
ಹನೂರು(ಆ.03): ಪೊನ್ನಾಚಿ ಹಾಗೂ ವೈಸಂಪಾಳ್ಯದಲ್ಲಿ ಕಾಡಾನೆಗಳು ನಿರಂತರ ರೈತರ ಜಮೀನುಗಳಲ್ಲಿ ರಾತ್ರಿ ವೇಳೆ ನುಗ್ಗಿ ಫಸಲು ಮತ್ತು ಪರಿಕರ ಹಾಳು ಮಾಡುತ್ತಿದ್ದು, ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಮಲೆ ಮಹದೇಶ್ವರ ವನ್ಯಧಾಮ ವಲಯದ ಮಲೆ ಮಹದೇಶ್ವರ ಬೆಟ್ಟವಲಯ ಅರಣ್ಯ ಪ್ರದೇಶದ ಪೊನ್ನಾಚಿ ಗ್ರಾಮದ ಬಳಿ ಬರುವ ರಾಮದಪ್ಪ ಜಮೀನಿನಲ್ಲಿರುವ ತೆಂಗು ಹಲಸು ಹಾಗೂ ದ್ವಿಚಕ್ರ ವಾಹನ ಸಹ ಹಾಳುಮಾಡಿದೆ. ಮತ್ತೊಂದೆಡೆ ವೈಸಂಪಾಳ್ಯ ಗ್ರಾಮದ ರಾಮಸ್ವಾಮಿ ರೈತನ ಜಮೀನಿನಲ್ಲಿ ಬಾಳೆ ಹಾಗೂ ಕೃಷಿ ಪರಿಕರ ತುಳಿದು ಕಾಡಾನೆಗಳು ನಾಶಪಡಿಸಿದೆ.
ಒಂದೂವರೆ ಎಕರೆ ಟೊಮೆಟೊ ಬೆಳೆ ನಾಶ ಮಾಡಿದ ಕಿಡಿಗೇಡಿಗಳು: ಅನ್ನದಾತ ಕಣ್ಣೀರು
ಕಳೆದ ಹಲವಾರು ತಿಂಗಳುಗಳಿಂದ ಪುಂಡಾನೆ ಎಂದು ಪೊನ್ನಾಚಿ ಸುತ್ತಮುತ್ತಲಿನ ಗ್ರಾಮದಂಚಿನಲ್ಲಿ ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ರಾತ್ರಿ ವೇಳೆ ಲಕ್ಷಾಂತರ ರು. ಬೆಲೆ ಬಾಳುವ ಗಿಡಮರ ತುಳಿದು ನಾಶಗೊಳಿಸಿದೆ. ರೈತರ ಜಮೀನಿನಲ್ಲಿ ಕಾಡಾನೆ ಉಪಟಳ ತಪ್ಪಿಸುವಂತೆ ಈ ಭಾಗದ ರೈತರು ಮನವಿ ಮಾಡಿದ್ದರು ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಕಾಡಾನೆಯಿಂದ ಉಂಟಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಅರಣ್ಯಾಧಿಕಾರಿಗಳಿಗೆ ರೈತರು ಮನವಿ ಮಾಡಿದ್ದಾರೆ.
ಈಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಪುಂಡಾನೆ ಸೆರೆ ಹಿಡಿಯಲು ಇದೇ ತಿಂಗಳು 8, 9,10 ರಂದು ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಪುಂಡಾನೆಯನ್ನು ಸೆರೆ ಹಿಡಿದು ಬೇರೆಡೆ ಬಿಡಲು ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ರೈತರು ಅರಣ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ಕೊಳ್ಳೇಗಾಲ ವಲಯ ಅಧಿಕಾರಿ ಡಿಎಫ್‌ಒ ಸಂತೋಷ್ ತಿಳಿಸಿದ್ದಾರೆ.