Chikkamagaluru: ಆನೆ ಸ್ಥಳಾಂತರಕ್ಕೆ ತಡೆ, ಸಿಎಂ ಎಂಟ್ರಿ; ಅರಣ್ಯ ಇಲಾಖೆ ಹೈ ಅಲರ್ಟ್

Published : Nov 24, 2026, 05:48 PM IST
Wild Elephants Strike in Mudigere

ಸಾರಾಂಶ

ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಆನೆಗಳ ಸ್ಥಳಾಂತರ ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ಬಿದ್ದಿದ್ದು, ರೈತರ ಕಾಫಿ ಬೆಳೆ ನಾಶವಾಗಿ ಆತಂಕ ಮನೆಮಾಡಿದೆ.

ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಒಂದೆಡೆ ಬೇಲೂರಿನಿಂದ ಮೂಡಿಗೆರೆ ಭಾಗಕ್ಕೆ ಬಂದಿರೋ ಕಾಡಾನೆಗಳ ಹಿಂಡು ಗ್ರಾಮಸ್ಥರ ನಿದ್ದೆಗೆಡಿಸಿದೆ. ಮತ್ತೊಂದೆಡೆ ಆನೆಗಳ ಸ್ಥಳಾಂತರ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆನೆಗಳ ಸ್ಥಳಾಂತರ ವಿಚಾರ ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದ್ದು, ರಾಜೀನಾಮೆ ಎಚ್ಚರಿಕೆ ನೀಡಿದ್ದ ಶಾಸಕರ ಜೊತೆ ಸಿಎಂ ಡಿಕೆ ಶಿವಕುಮಾರ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಇತ್ತ ಕಾಡಾನೆಗಳ ದಾಳಿಗೆ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಕಾಡಾನೆಗಳ ಜೊತೆಗೆ ಕಾಡುಕೋಣ, ಚಿರತೆಗಳ ಕಾಟವೂ ಮಲೆನಾಡಿಗರ ಆತಂಕ ಹೆಚ್ಚಿಸಿದೆ.

ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ: ಅರಣ್ಯ ಇಲಾಖೆ ಏನು ಮಾಡುತ್ತಿದೆ?

ಮಲೆನಾಡಿನ ಜನರಿಗೆ ಕಾಡುಪ್ರಾಣಿಗಳ ಕಾಟ ತಪ್ಪುವ ಲಕ್ಷಣವೇ ಕಾಣ್ತಿಲ್ಲ. ಬೇಲೂರಿನಿಂದ ಮೂಡಿಗೆರೆ ಕಡೆಗೆ ಬಂದಿರೋ ಕಾಡಾನೆಗಳ ಹಿಂಡು ಈಗ ಗ್ರಾಮಗಳ ಸುತ್ತಮುತ್ತ ಬೀಡುಬಿಟ್ಟಿವೆ. ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಆನೆಗಳ ಆತಂಕ ಎದುರಾಗಿದೆ.

ಘಟ್ಟದಹಳ್ಳಿ ಎಸ್ಟೇಟ್, ಮಾಕೋನಹಳ್ಳಿ, ಬಾರದಳ್ಳಿ, ಹೊರಟ್ಟಿ, ಕುನ್ನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಸುತ್ತಮುತ್ತ ಆನೆಗಳ ಓಡಾಟ ಜೋರಾಗಿದೆ. ಬೀಟಮ್ಮ ಮತ್ತು ಓಲ್ಡ್ ಬೆಲ್ಟ್ ಗುಂಪಿಗೆ ಸೇರಿದ ಆನೆಗಳು ಜನವಸತಿ ಪ್ರದೇಶಗಳ ಸಮೀಪವೇ ಸಂಚರಿಸುತ್ತಿವೆ.

