* ಕಲಬುರಗಿ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ
* ಪಿ.ಎಸ್.ಐ ನೇಮಕಾತಿ ಅಕ್ರಮದಲ್ಲಿ ಅರೆಸ್ಟ್ ಆಗಿರುವ ಕಿಂಗ್ ಪಿನ್
* ಜೈಲಿನಲ್ಲಿದ್ರೂ ಸರಕಾರದ ಸಂಬಳ, ಇದು ಇಂಜಿನಿಯರ್ ಮಂಜುನಾಥನ ಮಹಾತ್ಮೆ
ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ
ಕಲಬುರಗಿ(ಮೇ. 8): ಒಬ್ಬ ಸರಕಾರಿ ನೌಕರ ಜೈಲಿನಲ್ಲಿ ಇದ್ರೂ ಆ ದಿನಗಳ ಸಂಬಳ ಪಡೆಯಲು ಸಾಧ್ಯವಾ ? ಹೌದು ! ಪಿ.ಎಸ್.ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಗಳಿಗೆ ಅಸಾಧ್ಯವಾದುದು ಯಾವುದೂ ಇಲ್ಲವೇ ಇಲ್ಲ. ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮಂಜುನಾಥನ ಮಾಹಾತ್ಮೆಯೇ ಇದಕ್ಕೆ ಜೀವಂತ ಸಾಕ್ಷಿ.
ಈತ ಮಂಜುನಾಥ ಮೇಳಕುಂದಿ. ಕಲಬುರಗಿ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಪಿ.ಎಸ್.ಐ ನೇಮಕಾತಿ ಅಕ್ರಮದಲ್ಲಿ ಅರೆಸ್ಟ್ ಆಗಿರುವ ಕಿಂಗ್ ಪಿನ್ ಗಳಲ್ಲಿ ಈತನೂ ಒಬ್ಬ. ಈ ಮಂಜುನಾಥನ ಹುಂಡಿಯಿಂದ ಬಗೆದಷ್ಟು ಅಕ್ರಮಗಳು ಹೊರ ಬರುತ್ತಲೇ ಇವೆ. ಅಕ್ರಮಗಳ ಕಿಂಗ್ ಎಂದೇ ಕುಖ್ಯಾತಿ ಪಡೆಯುತ್ತಿದ್ದಾನೆ ಈ ಮಂಜುನಾಥ.
ಇದು ಬ್ಲ್ಯೂ ಟೂತ್ ಕ್ಯಾಂಡಿಡೇಟ್
ಕಲಬುರಗಿಯ ನೀರಾವರಿ ಇಲಾಖೆಯ ಇಂಜಿನಿಯರ ಮಂಜುನಾಥ ಮೇಳಕುಂದಿ, ಪಿ.ಎಸ್.ಐ ನೇಮಕಾತಿ ಅಕ್ರಮದಲ್ಲಿ ಸದ್ಯ ಸಿಐಡಿ ವಶದಲ್ಲಿದ್ದಾನೆ. ಇನ್ನೊಬ್ಬ ಕಿಂಗ್ ಪಿನ್ ಆರ್.ಡಿ ಪಾಟೀಲ್ ಜೊತೆ ಸೇರಿ ಬ್ಲ್ಯೂಟೂತ್ ಮೂಲಕ ಪರೀಕ್ಷಾ ಅಕ್ರಮ ನಡೆಸುವುದರಲ್ಲಿ ನಿಸ್ಸೀಮ. ಈ ರೀತಿ ಅಕ್ರಮಕ್ಕಾಗಿ ಪ್ರತಿ ಅಭ್ಯರ್ಥಿಗಳಿಂದ 50 ರಿಂದ 60 ಲಕ್ಷ ರೂಪಾಯಿ ಪಡೆಯುತ್ತಿದ್ದ ಕಿಲಾಡಿ ಈ ಮಂಜುನಾಥ್.
