ಕಲ್ಯಾಣ ಮಂಟಪದಲ್ಲಿ ಕೇರಳ ಮೂಲದ ಅಕ್ಷಯ್ ಎಂಬುವರ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಡೆಯುತ್ತಿತ್ತು. ಈ ವೇಳೆ, ಮೈಸೂರು ಮೂಲದ ಸಂತ್ರಸ್ತ ಯುವತಿ ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೆ ಬಂದು ಗಲಾಟೆ ನಡೆಸಿದಳು.
ಮಂಗಳೂರು(ಜ.06): ಯುವತಿಯೊಬ್ಬಳ ಜತೆ ವಿವಾಹ ನಡೆಯುತ್ತಿದ್ದಾಗ ಮಾಜಿ ಪ್ರೇಯಸಿ ಕಲ್ಯಾಣ ಮಂಟಪಕ್ಕೆ ಬಂದು ಗಲಾಟೆ ಮಾಡಿದ ಘಟನೆ ಉಳ‍್ಳಾಲ ತಾಲೂಕಿನ ಬೀರಿ ಬಳಿ ನಡೆದಿದೆ. ಇದರಿಂದ ತಾಳಿಕಟ್ಟಿದ ವರ ವಧುವನ್ನು ಬಿಟ್ಟು ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆಗೆ ದಾಖಲಾಗಲು ತೆರಳುತ್ತೇನೆ ಎಂದು ಅಲ್ಲಿಂದ ಪರಾರಿ ಆಗಿದ್ದಾನೆ.
ಶುಕ್ರವಾರ ಬೆಳಗ್ಗೆ ಬೀರಿಯ ಕಲ್ಯಾಣ ಮಂಟಪದಲ್ಲಿ ಕೇರಳ ಮೂಲದ ಅಕ್ಷಯ್ ಎಂಬುವರ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಡೆಯುತ್ತಿತ್ತು. ಈ ವೇಳೆ, ಮೈಸೂರು ಮೂಲದ ಸಂತ್ರಸ್ತ ಯುವತಿ ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೆ ಬಂದು ಗಲಾಟೆ ನಡೆಸಿದಳು.
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; 4 ತಿಂಗಳ ಬಳಿಕ ಪ್ರಕರಣ ಬಯಲಿಗೆ!
ಕೇರಳದ ಕೊಳಿಕ್ಕೋಡ್ ಮೂಲದ ಅಕ್ಷಯ್‌ಗೆ ಒಂದೂವರೆ ವರ್ಷದ ಹಿಂದೆ ಶಾದಿ ಡಾಟ್ ಕಾಮ್ ಮೂಲಕ ಪರಿಚಯವಾಗಿತ್ತು. ಬಳಿಕ, ಆತ ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಈಗ ವಿವಾಹವಾಗದೆ ವಂಚಿಸಿದ್ದಾನೆ ಎಂದು ಮೈಸೂರಿನ ಯುವತಿ ಡಿ.26ರಂದು ಕೇರಳದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಳು. ಈ ಹಿನ್ನೆಲೆಯಲ್ಲಿ ಆತ ಅಲ್ಲಿನ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ. ಆದರೆ, ಕೋರ್ಟ್ ಅವನ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಈ ನಡುವೆ ಮಂಗಳೂರಿನ ಯುವತಿ ಜೊತೆ ಅಕ್ಷಯ್‌ಗೆ ವಿವಾಹ ನಿಶ್ಚಯವಾಗಿತ್ತು.
ಈ ವಿಷಯ ತಿಳಿದು ಮಾಜಿ ಪ್ರೇಯಸಿ ಮದುವೆ ಮಂಟಪದ ಬಳಿ ಬಂದು ಗಲಾಟೆ ಆರಂಭಿಸಿದಳು. ಈ ವೇಳೆ, ಅಕ್ಷಯ್ ಕುಟುಂಬಸ್ಥರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರೇಯಸಿಯ ವಿರೋಧದ ನಡುವೆಯೂ ಮಂಗಳೂರು ಮೂಲದ ಯುವತಿಯ ಕೊರಳಿಗೆ ಅಕ್ಷಯ್ ತಾಳಿ ಕಟ್ಟಿದ. ಬಳಿಕ, ತನಗೆ ಅನಾರೋಗ್ಯ, ಕಿಡ್ನಿಯಲ್ಲಿ ಕಲ್ಲು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗುವುದಾಗಿ ಹೇಳಿ ಅಲ್ಲಿಂದ ಪರಾರಿಯಾದ. ಬಳಿಕ, ಪೊಲೀಸರು ಮೈಸೂರಿನ ಯುವತಿಯನ್ನು ಕರೆದೊಯ್ದರು. ಈ ವೇಳೆ, ಆಕ್ರೋಶ ವ್ಯಕ್ತಪಡಿಸಿದ ಯುವತಿ, ಆರೋಪಿಯನ್ನು ಬಂಧಿಸದೆ ನನ್ನನ್ನೇ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಕಿಡಿ ಕಾರಿದಳು.
ಬಹುಶ: ಕೇರಳದ ಪೊಲೀಸರು ಆಗಮಿಸಿ ಬಂಧಿಸಬಹುದು ಎಂಬ ಕಾರಣದಿಂದ ಸಂಬಂಧಿಕರೆ ಅಕ್ಷಯ್‌ನನ್ನು ಕಲ್ಯಾಣ ಮಂಟಪದಿಂದ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.