ಪ್ರಸ್ತುತ ದಿನಗಳಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡುತ್ತಿದೆ ಎಂದು ಜಿಪಂ ಸಿಇಒ ಜಿ. ಪ್ರಭು ಹೇಳಿದರು.
ತುಮಕೂರು : ಪ್ರಸ್ತುತ ದಿನಗಳಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡುತ್ತಿದೆ ಎಂದು ಜಿಪಂ ಸಿಇಒ ಜಿ. ಪ್ರಭು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕೃಷಿ ಇಲಾಖೆಯ ನಡಿಗೆ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವವ್ಯಾಪಿಯಾಗಿ ಸಿರಿಧಾನ್ಯಗಳಿಗೆ ಇರುವ ಶಕ್ತಿ ಯಾವ ಪದಾರ್ಥಗಳಿಗೆ ಇಲ್ಲ ಎಂಬುದನ್ನು ಸಮ್ಮತಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯ ಬೆಳೆಯುವ ವಿಸ್ತೀರ್ಣದ ಪ್ರಮಾಣ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ, ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯ ಬಳಸುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕು. ಅದೇ ರೀತಿ ಸಿರಿಧಾನ್ಯ ಬೆಳೆಯುವ ರೈತರ ಸಂಖ್ಯೆಯೂ ಜಾಸ್ತಿಯಾಗಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
undefined
ಹಾಗೆಯೇ ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯ ಬಳಕೆ ಏರುಗತಿಯಲ್ಲಿದೆ. ಇದು ಇನ್ನೂ ಹೆಚ್ಚಾಗಬೇಕು. ಯುವಕರು, ನಾಗರಿಕರು ಇದನ್ನು ಮೂಲ ಆಹಾರ ಎಂಬಂತೆ ಬಳಕೆ ಮಾಡಬೇಕಾಗಿದೆ, ರಾಗಿ, ಆರ್ಕ, ಸಜ್ಜೆ, ನವಣೆ, ಸಾಮೆ, ಬರಗಲು ಸೇರಿದಂತೆ ಅನೇಕ ಸಿರಿಧಾನ್ಯಗಳನ್ನು ವೈವಿಧ್ಯತೆಯಿಂದ ಬೆಳೆಯುತ್ತಿರುವುದು ನಮ್ಮ ದೇಶ ಮಾತ್ರ. ಪರಂಪರಾಗತವಾಗಿ ಬಂದಿರುವ ಆಹಾರ ಬೆಳೆಗಳನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸಬೇಕಾಗಿದೆ. ಕೊಂಡುಕೊಳ್ಳಲು ಇಲ್ಲದೇ ರೈತರು ಬೇರೆ ಬೆಳೆಗಳತ್ತ ಹೋಗುವ ಸ್ಥಿತಿ ಇದೆ ಎಂದರು.
ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ-2023 ವಿಶ್ವಸಂಸ್ಥೆಯನ್ನು ಅನೇಕ ರಾಷ್ಟ್ರಗಳು ಸರ್ವ ಸಮ್ಮತವಾಗಿ ಒಪ್ಪಿ ಭಾರತದ ಪ್ರಸ್ತಾವನೆಯನ್ನು ಅಂಗೀಕರಿಸಿ ನಮ್ಮ ಸಿರಿಧಾನ್ಯಗಳಿಗೆ ವಿಶ್ವಮಾನ್ಯತೆಯನ್ನು ಕೊಟ್ಟ ವರ್ಷವಾಗಿದೆ. ನೀರಾವರಿ ವ್ಯವಸ್ಥೆ ಕಡಿಮೆ ಇರುವ ಪ್ರದೇಶಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಸಿರಿಧಾನ್ಯ ಬೆಳೆಸುವ ಮೂಲಕ ಆರ್ಥಿಕ ಚೈತನ್ಯ ಕೊಡುವ ಕೆಲಸವನ್ನು ಮಾಡಬೇಕಾಗಿದೆ. ಸಿರಿಧಾನ್ಯ ಬಳಕೆ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಇನ್ನೊಂದು ವಾರದಲ್ಲಿ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಈ ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಕೃಷಿ ಜಂಟಿ ನಿರ್ದೇಶಕ ರಮೇಶ್ ಮಾತನಾಡಿ, ಸಿರಿಧಾನ್ಯ ಮೇಳದ ಅಂಗವಾಗಿ ಸಿರಿಧಾನ್ಯ ನಡೆ ನಡೆಸಲಾಗುತ್ತಿದೆ. ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಎಲ್ಲ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಕೃಷಿ ನಡಿಗೆ ಜಾಥಾ ಹಮ್ಮಿಕೊಂಡಿದ್ದು, ಸಿರಿಧಾನ್ಯದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶ ಈ ನಡಿಗೆಯದ್ದಾಗಿದೆ ಎಂದರು.
ಜ.5, 6,7 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ನಡೆಯುತ್ತಿದೆ. ಇದರ ಅಂಗವಾಗಿ ಈ ನಡಿಗೆ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚು ಹೆಚ್ಚು ಸಿರಿಧಾನ್ಯ ಬಳಕೆ ಮಾಡುವಂತೆ ಅರಿವು ಮೂಡಿಸುವ ಕೆಲಸ ಮಾಡುವುದು ಇದರ ಪ್ರಮುಖ ಧ್ಯೇಯವಾಗಿದೆ ಎಂದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಹೊರಟ ಸಿರಿಧಾನ್ಯ ನಡಿಗೆ ಜಾಥಾವು ಅಶೋಕ ರಸ್ತೆ, ಟೌನ್‌ಹಾಲ್ ಮುಖೇನ ಬಿ.ಎಚ್. ರಸ್ತೆಯಲ್ಲಿ ಸಾಗಿ ಜೂನಿಯರ್ ಕಾಲೇಜು ಮೈದಾನ ತಲುಪಿತು.
ಈ ಸಿರಿಧಾನ್ಯ ನಡಿಗೆ ಜಾಥಾದಲ್ಲಿ ಕೃಷಿ ಉಪನಿರ್ದೇಶಕರಾದ ಅಶೋಕ್, ದೀಪಾಶ್ರೀ, ಸಹಾಯಕ ನಿರ್ದೇಶಕ ಅಶ್ವತ್ ನಾರಾಯಣ, ಹನುಮಂತರಾಯಪ್ಪ, ನಿರ್ಮಿತಿ ಕೇಂದ್ರದ ರಾಜಶೇಖರ್, ಸಾವಯವ ಕೃಷಿ ಅಧ್ಯಕ್ಷ ಗೋವಿಂದರಾಜು, ವಿವೇಕಾನಂದ ಶಾಲೆ, ಎಂಪ್ರೆಸ್ ಶಾಲೆ ಹಾಗೂ ಆರ್ಯನ್ ಹೈಸ್ಕೂಲ್ ವಿದ್ಯಾರ್ಥಿಗಳು, ಕೃಷಿ ಇಲಾಖೆ ಅಧಿಕಾರಿಗಳು, ರೈತರು ಭಾಗಿಯಾಗಿದ್ದರು.