ಆಟೋ ಹತ್ತಿ ಸಿಐಡಿ ಕಛೇರಿಗೆ ಬಂದವನು
ಈ ಮಂಜುನಾಥನ ಮಹಾತ್ಮೆ ಸಣ್ಣದಲ್ಲ. 22 ದಿನ ಸಿಐಡಿ ಕಣ್ಣಿಗೆ ಮಣ್ಣೆರಚಿ ಬೆಂಗಳೂರು, ಮಂಗಳೂರು ಅಂತೆಲ್ಲಾ ಸುತ್ತಾಡಿದ್ದ. ಕಡೆಗೆ ಮೇ 1 ರಂದು ಆಟೋ ಹಿಡಿದು ಸಿಐಡಿ ಕಛೇರಿ ಹುಡುಕಿಕೊಂಡು ಬಂದು ಶರಣಾಗತನಾಗಿದ್ದ. ನನಗೆ ಅನಾರೋಗ್ಯ. ಹಾಗಾಗಿ ಮಂಗಳೂರಿನಲ್ಲಿದ್ದೆ, ನನಗೆ ಇದೆಲ್ಲಾ ಗೊತ್ತೆ ಇಲ್ಲ ಅಂತ ಮತ್ತೊಮ್ಮೆ ಸಿಐಡಿ ಅಧಿಕಾರಿಗಳಿಗೂ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿದ್ದ ಕಿಲಾಡಿ ಈ ಮಂಜುನಾಥ್.
ಈ ಮುಂಚೆಯೂ ಅರೆಸ್ಟ್ ಆಗಿದ್ದ
ಪರೀಕ್ಷಾ ಅಕ್ರಮದಲ್ಲಿ ಮಂಜುನಾಥ್ ಅರೆಸ್ಟ್ ಆಗಿದ್ದು ಇದು ಮೊದಲೇನೂ ಅಲ್ಲ. ಕಳೆದ 2021 ರ ಡಿಸೆಂಬರ್ 14 ರಂದು ನಡೆದ PWD ಜುನಿಯರ್ ಇಂಜಿನಿಯರ್ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿಯೂ ಈ ಮಂಜುನಾಥ ಅಕ್ರಮ ನಡೆಸಿದ್ದ. ಬೆಂಗಳೂರಿನ ಸೆಂಟ್ ಜಾನ್ ಶಾಲೆಯಲ್ಲಿ ನಡೆದ ಅಕ್ರಮದಲ್ಲಿ ಈತನ ಅಭ್ಯರ್ಥಿಗಳು ಸಿಕ್ಕು ಬಿದ್ದಿದ್ದವು. ಈ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಡಿಸೆಂಬರ್ 20 ರಂದು ಮಂಜುನಾಥನನ್ನು ಬಂಧಿಸಿ ಜೈಲಿಗಟ್ಟಿದ್ದರು. ಡಿಸೆಂಬರ್ 21 ರಿಂದ ಜನೇವರಿ 7 ರವರೆಗೆ 17 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ ಈ ಮಂಜುನಾಥ್.
ಜೈಲಲ್ಲಿದ್ದ ಅವಧಿಯ ಪೇಮೆಂಟ್ ಪಡೆದ ಕಿಲಾಡಿ
ಈ ಮಂಜುನಾಥ್ ನನ್ನು ಪೊಲೀಸರು ಬಂಧಿಸಿದ ಸಂದರ್ಭದಲ್ಲಿ ತಾನು ನೀರಾವರಿ ಇಲಾಖೆಯ ಇಂಜಿನಿಯರ್ ಎನ್ನುವ ಸತ್ಯವನ್ನೇ ಮರೆ ಮಾಚಿದ್ದ. ಅಷ್ಟೇ ಅಲ್ಲ, ಜೈಲಿನಿಂದ ಬಿಡುಗಡೆಗೊಂಡ ಬಳಿಕ ಯಥಾ ಸ್ಥಿತಿಯಲ್ಲಿ ಮತ್ತೆ ಕೆಲಸಕ್ಕೆ ಹಾಜರಾಗಿದ್ದ. ಅಷ್ಟೇ ಅಲ್ಲ, ಜ. 1 ರಂದು ನನಗೆ ಏಕಾ ಏಕಿ ಆರೋಗ್ಯದಲ್ಲಿ ಏರುಪೇರಾಯಿತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಒಡೆದು ಜ. 8 ರಂದು ಡಿಸ್ಚಾರ್ಜ ಆಗಿದ್ದೇನೆ ಎಂದು ಕಥೆ ಕಟ್ಟುತ್ತಾನೆ. ಅಷ್ಟೇ ಅಲ್ಲ, ಈ ಏಳು ದಿನಗಳಲ್ಲಿ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿರುವ ಮೆಡಿಕಲ್ ಸರ್ಟಿಫಿಕೆಟ್ ಸಹ ಮನವಿ ಜೊತೆ ಲಗತ್ತಿಸುತ್ತಾನೆ. ಆ ಮೂಲಕ ಆತ ಜೈಲಿನಲ್ಲಿದ್ದ 17 ದಿನಗಳ ಪೈಕಿ 7 ದಿನಗಳ ವೇತನವೂ ಪಡೆಯುತ್ತಾನೆ.
