ಪ್ರಾಣಿಗಳ ಅಂತ್ಯಕ್ರಿಯೆಗೂ ಬಂತು ವಿದ್ಯುತ್‌ ಚಿತಾಗಾರ..!

By Kannadaprabha NewsFirst Published Jul 16, 2021, 9:32 AM IST
Highlights

* ಹುಬ್ಬಳ್ಳಿ -ಧಾರವಾಡದಲ್ಲಿ ಎರಡು ಚಿತಾಗಾರ ನಿರ್ಮಾಣ
* ಪ್ರಾಣಿಗಳು ಸತ್ತಾಗ ಅವುಗಳಿಗೆ ಅಂತಿಮ ವಿದಾಯ ಹೇಳಲು ಅನುಕೂಲ ಕಲ್ಪಿಸಲಿರುವ ಪಾಲಿಕೆ
* ಸೂಕ್ತ ರೀತಿಯಲ್ಲಿ ಅಂತ್ಯಕ್ರಿಯೆ ನಡೆದರೆ ಹೆಚ್ಚಿನ ಪ್ರಯೋಜನ 

ಮಯೂರ ಹೆಗಡೆ

ಹುಬ್ಬಳ್ಳಿ(ಜು.16):ದಲ್ಲಿ ಸ್ಮಾರ್ಟ್‌ಸಿಟಿಯಡಿ ಮನುಷ್ಯರಿಗಾಗಿ ವಿದ್ಯುತ್‌ ಚಿತಾಗಾರ ನಿರ್ಮಾಣ ಕಾಮಗಾರಿ ಆಗುತ್ತಿರುವುದು ಗೊತ್ತಿರುವ ವಿಷಯವೇ, ಆದರೆ ಈಗ ಪ್ರಾಣಿಗಳ ಅಂತ್ಯಕ್ರಿಯೆಗಾಗಿ ಚಿತಾಗಾರ ನಿರ್ಮಿಸಲು ಮಹಾನಗರ ಪಾಲಿಕೆ ಮುಂದಾಗಿದೆ!

ಹೌದು! ಹಾದಿಬೀದಿಯಲ್ಲಿ ಪ್ರಾಣಿಗಳು ಸತ್ತಾಗ ಅವುಗಳ ವಿಲೇವಾರಿಯೇ ದೊಡ್ಡ ಸಮಸ್ಯೆ. ಮನೆಯಲ್ಲಿ ಪ್ರೀತಿಯಿಂದ ಸಾಕುವ ನಾಯಿ, ಬೆಕ್ಕು ಹಾಗೂ ಇತರ ಪ್ರಾಣಿಗಳು ಸತ್ತಾಗ ಅವುಗಳಿಗೆ ಅಂತಿಮ ವಿದಾಯ ಹೇಳಲು ಪಾಲಿಕೆ ಅನುಕೂಲ ಕಲ್ಪಿಸಲಿದೆ. ಈಗಾಗಲೇ ಬೆಂಗಳೂರು, ಮುಂಬೈ, ಪುಣೆಯಂತಹ ದೊಡ್ಡ ಸಿಟಿಗಳಲ್ಲಿ ಈ ರೀತಿ ಪ್ರಾಣಿಗಳ ಇವೆ. ಇದೀಗ ಹುಬ್ಬಳ್ಳಿ-ಧಾರವಾಡದಲ್ಲೂ ನಿರ್ಮಾಣವಾಗುತ್ತಿದೆ.

ಸದ್ಯಕ್ಕೆ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ರಾಣಿಗಳಿಗಾಗಿ ಎರಡು ವಿದ್ಯುತ್‌ ಚಿತಾಗಾರ ನಿರ್ಮಿಸಲು ಯೋಜಿಸಲಾಗಿದೆ. ನಗರದಲ್ಲಿ ಬೀದಿ ಬದಿ ಸತ್ತಿರುವ ಪ್ರಾಣಿಗಳ ಬಗ್ಗೆ ಪಾಲಿಕೆ ಸಹಾಯವಾಣಿಗೆ ಮಾಹಿತಿ ನೀಡಿದರೆ ಸಿಬ್ಬಂದಿ ಬಂದು ಘಟಕಕ್ಕೆ ಕೊಂಡೊಯ್ದು ದಹಿಸುತ್ತಾರೆ. ಇಲ್ಲವೆ ಮನೆಯಲ್ಲಿ ಮೃತಪಟ್ಟ ಸಾಕು ಪ್ರಾಣಿಗಳನ್ನು ಕೂಡ ಇಲ್ಲಿ ಅಂತ್ಯಕ್ರಿಯೆ ಮಾಡಬಹುದು.

