ನಂಜನಗೂಡು ತಾಲೂಕು ಕಸಬಾ ಹೋಬಳಿ ಮೊಬ್ಬಳ್ಳಿಯ ಜಯಕುಮಾರ್‌ಗೆ ಪೊಲೀಸ್ ಕೆಲಸ ಸಿಕ್ಕಿದ್ದರೂ ಕೃಷಿಯ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಬಿಡುವಿನ ವೇಳೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ವಾರ್ಷಿಕ ನಾಲ್ಕೈದು ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.
ಅಂಶಿ ಪ್ರಸನ್ನಕುಮಾರ್
ಮೈಸೂರು : ನಂಜನಗೂಡು ತಾಲೂಕು ಕಸಬಾ ಹೋಬಳಿ ಮೊಬ್ಬಳ್ಳಿಯ ಜಯಕುಮಾರ್‌ಗೆ ಪೊಲೀಸ್ ಕೆಲಸ ಸಿಕ್ಕಿದ್ದರೂ ಕೃಷಿಯ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಬಿಡುವಿನ ವೇಳೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ವಾರ್ಷಿಕ ನಾಲ್ಕೈದು ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.
ಜಯಕುಮಾರ್‌ಗೆ ಈಗ 28 ವರ್ಷ. ಇವರು ನಂಜನಗೂಡಿನ ಜೆಎಸ್‌ಎಸ್ ಕಾಲೇಜಿನಲ್ಲಿ ಬಿ.ಎಸ್ಸಿ (ಪಿಸಿಎಂ) ಓದಿದ್ದಾರೆ. 2012ರಲ್ಲಿ ಪಿಯುಸಿ ಓದುತ್ತಿದ್ದಾಗಿನಿಂದಲೂ ತಂದೆಯ ಜೊತೆ ಕಾರ್ಯದಲ್ಲಿ ನಿರತರಾಗಿದ್ದರು. ಅವರಿಗೆ ಮೂರು ಎಕರೆ ಜಮೀನಿದೆ. ಕಬಿನಿ ನಾಲೆಯಿಂದ ಜೊತೆಗೆ ಪಂಪ್‌ಸೆಟ್ ಕೂಡ ಇದೆ.
2012 ರಿಂದ 2022 ರವರೆಗೆ ತರಕಾರಿ ಬೆಳೆಗಳಾದ ಟೊಮ್ಯಾಟೋ, ಮೆಣಸಿನಕಾಯಿ, ಬಜ್ಜಿ ಮೆಣಸಿನಕಾಯಿ, ಬೀನ್ಸ್, ಸೌತೆ, ಬದನೆಕಾಯಿ, ಬೀಟ್‌ರೂಟ್, ಕೇರಳದಲ್ಲಿ ಹೆಚ್ಚಾಗಿ ಉಪಯೋಗಿಸುವ ಚೊಟ್ಟು ಬೆಳೆಯುತ್ತಿದ್ದರು. ಜೊತೆಗೆ ವಾರ್ಷಿಕ ನಾಲ್ಕೈದು ಲಕ್ಷ ರು. ಲಾಭ ಗಳಿಸುತ್ತಿದ್ದರು.
2013-14ರಲ್ಲಿ ಒಂದು ಎಕರೆಗೆ 90 ರಿಂದ 100 ಟನ್ ಕಬ್ಬು, ಪ್ರತಿ ಎಕರೆಗೆ 30 ಕ್ವಿಂಟಲ್ ಭತ್ತ ಬೆಳೆಯುತ್ತಿದ್ದರು. ಈಗ ಮೂರು ಎಕರೆಯಲ್ಲಿ 3200 ಏಲಕ್ಕಿ ಬಾಳೆ ಗಿಡಗಳಿವೆ. ಸದ್ಯದಲ್ಲಿಯೇ ಮಾರಾಟ ಮಾಡಲಿದ್ದು, ಒಳ್ಳೆಯ ಬೆಲೆ ಸಿಗುವ ನಿರೀಕ್ಷೆ ಇದೆ. ಇವರ ಬಳಿ ಎರಡು ಇಲಾತಿ ಹಸುಗಳಿದ್ದು, ಪ್ರತಿನಿತ್ಯ ಡೇರಿಗೆ 20 ಲೀಟರ್ ಹಾಲು ಹಾಕುತ್ತಾರೆ. ಇದರಿಂದ ಮಾಸಿಕ 15 ಸಾವಿರ ರು.ಗೆ ಹೆಚ್ಚು ಸಿಗುತ್ತದೆ.
