ಪೊಲೀಸರು ಕ್ರೇನ್ ಬಳಸಿ ವಾಹನಗಳನ್ನು ಅದೇ ಜಾಗಕ್ಕೆ ಸ್ಥಳಾಂತರ ಮಾಡುತ್ತಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಆಶ್ರಮದ ಸ್ವಾಮೀಜಿ ವಾಹನ ತೆರವು ಮಾಡುವಂತೆ ಹೇಳಿದರೂ ಕೇಳದಿದ್ದಾಗ ಏಕಾಂಗಿ ಪ್ರತಿಭಟನೆ ನಡೆಸಿದರು. ಇದರಿಂದ ಎಚ್ಚೆತ್ತ ಪೊಲೀಸರು ವಾಹನಗಳ ಸ್ಥಳಾಂತರ ಮಾಡುವ ಕೆಲಸವನ್ನು ಕೈಬಿಟ್ಟಿದ್ದಾರೆ.
ರಾಮನಗರ(ಆ.03): ಬೆಂಗಳೂರು ದಕ್ಷಿಣ ತಾಲೂಕಿನ ಕುಂಬಳಗೂಡಿನಲ್ಲಿರುವ ವಿಶ್ವ ಕಲ್ಯಾಣ ಮಿಷನ್ ಬಸವ ಗಂಗೋತ್ರಿ ಆಶ್ರಮ ಹಾಗೂ ಪೊಲೀಸರ ನಡುವೆ ಜಾಗದ ವಿಚಾರವಾಗಿ ಜಟಾಪಟಿ ನಡೆದಿದ್ದು, ಇದರಿಂದ ಆಕ್ರೋಶಗೊಂಡ ಆಶ್ರಮದ ಶ್ರೀ ಬಸವಯೋಗಿ ಸ್ವಾಮೀಜಿ ಏಕಾಂಗಿ ಪ್ರತಿಭಟನೆ ನಡೆಸಿದರು.
ಕುಂಬಳಗೂಡು ಪೊಲೀಸ್ ಠಾಣೆ ಹಿಂಭಾಗದಲ್ಲಿಯೇ ಬಸವ ಗಂಗೋತ್ರಿ ಆಶ್ರಮವಿದ್ದು, ಇದಕ್ಕೆ ಸೇರಿದ 6 - 7 ಎಕರೆ ಜಮೀನಿನ ಜೊತೆಗೆ ಪೊಲೀಸ್ ಠಾಣೆ ಪಕ್ಕದಲ್ಲಿ 3 ಗುಂಟೆ ಜಾಗವೂ ಇದೆ. ಈ ಜಾಗದ ವಿಚಾರವಾಗಿ ಆಶ್ರಮ ಮತ್ತು ಪೊಲೀಸರ ನಡುವೆ ಸಂಘರ್ಷ ನಡೆಯುತ್ತಲೇ ಬಂದಿದೆ. ಈ ವಿವಾದಿತ ಜಾಗದಲ್ಲಿ ಪೊಲೀಸರು ಅಪಘಾತಕ್ಕೆ ಒಳಗಾದ ವಾಹನಗಳನ್ನು ನಿಲ್ಲಿಸುತ್ತಿದ್ದರು. ಹಲವು ಬಾರಿ ವಾಹನಗಳನ್ನ ತೆರವು ಮಾಡಿ ಎಂದು ಸ್ವಾಮೀಜಿ ಪೊಲೀಸರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಮಠದ ವತಿಯಿಂದ ಕಳೆದ 4 ದಿನಗಳ ಹಿಂದೆ ಅಪಘಾತ ವಾಹನಗಳನ್ನು ತೆರವು ಮಾಡಿ ಪೊಲೀಸ್ ಠಾಣೆ ಪಕ್ಕಕ್ಕೆ ನಿಲ್ಲಿಸಲಾಗಿತ್ತು.
ಡಿಸಿಎಂ ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರದಲ್ಲಿ ಸಾರಿಗೆ ಬಸ್ಸಿನ ಅವ್ಯವಸ್ಥೆ
ಇದೀಗ ಪೊಲೀಸರು ಮತ್ತೆ ಕ್ರೇನ್ ಬಳಸಿ ವಾಹನಗಳನ್ನು ಅದೇ ಜಾಗಕ್ಕೆ ಸ್ಥಳಾಂತರ ಮಾಡುತ್ತಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಆಶ್ರಮದ ಸ್ವಾಮೀಜಿ ವಾಹನ ತೆರವು ಮಾಡುವಂತೆ ಹೇಳಿದರೂ ಕೇಳದಿದ್ದಾಗ ಏಕಾಂಗಿ ಪ್ರತಿಭಟನೆ ನಡೆಸಿದರು. ಇದರಿಂದ ಎಚ್ಚೆತ್ತ ಪೊಲೀಸರು ವಾಹನಗಳ ಸ್ಥಳಾಂತರ ಮಾಡುವ ಕೆಲಸವನ್ನು ಕೈಬಿಟ್ಟಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀ ಬಸವಯೋಗಿ ಸ್ವಾಮೀಜಿ, ಗೋಮಾಳ ಜಾಗದಲ್ಲಿಯೇ ಅಕ್ರಮವಾಗಿ ಪೊಲೀಸ್ ಠಾಣೆ ನಿರ್ಮಾಣ ಮಾಡಲಾಗಿದೆ. ಆಶ್ರಮದ ಆವರಣದಲ್ಲಿ ಅಪಘಾತಕ್ಕೀಡಾದ ವಾಹನಗಳನ್ನು ಇಡದಂತೆ ಹೇಳಿದರು ಕೇಳದ ಪೊಲೀಸರು ಆಶ್ರಮದ ಶಾಂತಿಯುತ ವಾತಾವರಣಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ನಾವೇ ಸರ್ಕಾರವೆಂದು ದರ್ಪ ಮೆರೆಯುತ್ತಿದ್ದಾರೆ ಎಂದು ದೂರಿದರು.
50 ವರ್ಷದಿಂದ ಆಶ್ರಮವಿದ್ದರೂ ಈಗ ಗೋಮಾಳು ಎಂದು ಪೊಲೀಸರು ಹೇಳುತ್ತಿದ್ದಾರೆ. ಸರ್ವೆ ಮಾಡಿದ್ದರೂ ತಹಸೀಲ್ದಾರ್ ದಾಖಲೆ ಕೊಡುತ್ತಿಲ್ಲ. ಆಶ್ರಮದ ಜಾಗ ಕಬಳಿಸಲು ಕಂದಾಯ ಹಾಗೂ ಪೊಲೀಸ್ ಇಲಾಖೆ ಶಾಮೀಲಾಗಿವೆ ಎಂದು ಆರೋಪಿಸಿದರು.