ನಕಲಿ ಸರ್ಟಿಫಿಕೇಟ್ ಕೊಟ್ಟ ಡಾಕ್ಟರ್ ಯಾರು ಗೊತ್ತಾ ?
ಕಲಬುರಗಿಯ ಸರಕಾರಿ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿ ಕೆಲಸ ಮಾಡುತ್ತಿರುವ ಡಾ. ಬಸವರಾಜ್ ಬುಕ್ಕೆಗಾರ ಎನ್ನುವ ವೈದ್ಯನೇ ಮಂಜುನಾಥನಿಗೆ ಸುಳ್ಳು ಮೆಡಿಕಲ್ ಸರ್ಟಿಫಿಕೆಟ್ ನೀಡಿರುವ ವೈದ್ಯ ಎನ್ನುವುದು ದಾಖಲೆಗಳಿಂದ ತಿಳಿದು ಬಂದಿದೆ. ಜೈಲಿನಲ್ಲಿದ್ದ ವ್ಯಕ್ತಿಗೆ ಆ ಅವಧಿಯಲ್ಲಿನ ಮೆಡಿಕಲ್ ಸರ್ಟಿಫಿಕೆಟ್ ನೀಡಿದ್ದಾದ್ರೂ ಹೇಗೆ ಎನ್ನುವುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇದೇ ಕಾರಣಕ್ಕೆ ಈ ವೈದ್ಯನಿಗೂ ಸಹ ಇದೀಗ ಸಿಐಡಿ ಶಾಕ್ ನೀಡುವ ಆತಂಕ ಎದುರಾಗಿದೆ.
ಒಟ್ಟಾರೆ ಈ ಮಂಜುನಾಥ್ ಮೇಳಕುಂದಾ ಮತ್ತು ಆರ್.ಡಿ ಪಾಟೀಲ್ ಟೀಂ ಈ ಮೊದಲಿನಿಂದಲೂ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಮಾಡುತ್ತಲೇ ಬಂದಿರುವುದು ಕಂಡು ಬಂದಿದೆ. ಈ ಮಂಜುನಾಥನ ಮಹಾತ್ಮೆಗಳು ಬಗೆದಷ್ಟು ಬಯಲಾಗುತ್ತಲೇ ಇವೆ.
ಇನ್ನೂ ಬಯಲಾಗಬೇಕಿದೆ
ಈ ಮಂಜುನಾಥ್ ಮತ್ತು ಆರ್.ಡಿ ಪಾಟೀಲ್ ಗ್ಯಾಂಗ್ ನಿರ್ದಿಷ್ಟವಾಗಿ ಯಾವ ಯಾವ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದ್ದಾರೆ. ? ಇವರಿಂದ ಅಕ್ರಮ ಸಹಾಯ ಪಡೆದು ಯಾರಾರು ಈಗಾಗಲೇ ಸರಕಾರಿ ಹುದ್ದೆಯಲ್ಲಿದ್ದಾರೆ. ? ಈ ಎಲ್ಲಾ ಅಕ್ರಮಗಳಿಗೆ ಸಹಾಯ ಮಾಡಿದ ಅಧಿಕಾರಿಗಳು ಯಾರಾರು ? ಈ ಎಲ್ಲದರ ಬಗ್ಗೆ ಸಿಐಡಿ ಕುಲಂಕುಷವಾಗಿ ತನಿಖೆ ನಡೆಸಬೇಕಾದ ಅಗತ್ಯ ಇದೆ. ಅಕ್ರಮದಲ್ಲಿ ಶಾಮೀಲಾದ ಎಲ್ಲರ ಮುಖವಾಡ ಕಳಚಬೇಕಾದ ಅಗತ್ಯವಿದೆ. ಅಂದಾಗ ಮಾತ್ರ ಸರಕಾರ ನಡೆಸುವ ನೇಮಕಾತಿ ಪರೀಕ್ಷೆಗಳ ಮೇಲೆ ಜನರಿಗೆ ವಿಶ್ವಾಸ ಬರಲು ಸಾಧ್ಯ.