ಈ ಬಗ್ಗೆ ಮಾಹಿತಿ ನೀಡಿದ ಹುಧಾ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್‌, ಸತ್ತ ಪ್ರಾಣಿಗಳ ವಿಲೇ ಬಗ್ಗೆ ಸಾಕಷ್ಟುದೂರುಗಳು ಬರುತ್ತಿರುತ್ತವೆ. ಹೀಗಾಗಿ ಪ್ರಾಣಿಗಳ ವಿದ್ಯುತ್‌ ಚಿತಾಗಾರ ಸಂಬಂಧ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಈಗಾಗಲೆ ಮೂರ್ನಾಲ್ಕು ಕಂಪನಿಗಳಿಂದ ಈ ಸಂಬಂಧ ಕೊಟೇಶನ್‌ ಪಡೆದಿದ್ದೇವೆ. ದೊಡ್ಡ ಗಾತ್ರದ ಪ್ರಾಣಿಗಳಿಗಾದರೆ 15-20 ಲಕ್ಷ ವೆಚ್ಚ ತಗುಲುತ್ತದೆ. ಚಿಕ್ಕ ಪ್ರಾಣಿಗಳ ಚಿತಾಗಾರಕ್ಕೆ 10 ಲಕ್ಷ ಸಾಕು ಎಂಬ ಪ್ರಾಥಮಿಕ ಮಾಹಿತಿ ತೆಗೆದುಕೊಳ್ಳಲಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಯಾವುದು ಸೂಕ್ತ ಎಂಬ ಬಗ್ಗೆ ತೀರ್ಮಾನಿಸಿ ಟೆಂಡರ್‌ ಕರೆಯಲಿದ್ದೇವೆ ಎಂದರು.

ಅವೈಜ್ಞಾನಿಕ ಮೀಸಲಾತಿ: ಮತ್ತೆ ಹೈಕೋರ್ಟ್‌ ಕದ ತಟ್ಟಿದ ಕಾಂಗ್ರೆಸ್

ಪ್ರಾಣಿಗಳ ಆರೋಗ್ಯದ ಸಲುವಾಗಿ ಕೆಲಸ ಮಾಡುವ ‘ಹ್ಯೂಮೆನ್‌ ಸೊಸೈಟಿ ಇಂಟರ್‌ನ್ಯಾಷನ್‌ ಇಂಡಿಯಾ’ ಎಂಬ ಸಂಸ್ಥೆಯ ಹೇಮಂತ ಬ್ಯಾಟರಾಯ, ಬೀದಿ ಬದಿ ಸತ್ತ ಪ್ರಾಣಿಗಳು ಕೊಳೆತು ನಾರುವುದನ್ನು ನಾವು ನೋಡುತ್ತೇವೆ. ಅದೇ ರೀತಿ ಮನೆಯಲ್ಲಿ ಸಾಕು ಪ್ರಾಣಿಗಳು ಸತ್ತಾಗಲೂ ಅವನ್ನು ಯಾವ ರೀತಿ ಅಂತ್ಯಕ್ರಿಯೆ ಮಾಡಬೇಕು ಎಂಬ ಪ್ರಶ್ನೆ ಮಹಾನಗರದಲ್ಲಿ ಸಾಮಾನ್ಯ. ಸಾಕಷ್ಟುಜನ ಹಣ ಕೊಡಲು ಸಿದ್ಧರಿದ್ದರೂ ಸಮಸ್ಯೆ ಬಗೆಹರಿಯದಂತಹ ಸ್ಥಿತಿ ಇದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಎಂದರು.

ಹಿಂದೆಯೆ ಒಮ್ಮೆ ಈ ಬಗ್ಗೆ ಪ್ರಸ್ತಾಪ ಹೋಗಿತ್ತು. ನಾವು ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದೇವೆ. ಪ್ರಾಣಿಗಳನ್ನು ದಹಿಸಲು ತ್ಯಾಜ್ಯ ವಿಲೇವಾರಿ ಘಟಕಗಳ ಬಳಿ ವಿದ್ಯುತ್‌ ಚಿತಾಗಾರ ನಿರ್ಮಿಸಲು ಯೋಜಿಸಿದ್ದೇವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಇದರ ಟೆಂಡರ್‌ ಕರೆಯುವ ಪ್ರಕ್ರಿಯೆ ನಡೆಯಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ತಿಳಿಸಿದ್ದಾರೆ.  

ರೋಗದಿಂದ ಮೃತಪಟ್ಟ ಬೀದಿ ಪ್ರಾಣಿಗಳಿಂದ ಇತರ ಪ್ರಾಣಿಗಳಿಗೂ ಹಬ್ಬುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರಾಣಿಗಳಿಗಾಗಿ ಚಿತಾಗಾರ ಆರಂಭವಾಗಿ ಸೂಕ್ತ ರೀತಿಯಲ್ಲಿ ಅಂತ್ಯಕ್ರಿಯೆ ನಡೆದರೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಹ್ಯೂಮೆನ್‌ ಸೊಸೈಟಿ ಇಂಟರ್‌ನ್ಯಾಷನ್‌ ಇಂಡಿಯದ ಹೇಮಂತ ಬ್ಯಾಟರಾಯ ಹೇಳಿದ್ದಾರೆ.  

click me!