ಬೇಲೂರಿನಿಂದ ಬಂದ ಆನೆಗಳ ಹಿಂಡು ಮೂಡಿಗೆರೆಯಲ್ಲಿ ಅವಾಂತರ

ಇನ್ನು ಬೇಲೂರಿನಿಂದ ಭದ್ರಾ ಅಭಯಾರಣ್ಯದತ್ತ ಆನೆಗಳನ್ನು ಓಡಿಸುವ ಕಾರ್ಯಾಚರಣೆಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಆನೆಗಳ ಸ್ಥಳಾಂತರ ವಿಚಾರ ಇದೀಗ ರಾಜಕೀಯ ತಿರುವನ್ನೂ ಪಡೆದುಕೊಂಡಿದೆ. ಸ್ಥಳಾಂತರ ಕಾರ್ಯಾಚರಣೆ ವಿರೋಧಿಸಿ ರಾಜೀನಾಮೆ ನಿರ್ಧಾರಕ್ಕೆ ಮುಂದಾಗಿದ್ದ ಶಾಸಕರ ಜೊತೆ ಜಪಾನ್ ಪ್ರವಾಸದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

ನಾನು ಈಗಾಗಲೇ ಸೂಚನೆ ನೀಡಿದ್ದೇನೆ. ಸದ್ಯಕ್ಕೆ ಸ್ಥಳಾಂತರ ಪ್ರಕ್ರಿಯೆ ನಿಲ್ಲಿಸುವಂತೆ ಹೇಳಿದ್ದೇನೆ. ನಾನು ಬರುವವರೆಗೂ ತಾಳ್ಮೆಯಿಂದ ಇರಿ. ಈ ಸಮಸ್ಯೆ ಬಗೆಹರಿಸುವುದು ನನ್ನ ಜವಾಬ್ದಾರಿ ಎಂದು ಶಾಸಕರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸಿಎಂ ಕರೆ ಮಾಡಿ ಮಾತನಾಡಿದ ಬೆನ್ನಲ್ಲೇ ಶಾಸಕರು ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇತ್ತ ಶಾಸಕರ ರಾಜೀನಾಮೆ ನಿರ್ಧಾರಕ್ಕೆ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಕಿಡಿಕಾರಿದ್ದಾರೆ.

ಇನ್ನು ಆನೆಗಳ ಹಾವಳಿಗೆ ರೈತರು ಕಣ್ಣೀರು ಹಾಕುವಂತಾಗಿದೆ. ಮೂಡಿಗೆರೆ ತಾಲೂಕಿನ ಗೌತಳ್ಳಿಯಲ್ಲಿ ತಾರೇಶ್ ಎಂಬುವವರ ಕಾಫಿ ತೋಟಕ್ಕೆ ನುಗ್ಗಿದ ಸುಮಾರು 18 ಕಾಡಾನೆಗಳ ಹಿಂಡು ಭಾರೀ ದಾಂಧಲೆ ನಡೆಸಿವೆ. ಎರಡು ಎಕರೆ ಜಾಗದಲ್ಲಿ ಮಳೆ ನೀರನ್ನೇ ನಂಬಿ, ಹೆಗಲ ಮೇಲೆ ನೀರು ಹೊತ್ತು ಬೆಳೆದಿದ್ದ ಕಾಫಿ ಗಿಡಗಳನ್ನು ಆನೆಗಳು ಮನಬಂದಂತೆ ತುಳಿದು ನಾಶಪಡಿಸಿವೆ.

ಸುಮಾರು 40 ರಿಂದ 50 ಕಾಫಿ ಗಿಡಗಳು ಮುರಿದು ಬಿದ್ದಿದ್ದು, ಇನ್ನೂ ಎಷ್ಟು ಗಿಡಗಳು ನಾಶವಾಗಿವೆ ಅನ್ನೋ ಲೆಕ್ಕವೇ ಸಿಗುತ್ತಿಲ್ಲ. ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರೇ ನಾಶವಾಗಿರೋದನ್ನು ಕಂಡು ತಾರೇಶ್ ಕುಟುಂಬ ಕಣ್ಣೀರಿಡುತ್ತಿದೆ. ಯಾವುದೇ ಮಾಹಿತಿ ನೀಡದೆ ಬೇಲೂರು ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಓಡಿಸಿದ್ದೇ ನಮ್ಮ ನಷ್ಟಕ್ಕೆ ಕಾರಣ. ಹಾಸನ ಜಿಲ್ಲಾಡಳಿತವೇ ಪರಿಹಾರ ನೀಡಬೇಕು ಅಂತಾ ಬೆಳೆಗಾರರು ಆಗ್ರಹಿಸಿದ್ದಾರೆ.

