ನೆರೆ ಪೀಡಿತರಿಗೆ ಸರ್ಕಾರದಿಂದ ತ್ವರಿತ ಪರಿಹಾರ: ಸಚಿವ ಈಶ್ವರ್ ಖಂಡ್ರೆ

Published : Aug 27, 2025, 11:57 PM IST
Eshwar Khandre

ಸಾರಾಂಶ

ರೈತರ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಸೋಯಾಬೀನ್, ಉದ್ದು, ಹೆಸರು, ಹತ್ತಿ, ತೊಗರಿ, ಕಬ್ಬು ಸೇರಿದಂತೆ ತೋಟಗಾರಿಕೆ ಬೇಳೆಗಳು ನೆಲ ಕಚ್ಚಿರುವುದನ್ನು ಸಚಿವ ಈಶ್ವರ್ ಖಂಡ್ರೆ ಅವರು ಪರಿಶಿಲನೆ ನಡೆಸಿದರು.

ಔರಾದ್ (ಆ.27): ಕಳೆದ ವಾರ ಭೀಕರ ಮಳೆಯಿಂದ ಹಾನಿಗೀಡಾದ ಪ್ರದೇಶಗಳಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ವಿಸ್ತೃತ ಯೋಜನಾ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಶೀಘ್ರದಲ್ಲಿ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಿಕೊಡುವದಾಗಿ ಭರವಸೆ ನೀಡಿದರು. ಕಮಲನಗರ ತಾಲೂಕಿನ ಅಕನಾಪೂರ್, ದಾಬಕಾ, ಮುತ್ತಖೇಡ, ನಂದಿಬಿಜಲಗಾಂವ್ ಹಾಗೂ ಔರಾದ್ ತಾಲೂಕಿನ ಹೊಕ್ರಾಣ, ಬಾವಲಗಾಂವ್, ಬೊಂತಿ ನಾಮಾ ನಾಯಕ ತಾಂಡ, ಹಂಗರಗಾ ಸೇರಿದಂತೆ ಹಲವಡೆ ಸಂಚಾರ ನಡೆಸಿ ನೆರೆ ಪೀಡಿತ ಭಾಗಗಳ ಪರಿವಿಕ್ಷಣೆ ನಡೆಸಿದರು.

ಈ ವೇಳೆಯಲ್ಲಿ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಕೆರೆ ಕಟ್ಟೆ, ಸೇತುವೆ, ರಸ್ತೆ ಹಾಗೂ ಮನೆ ಗೋಡೆಗಳ ಕುಸಿತ ಅಲ್ಲದೆ ರೈತರ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಸೋಯಾಬೀನ್, ಉದ್ದು, ಹೆಸರು, ಹತ್ತಿ, ತೊಗರಿ, ಕಬ್ಬು ಸೇರಿದಂತೆ ತೋಟಗಾರಿಕೆ ಬೇಳೆಗಳು ನೆಲ ಕಚ್ಚಿರುವುದನ್ನು ಸಚಿವ ಈಶ್ವರ ಖಂಡ್ರೆ ಅವರು ಪರಿಶಿಲನೆ ನಡೆಸಿದರು. ಈ ವೇಳೆಯಲ್ಲಿ ಮಾತನಾಡಿದ ಅವರು ಔರಾದ್ ಮತ್ತು ಕಮಲನಗರ ತಾಲೂಕಿನಲ್ಲಿ ಅತಿ ಹೆಚ್ಚು 300 ಮಿಮೀ ದಾಖಲೆ ಮಳೆಯಾಗಿದೆ. ಹೀಗಾಗಿ ಈ ಅವಾಂತರವಾಗಿದೆ. ಈಗಾಗಲೇ ಇರುವ ಕೆರೆಗಳ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿತರಿಗೆ ಸೂಚಿಸಲಾಗಿದೆ.

ಮಳೆಯಿಂದ ಸಾಕಷ್ಟು ಹಾನಿಯಾಗಿದೆ ಎನ್ ಡಿಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ಅಡಿಯಲ್ಲಿ ಹಾನಿಯ ವಿಸ್ತೃತವಾದ ಯೋಜನಾ ವರದಿ ಆಧರಿಸಿ ಒಣಭೂಮಿಯ ರೈತರಿಗೆ 8500 ರು. ಹಾಗೂ ನೀರಿರಾವರಿ ಜಮಿನಿಗೆ 18000 ರು. ಪರಿಹಾರ ಧನ ನೀಡಲಾಗುವುದು ಎಂದು ಹೇಳಿದರು. ಹಾನಿಯ ವಿವರಗಳನ್ನು ಸರ್ಕಾರದ ಗಮನಕ್ಕೆ ತಂದು ತ್ವರಿತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹಾಗೂ ರೈತರಿಗೆ ವಿಮಾ ಕಂಪನಿಗಳ ಮೂಲಕ ಬೆಳೆ ವಿಮೆ ದೊರಕುವಂತೆ ಸಹ ಕ್ರಮ ಕೈಗೊಳ್ಳಲಾಗುವುದು ರೈತರ ಹಾಗೂ ಜನರ ಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಪ್ರಥಮ ಕರ್ತವ್ಯ ಎಂದು ಸಚಿವರು ಭರವಸೆ ನೀಡಿದರು.

