
ಬೆಂಗಳೂರು/ದಾವಣಗೆರೆ/ ಹಾಸನ (ಆ.27): ಹಾಸನದಲ್ಲಿ ಕುಳಿತುಕೊಂಡು ದಾವಣಗೆರೆಯ ಶಾಲಾ ಶಿಕ್ಷಕಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ 22.40 ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪದಲ್ಲಿ ದಾವಣಗೆರೆ ಸೆನ್ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕೋರಟಿಕೆರೆ ಗ್ರಾಮದ ಅರುಣ್ ಕುಮಾರ್(35) ಬಂಧಿತ ಆರೋಪಿ. ಬಂಧಿತನ ಬ್ಯಾಂಕ್ ಖಾತೆಯಲ್ಲಿದ್ದ 1.90 ಲಕ್ಷ ಹಣ ಫ್ರೀಜ್ ಮಾಡಿದ್ದು, ಇನ್ನೂ ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಫೆಬ್ರವರಿ 5ರಂದು ಶಿಕ್ಷಕಿಗೆ ಕರೆ ಮಾಡಿದ್ದ ವಂಚಕರು ತಮ್ಮ ಹೆಸರಿನಲ್ಲಿ ದುಬೈಗೆ ಕಳಿಸುತ್ತಿರುವ ಕೋರಿಯರ್‌ನಲ್ಲಿ ಮಾದಕ ದ್ರವ್ಯ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಹವಾಲಾ ಹಣದ ವ್ಯವಹಾರ ನಡೆಸುವ ವ್ಯಕ್ತಿಯ ಬಳಿ ನಿಮ್ಮ ಖಾತೆಯ ಡಿಟೇಲ್ಸ್ ಸಿಕ್ಕಿದೆ ಅಂತಾ ಬೆದರಿಸಿ 22 ಲಕ್ಷ 40 ಸಾವಿರ ಹಣವನ್ನು ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು.
ಈ ಕುರಿತು ದಾವಣಗೆರೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಪ್ರಕರಣದ ಬೆನ್ನತ್ತಿದ್ದ ರಾಜ್ಯ ಸೈಬರ್ ಠಾಣೆ ಪೊಲೀಸರು, ಹಂತ ಹಂತವಾಗಿ ಸೈಬರ್ ಕಳ್ಳರನ್ನು ಬಲೆಗೆ ಬೀಳಿಸಲು ಮುಂದಾಗಿದ್ದಾರೆ. ಇನ್ನು ಸೈಬರ್ ಕಳ್ಳರು ಒಮ್ಮೆ ವಂಚನೆ ಮಾಡಿ ಹಣ ಪಡೆದ ಮೊಬೈಲ್ ಸಂಖ್ಯೆಯನ್ನು ಅಥವಾ ಆಪ್ ಮೂಲಕ ಕರೆ ಮಾಡಲು ಬಳಸಿದ ಮೊಬೈಲ್ ಅನ್ನು ಪುನಃ ಬಳಸುವುದಿಲ್ಲ. ಸುಮಾರು ಎರಡ್ಮೂರು ತಿಂಗಳು ಕಳೆದ ನಂತರ ಪುನಃ ಅದೇ ಫೋನ್ ಆನ್ ಮಾಡಿಕೊಂಡು ಮತ್ತೆ ವಂಚನೆಗೆ ಮುಂದಾಗುತ್ತಾರೆ. ಹೀಗೆ, ವಂಚನೆ ಮಾಡಲು ಮುಂದಾದ ಹಾಸನದ ಸೈಬರ್ ಕಳ್ಳನನ್ನು ದಾವಣಗೆರೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಸೈಬರ್ ಫ್ರಾಡ್‌ನಿಂದ 2,915 ಕೋಟಿ ರೂ. ಕಳೆದುಕೊಂಡ ರಾಜ್ಯದ ಜನತೆ:
ನಕಲಿ ಪೊಲೀಸ್ ಆಗಿ, ಉದ್ಯೋಗ ನೆಪ, ಎಐ ಮೂಲಕ ಫ್ರಾಡ್, ದೇಣಿಗೆ, ಬ್ಯಾಂಕ್ ಖಾತೆ, ಮೆಸೇಜ್, ಲಿಂಕ್, ಡಿಜಿಟಲ್ ಅರೆಸ್ಟ್, ಹೀಗೆ ಹೊಸ ಹೊಸ ವಿಧಾನದ ಮೂಲಕ ಸೈಬರ್ ವಂಚಕರು ಪ್ರತಿ ದಿನ ಅಮಾಯಕರನ್ನು ಮೋಸ ಮಾಡುತ್ತಲೇ ಇದ್ದಾರೆ. ಸೈಬರ್ ಕ್ರೈಂ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶಾದ್ಯಂತ ಪ್ರತಿ ದಿನ ಅಮಾಯಕರು ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಪೈಕಿ ಕರ್ನಾಟಕದ ಅಂಕಿ ಅಂಶ ಬೆಚ್ಚಿ ಬೀಳಿಸುವಂತಿದೆ. ಕಾರಣ 2024ರಲ್ಲಿಯೇ ಕರ್ನಾಟಕದಲ್ಲಿ ಸೈಬರ್ ಫ್ರಾಡ್‌ನಿಂದ ಅಮಾಯಕರು ಬರೋಬ್ಬರಿ 2,915 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಫೋನ್ ಕರೆ ಬಂದಾಗ ಎಚ್ಚರಿಕೆ ಅಗತ್ಯ
ಸಾಮಾನ್ಯವಾಗಿ ಪ್ರತಿಯೊಬ್ಬರೂ ಫೋನ್ ಬಳಕೆ ಮಾಡುತ್ತಾರೆ. ಹೀಗಾಗಿ ಅತೀವ ಎಚ್ಚರಿಕೆ ಅಗತ್ಯ. ನಕಲಿ ಕರೆ, ಮೆಸೇಜ್, ಒಟಿಪಿಗೆ ಬೇಡಿಕೆ, ಹಣಕ್ಕೆ ಬೇಡಿಕೆ ಇಟ್ಟರೆ ತಕ್ಷಣವೇ ಸೈಬರ್ ಅಪರಾಧ ವಿಭಾಗಕ್ಕೆ ದೂರು ನೀಡಿ. ಅನಗತ್ಯವಾಗಿ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ. ಬ್ಯಾಂಕ್ ಹೆಸರಿನಲ್ಲಿ, ಸಾಲದ ಹೆಸರಿನಲ್ಲಿ ಅಥವಾ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ ಎಂಬ ನೆಪದಲ್ಲಿ ಮಾಹಿತಿ ಪಡೆದು ವಂಚಿಸುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಅನಗತ್ಯ ಕರೆ, ಅನಗತ್ಯ ಲಿಂಕ್ ಕ್ಲಿಕ್ ಮಾಡಿ ಮೋಸ ಹೋಗಬೇಡಿ. ಕರೆಗಳು ಬಂದಾಗ, ನಿಮ್ಮ ನಿಖರ ಮಾಹಿತಿ ನೀಡಿ ಬೆದರಿಸಿದಾಗ, ಅಥವಾ ಇನ್ಯಾವುದೇ ರೂಪದಲ್ಲಿ ಮೋಸ ಹೋಗಬೇಡಿ. ಈ ರೀತಿ ಸಂದರ್ಭ ಎದುರಾದರೆ ವಿಚಲಿತರಾಗಬೇಡಿ, ಸೈಬರ್ ಅಪರಾಧ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ತಿಳಿಸಿದೆ.