ಈ ನಡುವೆ ಅರಣ್ಯ ಇಲಾಖೆ ಆನೆಗಳ ಚಲನವಲನದ ಮೇಲೆ ನಿರಂತರ ನಿಗಾ ಇರಿಸಿದೆ. ಹಾಸನ ಜಿಲ್ಲೆಯ ಮುಖ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಭೆಯನ್ನು ಎಪಿಸಿಸಿಎಫ್ ಮನೋಜ್ ನಡೆಸಿದರು.

ಸಭೆ ಬಳಿಕ ಮಾತಾಡಿದ ಅವರು ಚದುರಿಹೋಗಿದ್ದ ಆನೆಗಳು ಇದೀಗ ಮೂಡಿಗೆರೆ ತಾಲೂಕಿನ ಘಟ್ಟದಹಳ್ಳಿ ಭವಾನಿ ಎಸ್ಟೇಟ್‌ನಲ್ಲಿ ಒಂದಾಗಿವೆ. 39ಕ್ಕೂ ಹೆಚ್ಚು ಆನೆಗಳು ಒಂದೇ ಪ್ರದೇಶದಲ್ಲಿ ಜಮಾವಣೆಗೊಂಡಿದ್ದು, 13ಕ್ಕೂ ಹೆಚ್ಚು ಆನೆಗಳು ಬೇಲೂರು ಕಡೆಗೆ ವಾಪಸ್ ತೆರಳುತ್ತಿವೆ. ತತ್ಕೋಳ ಅರಣ್ಯದಿಂದ ಮೂರರಿಂದ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಆನೆಗಳ ವಾಸ್ತವ್ಯವಿದ್ದು, ಆನೆಗಳು ತತ್ಕೋಳದತ್ತ ತೆರಳಿದರೆ ಮರಳಿ ಬರುವ ಸಾಧ್ಯತೆ ಕಡಿಮೆ ಇದೆ‌ ಎಂದು ಅಂದಾಜಿಸಲಾಗಿದೆ.

ಒಟ್ಟಿನಲ್ಲಿ ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ. ಆನೆಗಳನ್ನು ಬಲವಂತವಾಗಿ ಸ್ಥಳಾಂತರಿಸುವ ಬದಲು ಅವುಗಳ ಸಹಜ ಸಂಚಾರಕ್ಕೆ ಅವಕಾಶ ನೀಡಲು ಇಲಾಖೆ ಮುಂದಾಗಿದೆ. ಆದರೆ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಯಾವಾಗ? ಗ್ರಾಮಸ್ಥರಿಗೆ ಶಾಶ್ವತ ಭದ್ರತೆ ಯಾವಾಗ? ಅನ್ನೋ ಪ್ರಶ್ನೆ ಮಾತ್ರ ಹಾಗೆಯೇ ಉಳಿದಿದೆ. (ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು)

PREV
Read more Articles on
click me!

Recommended Stories

Bagalkot: 35 ವರ್ಷದಲ್ಲಿ 53,000+ ಪತ್ರ; ಫ್ರಾನ್ಸ್ ಅಧ್ಯಕ್ಷರಿಂದಲೇ ಮರುಪತ್ರ ಪಡೆದ ಬಾಗಲಕೋಟೆ ಶಿಕ್ಷಕ
ಗಾಯಕ ದಿಲ್ಜಿತ್ ಬೆಂಗಳೂರು ಮ್ಯೂಸಿಕ್‌ ಕಾನ್ಸರ್ಟ್ ಸೇರಿ ನಮ್ಮ ಮೆಟ್ರೋಗೆ ಬಾಂಬ್ ಬೆದರಿಕೆ! ಪೊಲೀಸರಿಂದ ತೀವ್ರ ತನಿಖೆ!