರವಾಗಿ ಧ್ವನಿ ಎತ್ತಿದ ಎಲ್ಲರಿಗೂ ಧನ್ಯವಾದಗಳು. ನನಗೆ ನ್ಯಾಯ ಒದಗಿಸಲು ನೀವು ಸಾಕಷ್ಟು ಪ್ರಯತ್ನಿಸಿದ್ದೀರಿ. ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಟೋಲ್ ಸಿಬ್ಬಂದಿಗಳು ಭರವಸೆ ನೀಡಿದ್ದಾರೆ. ಎಲ್ಲರಿಗೂ ನನ್ನ ನಮಸ್ಕಾರ” ಎಂದು ಅವರು ತಿಳಿಸಿದ್ದಾರೆ.
ಮಾಜಿ ಸೈನಿಕ ಶ್ಯಾಮರಾಜ ಅವರು ಸಾಸ್ತಾನ ಟೋಲ್ ಗೇಟ್‌ನಲ್ಲಿ ತಮ್ಮ ಬಳಿ ವಿನಾಯಿತಿ ಪತ್ರವಿದ್ದರೂ ಸಹ ಟೋಲ್ ಪಾವತಿಸಲು ಒತ್ತಾಯಿಸಲಾಗಿದೆ ಎಂದು ಆರೋಪಿಸಿದ್ದರು. ಇದರಿಂದ ಮನನೊಂದ ಅವರು ಘಟನೆಯ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ವಿಷಯ ಬೆಳಕಿಗೆ ಬಂದ ನಂತರ, ಟೋಲ್ ಸಿಬ್ಬಂದಿಗಳು ಇದು ಅಚಾತುರ್ಯದಿಂದ ಸಂಭವಿಸಿದೆ ಎಂದು ಹೇಳಿ ಶ್ಯಾಮರಾಜ ಅವರ ಬಳಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದರು. ಆದರೆ, ಕೆಲ ಮಾಜಿ ಸೈನಿಕರು ಹಾಗೂ ಸಂಘಟನೆಗಳು, “ಸೈನಿಕರಿಗೆ ಅವಮಾನ ಎಂದರೆ ದೇಶಕ್ಕೆ ಅವಮಾನ” ಎಂದು ಹೇಳಿ, ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸೈನಿಕರು ಪೊಲೀಸರಿಗೆ ದೂರು ನೀಡಿದ್ದು, ಡಿವೈಎಸ್ಪಿ ಪ್ರಭು ಡಿ.ಟಿ ಅವರು ದೂರು ಸ್ವೀಕರಿಸಿದ್ದಾರೆ. ಸಂಬಂಧಪಟ್ಟ ಸಿಬ್ಬಂದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಆರು ಮಂದಿ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯೂ ಮುಂದಿಡಲಾಗಿದೆ.
ಒಂದೆಡೆ ಮಾಜಿ ಸೈನಿಕ ಶ್ಯಾಮರಾಜ ಕ್ಷಮೆ ಮತ್ತು ಸೌಹಾರ್ದತೆಯ ಸಂದೇಶ ನೀಡಿದರೆ, ಮತ್ತೊಂದೆಡೆ ಸೈನಿಕರ ಗೌರವಕ್ಕೆ ಧಕ್ಕೆಯಾಗುವ ಯಾವುದೇ ಘಟನೆ ನಡೆಯಬಾರದು ಎಂಬ ನಿಲುವಿನೊಂದಿಗೆ ತನಿಖೆ ಮುಂದುವರಿದಿದೆ.