ಮಣ್ಣು ಕೊಚ್ಚಿ ಹೋದದ್ದಕ್ಕೂ ಪರಿಹಾರ: ಭಾರಿ ಮಳೆಯಿಂದಾಗಿ ನೀರಿನ ರಭಸಕ್ಕೆ ರೈತರ ಜಮೀನಿನಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿ ರೈತರು ಸಂಕಷ್ಟ ಅನುಭವಿಸಿರುವುದು ಗಮನಿಸಿದ್ದು ಸರ್ಕಾರ ಮಟ್ಟದಲ್ಲಿ ಈ ಸಂಬಂಧ ಚರ್ಚೆ ನಡೆಸಿ ವಿಶೇಷ ಅನುದಾನ ಮೂಲಕ ರೈತರಿಗೆ ಪರಿಹಾರ ಕಲ್ಪಿಸುವ ನಿಟ್ಟನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಪೌರಾಡಳಿತ ಸಚಿವ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಸಿಇಒ ಡಾ. ಗಿರೀಶ ಬದೋಲೆ, ಸಹಾಯಕ ಆಯುಕ್ತ ಮಹಮ್ಮದ ಶಕೀಲ್, ಮುಖಂಡರಾದ ಭೀಮಸೇನರಾವ್ ಸಿಂಧೆ, ಸುಧಾಕರ ಕೊಳ್ಳುರ, ಅಮರ ಜಾಧವ್, ರಾಜಕುಮಾರ್ ಹಲಬರ್ಗೆ, ಆನಂದ ಚವ್ಹಾಣ, ಚನ್ನಪ್ಪ ಉಪ್ಪೆ, ರಾಮಣ್ಣ ವಡಿಯಾರ, ಶಿವರಾಜ ದೇಶಮುಖ್, ಅಂಜಾರೆಡ್ಡಿ , ಪ್ರಕಾಶ ಪಾಟೀಲ್ ತೊರಣಾ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

ಉಪವಾಸ ಉಳಿದು ನೆರೆ ಸಚಿವರ ಸಮೀಕ್ಷೆ ಅಧಿಕಾರಿಗಳು ಹೈರಾಣ: ಕಮಲನಗರ-ಔರಾದ್ ತಾಲೂಕಿನಲ್ಲಿ ನೆರೆಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಬೆಳಿಗ್ಗೆಯಿಂದ ತಡರಾತ್ರಿವರೆಗೆ ಮಧ್ಯಾಹ್ನದ ಊಟ ಮಾಡದೆ ಉಪವಾಸವಿದ್ದು ಸಂಚಾರ ನಡೆಸಿ ವೀಕ್ಷಣೆ ಮಾಡಿದರೆ ಮಧುಮೇಹ ಮತ್ತಿತರ ಕಾಯಿಲೆಗಳನ್ನು ಹೊಂದಿರುವ ಅಧಿಕಾರಿಗಳು ಹೈರಾಣಾದರು. ಭೇಟಿಯಾದ ಪ್ರತಿಯೊಬ್ಬ ರೈತರು, ಗ್ರಾಮಸ್ಥರು, ಸ್ಥಳೀಯ ಮುಖಂಡರೊಂದಿಗೆ ಸತತ 9 ಗಂಟೆಗಳ ನಿರಂತರ ಭೇಟಿ ಸ್ಥಳ ಪರಿಶೀ ಲನೆ ಮಾಡುತ್ತ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಗ್ರಾಮೀಣ ಭಾಗದಲ್ಲಾದ ಮಳೆ ಹಾನಿಯ ಸಮಗ್ರ ಮಾಹಿತಿ ಪಡೆದುಕೊಂಡರಲ್ಲದೆ ಪ್ರತಿಯೊಂದು ಗ್ರಾಮದಲ್ಲೂ ಜನರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.

ಊಟ ಮಾಡದೆ ವಿಕ್ಷಣೆ ಮಾಡಿದ ಸಚಿವರು: ಸಚಿವ ಈಶ್ವರ ಖಂಡ್ರೆ ಅವರು ಮಧ್ಯಾಹ್ನ ಊಟ ಮಾಡ್ತಾರೆ. ಜತೆಯಲ್ಲಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಊಟ ಮಾಡಬೇಕು ಅಂತ ನಿಯೋಜಿತ ಪ್ರವಾಸ ವೇಳೆ ಪ್ರಕಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನವೇ ಅಡುಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದ್ರೆ ಸಚಿವ ಖಂಡ್ರೆ ಅವರು ಊಟ ಮಾಡದೆ ಹಳ್ಳಿ ಹಳ್ಳಿಗಳಲ್ಲಿ ಸುತ್ತಾಡಿ ಜನರೊಂದಿಗೆ ಮಾತನಾಡುತ್ತ ರಾತ್ರಿ ವರೆಗೆ ಸಂಚಾರ ಮಾಡಿದರು. ಈ ವೇಳೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಕೂಡ ಉಪವಾಸ ಇರಬೇಕಾದಂಥ ಸ್ಥೀತಿ ಎದುರಾಗಿದ್ದು ಮದುಮೇಹ ಇದ್ದವರು ಅಲ್ಲಲ್ಲಿ ಸಿಗುವ ಬಿಸ್ಕೆಟ್, ಸ್ನ್ಯಾಕ್ಸ್ ತಿಂಡಿಯನ್ನು ಚಲಿಸುವ ವಾಹನದಲ್ಲೆ ತಿಂದು ಮುನ್ನಡೆದಿರುವುದು ಕಂಡು ಬಂತು.

PREV
Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!