ಬಿ.ಎಸ್ಸಿ ಓದಿ ಕೃಷಿ ಮಾಡುತ್ತಿರುವ ಜಯಕುಮಾರ್‌ಗೆ ಕೆಲ ವರ್ಷಗಳ ಹಿಂದೆ ಸವಾಲು ಎದುರಾಯಿತು. ಆಗ ಅವರಿಗೆ ಮೂಲವೃತ್ತಿ ಕೃಷಿಯ ಜೊತೆಗೆ ಸರ್ಕಾರಿ ನೌಕರಿ ಪಡೆಯಲೇಬೇಕು ಎಂಬ ಛಲ ಹುಟ್ಟಿತು. ಅದರಿ ಪರಿಣಾಮ ಕೃಷಿಯ ಜೊತೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾದರು. ಎರಡು ವರ್ಷಗಳ ಹಿಂದೆ ಪೊಲೀಸ್ ಪೇದೆಯಾಗಿ ಆಯ್ಕೆಯಾದರು. ಪ್ರಸ್ತುತ ಮೈಸೂರು ತಾಲೂಕು ವರುಣ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ಡ್ಯೂಟಿ ಇರುತ್ತದೆ. ಇಲ್ಲವೇ ನೈಟ್ ಡ್ಯೂಟಿ ಇರುತ್ತದೆ. ಬೆಳಗಿನ ಡ್ಯೂಟಿಯಾದರೆ ಠಾಣೆಗೆ ಹೋಗುವ ಮುಂಚೆಯೇ ಜಮೀನಿಗೆ ಹೋಗಿ ಕೆಲಸ ಮಾಡಿ ಬರುತ್ತೇನೆ. ರಾತ್ರಿ ಡ್ಯೂಟಿ ಇದ್ದರೆ ಊರಿಗೆ ಮರಳಿದ ಬಳಿಕ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು, ನಂತರ ಜಮೀನಿಗೆ ಹೋಗಿ ಕೆಲಸ ಮಾಡುತ್ತೇನೆ. ಪೊಲೀಸ್ ಕರ್ತವ್ಯದ ಬಿಜಿಯ ನಡುವೆವೂ ವ್ಯವಸಾಯಕ್ಕೆ ಸಮಯ ಕೊಡುತ್ತಿದ್ದೇನೆ. ಈಗ ಬಾಳೆ ಬೆಳೆದಿರುವುದರಿಂದ ಬಿಡುವಿನ ಸಮಯದಲ್ಲಿ ಜಮೀನಿಗೆ ಹೋದರೆ ಸಾಕು ಎನ್ನುತ್ತಾರೆ ಜಯಕುಮಾರ್.
ಸಂಪರ್ಕ ವಿಳಾಸಃ
ಜಯಕುಮಾರ್ ಬಿನ್ ಮಲ್ಲೇಶಪ್ಪ,
ಮೊಬ್ಬಳ್ಳಿ, ಕಸಬಾ ಹೋಬಳಿ
ನಂಜನಗೂಡು ತಾಲೂಕು
ಮೈಸೂರು ಜಿಲ್ಲೆ
ಮೊ.99809 71135
ಕೃಷಿ ಎಂಬುದು ನಿರಂತರ ಕಲಿಕೆ. ಕಷ್ಟಪಟ್ಟು ಕೆಲಸ ಮಾಡಬೇಕು. ಭೂಮಿತಾಯಿ ಯಾವತ್ತೂ ಕೈಬಿಡುವುದಿಲ್ಲ.
- ಜಯಕುಮಾರ್, ಮೊಬ್ಬಳ್ಳಿ